Thursday, 12th December 2024

Navjot Singh Sidhu: ‘ಠೋಕೋ ಭಾಯಿ ಠೋಕೋ..’- ಕಪಿಲ್ ಶರ್ಮಾ ಶೋಗೆ ಮರಳಿದ ನವಜೋತ್ ಸಿಂಗ್ ಸಿಧು -5 ವರ್ಷಗಳ ಹಿಂದೆ ಏನಾಗಿತ್ತು? 

ಮುಂಬೈ: ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಕೇಂದ್ರ ಬಿಂದುವಿನಂತೆ ಸದಾ ಹಸನ್ಮುಖಿಯಾಗಿ, ಶಾಯರಿಗಳ ಮೂಲಕ ಗಮನ ಸೆಳೆಯುತ್ತಿದ್ದಿದ್ದು ನವಜೋತ್ ಸಿಂಗ್ ಸಿಧು (Navjot Singh Sidhu). ಕಪಿಲ್ ಶರ್ಮಾ(Kapil Sharma) ನಡೆಸಿಕೊಡುತ್ತಿದ್ದ ಈ ಶೋ(Show) ನಲ್ಲಿ ನವಜೋತ್ ಹಾಗೂ ಕಪಿಲ್ ನಡುವೆ ನಡೆಯುತ್ತಿದ್ದ ಕಾಮಿಡಿ ಪ್ರೇಕ್ಷಕರನ್ನು ಕಾರ್ಯಕ್ರಮ ವೀಕ್ಷಿಸುವಂತೆ ಮಾಡುತ್ತಿತ್ತು. ಅಲ್ಲದೇ ಕಪಿಲ್ ಶರ್ಮಾ, ಅತಿಥಿಗಳ ಮಾತಿಗೆ ಸಿಧು ಒಮ್ಮೊಮ್ಮೆ ಟಾಂಗ್ ನೀಡುತ್ತಾ, ಹಾಸ್ಯ ಮಾಡುತ್ತಾ ತಾವು ಸಾಕಷ್ಟು ಬಾರಿ ಬಿದ್ದು ಬಿದ್ದು ನಕ್ಕಿದ್ದರು, ಪ್ರೇಕ್ಷಕರನ್ನು ನಗಿಸಿದರು.

ಆದರೆ 2019ರಲ್ಲಿ ಪುಲ್ವಾಮಾ ದಾಳಿ(Pulwama attack) ನಂತರ ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದ ಪಂಜಾಬ್​ ಸಚಿವ ನವಜೋತ್​ ಸಿಂಗ್​ ಸಿಧು ಅವರನ್ನು ಕಪಿಲ್​ ಶರ್ಮಾ ಶೋನಿಂದ ತೆಗೆದು ಹಾಕಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬಂದಿತ್ತು. ಈ ಕುರಿತು ಒತ್ತಾಯ ಹೆಚ್ಚಿದ ನಂತರದಲ್ಲಿ ಈ ಶೋನಿಂದ ಅವರಿಗೆ ಗೇಟ್​ಪಾಸ್​ ನೀಡಲಾಗಿತ್ತು.

ಪುಲ್ವಾಮಾ ದಾಳಿ ನಂತರದಲ್ಲಿ ಮಾತನಾಡಿದ್ದ ನವಜೋತ್​, “ಭಯೋತ್ಪಾದನೆ ಎಂಬುದು ಯಾವುದೇ ಧರ್ಮವನ್ನು ಹೊಂದಿಲ್ಲ. ಹಾಗಾಗಿ ಇಂಥ ದಾಳಿಗೆ ಒಂದು ದೇಶವನ್ನು ದೂರುವುದು ಸರಿಯಲ್ಲ,” ಎಂದಿದ್ದರು. ಈ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ನವಜೋತ್​ ಸಿಂಗ್​ ಹಾಗೂ ಕಪಿಲ್​ ಶರ್ಮಾ ಶೋ ಎರಡನ್ನೂ ಬಹಿಷ್ಕರಿಸಿ ಎನ್ನುವ ಹ್ಯಾಶ್​ಟ್ಯಾಗ್​ ಟ್ವಿಟ್ಟರ್​ನಲ್ಲಿ ಹುಟ್ಟಿಕೊಂಡಿತ್ತು.

ಇದರಿಂದ ಎಚ್ಚೆತ್ತ ವಾಹಿನಿಯವರು ನವಜೋತ್​​ ಅವರನ್ನು ಕೈ ಬಿಟ್ಟಿರುವುದಾಗಿ ಹೇಳಿಕೊಂಡಿತ್ತು. ಆದರೆ, ಈ ಬಗ್ಗೆ ನವಜೋತ್ ಮಾತ್ರ ಬೇರೆ ಹೇಳಿಕೆಯನ್ನೇ ನೀಡಿದರು. “ನಾನು ರಾಜಕೀಯ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿಂದ ಕಪಿಲ್​ ಶರ್ಮಾ ಶೋಗೆ ತೆರಳಲು ಸಾಧ್ಯವಾಗಿಲ್ಲ. ಎರಡು ಎಪಿಸೋಡ್​ಗಳಲ್ಲಿ ಮಾತ್ರ ನಾನು ಕಾಣಿಸಿಕೊಳ್ಳುವುದಿಲ್ಲ. ನನ್ನನ್ನು ಈ ಕಾರ್ಯಕ್ರಮದಿಂದ ತೆಗೆದಯ ಹಾಕಿರುವ ಬಗ್ಗೆ ನನಗೆ ಯಾವುದೇ ನೋಟಿಸ್​ ಬಂದಿಲ್ಲ. ಇದೆಲ್ಲವೂ ಸುಳ್ಳು,” ಎಂದು ಹೇಳಿರುವ ಅವರು, “ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ಬದ್ಧ” ಎಂದಿದ್ದರು.

ಆದರೀಗ ದಿಢೀರ್ ಅಂತ ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ನವಜೋತ್ ಸಿಂಗ್ ಸಿಧು ಕಾಣಿಸಿಕೊಂಡಿದ್ದು, ಸುಮಾರು ಐದು ವರ್ಷಗಳ ಬಳಿಕ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಮತ್ತೆ ‘ದಿ ಕಪಿಲ್ ಶರ್ಮಾ ಶೋ’ ನಲ್ಲಿ ನವಜೋತ್ ಸಿಂಗ್ ಸಿಧು ಹಾಗೂ ಕಪಿಲ್ ಶರ್ಮಾ ಜೋಡಿ ಮೋಡಿ ಮಾಡಲು ಸಿದ್ಧವಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಐದು ವರ್ಷಗಳ ನಂತರ ಮತ್ತೆ ಕಪಿಲ್ ಶರ್ಮಾ ಜೊತೆ ಕೆಲಸ ನವಜೋತ್ ಸಿಧು ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ.

ಈ ಕುರಿತು ಸ್ವತ: ನವಜೋತ್ ಸಿಂಗ್ ಸಿಧು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ದಿ ಹೋಮ್ ರನ್” ಎಂಬ ಶೀರ್ಷಿಕೆಯೊಂದಿಗೆ “ಸಿಧು ಜೀ ಈಸ್ ಬ್ಯಾಕ್” ಎಂಬ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮುಂಬರುವ ಸಂಚಿಕೆಯ ಟೀಸರ್‌ನಲ್ಲಿ ಸಿಧು, ಅರ್ಚನಾ ಪುರಣ್ ಸಿಂಗ್ ಅವರ ಕುರ್ಚಿಯಲ್ಲಿ ಕುಳಿತಿದ್ದು, ಸಿಧು ತನ್ನ ಕುರ್ಚಿಯನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಅರ್ಚನಾ ಕಪಿಲ್‌ಗೆ ದೂರು ನೀಡುವ ವೀಡೀಯೋವನ್ನು ಹಂಚಿಕೊಂಡಿದ್ದಾರೆ

ಆದರೆ ನಿಜಾಂಶ ಏನೆಂದರೆ ಸಿಧು ಈ ಶೋ ಗೆ ಬರುತ್ತಿರುವುದು ತೀರ್ಪುಗಾರರಾಗಿ ಅಲ್ಲ, ಅತಿಥಿಯಾಗಿ. ಅವರ ಪತ್ನಿ, ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಅವರ ಪತ್ನಿ ಗೀತಾ ಬಾಸ್ರಾ ಅವರು ಮುಂಬರುವ ಸಂಚಿಕೆಯ ಅತಿಥಿಗಳಾಗಿ ಆಗಮಿಸಲಿದ್ದು, ಅದರ ಪ್ರೋಮೋದ ವಿಡಿಯೋ ಇದಾಗಿದೆ.

ಇನ್ನು ಸಿಧುಗೆ ಗೇಟ್ ಪಾಸ್ ನೀಡಿದ ದಿನದಿಂದ ‘ದಿ ಕಪಿಲ್ ಶರ್ಮಾ’ ಶೋನ ಅನೇಕ ಎಪಿಸೋಡ್‌ಗಳಲ್ಲಿ ಅರ್ಚನಾ ಸಿಂಗ್ ಕಾಣಿಸಿಕೊಂಡಿದ್ದು, ಈ ಹಿಂದೆ ಮತ್ತೆ ‘ದಿ ಕಪಿಲ್ ಶರ್ಮಾ ಶೋ’ಗೆ ಸಿಧು ಮರಳಲಿದ್ದಾರೆ. ಹಾಗಾಗಿ ಅರ್ಚನಾ ಸಿಂಗ್ ಮನೆಗೆ ಹೋಗಬೇಕಾಗುತ್ತದೆ ಎಂಬ ಸುದ್ದಿ ಹರಡಿತ್ತು. ಇದೇ ವಿಷಯ ಇಟ್ಟುಕೊಂಡು ಅರ್ಚನಾ ಸಿಂಗ್‌ರ ಕುರಿತಾಗಿ ವಿಧ ವಿಧವಾದ ಮೀಮ್ಸ್ ಸೃಷ್ಟಿ ಮಾಡಿ ಟ್ವಿಟ್ಟರ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇರಿದಂತೆ ಅನೇಕ ಕಡೆ ಅಪ್‌ಲೋಡ್ ಮಾಡಲಾಗುತ್ತಿದೆ. ಹಾಗಾಗಿಯೇ ಅರ್ಚನಾ ಸಿಂಗ್ ಟ್ರೆಂಡ್ ಆಗಿದ್ದರು.