Wednesday, 11th December 2024

ಬೆಂಗಳೂರಿಗೆ ಸಾಮ್ರಾಟರೇ ಬೇಡ

ನಗರದ ಶಾಸಕರ ಪಕ್ಷಾತೀತ ಒತ್ತಾಯ

ಮುಖ್ಯಮಂತ್ರಿ ಬಳಿ ಉಸ್ತುವಾರಿ ಉಳಿಸಿಕೊಳ್ಳಲು ನಿರ್ಧಾರ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ರಾಜಧಾನಿ ಬೆಂಗಳೂರಿಗೆ ಸಾಮ್ರಾಟರೇ ಬೇಡ. ಇದು ಬೆಂಗಳೂರಿನ ಎಲ್ಲಾ ಶಾಸಕರ ಪಕ್ಷಾತೀತವಾದ ಒಕ್ಕೂರಲ ಅಭಿಪ್ರಾಯ. ಹಾಗಂತ ಇವರೆಲ್ಲಾ ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಹೇಳಿಕೆ ನೀಡಿಲ್ಲ. ಬದಲಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನೇರವಾಗಿ ಭೇಟಿ ಬೆಂಗಳೂರು ಉಸ್ತುವಾರಿ ಹಂಚಿಕೆ ಕುರಿತು ಅಭಿಪ್ರಾಯ ಹೇಳಿದ್ದಾರೆ.

ಅಷ್ಟೇ ಅಲ್ಲ. ಯಾವುದೇ ಕಾರಣಕ್ಕೂ ಉಸ್ತುವಾರಿಯನ್ನು ಯಾವುದೇ ಸಚಿವರಿಗೆ ನೀಡಬಾರದು. ತಮ್ಮ ಬಳಿಯೇ ಇಟ್ಟುಕೊಳ್ಳಬೇಕೆಂದು ಒತ್ತಾಯಿಸಿ ದ್ದಾರೆ. ಅಚ್ಚರಿ ಎಂದರೆ ಉಸ್ತುವಾರಿ ವಿಚಾರವಾಗಿ ಅನೇಕ ಕಾಂಗ್ರೆಸ್ ಶಾಸಕರು ಕೂಡ ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದ್ದಾರೆ. ಉಸ್ತುವಾರಿಯನ್ನು ತಮ್ಮ ಬಳಿಯೇ ಇರಿಸಿಕೊಳ್ಳು ವುದು ಸೂಕ್ತ. ಇದರಿಂದ ಎಲ್ಲರೂ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಕಾಂಗ್ರೆಸ್ ಶಾಸಕರು ಸಲಹೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ.

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಮ್ಮತಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ಯಾವುದೇ ಸಚಿವರ ಜತೆ ಸೋಮವಾರ ಬೊಮ್ಮನ ಹಳ್ಳಿ ಕಾರ್ಯಕ್ರಮದ ಮೂಲಕ ಸಣ್ಣದಾಗಿ ನಗರ ಸಂಚಾರವನ್ನೂ ಮಾಡಿದ್ದಾರೆ. ಹೀಗಾಗಿ ನಗರದ ಸಚಿವರು ಹೊರಗೆ ವಿವಿಧ ಕಾರ್ಯಕ್ರಮ ಗಳಲ್ಲಿ ನಿರತರಾಗಿರುವ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಉಸ್ತುವಾರಿ ರಾಜಕಾರಣ ನಡೆಸಿದ್ದಾರೆ.

ಬೆಂಗಳೂರು ವಿಚಾರದಲ್ಲಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆ ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಶಾಸಕರ ಈ ಪ್ರಯತ್ನ ಒಂದು ಹಂತಕ್ಕೆ ಯಶಸ್ವಿಯಾಗಿದ್ದು, ಇದರೊಂದಿಗೆ ಉಸ್ತುವಾರಿ ಹಂಚಿಕೆ ಗೊಂದಲ ಒಂದು ಹಂತಕ್ಕೆ ನಿವಾರಣೆಯಾದಂತಾಗಿದೆ. ಆದರೆ ಇದು ಸಹಜವಾಗಿಯೇ ಬೆಂಗಳೂರು ಉಸ್ತುವಾರಿ ಕನಸು ಕಟ್ಟಿಕೊಂಡಿದ್ದ ಸಚಿವರಲ್ಲಿ ನಿರಾಶೆ ಮೂಡಿಸಿದೆ.

ಯಾವ ಶಾಸಕರು ಕೇಳಿದ್ದಾರೆ, ಏಕೆ?: ಬೆಂಗಳೂರು ಉಸ್ತುವಾರಿ ವಿಚಾರದಲ್ಲಿ ಸಚಿವರಾದ ಅಶೋಕ್, ವಿ.ಸೋಮಣ್ಣ, ಡಾ.ಸಿ.ಎನ್.ಅಶ್ವತ್ಥ್ ನಾರಾ ಯಣ ಹಾಗೂ ಸೋಮಶೇಖರ್ ನಡುವೆ ನಡೆಯುತ್ತಿದ್ದ ಹಗಜಗ್ಗಾಟದಿಂದ ತಮ್ಮ ಹಿತ ಬಲಿಯಾಗುತ್ತದೆ ಎಂಬ ಆತಂಕದಲ್ಲಿ ಶಾಸಕರು ಕೆರಳಿದ್ದಾರೆ. ಇದನ್ನು ಹೀಗೆ ಬಿಟ್ಟರೆ ಉಸ್ತುವಾರಿ ಅಶೋಕ್ ಕೈ ಸೇರಬಹುದು ಎಂಬ ಆತಂಕದಲ್ಲಿ ಅನೇಕ ಬಿಜೆಪಿ ಶಾಸಕರು ಪ್ರತ್ಯೇಕವಾಗಿ ಸಿಎಂ ಭೇಟಿಯಾಗಿದ್ದಾರೆ.

ಅದರಲ್ಲೂ ಶಾಸಕರಾದ ಸತೀಶ್ ರೆಡ್ಡಿ, ಎಲ್.ಎ. ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ಎಸ್.ಆರ್.ವಿಶ್ವನಾಥ್, ಎಸ್.ರಘು ಹಾಗೂ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕರು, ಮುಖ್ಯಮಂತ್ರಿ ಬಳಿ ಉಸ್ತುವಾರಿ ಕುರಿತ ಕೋರಿಕೆ ಸಲ್ಲಿಸಿದ್ದಾರೆ. ಉಸ್ತುವಾರಿ ಯಾರಿಗೂ ಬೇಡ. ಸಚಿವ ಆರ್.ಅಶೋಕ್ ಅವರಿಗಂತೂ ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಏಕೆಂದರೆ, ಉಸ್ತುವಾರಿ ಸಚಿವರನ್ನು ನೇಮಿಸಿದರೆ, ಉಸ್ತುವಾರಿ ಹೊತ್ತವರದು ಮತ್ತು ಅದನ್ನು ವಿರೋಧಿಸುವವರದು ಎಂದು ಎರಡು ಶಕ್ತಿ ಕೇಂದ್ರಗಳು ಆರಂಭವಾಗುತ್ತವೆ.

ಇದರಿಂದ ಅನುದಾನ ಹಂಚಿಕೆ ವೇಳೆ ತಾರತಮ್ಯ ಆಗುತ್ತದೆ. ಅದರಲ್ಲೂ ಬಿಬಿಎಂಪಿ ಚುನಾವಣೆ ವೇಳೆಯೂ ಪಕ್ಷದ ಟಿಕೇಟ್ ನೀಡುವಾಗ ಅನ್ಯಾಯ ವಾಗುತ್ತದೆ. ಆದ್ದರಿಂದ ಈ ಹಿಂದೆ ಯಡಿಯೂರಪ್ಪ ಅವರು ಶಾಸಕರನ್ನು ನೇರವಾಗಿ ಆಲಿಸಿ ಬೇಡಿಕೆ ಈಡೇರಿಸುತ್ತಿದ್ದಂತೆ ಮಾಡಬೇಕೆಂದು ಒತ್ತಾಯಿ ಸಿದ್ದಾರೆ.

ಈ ಮಧ್ಯೆ, ಅಶೋಕ್ ಗೆ ಉಸ್ತುವಾರಿ ನೀಡಿದರೆ ಸಚಿವರಾದ ಸೋಮಣ್ಣ ಮತ್ತು ಅಶ್ವತ್ಥ್ ನಾರಾಯಣ ಅವರು ವಿರೋಧಿಸುವ ಸಾಧ್ಯತೆ ಇದೆ. ಇವರಲ್ಲಿ
ಯಾರೇ ಉಸ್ತುವಾರಿ ಹೊತ್ತರೂ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್ ಸೇರಿದಂತೆ ಅನೇಕ ಶಾಸಕರು ಉಸ್ತುವಾರಿಗಳ ಮನೆ ಬಾಗಿಲಿಗೆ ಹೋಗಲು ಸಿದ್ಧರಿಲ್ಲ. ಆದ್ದರಿಂದ ಸಿಎಂ ಬಳಿಯೇ ಉಸ್ತುವಾರಿ ಇದ್ದರೆ ನೇರವಾಗಿ ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎನ್ನುವುದು ಶಾಸಕರ ಅಭಿಪ್ರಾಯ.

ಈಗ ಆಗಿರುವ ಸಮಸ್ಯೆ ಏನು?
ಹಿಂದಿನ ದೋಸ್ತಿ ಸರಕಾರದಲ್ಲಿ ಬೆಂಗಳೂರು ಶಾಸಕರಿಗೆ ಅತ್ಯಂತ ಕಡಿಮೆ ಮೊತ್ತದ ಅನುದಾನ ನೀಡಲಾಗಿತ್ತು. ನಂತರ ಬಿಜೆಪಿ ಸರಕಾರದಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸಿದ್ದ ಬಿಜೆಪಿ ಶಾಸಕರಿಗೆ ಕೋವಿಡ್ ಅಡ್ಡಿಯಾಗಿತ್ತು. ಹೀಗಾಗಿ ಯಡಿಯೂರಪ್ಪ ಅವರು ಮಂಡಿಸಿದ್ದ ಪ್ರಸ್ತುತ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ಧಿಗೆ ?೬೦೦೦ಕೋಟಿ ಅನುದಾನ ನೀಡಲಾಗಿತ್ತು. ಆದರೆ ಈತನಕ ಬಿಡಿಗಾಸೂ ಸಿಕ್ಕಿಲ್ಲ. ಈ ಮಧ್ಯೆ, ಬಿಬಿಎಂಪಿ ಚುನಾವಣೆ ಸಮೀ ಪಿಸುತ್ತಿದ್ದು, ಇಂಥ ಸಂದರ್ಭದಲ್ಲಿ ಅನುದಾನವೂ ಸಿಗದಿ ದ್ದರೆ ಮತದಾರರಿಗೆ ಹೇಗೆ ಉತ್ತರ ನೀಡುವುದು ಎನ್ನುವ ಸಮಸ್ಯೆ ಶಾಸಕರದ್ದಾಗಿದೆ. ಇದನ್ನು ಸಚಿವ ಅಶೋಕ್ ಅವರಿಗೆ ಹೇಳ ಲಾಗದು. ಸಿಎಂ ಅವರಿಗೇ ನೇರವಾಗಿ ಹೇಳಿ ಬಗೆಹರಿಸಿ ಕೊಳ್ಳ ಬಹುದು ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ.

***

ಉಸ್ತುವಾರಿ ಸಚಿವರ ಹಂಚಿಕೆ ವಿಚಾರದಲ್ಲಿ ನಗರ ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಿದೆ. ಸಮಗ್ರ ಬೆಂಗಳೂರು ಜನತೆಯ ಹಿತದೃಷ್ಟಿಯಿಂದ ಮತ್ತು ಅನುದಾನ ಹಂಚಿಕೆ ಅನಕೂಲಕ್ಕಾಗಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಅವರ ಬಳಿಯೇ ಉಸ್ತುವಾರಿ ಇದ್ದರೆ ಸೂಕ್ತ.

-ಎಲ್.ಎ.ರವಿಸುಬ್ರಮಣ್ಯ
ಬಸವನಗುಡಿ ಶಾಸಕರು