Wednesday, 11th December 2024

ತುತ್ತಿಗೂ ಹಾಹಾಕಾರ, ಪಾಕ್‌ಗೆ ಈ ದುಃಸ್ಥಿತಿ ಬಂದಿದ್ದೇಕೆ ?

ವಿದೇಶ ವಿಚಾರ

ಮಾರುತೀಶ್ ಅಗ್ರಾರ

maruthishagrara@gmail.com

ಪಾಕಿಸ್ತಾನ ಅಭಿವೃದ್ಧಿ ಕೆಲಸಗಳಿಗಾಗಿ 4300 ಕೋಟಿ ರುಪಾಯಿ ಖರ್ಚು ಮಾಡಿದರೆ, ಸೇನೆಗಾಗಿ 18800 ಕೋಟಿ ರುಪಾಯಿಗಳನ್ನ ಪಾಕಿಸ್ತಾನ ವ್ಯಯಿಸುತ್ತಿದೆ! ಅಂದರೆ ಅಭಿವೃದ್ಧಿಗಿಂತ ಮಿಲಿಟರಿಗೆ ಹೆಚ್ಚು ಖರ್ಚು ಮಾಡುತ್ತಿರುವುದು ಹಾಗೂ ಅಪ್ರಯೋಜಕ ಯೋಜನೆಗಳಿಗಾಗಿ ಸಾಕಷ್ಟು ದುಂದುವೆಚ್ಚ ಮಾಡುವ ಅಭ್ಯಾಸವು ಪಾಕಿಸ್ತಾನವನ್ನು ಇಂದು ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ.

ಕಳೆದ ವರ್ಷ ನಮ್ಮ ಪಕ್ಕದ ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹೇಗೆಲ್ಲ ಒದ್ದಾಡಿತು ಎನ್ನುವುದನ್ನು ನಾವು ನೋಡಿದ್ದೇವೆ. ಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಸರಕಾರದ ನಿರ್ಲಕ್ಷ್ಯವೇ ಕಾರಣವೆಂದು ಅಲ್ಲಿನ ಜನ ಸಿಟ್ಟಿಗೆದ್ದು ಅಧ್ಯಕ್ಷರ ಬಂಗಲೆ ಯನ್ನೇ ಆಕ್ರಮಿಸಿಕೊಂಡು ತಮ್ಮ ಕೋಪ ತೀರಿಸಿಕೊಂಡಿದ್ದರು. ಲಂಕಾ ಜನರ ಕೋಪ ಸರಕಾರದ ಮೇಲೆ ಯಾವ ರೀತಿ ಇತ್ತೆಂದರೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರೇ ಕಳ್ಳ ಮಾರ್ಗದಿಂದ ಲಂಕಾ ಬಿಟ್ಟು ಓಡಿ ಹೋಗಬೇಕಾಯಿತು! ಇಂದಿಗೂ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದಿಲ್ಲ.

ಏತನ್ಮಧ್ಯೆ ಈಗ ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೂ ಇಂತಹುದೇ ಪರಿಸ್ಥಿತಿ ತಲೆದೋರಿದೆ. ಪಾಕಿಸ್ತಾನ ಈಗ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿದೆ. ಪಾಕಿಸ್ತಾನದಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಜನಸಾಮಾನ್ಯರಿಗೆ ಎಟುಕದಷ್ಟು ದುಬಾರಿ ಆಗಿವೆ. ಪಾಕಿಸ್ತಾನದ ಜನಸಂಖ್ಯೆಯ ಅರ್ಧದಷ್ಟು ಜನರು ಹಸಿವಿನಿಂದ ಮಲಗಿದ್ದಾರೆ. ಖೈಬರ್ ಪಖ್ತುಂಖ್ವಾ, ಸಿಂಧ್ ಹಾಗೂ ಬಲೂಚಿಸ್ತಾನ್ ಪ್ರದೇಶಗಳಲ್ಲಿ ಗೋಧಿ ಹಿಟ್ಟಿಗಾಗಿ ದೊಡ್ಡ ಕಾಳಗವೇ ಸೃಷ್ಟಿಯಾಗಿದೆ ಎನ್ನುವ ವರದಿಗಳು ಕೇಳಿ ಬರುತ್ತಿವೆ. ಸದ್ಯಕ್ಕೆ ಬರುತ್ತಿರುವ ಮಾಹಿತಿಗಳ ಪ್ರಕಾರ ಪಾಕ್‌ನಲ್ಲಿ ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ 160 ರೂಪಾಯಿ ಆಗಿದೆಯಂತೆ!

ಆದರೂ ಅಗತ್ಯವಾದಷ್ಟು ಗೋಧಿಹಿಟ್ಟು ಹಾಗೂ ಇನ್ನಿತರ ಆಹಾರ ಪದಾರ್ಥಗಳ ಪೂರೈಕೆ ಮಾಡುವಲ್ಲಿ ಪಾಕಿಸ್ತಾನ ಸರಕಾರ
ಮಕಾಡೆ ಮಲಗಿದೆ. ಇದರ ಪರಿಣಾಮ ಪಾಕಿಸ್ತಾನದ ರಸ್ತೆಗಳಲ್ಲಿ ಆಹಾರ ವಸ್ತುಗಳನ್ನು ತುಂಬಿದ ಲಾರಿಯೊಂದು ಕಣ್ಣಿಗೆ ಬಿದ್ದರೆ ಸಾಕು ಜನರು ಅದನ್ನು ಚೇಸ್ ಮಾಡಿಯಾದರೂ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವ ದೃಶ್ಯಗಳು ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿವೆ. ಇಂಥ ವಿಡಿಯೋಗಳು ಪಾಕಿಸ್ತಾನದ ಜನರು ಆಹಾರಕ್ಕಾಗಿ ಯಾವ ರೀತಿ ಹಪಾಹಪಿಸು ತ್ತಿದ್ದಾರೆ ಎನ್ನುವುದನ್ನು ತೋರಿಸುತ್ತಿವೆ.

ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಆರ್ಥಿಕ ದುಸ್ಥಿತಿಯ ನೈಜ ಚಿತ್ರಣವನ್ನು ಸ್ವತಃ ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಬಿಚ್ಚಿಟ್ಟಿದ್ದು, ‘ಇಂದು ನಾವು ಯಾವುದೇ ನಮ್ಮ ಮಿತ್ರ ದೇಶಕ್ಕೆ ಹೋದರೂ ಅಥವಾ ಅವರಿಗೆ ಕರೆ ಮಾಡಿದರೂ ಅವರುಗಳು ನಾವು ಹಣಕ್ಕಾಗಿ ಭಿಕ್ಷೆ ಬೇಡಲು ಬಂದಿದ್ದೇವೆ ಎಂದೇ ಭಾವಿಸುತ್ತಾರೆ’ ಎನ್ನುವ ಮೂಲಕ ಪಾಕಿಸ್ತಾನದ ಇಂದಿನ ಸ್ಥಿತಿ ಜಾಗತಿಕ ವಾಗಿ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಮನವರಿಕೆ ಮಾಡಿದ್ದರು. ಅಂದಹಾಗೆ ಪಾಕಿಸ್ತಾನ ಈಗ ಎದುರಿಸು ತ್ತಿರುವ ಆರ್ಥಿಕ ಸಂಕಷ್ಟದಿಂದ ಕೊಂಚವಾದರೂ ಹೊರ ಬರುವುದಕ್ಕಾಗಿ ರಾತ್ರಿ ಎಂಟು ಗಂಟೆಯ ನಂತರ ಎಲ್ಲ ಮಾರುಕಟ್ಟೆ ಗಳನ್ನು ಬಂದ್ ಡುವುದು, ಮದುವೆ-ಸಭೆ-ಸಮಾರಂಭಗಳಿಗೆ ರಾತ್ರಿ ಹತ್ತು ಗಂಟೆಯ ಗಡುವು ವಿಧಿಸಿದೆ.

ಇದರ ಜತೆಗೆ ಆರ್ಥಿಕತೆ ಮೇಲೆತ್ತಲು ಇನ್ನು ಕೆಲ ಸಣ್ಣಪುಟ್ಟ ಸಲಹೆಗಳನ್ನು ಪಾಕಿಸ್ತಾನ ತನ್ನ ಜನರಿಗೆ ಕೊಟ್ಟಿದೆ. ಆದರೆ
ಇದ್ಯಾವುದೂ ಪಾತಾಳಕ್ಕಿಳಿದಿರುವ ಪಾಕಿಸ್ತಾನದ ಆರ್ಥಿಕತೆಯನ್ನು ಮೇಲೆತ್ತಲು ಸಾಧ್ಯವಿಲ್ಲ! ಅಷ್ಟಕ್ಕೂ ಪಾಕಿಸ್ತಾನ ಈ ಪರಿಯ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ಏಕೆ? ಪಾಕಿಸ್ತಾನದ ಈ ದುಸ್ಥಿತಿಗೆ ಕಾರಣವೇನು ಎಂಬುದನ್ನು ಹುಡುಕುತ್ತ ಹೊರಟರೆ, ಪಾಕ್ ಅಭಿವೃದ್ಧಿಗಾಗಲಿ, ಕೃಷಿ ಉತ್ತೇಜನಕ್ಕಾಗಲಿ ಅಥವಾ ದೊಡ್ಡ ದೊಡ್ಡ ಕೈಗಾರಿಕಾ ಸ್ಥಾಪನೆಗಾಗಲಿ ಅಥವಾ ಆದಾಯ ಕ್ರೋಡೀಕರಣದಂತಹ ಯೋಜನೆಗಳಿಗೆ ಮುಂದಾಗದೆ ಜಾಗತಿಕವಾಗಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಉಗ್ರರಿಗೆ ಕೆಂಪು ಹಾಸು ಹಾಕಿ ಪೋಷಿಸಿದ್ದು, ಅವರಿಗಾಗಿ ಡಾಲರ್ ಗಟ್ಟಲೆ ಹಣ ವ್ಯಯಿಸಿದ್ದು ಪಾಕ್ ನ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣ ಗಳಂದು.

ಎಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ಉಗ್ರರ ಆವಾಸಸ್ಥಾನ. ಪಾಕಿಸ್ತಾನ ಉಗ್ರರಿಗಾಗಿ ಕೊಟ್ಯಂತರ ಡಾಲರ್‌ಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ ಎನ್ನುವುದು ಪಾಕ್‌ನ ಮೇಲೆ ಅಂತಾರಾಷ್ಟ್ರೀಯವಾಗಿ ಕೇಳಿಬರುತ್ತಿರುವ ಆರೋಪ. ಅಮೆರಿಕ ಸೇನೆ ಪಾಕಿಸ್ತಾನ ದ ಅಡಗಿದ್ದ ಅಂತಾರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನ ಹೆಡೆಮುರಿ ಕಟ್ಟಿದ ನಂತರ
ಪಾಕಿಸ್ತಾನದ ಉಗ್ರ ಪೋಷಣೆಯ ಮುಖ ಜಾಗತಿಕವಾಗಿ ಬಟಾ ಬಯಲಾಗಿತ್ತು. ಆದಾಗ್ಯೂ ಪಾಕಿಸ್ತಾನ ಉಗ್ರರ ರಕ್ಷಣೆ ತನ್ನ ಅಸ್ಮಿತೆ ಎಂಬಂತೆ ಈಗಲೂ ಅವರನ್ನು ಪೋಷಿಸುತ್ತಿದೆ.

ಇದರಿಂದ ಪಾಕಿಸ್ತಾನ ಜಾಗತಿಕವಾಗಿ ಅನೇಕ ಬಾರಿ ಛೀಮಾರಿ ಹಾಕಿಸಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಅನೇಕ ಸಂಕಷ್ಟ ಗಳನ್ನು ಎದುರಿಸಿದೆ. ಈ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆಯು (FATF) ಭಯೋತ್ಪಾದಕ ಗುಂಪು ಗಳನ್ನು ಹಾಗೂ ಉಗ್ರರಿಗೆ ನೀಡುತ್ತಿರುವ ಆರ್ಥಿಕ ಸಹಾಯ ಮತ್ತು ಸಹಕಾರದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಾಕಿಸ್ತಾನಕ್ಕೆ ಸಾಕಷ್ಟು ಬಾರಿ ಎಚ್ಚರಿಸಿದ್ದರೂ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ FATF (Financial Action Task Force) ಪಾಕಿಸ್ತಾವನ್ನು ಅನೇಕ ವರ್ಷಗಳ ಕಾಲ ಬೂದು(ಗ್ರೇ) ಪಟ್ಟಿಗೆ ಸೇರಿಸಿದ್ದು ಸಹ ಪಾಕಿಸ್ತಾನದ ಆರ್ಥಿಕ ಹಿಂಜರಿತಕ್ಕೆ ಕಾರಣವೆನ್ನಬಹುದು.

ಇನ್ನು ವಿಶ್ವಬ್ಯಾಂಕಿನ ಮುಖ್ಯಸ್ಥರು ಹಾಗೂ ಆರ್ಥಿಕ ತಜ್ಞರು ಹೇಳುವ ಪ್ರಕಾರ ಪಾಕಿಸ್ತಾನದ ಇಂದಿನ ಈ ಸಂಕಷ್ಟಕ್ಕೆ ಅದರ ನೀತಿಗಳೇ ಕಾರಣವಾಗಿದೆ ಎನ್ನುವುದು ಅವರ ಅಭಿಪ್ರಾಯ. ಯಾಕೆಂದರೆ ಪಾಕಿಸ್ತಾನ ಅಭಿವೃದ್ಧಿ ಕೆಲಸಗಳಿಗಾಗಿ 4300 ಕೋಟಿ ರುಪಾಯಿ ಖರ್ಚು ಮಾಡಿದರೆ, ಸೇನೆಗಾಗಿ 18800 ಕೋಟಿ ರುಪಾಯಿಗಳನ್ನ ಪಾಕಿಸ್ತಾನ ವ್ಯಯಿಸುತ್ತಿದೆ! ಅಂದರೆ ಅಭಿವೃದ್ಧಿಗಿಂತ ಮಿಲಿಟರಿಗೆ ಹೆಚ್ಚು ಖರ್ಚು ಮಾಡುತ್ತಿರುವುದು ಹಾಗೂ ಅಪ್ರಯೋಜಕ ಯೋಜನೆಗಳಿಗಾಗಿ ಸಾಕಷ್ಟು ದುಂದು ವೆಚ್ಚ ಮಾಡುವ ಅಭ್ಯಾಸವು ಪಾಕಿಸ್ತಾನವನ್ನು ಇಂದು ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ ಎನ್ನುವುದು ತಜ್ಞರ ಅಭಿಪ್ರಾಯ. ಮೊದಲೇ ಆರ್ಥಿಕ ಹಿಂಜರಿತದಲ್ಲಿದ್ದ ಪಾಕಿಸ್ತಾನಕ್ಕೆ ಕಳೆದ ವರ್ಷ ಬಂದೆರಗಿದ ಮಾರಣಾಂತಿಕ ಪ್ರವಾಹವು ಇಡೀ ಪಾಕಿಸ್ತಾನ ವನ್ನು ಅಲಕಲ ಮಾಡಿದ್ದಲ್ಲದೇ ಸಾಕಷ್ಟು ಸಾವು- ನೋವುಗಳು, ಅಪಾರ ನಷ್ಟವನ್ನು ತಂದೊಡ್ಡಿತ್ತು.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರವೇ ಪಾಕಿಸ್ತಾನ ಮಾರಣಾಂತಿಕ ಮಾನ್ಸೂನ್ ಪ್ರವಾಹಕ್ಕೆ ಸಿಲುಕಿ ಬರೋಬ್ಬರಿ 16
ಸಾವಿರ ಕೋಟಿ ರು. ನಷ್ಟವನ್ನು ಪಾಕಿಸ್ತಾನ ಅನುಭವಿಸಿದೆಯಂತೆ! ಇದರ ಪರಿಣಾಮ ಪಾಕಿಸ್ತಾನದ ಬೆಳವಣಿಗೆ ಶೇ.೫ ರಿಂದ ಶೇ.೩ಕ್ಕೆ ಕುಸಿಯಿತು. ಸಾಲದ್ದಕ್ಕೆ ಚೀನಾವನ್ನು ಅತಿಯಾಗಿ ಓಲೈಸಿ ಅವರಿಂದ ಗರಿಷ್ಠ ಮಟ್ಟದ ಸಾಲ ಪಡೆದಿದ್ದು, ಪಾಕಿಸ್ತಾ ನದ ವಿದೇಶಿ ವಿನಿಮಯ ಮೀಸಲು ಕುಸಿತ, ಪಾಕಿಸ್ತಾನದ ಕೇಂದ್ರಿಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ದಿವಾಳಿ ಆಗಿದ್ದು, ವಿದೇಶಿ ಸಾಲ ಮರುಪಾವತಿಯಲ್ಲಿ ವಿಫಲ, ಹೊರದೇಶಗಳ ಹಣಕಾಸಿನ ನೆರವಿನ ಮೇಲೆ ಹೆಚ್ಚು ಅವಲಂಬನೆಯ ಜೊತೆ ಜೊತೆಗೆ ದೇಶಿಯವಾಗಿ ಆದಾಯ ಕ್ರೋಡೀಕರಿಸಬೇಕಾದ ನೀತಿಯಲ್ಲಿ ಎಡವಿದ್ದು ಪಾಕಿಸ್ತಾನಕ್ಕೆ ಮುಳುವಾಯಿತು.

ಪಾಕಿಸ್ತಾನವು ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಎಷ್ಟೆಲ್ಲ ಕಸರತ್ತು ನಡೆಸಿತ್ತೆಂದರೆ, ಐಎಂಎಫ್ (ಅಂತಾರಾಷ್ಟ್ರೀಯ
ಹಣಕಾಸು ನಿಧಿ) ಬಳಿ ಹಣಕಾಸಿನ ನೆರವು ನೀಡುವಂತೆ ಪಾಕಿಸ್ತಾನ ಇಪ್ಪತ್ತಕ್ಕೂ ಹೆಚ್ಚು ಬಾರಿ ಮನವಿ ಮಾಡಿದೆ ಎನ್ನಲಾಗು ತ್ತಿದೆ! ಆದರೆ ಪಾಕಿಸ್ತಾನದ ಮನವಿಗೆ ಸೊಪ್ಪು ಹಾಕದ ಐಎಂಎಫ್ ಷರತ್ತುಗಳನ್ನು ಈಡೇರಿಸದ ಹೊರತು ಯಾವುದೇ ಹಣಕಾಸಿನ ನೆರವು ನೀಡುವುದಿಲ್ಲ ಎಂದು ಖಡಕ್ ಆಗಿಯೇ ಹೇಳಿತ್ತು ಐಎಂಎಫ್.

ಪರಿಣಾಮ ಸಕಾಲಕ್ಕೆ ಯಾವುದೇ ಹಣಕಾಸಿನ ನೆರವು ಸಿಗದೇ ಹಾಗೂ ಪಾಕಿಸ್ತಾನದ ಆದಾಯ ಗಣನೀಯವಾಗಿ ಕಡಿಮೆ ಯಾಗಿದ್ದು ಸಹ ಆರ್ಥಿಕ ಇಕ್ಕಟ್ಟಿಗೆ ಪ್ರಮುಖ ಕಾರಣ. ಈಗ ಪಾಕಿಸ್ತಾನ ಚೇತರಿಸಿಕೊಳ್ಳಬೇಕಾದರೆ ಜಾಗತಿಕವಾಗಿ ದೊಡ್ಡ ಪ್ರಮಾಣದ ನೆರವಿನ ಅವಶ್ಯಕತೆ ಇದೆ. ಸೌದಿ ಅರೇಬಿಯ, ಅಮೆರಿಕ ಇನ್ನು ಕೆಲ ರಾಷ್ಟ್ರಗಳು ಅಲ್ಪಪ್ರಮಾಣದ ಸಹಾಯವನ್ನು ಈಗಾಗಲೇ ನೀಡಿವೆ. ಆದರೆ ಅದು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ! ಈಗಲಾದರೂ ಪಾಕಿಸ್ತಾನ ಉಗ್ರರನ್ನು ಉತ್ಪಾದಿಸುವುದೇ ತನ್ನ ಉದ್ಯೋಗ ಎನ್ನುವ ಮಾನಸಿಕತೆಯಿಂದ ಹೊರಬಂದು ಅಭಿವೃದ್ಧಿಯ ಕಡೆ ಹಾಗೂ ಸಾತ್ವಿಕ ಸಮಾಜ ನಿರ್ಮಾಣದ ಕಡೆ ಸಾಗಿದರೆ ಮಾತ್ರ ಉಳಿಗಾಲ! ಇಲ್ಲದಿದ್ದರೆ ಪಾಕಿಸ್ತಾನ ಪಾಕಿಸ್ತಾನವಾಗೇ ಉಳಿಯು ವುದು ಡೌಟು!

ಕೊನೆ ಪಂಚ್: ಭಾರತದಿಂದ ಪ್ರತ್ಯೇಕಗೊಂಡು 75 ವರ್ಷಗಳಾದರೂ ಪಾಕಿಸ್ತಾನ ಇಂದಿಗೂ ಅಸ್ಥಿರತೆಯಿಂದ ಒದ್ದಾಡುತ್ತಿದೆ. ಜತೆಗೆ ಭಿಕ್ಷಾಟನೆಯ ಬಟ್ಟಲನ್ನು ಕೈಯಲ್ಲಿಡಿದುಕೊಂಡೇ ತಿರುಗಾಡುತ್ತಿರುವುದು ದೌರ್ಭಾಗ್ಯವೇ ಸರಿ!

Read E-Paper click here