Wednesday, 11th December 2024

Narendra Modi: ಕಾರ್ಯ ನಿರ್ವಹಣೆ, ಸುಧಾರಣೆ, ಪರಿವರ್ತನೆ & ಮಾಹಿತಿ ರವಾನೆ; ಸಚಿವರಿಗೆ ಮೋದಿ ಬೋಧಿಸಿದ ಹೊಸ ಮಂತ್ರ

PM Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಚಿವ ಸಂಪುಟ ಸಭೆ  ಆಯೋಜಿಸಿ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ ತಮ್ಮ ಸಹೋದ್ಯೋಗಿಗಳಿಗೆ ಅವರು ವಿಶ್ರಾಂತಿ ರಹಿತವಾಗಿ ಕಾರ್ಯ ನಿರ್ವಹಿಸುಂತೆ ಕರೆ ನೀಡಿದರು. ಜತೆಗೆ ಉತ್ತಮ ಸೇವೆ ನೀಡಲು ʼಕಾರ್ಯ ನಿರ್ವಹಣೆ, ಸುಧಾರಣೆ, ಪರಿವರ್ತನೆ ಮತ್ತು ಮಾಹಿತಿ ರವಾನೆʼ (Perform, Reform, Transform, Inform) ಎಂಬ ಹೊಸ ನಾಲ್ಕು ಮಂತ್ರವನ್ನು ಬೋಧಿಸಿದ್ದಾರೆ.

ನವದೆಹಲಿಯ ಸುಷ್ಮಾ ಸ್ವರಾಜ್‌ ಭವನದಲ್ಲಿ ಬುಧವಾರ (ಆಗಸ್ಟ್‌ 28) ಸಭೆ ಆಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಸುಮಾರು 5 ಗಂಟೆಗಳ ಕಾಲ ಸುಧೀರ್ಘವಾಗಿ ನಡೆದ ಸಭೆಯ ವೇಳೆ ಪ್ರಧಾನಿ ಮೋದಿ ಅವರು ಸರ್ಕಾರದ ಕಾರ್ಯನಿರ್ವಹಣೆ, ಅದರ ಸಾಧನೆಗಳು ಮತ್ತು ಅವುಗಳ ಪ್ರಚಾರ, ಕಲ್ಯಾಣ ಕ್ರಮಗಳು ಹಾಗೂ ಇತರ ಪ್ರಮುಖ ವಿಷಯಗಳ ಬಗ್ಗೆ ತಮ್ಮ ಸಹೋದ್ಯೋಗಿಗಳನ್ನುದ್ದೇಶಿಸಿ ಸುಮಾರು 40 ನಿಮಿಷಗಳ ಕಾಲ ಮಾತನಾಡಿದರು.

ಸರ್ಕಾರವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸಂದೇಶವನ್ನು ರವಾನಿಸಲು ಸೋಷಿಯಲ್‌ ಮೀಡಿಯಾ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುವಂತೆ ಪ್ರಧಾನ ಮಂತ್ರಿ ಸಚಿವರಿಗೆ ಸೂಚಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಪ್ರತಿಕ್ರಿಯೆಗಳನ್ನು ತ್ವರಿತವಾಗಿ ಸ್ಪಂದಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಮೋದಿ 3.0 ಸರ್ಕಾರ (Modi 3.0 government) 100 ದಿನಗಳನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಆಯಾ ಸಚಿವಾಲಯಗಳ 10 ಪ್ರಮುಖ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಆ ಯೋಜನೆಗಳನ್ನು ವ್ಯಾಪಕವಾಗಿ  ಪ್ರಚಾರ ಮಾಡುವಂತೆ ಸಚಿವರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಮೋದಿ ಅವರು ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಸೂಚಿಸಿದರು. ಜತೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharama) ಅವರು ಮಂಡಿಸಿದ 2024ರ ಬಜೆಟ್‌ ಬಗ್ಗೆಯೂ ವಿಸ್ತೃತ ಚರ್ಚೆ ನಡೆಸಲಾಯಿತು. ಮೋದಿ ನೇತೃತ್ವದ ಸರ್ಕಾರ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 5ರಂದು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದ್ದು, ಅಂದು ಹಲವು ಯೋಜನೆಗಳನ್ನು ಜಾರಿಗೆ ತರಲೂ ಯೋಜನೆ ರೂಪಿಸಲಾಗಿದೆ.

ಮೂಲಗಳ ಪ್ರಕಾರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ (Rajiv Gauba) ಅವರು ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮೂರನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೊದಲ 85 ದಿನಗಳಲ್ಲಿ ತೆಗೆದುಕೊಂಡ 73 ಪ್ರಮುಖ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು. ಇದರೊಂದಿಗೆ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಹಾಗೂ ಮೂಲಸೌಕರ್ಯಗಳ ಸುಧಾರಣೆಗಳಿಗೆ ಸಂಬಂಧಿಸಿದಂತೆ  ಎರಡು ಪ್ರೆಸೆಂಟೇಷನ್‌ ಅನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು. ಸಭೆಯ ಕೊನೆಯಲ್ಲಿ ಪ್ರಧಾನಿ ಇನ್ನಷ್ಟು ಶ್ರಮವಹಿಸಿ ಕಾರ್ಯ ನಿರ್ವಹಿಸುವಂತೆ ಸಚಿವರಿಗೆ ಮತ್ತೊಮ್ಮೆ ಕರೆ ನೀಡಿದರು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ.