Saturday, 14th December 2024

ಕೃಷಿ ಹೋರಾಟಗಾರರಿಗೆ ರೈತರ ಕಾಳಜಿ ಇಲ್ಲ

ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಬಂಡವಾಳಶಾಹಿತ್ವ ಎನ್ನುವ ಚಿಂತನೆ ಕಮ್ಯುನಿಸ್ಟ್‌ ಕಾಮ್ರೇಡ್ ಗಳ ಯೋಚನೆಗಳಲ್ಲಿ ಹೆಚ್ಚಾಗಿ ಅಡಗಿದೆ

ಅಂಬಾನಿ ಮತ್ತು ಅದಾನಿ ಭಾರತದ ಶ್ರೀಮಂತರಾಗಿರುವುದು ಮೋದಿ ಅಧಿಕಾರಕ್ಕೆ ಬಂದ ನಂತರ ಅಲ್ಲ.

ಕಾಯಿದೆಗಳು ರೈತರ ಬೆಳೆಗೆ ಮಾತ್ರ ಒಪ್ಪಂದ ಮಾಡಿಕೊಳ್ಳುವುದರ ಬಗ್ಗೆ ಹೇಳುತ್ತದೆಯೇ ಹೊರತು ಭೂಮಿಗಳ ಬಗ್ಗೆ ಅಲ್ಲ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ 1980 ರಿಂದಲೇ ಪೆಪ್ಸಿ ಕಂಪನಿ ರೈತರ ಬೆಳೆಗಳನ್ನು ಖರೀದಿ ಮಾಡುವ ಕಾರ್ಯ ವನ್ನು ಪ್ರಾರಂಭಿಸಿತ್ತು. ಆಹಾರ ಸಂಸ್ಕರಣಾ ಘಟಕವನ್ನು ಪೆಪ್ಸಿ ಕಂಪನಿ ತೆರೆದು ರೈತರ ಬೆಳೆಗಳನ್ನು ನೇರವಾಗಿ ಖರೀದಿ ಮಾಡುತ್ತಿತ್ತು. ಆದರೆ ಅದಕ್ಕೆ ಯಾವುದೇ ಕಾನೂನಿನ ಚೌಕಟ್ಟು ಹಾಗೂ ನೀತಿ ನಿಯಮಗಳು ಇರಲಿಲ್ಲ. ಅಂತಹುದೇ ಪ್ರಕ್ರಿಯೆಯನ್ನು ಒಪ್ಪಂದದ ಕೃಷಿ ಕಾಯಿದೆಯ ಮೂಲಕ ನ್ಯಾಯಸಮ್ಮತಗೊಳಿಸಿದರೆ, ಅದರಿಂದ ರೈತನಿಗೆ ಆಗುವ ನಷ್ಟವೇನು. ಇಂದು ನಾನು ಬರೆಯಲಿಚ್ಛಿಸಿರುವುದು ಯಾವುದೋ ಒಂದು ವಿಷಯದ ಕುರಿತ ಕೇವಲ ಲೇಖನವಲ್ಲ, ಬದಲಿಗೆ ಇದೊಂದು ಸತ್ಯ ಸಂಗತಿ ಯನ್ನು ತಿಳಿಸುವ ಬಹಿರಂಗ ಪತ್ರವಾಗಿದೆ. ನಾಡಿನ ದೇಸಿ ಚಿಂತಕ ರಾದ ಪ್ರಸನ್ನ ಚರಕ ಅವರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ನನ್ನ ಕೆಲವು ಅನಿಸಿಕೆಗಳನ್ನು ಹಾಗೂ ಇಂದು ನಾವು ಕೇಳಲೇಬೇಕಾಗಿರುವ ಕೆಲವು ಮೂಲ ಪ್ರಶ್ನೆಗಳನ್ನು ಈ ಪತ್ರದ ಮೂಲಕ ಇಡುತ್ತಿದ್ದೇನೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಸುಧಾರಣೆ ಕಾಯಿದೆಯ ಕುರಿತು ಇತ್ತೀಚೆಗೆ ಹಲವಾರು ಚರ್ಚೆಗಳು ಹಾಗೂ
ಹೋರಾಟಗಳು ನಡೆಯುತ್ತಿವೆ. ಪಂಜಾಬ್ ಮತ್ತು ಹರಿಯಾಣಾದ ತಪ್ಪು ಗ್ರಹಿಕೆಗೆ ಒಳಗಾದ ಕೆಲವು ರೈತರು ದೆಹಲಿಯಲ್ಲಿ
ಮುಷ್ಕರ ನಡೆಸುತ್ತಿದ್ದರೆ, ಸ್ಥಳೀಯವಾಗಿ ಹಲವರು ಹೋರಾಟ ನಡೆಸುತ್ತಿದ್ದಾರೆ. ದುರಂತವೆಂದರೆ ಈ ಹೋರಾಟಗಳ ನಿಜವಾದ ಆಶಯ ರೈತರ ಕುರಿತ ಕಾಳಜಿಯಂತೂ ಖಂಡಿತ ಅಲ್ಲ, ಬದಲಿಗೆ ಅವರ ಹೆಸರಿನಲ್ಲಿ ಮೋದಿ ಮತ್ತು ಬಿಜೆಪಿಯ ವಿರುದ್ಧ
ನಡೆಸುತ್ತಿರುವ ಹೋರಾಟವಾಗಿದೆ ಎಂದು ಮೇಲ್ನೋಟದ ಸಾಕ್ಷಿಗಳು ಹೇಳುತ್ತವೆ. ಇಂತಹ ಹೋರಾಟಗಳ ಅಜೆಂಡಾಗಳನ್ನು ಪ್ರಶ್ನಿಸುವ ಮೊದಲು ಕೃಷಿ ಕಾಯಿದೆಯನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವ ಅಗತ್ಯವಿದೆ.

ಪ್ರಸ್ತುತ ಕೃಷಿ ಕಾಯಿದೆಯು ಮುಖ್ಯವಾಗಿ ಮೂರು ಕಾಯಿದೆಗಳನ್ನು ಒಳಗೊಂಡಿರುವ ಮಸೂದೆಯಾಗಿದೆ. ಎಪಿಎಂಸಿ ಕಾಯಿದೆ, ಅಗತ್ಯ ಸರಕುಗಳ ಕಾಯಿದೆ ಹಾಗೂ ಒಪ್ಪಂದ ಕೃಷಿ ಕಾಯಿದೆಗಳನ್ನು ಒಳಗೊಂಡಿದೆ. ಇವುಗಳನ್ನು ಸರಳವಾಗಿ ಅರ್ಥ ಮಾಡಿ ಕೊಳ್ಳುವುದಾದರೆ ಬ್ರಿಟೀಷರ ಕಾಲ ದಿಂದ ಬೇರೆ ಬೇರೆ ಸ್ವರೂಪದಲ್ಲೇ ಮುಂದುವರಿದುಕೊಂಡು ಬಂದಿರುವ ಎಪಿಎಂಸಿ ಕಾಯಿದೆಯನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಕೃಷಿ ಕಾಯಿದೆ ಹೊಂದಿದೆ.

ಈವರೆಗೂ ರೈತ ತಾನು ಬೆಳೆದ ಬೆಳೆಯನ್ನು ಸ್ಥಳೀಯ ಎಪಿಎಂಸಿ ಮಾರುಕಟ್ಟೆೆಯಲ್ಲಿಯೇ ಮಾರಾಟ ಮಾಡಬೇಕೆಂಬ ನಿರ್ಬಂಧ ವಿತ್ತು. ಒಂದೊಮ್ಮೆ ಆತ ಅದರಿಂದ ಹೊರಗೆ ಮಾರಿದರೆ ಅಥವಾ ವ್ಯವಹರಿಸಿದರೆ ಎಪಿಎಂಸಿ ಕಾಯಿದೆಯ ಪ್ರಕಾರ ರೈತನ ಮೇಲೆ ಮೊಕದ್ದಮೆ ದಾಖಲಿಸಿ 6 ತಿಂಗಳವರೆಗೂ ಜೈಲು ಶಿಕ್ಷೆಯನ್ನು ನೀಡುವ ಅಧಿಕಾರ ಆ ಕಾಯಿದೆಗೆ ಇತ್ತು. ಈ ಮಾರುಕಟ್ಟೆಯ
ವ್ಯವಸ್ಥೆಯಿಂದ ದಲ್ಲಾಳಿಗಳಿಗೆ ಹೆಚ್ಚಿನ ಲಾಭವಾಗುತ್ತಿತ್ತೇ ವಿನಾಃ ರೈತರಿಗೆ ಅಲ್ಲ. 1990ರ ದಶಕದಲ್ಲಿ ಜಾಗತೀಕರಣಕ್ಕೆ ಭಾರತ
ಪದಾರ್ಪಣೆ ಮಾಡಿದರೂ ಮುಕ್ತ ಮಾರುಕಟ್ಟೆಯು ಕೃಷಿಯಿಂದ ಹೊರಗೆ ಉಳಿಯಿತು.

ರೈತ ಬೆಳೆದ ಬೆಳೆಗಳನ್ನು ಬಿಟ್ಟು ಉಳಿದೆಲ್ಲ ಸರಕು-ಸರಂಜಾಮುಗಳಿಗೂ ಮಾರುಕಟ್ಟೆೆಯಲ್ಲಿ ಮುಕ್ತ ಅವಕಾಶ ದೊರೆಯಿತು. ಕೃಷಿ ಕಾಯಿದೆಯ ವಿರುದ್ಧ ಅವಿರತವಾಗಿ ಸೊಲ್ಲೆತ್ತಿರುವ ಕಾಂಗ್ರೆಸ್ ಆಗ ಏಕೆ ಕೃಷಿಗೆ ಮುಕ್ತ ಮಾರುಕಟ್ಟೆೆಯನ್ನು ಒದಗಿಸಲಿಲ್ಲ
ಎನ್ನುವುದಕ್ಕೆ ಸಮಜಾಯಿಷಿ ನೀಡಬಲ್ಲದೆ? ರೈತರ ಪರ ಎಂದು ಹೋರಾಟಕ್ಕೆ ಬೆಂಬಲ ನೀಡಿದ ಅದೇ ಪಕ್ಷವು ತಾನು ಮಾಡಿದ ಐತಿಹಾಸಿಕ ಅನ್ಯಾಯವನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ? ಇದು ರೈತರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ ಪಕ್ಷದ ಹಿಪಾಕ್ರಸಿ ಅಲ್ಲವೇ? ಈಗಿನ ಕೃಷಿ ಕಾಯಿದೆಯ ಎಪಿಎಂಸಿ ಮಸೂದೆಯ ಪ್ರಕಾರ, ರೈತ ತನ್ನ ಬೆಳೆಗೆ ಎಲ್ಲಿ ಸರಿಯಾದ ಮೌಲ್ಯ ದೊರಕು ತ್ತದೆಯೋ ಅಲ್ಲಿ ಮಾರಬಹುದಾಗಿದೆ, ಹಾಗೂ ಅದು ಅಪರಾಧವೂ ಅಲ್ಲ.

ಇದರ ಜತೆಗೆ ಸ್ಥಳೀಯ ಎಪಿಎಂಸಿಯಲ್ಲಿ ಮಾತ್ರ ಬೆಳೆಗಳನ್ನು ಮಾರಾಟ ಮಾಡಬೇಕೆಂಬ ನಿರ್ಬಂಧವನ್ನೂ ತೆಗೆದು ಹಾಕಲಾಗಿದೆ. ಅಂದರೆ, ಭಾರತದಲ್ಲಿ ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರಾಟ ಮಾಡುವ ಮತ್ತು ವಿದೇಶಗಳಿಗೆ ನೇರವಾಗಿ ರಫ್ತು ಮಾಡುವ ಸ್ವಾತಂತ್ರ್ಯವನ್ನು ರೈತ ಹೊಂದಿರುತ್ತಾನೆ. ಇದರಿಂದ ರೈತನಿಗಾಗುವ ಅನ್ಯಾಯವಾದರೂ ಏನು? ರೈತನಿಗೆ ರಾಷ್ಟ್ರೀಯ
ಮತ್ತು ಜಾಗತಿಕ ಮಾರುಕಟ್ಟೆಯ ಸವಲತ್ತು ದೊರಕಿದರೆ ಆತನ ಅಭಿವೃದ್ಧಿಯಾಗುತ್ತದೆಯೋ ಅಥವಾ ಅವನ ಬೆಳವಣಿಗೆ ಕುಂಠಿತವಾಗುತ್ತದೆಯೋ? ಕೃಷಿ ಕಾಯಿದೆಯ ಮತ್ತೊಂದು ಅಂಶ ಎಂದರೆ ಅಗತ್ಯ ಸರಕುಗಳ ಕಾಯಿದೆ.

ಇದರ ಪ್ರಕಾರ ರೈತ ಅಥವಾ ಖಾಸಗಿ ವ್ಯಕ್ತಿಗಳು ಕೃಷಿ ಉತ್ಪನ್ನಗಳನ್ನು ಶೇಖರಿಸಿಟ್ಟುಕೊಳ್ಳಬಹುದಾಗಿದೆ. ಈ ಮೊದಲು ಇದ್ದ
ಕಾಯಿದೆಯ ಪ್ರಕಾರ ಸರಕಾರಿ ಗೋದಾಮುಗಳಲ್ಲಿಯೇ ಉತ್ಪನ್ನಗಳನ್ನು ಶೇಖರಿಸಿಡಬೇಕಿತ್ತು. ಒಂದೊಮ್ಮೆ ರೈತ ಅಥವಾ ಖಾಸಗಿ ವ್ಯಕ್ತಿ ಖಾಸಗಿ ಗೋದಾಮುಗಳಲ್ಲಿ ಶೇಖರಿಸಿಡುವ ದುಸ್ಸಾಹಸಕ್ಕೆ ಕೈ ಹಾಕಿದ್ದೇ ಆದಲ್ಲಿ ಅದು ಕಾನೂನಿನ ಪ್ರಕಾರ ಶಿಕ್ಷಾರ್ಹ
ಅಪರಾಧವಾಗಿತ್ತು. ಹಿಂದೆ ಇದ್ದ ಕಾನೂನನ್ನು ಬ್ರಿಟೀಷರು ತಮ್ಮ ಅನುಕೂಲಕ್ಕಾಗಿ 1915ರಲ್ಲಿ ‘ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್‌’ ಜಾರಿಗೆ ತಂದಿದ್ದರು.

ಕಾಲಕ್ರಮೇಣ ಅದುವೇ ಮುಂದುವರಿದು ಸ್ವಾತಂತ್ರ್ಯ ದೊರಕಿದ ನಂತರದ ಭಾರತದಲ್ಲಿಯೂ ರೈತರು ತಮ್ಮ ಉತ್ಪನ್ನಗಳನ್ನು ಶೇಖರಿಸಿಟ್ಟಿಕೊಳ್ಳುವ ಹಕ್ಕನ್ನು ಕಳೆದುಕೊಂಡರು. ಆ ಹಕ್ಕನ್ನು ಮರುಸ್ಥಾಪಿಸುವ ಉದ್ದೇಶದೊಂದಿಗೆ ಜಾರಿಗೆ ಬರುತ್ತಿರುವ ಕೃಷಿ ಕಾಯಿದೆಯನ್ನು ವಿರೋಧಿಸುತ್ತಿರುವ ಮಧ್ಯವರ್ತಿಗಳ ಪ್ರಾಯೋಜಿತ ಬೆಂಬಲದ ಹೋರಾಟದಲ್ಲಿ ಯಾವ ಪುರುಷಾರ್ಥವಿದೆ? ಈ ಕಾಯಿದೆಯಿಂದ ತಕ್ಷಣಕ್ಕೆ ತೊಂದರೆಗೆ ಒಳಗಾಗುವುದು ಮಧ್ಯವರ್ತಿಗಳು ಮಾತ್ರ, ಬದಲಿಗೆ ರೈತರಲ್ಲ ಅಲ್ಲವೆ? ಕೃಷಿ ಕಾಯಿದೆ ಯಲ್ಲಿ ಸೇರಿಸಿರುವ ಮತ್ತೊಂದು ಹೊಸ ಅಂಶವೆಂದರೆ, ‘‘ಒಪ್ಪಂದ ಕೃಷಿ’’.

ಇದರ ಪ್ರಕಾರ, ರೈತ ತಾನು ಬೆಳೆಯುವ ಮುನ್ನವೇ ಬೆಳೆಗಳಿಗೆ ಒಂದು ನಿರ್ದಿಷ್ಟ ಮೌಲ್ಯವನ್ನು ನಿಗದಿಪಡಿಸಿ, ಖಾಸಗಿ ವ್ಯಕ್ತಿ ಅಥವಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಉತ್ಪನ್ನಗಳಿಗೆ ಮಾರುಕಟ್ಟೆಯ ಮೌಲ್ಯ ಏರಿಳಿತವಾದರೂ
ರೈತ ಮತ್ತು ಕಂಪನಿ ನಡುವೆ ನಡೆದಿರುವ ಒಪ್ಪಂದಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಈ ಹಿಂದೆ ಒಪ್ಪಂದದಂತೆ ಎಷ್ಟು ಬೆಲೆಯನ್ನು ನಿಗದಿಪಡಿಸಲಾಗಿರುತ್ತದೆಯೋ ಅಷ್ಟೇ ಬೆಲೆಯನ್ನು ರೈತನು ಕಂಪನಿಯಿಂದ ಪಡೆಯಬಹುದಾಗಿದೆ.

ಇದರ ಮೂಲಕ ಬೆಳೆಯ ಭದ್ರತೆ ರೈತನಿಗೆ ದೊರಕುತ್ತದೆ. ಇದರಲ್ಲಿ ಮತ್ತೊಂದು ಮುಖ್ಯವಾದ ಅಂಶವನ್ನು ನಾವು ಗಮನಿಸ ಬೇಕಾಗುತ್ತದೆ. ಅದೆಂದರೆ, ಒಂದೊಮ್ಮೆ ರೈತ ತಾನು ಬೆಳೆದ ಬೆಳೆಯ ಮೌಲ್ಯ ತಾನು ಮಾಡಿಕೊಂಡ ಒಪ್ಪಂದಕ್ಕಿಂತ ಹೆಚ್ಚಾದರೆ, ಆ ಒಪ್ಪಂದವನ್ನು ಮುರಿಯುವ ಸ್ವಾತಂತ್ರ‍್ಯ ರೈತನಿಗೆ ಇರುತ್ತದೆ. ಅಂದರೆ, ತಾನು ಮಾಡಿಕೊಂಡ ಒಪ್ಪಂದಕ್ಕಿಂತ ತನ್ನ ಉತ್ಪನ್ನ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರತರೆ ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ನಿರ್ಲಕ್ಷಿಸುವ ಸಂಪೂರ್ಣ ಅಧಿಕಾರ ರೈತನಿಗೆ ಇರುತ್ತದೆ.

ಒಪ್ಪಂದ ಕೃಷಿ ಅಥವಾ ಕಾಂಟ್ರಾಕ್ಟ್‌ ಫಾರ್ಮಿಂಗ್ ಕಾಯಿದೆಯ ಬೆಂಬಲ ರೈತರು ಮೋಸಕ್ಕೆ ಒಳಗಾಗದಂತೆ ಅವರಿಗೆ ರಕ್ಷಣೆ ನೀಡುತ್ತದೆ. ಇದಲ್ಲೆದಕ್ಕಿಂತ ಮಿಗಿಲಾಗಿ ಈ ಕಾಯಿದೆಯು ರೈತರ ಬೆಳೆಗೆ ಮಾತ್ರ ಒಪ್ಪಂದ ಮಾಡಿಕೊಳ್ಳುವುದರ ಬಗ್ಗೆ ಹೇಳುತ್ತದೆಯೇ ಹೊರತು ರೈತರ ಭೂಮಿಗಳ ಕುರಿತಾಗಿ ಅಲ್ಲ. ಅಂದರೆ ರೈತ ಬೆಳೆಯುವ ಬೆಳೆಗಳನ್ನು ಮಾತ್ರ ಮಾರಾಟ ಮಾಡಲು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದೇ ಹೊರತು, ಆತ ತನ್ನ ಭೂಮಿಯನ್ನೇ ಕಂಪನಿಗೆ ಬರೆದು ಕೊಡುವುದಿಲ್ಲ. ಅಂತಹ ನಿಯಮವೇನಾದರೂ ಈ ಕಾಯಿದೆಯಲ್ಲಿದ್ದರೆ ಯಾರಾದರೂ ತೋರಿಸಿಕೊಡಬಹುದು.

ಇವೆಲ್ಲಕ್ಕಿಂತ ಪ್ರಧಾನವಾಗಿ, ಈ ಕಾಯಿದೆಯು ರೈತನಿಗೆ ಮತ್ತೊಂದು ಸ್ವಾತಂತ್ರ್ಯ ನೀಡಿದೆ. ಅದೆಂದರೆ, ಈ ಕಾಯಿದೆಯ ಪ್ರಕಾರ ಆತ ಮಾರುಕಟ್ಟೆಗಳಲ್ಲಿ ಬೆಳೆಯನ್ನು ತನಗಿಷ್ಟ ಬಂದವರಿಗೆ ಮಾರಬಹುದು, ಅಥವಾ ಎಪಿಎಂಸಿಗೆ ಹಿಂದಿನಂತೆ ಮಾರಲೂ ಬಹುದು. ಆ ಸ್ವಾತಂತ್ರ‍್ಯ ರೈತನಿಗೆ ಇದ್ದೇ ಇರುತ್ತದೆ. ರೈತ ಒಂದೊಮ್ಮೆ ಇಚ್ಛಿಸಿದರೆ ಮಾತ್ರ ಈ ಕಾಯಿದೆಯ ಪ್ರಕಾರ ಆತ ನಡೆದುಕೊಳ್ಳಬಹುದು, ಇಲ್ಲದಿದ್ದರೆ ಕಾಯಿದೆಯನ್ನು ಪಾಲಿಸಲೇಬೇಕೆಂಬ ಯಾವ ಷರತ್ತುಗಳೂ ಇಲ್ಲ. ಹಾಗೂ ಇದರಿಂದ ಎಪಿಎಂಸಿಗಳೂ ಮುಚ್ಚುವುದಿಲ್ಲ, ರೈತರು ಕಾರ್ಪೋರೇಟ್‌ಗಳ ಏಜೆಂಟ್ ಗಳಾಗಿಯೂ ಬದಲಾಗುವುದಿಲ್ಲ.

ಇಲ್ಲಿಯವರೆಗೂ ರೈತನಿಗೆ ಇಲ್ಲದೇ ಇದ್ದಂತಹ ನವಸ್ವಾತಂತ್ರ‍್ಯಕ್ಕೆ ಮುನ್ನುಡಿ ಬರೆಯುವ ಕೆಲಸವನ್ನು ಈ ಕಾಯಿದೆ ಮಾಡುತ್ತದೆ.
ಇವಿಷ್ಟು ಕಾಯಿದೆಯ ಕುರಿತ ಸಂಕ್ಷಿಪ್ತ ಮಾಹಿತಿಯಾದರೆ, ಇನ್ನು ಇದರ ವಿರುದ್ಧ ನಡೆಯುತ್ತಿರುವ ಹೋರಾಟಗಳ ಹಿಂದಿನ ರಹಸ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಕೃಷಿ ಕಾಯಿದೆಯನ್ನು ವಿರೋಧಿಸುತ್ತಿರುವ ಹೋರಾಟದಲ್ಲಿ ಬೆಂಗಳೂರಿನ್ಲಿ ಚರಕ ಪ್ರಸನ್ನ ಅವರು ನೇತೃತ್ವವನ್ನು ವಹಿಸಿದ್ದಾರೆ. ಆದರೆ ಯಾವ ಕಾರಣದಿಂದ ಅವರು ಹೋರಾಟ ನಡೆಸುತ್ತಿದ್ದಾರೆ ಎಂಬುದು ಇನ್ನೂ ಸರಿಯಾಗಿ ಅರ್ಥವಾಗುತ್ತಿಲ್ಲ.

ಆದ್ದರಿಂದ ಸಾಮಾನ್ಯವಾಗಿ ಅವರು ಮಾಡುವ ಆರೋಪಗಳನ್ನೇ ಅವರ ಹೋರಾಟದ ಆಶಯ ಎಂದು ಭಾವಿಸಿ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇನೆ. ಕೃಷಿಯನ್ನು ಖಾಸಗೀಕರಣ ಮಾಡುತ್ತಿದ್ದಾರೆ, ಇದರಿಂದ ರೈತರಿಗೆ ನ್ಯಾಯವಾಗುತ್ತಿದೆ ಎಂದು ಹೋರಾಟಗಾರರು ಹೇಳುತ್ತಾರೆ. ಆದರೆ, ಇಂದು ರೈತ ಹೋರಾಟದ ಮುಂಚೂಣಿಯಲ್ಲಿರುವ ಪಂಜಾಬ್ ಮತ್ತು ಹರಿಯಾಣಗಳಲ್ಲಿ 1980 ರಿಂದಲೇ ಪೆಪ್ಸಿ ಕಂಪನಿ ರೈತರ ಬೆಳೆಗಳನ್ನು ಖರೀದಿ ಮಾಡುವ ಕಾರ್ಯವನ್ನು ಪ್ರಾರಂಭಿಸಿತ್ತು. ಆಹಾರ ಸ್ಂಕರಣಾ ಘಟಕವನ್ನು ಪೆಪ್ಸಿ ಕಂಪನಿ ತೆರೆದು ರೈತರ ಬೆಳೆಗಳನ್ನು ನೇರವಾಗಿ ಖರೀದಿ ಮಾಡುತ್ತಿತ್ತು. ಆದರೆ ಅದಕ್ಕೆ ಯಾವುದೇ ಕಾನೂನಿನ ಚೌಕಟ್ಟು ಹಾಗೂ ನೀತಿ ನಿಯಮಗಳು ಇರಲಿಲ್ಲ.

ಅಂತಹುದೇ ಪ್ರಕ್ರಿಯೆಯನ್ನು ಒಪ್ಪಂದದ ಕೃಷಿ ಕಾಯಿದೆಯ ಮೂಲಕ ನ್ಯಾಯಸಮ್ಮತಗೊಳಿಸಿದರೆ, ಅದರಿಂದ ರೈತನಿಗೆ
ಆಗುವ ನಷ್ಟವೇನು ಎಂದು ಹೋರಾಟಗಾರರು ತಿಳಿಸಬೇಕು. ಜತೆಗೆ ಪಂಜಾಬ್‌ನಲ್ಲಿ ರೈತರ ಬೆಳೆಗಳನ್ನು ಖರೀದಿಸುತ್ತಿದ್ದ
ಪೆಪ್ಸಿ ಕಂಪನಿ ಖಾಸಗಿ ಮಾಲೀಕತ್ವವನ್ನು ಹೊಂದಿದೆಯೇ ಅಥವಾ ಸರಕಾರಿ ಸಂಸ್ಥೆಯಾಗಿದೆಯೇ? ಅಥವಾ ಇದು ಯಾವ ರೀತಿಯ ಖಾಸಗೀಕರಣ? ಎಂದು ಹೋರಾಟಗಾರರು ಉತ್ತರಿಸಬೇಕು.

ಮೋದಿ ಸರಕಾರ ರೈತರ ವಿರುದ್ಧವಾಗಿದೆಯೇ? ಕೃಷಿ ವಿಧೇಯಕವನ್ನು ವಿರೋಧಿಸುವವರ ಆರೋಪ ಇರುವುದು ಮೋದಿ ರೈತರ ವಿರುದ್ಧವಾಗಿ ಬಂಡವಾಳಶಾಹಿಗಳ ಪರವಾಗಿ ಈ ಕಾಯಿದೆಯನ್ನು ತರಲು ಹೊರಟಿದ್ದಾರೆ. ಆದ್ದರಿಂದ ಕೃಷಿ ಮತ್ತು ರೈತರ ಸಂರಕ್ಷಣೆ ಮಾಡುವುದೇ ಅವರ ಹೋರಾಟದ ಗುರಿ ಎಂಬುದಾಗಿ ಹೇಳುತ್ತಾರೆ. ಆದರೆ ನಾವಿಲ್ಲಿ ಮೋದಿಯವರು ರೈತರಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಮೆಲುಕು ಹಾಕಿದರೆ ಒಳಿತು.

ಬೆಳೆ ವಿಮಾ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ರಾಷ್ಟ್ರೀಯ ಕೃಷಿ ಮಾರುಕಟ್ಟೆ, ಡೈರಿ ಉದ್ಯಮ ಉತ್ತೇಜಕ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ, ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಯೋಜನೆ, ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೃಷಿ ಕ್ಷೇತ್ರವನ್ನು ಹಾಗೂ ರೈತರ ಬದುಕನ್ನು ವ್ಯವಸ್ಥಿತವಾಗಿ ಹಸನುಗೊಳಿಸುವ ಕಾರ್ಯವನ್ನು ನಿರಂತವಾಗಿ ಮಾಡುತ್ತಿದ್ದಾರೆ.

ಹಾಗೆಯೇ ರೈತರ ಜನಧನ ಖಾತೆಗಳಿಗೆ ವಾರ್ಷಿಕ ಅನುದಾನಗಳನ್ನು ನೇರವಾಗಿ ಅವರಿಗೇ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ನಿಜವಾದ ಫಲಾನುಭವಿಗಳ ಅಭ್ಯುದಯವೇ ಇಂತಹ ಹಲವಾರು ಯೋಜನೆಗಳು ಜಾರಿಗೆ ಬರಲು ಕಾರಣ ವಾಗಿದೆ. ಈಗ ರೈತರ ಮತ್ತು ಕೃಷಿಯ ಅಭಿವೃದ್ಧಿಗಾಗಿ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬುದನ್ನು ನೋಡಬೇಕಾದ ಸಮಯ.

ಸುಮಾರು ಒಂದು ಲಕ್ಷ ಕೋಟಿ ಅನುದಾನವನ್ನು ಕೃಷಿ ಮೂಲಭೂತ ಸೌಕರ್ಯದಡಿಯಲ್ಲಿ ಬಿಡುಗಡೆ ಮಾಡಲಾಗಿದೆ, ಕಿಸಾನ್
ಸಮ್ಮಾನ್ ಯೋಜನೆಯಡಿ 9 ಕೋಟಿ ರೈತ ಕುಟುಂಬಗಳಿಗೆ 54 ಸಾವಿರ ಕೋಟಿ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡ ಲಾಗಿದೆ. ಇವೆಲ್ಲವೂ ಅಂಬಾನಿ ಅಥವಾ ಅದಾನಿಗಳ ಉದ್ಧಾರಕ್ಕೆ ಮಾಡಲಾಗಿದೆಯೇ? ಅಥವಾ ರೈತರ ಒಳಿತಿಗಾಗಿ ಮಾಡ ಲಾಗಿದೆಯೇ? ಹೋರಾಟಗಾರರು ಇದಕ್ಕೆ ಉತ್ತರ ನೀಡಬೇಕು ಎನ್ನುವುದು ನನ್ನ ವಿನಂತಿ. ಅಂಬಾನಿ ಮತ್ತು ಅದಾನಿ ಭಾರತದ ಶ್ರೀಮಂತರಾಗಿರುವುದು ಮೋದಿ ಅಧಿಕಾರಕ್ಕೆ ಬಂದ ನಂತರ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರು ಯಾರ ಕಾಲಘಟ್ಟದಲ್ಲಿ ಶ್ರೀಮಂತರಾದರು, ಆಗ ಇದ್ದಂತಹ ಸರಕಾರ ಯಾವುದು? ಎಂದು ಹೋರಾಟಗರಾರು ತಿಳಿಸಬೇಕು.

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲೇ ಅಂಬಾನಿ, ಅದಾನಿಯಂತಹ ಶ್ರೀಮಂತರಿದ್ದರು ಎನ್ನುವುದನ್ನು ಮರೆಯಬಾರದು. ಮೇಲೆ ವಿವರಿಸಿದ ಅಷ್ಟೂ ಯೋಜನೆಗಳಲ್ಲಿ ಹಾಗೂ ಕೃಷಿ ಮಸೂದೆಯಲ್ಲಿ ಮೋದಿ ಅವರು ಬಂಡವಾಳಶಾಹಿಗಳಿಗೆ ಲಾಭ ಮಾಡಿ ಕೊಟ್ಟಿರುವ ಅಂಶವಾದರೂ ಎಲ್ಲಿದೆ? ಹಾಗೆ ನೋಡಿದರೆ ಮೋದಿ ಅವರ ಯೋಜನೆಗಳಿಗಿಂತ ಬಂಡವಾಳಶಾಹಿತ್ವ ಎನ್ನುವ ಚಿಂತನೆ ಕಮ್ಯುನಿಸ್ಟ್‌ ಕಾಮ್ರೇಡ್ ಗಳ ಯೋಚನೆಗಳಲ್ಲಿ ಹೆಚ್ಚಾಗಿ ಅಡಗಿದೆ.

ಯಾವುದಾದರೂ ಕಾರಣಕ್ಕೆ ವಿರೋಧಿಸಲೇಬೇಕು ಎಂದು ಪೂರ್ವನಿರ್ಧರಿತ ಗುಂಪುಗಳಿಗೆ ಯಾವ ಸಕಾರಣಗಳೂ ಬೇಕಿಲ್ಲ ಎನ್ನುವುದು ವೇದ್ಯ. ಒಟ್ಟಿನಲ್ಲಿ ಯಾವ ಕಾರಣಗಳನ್ನು ಇಟ್ಟುಕೊಂಡು ಕೃಷಿ ಮಸೂದೆಯ ವಿರುದ್ಧ ಹೋರಾಟ  ನಡೆಸು ತ್ತಿದ್ದಾರೋ ಆ ಯಾವ ಕಾರಣಗಳೂ ಕೃಷಿ ಮಸೂದೆಯಿಂದ ರೈತರಿಗೆ ಅನ್ಯಾಯವಾಗುತ್ತದೆ ಎನ್ನುವ ಅಂಶವನ್ನು ಸಾಬೀತು ಪಡಿಸುವುದಿಲ್ಲ. ಆದರೆ ಒಂದು ಅಂಶವನ್ನು ನಾನೂ ಒಪ್ಪುತ್ತೇನೆ, ಅದೆಂದರೆ ಈ ಮಸೂದೆಯಿಂದ ಮಧ್ಯವರ್ತಿಗಳಿಗೆ ಬಹು ದೊಡ್ಡ ನಷ್ಟವಾಗುತ್ತದೆ ಎಂಬುದು ಸತ್ಯ. ಗ್ರಾಹಕರು ಮತ್ತು ರೈತರ ನಡುವಿನ ಮಧ್ಯವರ್ತಿಗಳಿಗೆ ಬೆಳೆ ಬೆಳೆದ ರೈತನಿಗಿಂತ ಹೆಚ್ಚು
ಲಾಭವಾಗುತ್ತಿದ್ದ ಕಾಲ ಮುಗಿಯುತ್ತಾ ಬಂದಿದೆ.

ಜಮೀನುಗಳಲ್ಲಿ ಕಷ್ಟಪಟ್ಟು ಫಸಲು ಪಡೆದ ರೈತರಿಗೇ ಹೆಚ್ಚಿನ ಆದಾಯ ಈ ಮಸೂದೆಯಿಂದ ಬರುತ್ತದೆ. ಆದ್ದರಿಂದ
ಮಧ್ಯವರ್ತಿಗಳಿಗೆ ಈ ಮಸೂದೆ ದೊಡ್ಡ ಹೊಡೆತ ಕೊಡುತ್ತದೆ ಎನ್ನುವುದನ್ನು ನಾನು ತಿರಸ್ಕರಿಸುವುದಿಲ್ಲ. ಕೃಷಿ ಕ್ಷೇತ್ರ ಅಸಂಘಟಿತ ವಲಯಗಳಲ್ಲಿ ಒಂದಾಗಿದೆ, ಕೃಷಿ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಅಸಂಘಟಿತ ಕ್ಷೇತ್ರಕ್ಕೂ ಒಂದು ವ್ಯವಸ್ಥಿತ ಸ್ವರೂಪವನ್ನು ನೀಡುವ ಕಾರ್ಯ ಚಾಲನೆಯಾಗಿದೆ. ಇದರ ಜತೆಗೆ, 2022ರ ಒಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಕಾರ್ಯನಿರ್ವಹಿಸುತ್ತಿದೆ.

ರೈತರ ಆದಾಯ ದ್ವಿಗುಣವಾದರೆ ರೈತರಿಗೆ ಯಾವ ರೀತಿ ಅನ್ಯಾಯವಾಗುತ್ತದೆ ಎಂದು ಸವಿವರವಾಗಿ ಹೋರಾಟಗಾರರು, ಮತ್ತಿತರ ಚಿಂತಕರು ತಿಳಿಸಿಕೊಡಬಹುದೆ? ಪ್ರಸನ್ನ ಅವರ ಕೆಲವು ನಡೆಗಳು ಸಂಶಯವನ್ನು ಹುಟ್ಟುಹಾಕುತ್ತಿವೆ. ಆರಂಭದಲ್ಲಿ ರೈತ ಹೋರಾಟದ ಪ್ರಶ್ನೆ ಎಪಿಎಂಸಿ ರದ್ದಾಗುತ್ತದೆ ಎಂದು ಆಗಿತ್ತು. ನಂತರ ಎಂಎಸ್‌ಪಿ ದೊರೆಯುವುದಿಲ್ಲ ಎಂಬ ಆರೋಪ ಬಂದಿತು. ಈಗ ಅವೆರಡೂ ಅಂಶಗಳಿಗೆ ಸಮಜಾಯಿಸಿ ದೊರೆತು, ಅವುಗಳು ಸತ್ಯವಲ್ಲ ಎಂದು ಅರಿವಾದ ನಂತರ ಕೃಷಿ ಮಸೂದೆ ಬಂಡವಾಳಶಾಹಿಗಳ ಪರ ಎಂದು ಹೊಸದೊಂದು ಅಂಶವನ್ನು ಹೋರಾಟಗಾರರ ನೇತಾರರು ಸೇರಿಸಿಕೊಂಡಿದ್ದಾರೆ.

ಆದರೆ ಅದೂ ಸತ್ಯಕ್ಕೆ ದೂರವಾಗಿದೆ ಎಂಬುದನ್ನು ಈ ಮೇಲೆ ವಿವರಿಸಿದ್ದೇನೆ. ಕೆಲವು ರೈತರಿಗೆ ತಪ್ಪುಗ್ರಹಿಕೆಗಳನ್ನು ಮೂಡಿಸಿ
ಹೋರಾಟ ಮಾಡಿಸುತ್ತಿರುವವರು ಇಲ್ಲಿ ಕೇಳಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಜನರ ಮುಂದೆ ಸತ್ಯವನ್ನು ತೆರೆದಿಡುವ ಇಂತಹ ಕಾರ್ಯಕ್ಕೆೆ ತಾವೂ ಕೈಜೋಡಿಸುವಿರೆಂದು ಭಾವಿಸುತ್ತೇನೆ.

ಕೊನೆಯದಾಗಿ, ಯಂತ್ರಗಳಿಂದ ದೂರ ಉಳಿಯುವ ಹಾಗೂ ದೇಸಿ ಚಿಂತನೆಗಳ ಕುರಿತ ಪ್ರಸನ್ನ ಅವರ ಬದ್ಧತೆಯ ಕುರಿತು ಗೌರವವಿದೆ. ಅಂತಹ ಗೌರವವನ್ನಿಟ್ಟುಕೊಂಡೇ, ನಿಮ್ಮ ಮುಂದೆ ಪ್ರಶ್ನೆಗಳನ್ನು ಇಡುತ್ತಿದ್ದೇನೆ, ಕೃಷಿ ಮಸೂದೆಯ ಯಾವ ಅಂಶಗಳು ರೈತರಿಗೆ ಮಾರಕವಾಗಿವೆ ಎಂಬುದನ್ನು ತಿಳಿಸಿದರೆ, ಅಂತಹ ಅಂಶಗಳನ್ನು ಪರಿಷ್ಕರಿಸಿ ಅವುಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ನಮ್ಮ ಸರಕಾರ ಕೆಲಸ ಮಾಡುತ್ತದೆ.

ಆದ್ದರಿಂದ ಜ್ಞಾನಿಗಳಾದ ತಾವು ತಮ್ಮ ಜ್ಞಾನದ ಕಣ್ಣಿನಿಂದ ಮಸೂದೆಯನ್ನು ಪರಿಶೀಲನೆ ನಡೆಸಿ ಅಲ್ಲಿರುವ ಲೋಪದೋಷ ಗಳೇನು ಎಂದು ತಿಳಿಸಿಕೊಟ್ಟರೆ, ರೈತರಿಗೆ ಮತ್ತು ನಮ್ಮ ದೇಶಕ್ಕೆ ಒಳಿತಾಗುತ್ತದೆ ಎಂದು ವಿನಮ್ರವಾಗಿ ತಿಳಿಸಲು ಇಚ್ಛಿಸುತ್ತೇನೆ.
ಈ ಪ್ರಶ್ನೆಗಳು ಹೋರಾಟದಲ್ಲಿ ಭಾಗಿಯಾಗಿರುವ ಯಾರು ನೀಡಿದರೂ ತೊಂದರೆ ಇಲ್ಲ ಎನ್ನುವ ಆಶಯದೊಂದಿಗೆ ನನ್ನ
ಪ್ರಶ್ನೆಗಳ ರೂಪದಲ್ಲಿರುವ ಈ ಪತ್ರವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.

ಇಡೀ ಭಾರತವನ್ನೇ ತನ್ನ ಕುಟುಂಬ ಎಂದು ಭಾವಿಸಿರುವ ಮೋದಿಜಿಯವರು ಯಾವುದೋ ಕೆಲವು ಕುಟುಂಬಗಳನ್ನು ಉದ್ಧಾರ ಮಾಡುವ ಯೋಜನೆ ಹೊಂದಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೋ ಶ್ರೀಮಂತರನ್ನು ಉದ್ಧಾರ ಮಾಡುವ ಪಣ ತೊಟ್ಟಿ ದ್ದಾರೆ ಎಂದು ಮೂದಲಿಸುವ ಮುನ್ನ ಭಾರತದ 130 ಕೋಟಿ ಜನರನ್ನೇ ತನ್ನ ಕುಟುಂಬವನ್ನಾಗಿ ಸ್ವೀಕರಿಸಿರುವ ಅವರ ಧುರಣೀತ್ವವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಂಬಾನಿ ಅವರನ್ನು ಶ್ರೀಮಂತಗೊಳಿಸಿ ಯಾವುದೋ ಕುಟುಂಬಕ್ಕೆ ಆಸ್ತಿ ಮಾಡುವ ಆಸಕ್ತಿ ಮೋದಿ ಅವರಿಗಿಲ್ಲ ಎಂಬ ಸತ್ಯ ಹೋರಾಟಗಾರರಿಗೆ ತಿಳಿಯುವುದಿಲ್ಲವೆ?