Wednesday, 9th October 2024

ಕಣ್ಮರೆಯಾದೀತೆ ಈ ಹಕ್ಕಿ !

ಸಂಡೆ ಸಮಯ

ಸೌರಭ ರಾವ್

ತುರ್ತು ಸಂರಕ್ಷಣಾ ಕೆಲಸ ನಡೆಯದಿದ್ದರೆ ಇಪ್ಪತ್ತು ವರ್ಷಗಳಲ್ಲಿ ಲೆಸ್ಸರ್ ಫ್ಲಾರಿಕನ್ ಮರೆಯಾಗಲಿದೆ. ಈ ಕುರಿತು ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಡಾ. ನೈಜೆಲ್ ಕಾಲರ್ ಅವರು ವೈಲ್ಡ್ ಲೈಫ್ ಕಾನ್ಸರ್ವೇಷನ್ ಸೊಸೈಟಿ, ಇಂಡಿಯಾ ಬ್ಲಾಗಿನಲ್ಲಿ ಬರೆದ ಲೇಖನದ ಭಾವಾನುವಾದ ಇದು.

ಲೆಸ್ಸರ್ ಫ್ಲಾರಿಕನ್ ಭವಿಷ್ಯದ ಬಗ್ಗೆ ನನಗೆ ಭಯವಿದೆ. ಭಾರತದಲ್ಲಿರುವ ಮೂರು ತಳಿವರ್ಧಕ ಬಸ್ಟರ್ಡ್ ಜಾತಿ ಹಕ್ಕಿಗಳಲ್ಲಿ ಇದರ ಬಗ್ಗೆಯೇ ನನಗೆ ಅತೀವ ಆತಂಕವಿದೆ.

ಗ್ರೇಟ್ ಇಂಡಿಯನ್ ಬಸ್ಟರ್ಡ್ (ಜಿಐಬಿ) ಮತ್ತು ಬೆಂಗಾಲ್ ಫ್ಲಾರಿಕನ್ ಕೂಡಾ ‘ಕ್ರಿಟಿಕಲಿ ಎನ್ಡೇಂಜರ್ಡ್’ ಎಂದು ಘೋಷಿಸ ಲಾಗಿದ್ದರೂ, ಜಿಐಬಿ ಸಂರಕ್ಷಣೆಗೆ ಇಂದು ಮಿಲಿಯನ್‌ಗಟ್ಟಲೆ ಧನಸಹಾಯ ಸಿಗುತ್ತಿದೆ ಮತ್ತು ಬೆಂಗಾಲ್ ಫ್ಲಾರಿಕನ್ ಇನ್ನೂ ಕೆಲವು ಸಂರಕ್ಷಿತ ಪ್ರದೇಶಗಳಲ್ಲಿ ಕಂಡುಬರುತ್ತವೆ. ಆದರೆ ಲೆಸ್ಸರ್ ಫ್ಲಾರಿಕನ್ ತನ್ನ ಪಾಡಿಗೆ ತಾನು ಕೆಲವೇ ಕೆಲವು ಸಂರಕ್ಷಿತ ಪ್ರದೇಶ ಗಳಲ್ಲಿ ಅಧಿಕೃತ ಸಂಸ್ಥೆಗಳ ಸಿಗಬೇಕಾದಷ್ಟು ಗಮನ ಸಿಗದೇ ಶೋಚನೀಯ ಸ್ಥಿತಿಯಲ್ಲಿರುವ ಹಕ್ಕಿ.

ಈ ಶತಮಾನದಲ್ಲಿ ಅವುಗಳ ಸಂಖ್ಯೆೆ ಇಳಿಮುಖವಾಗಿರುವ ವೇಗ ದಂಗು ಬಡಿಸುತ್ತದೆ. ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಇಪ್ಪತ್ತು ವರ್ಷ ಗಳಲ್ಲಿ ಲೆಸ್ಸರ್ ಫ್ಲಾರಿಕನ್ ಇತಿಹಾಸವಾಗುತ್ತದೆ. ಬಸ್ಟರ್ಡ್‌ಗಳಲ್ಲೇ ಅತ್ಯಂತ ಚಿಕ್ಕದಾದ ಲೆಸ್ಸರ್ ಫ್ಲಾರಿಕನ್ ಭಾರತದ ಹುಲ್ಲುಗಾವಲುಗಳಲ್ಲಿ ಮತ್ತು ಕೆಲವು ಬೆಳೆ ಬೆಳೆಯುವ ಹುಲ್ಲುಗಾವಲುಗಳಂತಹ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಬೇಸಿಗೆಯಲ್ಲಿ ವಾಯುವ್ಯ ಭಾರತ ಮತ್ತು ಮಧ್ಯಭಾರತಕ್ಕೆ ಬರುವ ಈ ಹಕ್ಕಿ, ಮುಂಗಾರು ಮತ್ತು ಮಳೆಗಾಲದಲ್ಲಿ ಗಂಡುಹಕ್ಕಿಗಳು ತಳಿ ಸಂವರ್ಧನೆಗಾಗಿ ಹೆಣ್ಣನ್ನು ಆಕರ್ಷಿಸುವ ಸಲುವಾಗಿ ವಿಶೇಷ ರೀತಿಯಲ್ಲಿ ಹಾರಿ ನಡೆಸುವ ಪ್ರದರ್ಶನಕ್ಕೆ ಹೆಸರುವಾಸಿ ಯಾಗಿದೆ. ಚಳಿಗಾಲದಲ್ಲಿ ಭಾರತದ ದಕ್ಷಿಣಭಾಗದ ಕೆಲವು ಕಡೆಗೆ ಇವುಗಳ ಸಂಖ್ಯೆ ಹರಡುತ್ತದೆ. ಈ ವಲಸೆಯ ಸಮಯದಲ್ಲಿ ವಿದ್ಯುತ್ ಪ್ರಸರಣ ತಂತಿಗಳಿಗೆ ಸಿಲುಕಿ ಸಾಯುವ ಸಂಭವವೇ ಹೆಚ್ಚು ಮತ್ತು ಇದು ಕೇವಲ ಲೆಸ್ಸರ್ ಫ್ಲಾರಿಕನ್ ಮಾತ್ರವಲ್ಲದೇ ಬೇರೆ ಬಸ್ಟರ್ಡ್‌ಗಳನ್ನೂ ಕಾಡುತ್ತಿರುವ ತೀವ್ರ ಸಮಸ್ಯೆ. ಇದನ್ನು ಬೇಟೆಯಾಡುವುದೂ ಉಂಟು.

ಆದರೆ ಈ ಫ್ಲಾರಿಕನ್ ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲು ತನ್ನ ಆವಾಸ ಸ್ಥಾನದ ನಷ್ಟ. ಹಿಂದೆ ಹಳ್ಳಿಗಳಲ್ಲಿ ದನಕರು ಗಳ ಮೇವಿಗಾಗಿ ಕಾಪಿಡಲಾಗುತ್ತಿದ್ದ ಹುಲ್ಲುಗಾವಲುಗಳು ಫ್ಲಾರಿಕನ್ ತಳಿವರ್ಧನೆಗೆ ಬಿಡಾರವಾಗಿರುತ್ತಿದ್ದವು. ಆದರೆ ಈ
ಹುಲ್ಲುಗಾವಲುಗಳು ಈಗ ಕಣ್ಮರೆಯಾಗುತ್ತಿದ್ದು, ಕೈಗಾರಿಕಾ-ಶ್ರೇಣಿ ವ್ಯವಸಾಯ, ಟ್ರ್ಯಾಕ್ಟರ್ ಮತ್ತು ಕ್ರಿಮಿ ನಾಶಕಗಳ ಬಳಕೆ, ಫ್ಲಾರಿಕನ್ ತಳಿವರ್ಧನೆಗೆ ಪೂರಕವಾಗಿಲ್ಲದ ವಾಣಿಜ್ಯ ಬೆಳೆಗಳ ಕೃಷಿಯಿಂದಾಗಿ, ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಎಲ್ಲ ಬಸ್ಟರ್ಡ್ ಹಕ್ಕಿಗಳೂ ಸಂಕಷ್ಟ ಎದುರಿಸುತ್ತಿವೆ.

ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ವನ್ಯಜೀವಿ ವಿಜ್ಞಾನಿಗಳು 2018ರಲ್ಲಿ ನಡೆಸಿದ ಅಧ್ಯಯನವೊಂದರ ಮೂಲಕ
ಅವನತಿಯ ಅಂಚಿಗೆ ಜಾರುತ್ತಿರುವ ಲೆಸ್ಸರ್ ಫ್ಲಾರಿಕನ್ ಬಗ್ಗೆ ಕೂಲಂಕೂಷವಾಗಿ ತಿಳಿದದ್ದಲ್ಲದೇ, ಅವುಗಳ ಸಂರಕ್ಷಣೆಯನ್ನು ಈಗ ಎರಡು ಮೂರು ವರ್ಷಗಳಲ್ಲಿ ತೀವ್ರಗತಿಯಲ್ಲಿ ಮಾಡದಿದ್ದರೆ ಇನ್ನು ಇಪ್ಪತ್ತು ವರ್ಷದೊಳಗೆ ಅವುಗಳನ್ನು ನಾವು ಕಳೆದು ಕೊಂಡಂತೆಯೇ ಎಂಬ ಕಹಿ ಸತ್ಯ ಸ್ಪಷ್ಟವಾಗಿ ಬೆಳಕಿಗೆ ಬಂದದೆ. ಈ ವಿಜ್ಞಾನಿಗಳು ಫ್ಲಾರಿಕನ್ ಸಂರಕ್ಷಣೆಗೆ ನಾವು ಏನೇನು ಮಾಡಬಹುದು ಎಂಬ ಪರಿಹಾರಮಾರ್ಗಗಳ ಪಟ್ಟಿಯನ್ನೂ ವಿವರಿಸಿದ್ದಾರೆ.

*ಸಂರಕ್ಷಣಾ ಪ್ರದೇಶಗಳನ್ನು ಘೋಷಿಸಿ ಕಟ್ಟುನಿಟ್ಟಾದ ಪಹರೆ ಜಾರಿಗೊಳಿಸುವುದು.
*ಮೂಲಭೂತ ಸೌಕರ್ಯಗಳು, ಕೈಗಾರಿಕೆಗಳು ಮತ್ತು ವಿದ್ಯುತ್ ಪ್ರಸರಣ ತಂತಿಗಳನ್ನು ಸಂರಕ್ಷಿತ ಪ್ರದೇಶಗಳಲ್ಲಿ ತಡೆಗಟ್ಟು ವುದು.
*ಹುಲ್ಲುಗಾವಲುಗಳ ಹರಹನ್ನು ಹಿಗ್ಗಿಸುವುದು, ಮಳೆಗಾಲದಲ್ಲಿ ಸಾಕುಪ್ರಾಣಿಗಳ ಮೇವನ್ನು ಸಂರಕ್ಷಿತ ಪ್ರದೇಶಗಳಲ್ಲಿ ಆದಷ್ಟೂ
ಕಡಿಮೆ ಮಾಡುವುದು ಮತ್ತು ವಿದೇಶೀಯ ಮರಗಿಡಗಳನ್ನು ತೆಗೆಯುವುದು ಮತ್ತು ನೆಡುವುದನ್ನು ತಡೆಗಟ್ಟುವುದು.

*ಫ್ಲಾರಿಕನ್ ಇರವಿಗೆ ಪೂರಕವಾಗುವಂತಹ ಚಟುವಟಿಕೆಗಳನ್ನು – ಸಾವಯವ ಕೃಷಿ, ಮಳೆಗಾಲದಲ್ಲಿ ಜಾನುವಾರುಗಳಿಗೆ ಕೊಟ್ಟಿಗೆ ಮೇವು ಪ್ರೋತ್ಸಾಹಿಸುವುದು.

*ಫ್ಲಾರಿಕನ್ ಫ್ರೆಂಡ್ಸ್‌- ಫ್ಲಾರಿಕನ್ ಸಂರಕ್ಷಣೆಗೆ ಬದ್ಧರಾದ ಜನರ ತಂಡಗಳನ್ನು ಕಟ್ಟಿ ಈ ಹಕ್ಕಿಗಳ ಬಗ್ಗೆ ಆಗಾಗ ವರದಿಗಳನ್ನು
ಸಲ್ಲಿಸುವಂತೆ ಮತ್ತು ಅವುಗಳಿಗೆ ಮಾರಕವಾದ ಚಟುವಟಿಕೆಗಳನ್ನು ತಡೆಗಟ್ಟುವಂತೆ ತರಬೇತಿ ನೀಡುವುದು.

*ಫ್ಲಾರಿಕನ್ ಕಂಡುಬರುವ ಪ್ರದೇಶಗಳ ಸುತ್ತಲ ಹಳ್ಳಿಗಳಲ್ಲಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುವುದು.
*ಉಪಗ್ರಹಗಳ ಟೆಲಿಮೆಟ್ರಿ ಮತ್ತು ಅದಕ್ಕೆ ಸಂಬಂಧಪಟ್ಟ ಸಮೀಕ್ಷೆಗಳನ್ನು ಬಳಸಿ ಫ್ಲಾರಿಕನ್ ಪರಿಸರ ವಿಜ್ಞಾನವನ್ನು
ಅಧ್ಯಯಿಸುವುದು.

*ವಿವಿಧ ಕಾರ್ಯಕ್ರಮಗಳ, ಮಾಧ್ಯಮಗಳ ಮೂಲಕ ಫ್ಲಾರಿಕನ್ ಮತ್ತು ಅದರ ಸಂರಕ್ಷಣೆಯ ತುರ್ತಿನ ಬಗ್ಗೆ ಅರಿವು
ಮೂಡಿಸುವುದು.

ಮುಖ್ಯವಾಗಿ, ಸೈಲಾನಾ ಮತ್ತು ಸರ್ದಾರ್ಪುರ್ ಎಂಬ ಫ್ಲಾರಿಕನ್ ರಿಸರ್ವ್‌ಗಳನ್ನು ಸಂರಕ್ಷಣಾ ಸಂಸ್ಥೆಗಳ ಗಮನಕ್ಕೆ ತಂದು
ಆದಷ್ಟೂ ಬೇಗ ಇವನ್ನು ಸಂಪೂರ್ಣವಾಗಿ ಸಂರಕ್ಷಿತ ಪ್ರದೇಶಗಳೆಂದು ಘೋಷಿಸುವ ತುರ್ತು ಅಗತ್ಯವಿದೆ. ಸದ್ಯದ ಮೂರು ವರ್ಷಗಳಲ್ಲಿ ನಾವು ಎಷ್ಟು ಜಾಗೃತರಾಗಿ, ತ್ವರಿತವಾಗಿ ಫ್ಲಾರಿಕನ್ ಸಂರಕ್ಷಣೆಗೆ ಕೆಲಸ ಮಾಡುತ್ತೇವೆಂಬುದು ಕೇವಲ ಅವುಗಳ ಸಂಖ್ಯೆಯನ್ನು ಇದ್ದಷ್ಟೇ ಉಳಿಸಿಕೊಳ್ಳುವತ್ತ ಮಾತ್ರವಲ್ಲ, ಅವುಗಳ ಸಂಖ್ಯೆ ವೃದ್ಧಿಸುವತ್ತ ದೃಷ್ಟಿ ಹರಿಸಬೇಕಿದೆ.

348 ಚದರ ಕಿಲೋಮೀರ್ ವ್ಯಾಪ್ತಿಯ ಸರ್ದಾರ್ಪುರ್ ಒಂದರಲ್ಲೇ ವೈಜ್ಞಾನಿಕ ಆಧಾರದ ಮೇಲೆ 2,000 ಫ್ಲಾರಿಕನ್ ಇರಬೇಕು! ಸರ್ಕಾರಗಳು, ಸ್ಥಳೀಯ ಜನರು, ವಿಜ್ಞಾನಿಗಳು ಮತ್ತು ಸಂರಕ್ಷಣಾ ಸಂಸ್ಥೆಗಳು ಒಟ್ಟಿಗೆ ಕೆಲಸ ಮಾಡಬೇಕು ಮತ್ತು ಪರಿಹಾರ ಕ್ರಮಗಳನ್ನು ಆದಷ್ಟೂ ಬೇಗ ಚಾಲ್ತಿಗೊಳಿಸಬೇಕು. ಒಂದು ತಿಂಗಳು ಅಥವಾ ಒಂದು ವಾರ ಹಾಗಿರಲಿ, ಒಂದು ದಿನವೂ ಈ ನಿಟ್ಟಿನಲ್ಲಿ ವ್ಯರ್ಥವಾಗಬಾರದು!