Friday, 13th December 2024

 “ಕ್ವಾಂಟಮ್ ವಿಜ್ಞಾನ ಮತ್ತು ವೇದಾಂತದಲ್ಲಿ ಪ್ರಸ್ತುತತೆ” ಕುರಿತ ಅಂತರರಾಷ್ಟ್ರೀಯ ಸಮ್ಮೇಳನ

ಕೆ.ಆರ್.ನಗರದ ಯಡತೊರೆ ಮಠದ ಶಂಕರಭಾರತಿ ಸ್ವಾಮೀಜಿ ನೇತೃತ್ವ

ಅಯೋಧ್ಯೆಯಲ್ಲಿ ಮೂರು ದಿನಗಳ ಸಮ್ಮೇಳನ ಶನಿವಾರ ಪ್ರಾರಂಭ

ಬೆಂಗಳೂರು: ಮೈಸೂರಿನ ಕೆ.ಆರ್. ನಗರದ ಯಡತೊರೆ ಮಠದ ವೇದಾಂತಿ ಭಾರತಿ ಸಂಸ್ಥೆ ಮತ್ತು ಉತ್ತರ ಪ್ರದೇಶದ ಶ್ರೀ ಶಂಕರಾಚಾರ್ಯ ವಂಗ್ ಮಾಯಾ ಸೇವಾ ಪರಿಷತ್ ನಿಂದ ಅಯೋಧ್ಯೆಯಲ್ಲಿ “ಕ್ವಾಂಟಮ್ ವಿಜ್ಞಾನ ಮತ್ತು ವೇದಾಂತದಲ್ಲಿ ಪ್ರಸ್ತುತತೆ” ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ನಾಳೆಯಿಂದ [ಡಿ.23 ರಿಂದ 25] ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ವೇದಾಂತ ಭಾರತಿ ಸಂಸ್ಥೆ ತಿಳಿಸಿದೆ.

ಅಯೋಧ್ಯೆಯ ರಾಯಲ್ ಹೆರಿಟೇಜ್ ಹೋಟೆಲ್ ನ ಸಮ್ಮೇಳನ ಕೇಂದ್ರದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಫಿಲಾಸಫಿಕಲ್ ರೀಸರ್ಚ್ ಸಹಯೋಗದಲ್ಲಿ ಧಾರ್ಮಿಕ ಮತ್ತು ವಿಜ್ಞಾನ ಕುರಿತ ಅತ್ಯಂತ ಅಪರೂಪದ ಮತ್ತು ಮಹತ್ವದ ಸಮ್ಮೇಳನ ನಡೆಯಲಿದೆ. ದೇಶ, ವಿದೇಶಗಳ ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ಕೊಲ್ಕತ್ತಾದ ವಿವೇಕಾನಂದ ವಿವಿ ಉಪಕುಲಪತಿ ಸ್ವಾಮಿ ಆತ್ಮಪ್ರಿಯನಂದನ್ ಜಿ ಮಹಾರಾಜ್ ಅವರು ಡಿ.23 ರಂದು ಸಮ್ಮೇಳನದ ಮೊದಲ ಗೋಷ್ಠಿಗೆ ಚಾಲನೆ ನೀಡಲಿದ್ದು, ಸ್ಟಾನ್ ಫೋರ್ಡ್ ವಿವಿ ಸಂಶೋಧಕ ಡಾ. ವಸುದೇವ್ ಶ್ಯಾಂ, ಬಿಹಾರದ ಗಯಾ ವಿವಿಯ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ್ ಸಿಂಗ್, ಕೇಂದ್ರ ಗೃಹ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಅನಂತ ಕಿಶೋರ ಶರ್ಮಾ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಕೆ.ಆರ್. ನಗರದ ವೇದಾಂತ ಭಾರತಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಶಂಕರಭಾರತಿ ಮಹಾ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.

ಎರಡನೇ ದಿನದ ಗೋಷ್ಠಿಯಲ್ಲಿ ತಿರುಪತಿಯ ರಾಷ್ಟ್ರೀಯ ಸಂಸ್ಕೃತಿ ವಿವಿಯ ಅದ್ವೈತ ವೇದಾಂತ ವಿಭಾಗದ ಮುಖ್ಯಸ್ಥ ಡಾ. ಸತೀಶ್ ಭಟ್ ಅವರು ‘ವೇದಾಂತದಲ್ಲಿ ವಾಸ್ತವಿಕ ತತ್ವಗಳು’ ಕುರಿತು ಬೆಳಕು ಚೆಲ್ಲಲಿದ್ದಾರೆ. ಮುಂಬೈನ ಐಐಟಿ ಪ್ರಾಧ್ಯಾಪಕ ಡಾ.ಕೆ. ರಾಮಸುಬ್ರಮಣ್ಯಂ ಅವರು ‘ಭ್ರಮೆ ಮತ್ತು ವಾಸ್ತವಿಕೆತೆ’ ಬಗ್ಗೆ ಮಾತನಾಡಲಿದ್ದಾರೆ.

ಮೂರನೇ ದಿನದ ಗೋಷ್ಠಿಯಲ್ಲಿ  ಕೇಂದ್ರ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಭಾಗವಹಿಸಲಿದ್ದು, ಅಮೆರಿಕದ ಮೆಸ್ಸಾ ಚುಟ್ಸ್ ವಿವಿಯ ಅತ್ಯಾಧುನಿಕ ವಿಜ್ಞಾನ ಸಂಶೋಧಕರಾದ ಡಾ. ನಿಲೇಶ್ ಓಕ್, ಕ್ವಾಂಟಮ್ ಫಿಸಿಕ್ಸ್ ಮತ್ತು ವೇದಾಂತ ವಿಭಾಗದ ಸಂಶೋಧಕ ಅರ್ಚನ ರಘುರಾಮ್ ಮತ್ತಿತರರು ಧಾರ್ಮಿಕ ಮತ್ತು ವಿಜ್ಞಾನದ ವಿವಿಧ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.