Wednesday, 11th December 2024

ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ ಗಾಯಕಿ ಸಂಧ್ಯಾ ಮುಖರ್ಜಿ

ಕೋಲ್ಕತ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ ಬೆನ್ನಲ್ಲೇ ಬಂಗಾಳದ ಗಾಯಕಿ ಸಂಧ್ಯಾ ಮುಖರ್ಜಿ ಅನುಸರಿಸಿ ದ್ದಾರೆ.

ಕೇಂದ್ರ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು 90 ವರ್ಷದ ಗಾಯಕಿ ಮತ್ತು ಸಂಗೀತಗಾರ್ತಿ ಸಂಧ್ಯಾ ಮುಖರ್ಜಿ ತಿರಸ್ಕರಿಸಿದ್ದಾರೆ.

ಸಂಧ್ಯಾ ಮುಖರ್ಜಿ ಅವರ ಪುತ್ರಿ ಸೌಮಿ ಸೆಂಗುಪ್ತಾ ಅವರು, ಕಲಾವಿದೆಗೆ 90ನೇ ವಯಸ್ಸಿನಲ್ಲಿ ಪ್ರಶಸ್ತಿ ನೀಡುವುದು ನಿಜಕ್ಕೂ ಅವಮಾನವಾಗಿದೆ. ಹೀಗಾಗಿ ಪ್ರಶಸ್ತಿಯನ್ನು ನಿಕಾರಿಸಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ತಾಯಿ ರಾಜಕೀಯವನ್ನು ಮೀರಿದವರು. ರಾಜಕೀಯ ಕಾರಣ ಹುಡುಕುವ ಪ್ರಯತ್ನ ಮಾಡಬೇಡಿ. ಅವರು ಅವಮಾನಿತರಾಗಿದ್ದಾರಷ್ಟೇ ಎಂದು ಸೆಂಗುಪ್ತಾ ಸ್ಪಷ್ಟನೆ ನೀಡಿದ್ದಾರೆ.

ಸಂಧ್ಯಾ ಮುಖರ್ಜಿ ಅವರನ್ನು 60 ಮತ್ತು 70ರ ದಶಕದ ಸುಮಧುರವಾದ ಧ್ವನಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಬಂಗಾಳಿ ಮತ್ತು ಸುಮಾರು ಹನ್ನೆರಡು ಇತರ ಭಾಷೆಗಳಲ್ಲಿ ಸಾವಿರಾರು ಹಾಡುಗಳಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ. 2011ರಲ್ಲೇ, ಸಂಧ್ಯಾ ಮುಖರ್ಜಿ ಅವರು ಪಶ್ಚಿಮ ಬಂಗಾಳ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಗೌರವವಾದ ಬಂಗಾ ಬಿಭೂಷಣವನ್ನು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಚಲನಚಿತ್ರ ಬರಹಗಾರ ಸಲೀಂ ಖಾನ್ ಅವರು 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದರು. ಇತಿಹಾಸಕಾರ ರೋಮಿಲಾ ಥಾಪರ್ ಅವರು 2005 ರಲ್ಲಿ ಪದ್ಮಭೂಷಣವನ್ನು ನಿರಾಕರಿಸಿದ್ದರು.