Wednesday, 11th December 2024

ಅಧ್ಯಾತ್ಮದ ಅಂಬುದಿ; ಶ್ರೀಮಾತೆ ಶಾರದಾದೇವಿ

ಸಾಂದರ್ಭಿಕ

ಕಿರಣ ಕುಮಾರ ವಿವೇಕವಂಶಿ

ಜಗದ ಜನಜೀವನದಲ್ಲಿ ನವಚೇತನ ತುಂಬಿ, ಸಾಮಾಜಿಕವಾಗಿಯೂ, ಅಧ್ಯಾತ್ಮಿಕವಾಗಿಯೂ ಉತ್ಕ್ರಾಂತಿಯನ್ನು ಉಂಟು ಮಾಡ ಬೇಕೆಂದರೆ, ಅದು ತನ್ನ ಶಕ್ತಿಯೊಡಗೂಡಿ ಮಾನವರೂಪದಲ್ಲಿ ಧರೆಗಿಳಿದುಬಂದ ಭಗವಂತನಿಂದ ಮಾತ್ರ ಸಾಧ್ಯ.

ಭಗವಂತ ಮಾನವನಾಗಿ ಅವತರಿಸಿದಾಗ ತನ್ನ ಆದ್ಯಾ ಶಕ್ತಿಯನ್ನು ಆವಾಹನೆ ಮಾಡಿ, ಮಾನವಕಲ್ಯಾಣಕ್ಕಾಗಿ ನಿಯೋಜಿಸು
ತ್ತಾನೆ. ಅವತರಿಸಿ ಬಂದ ಭಗವಂತನ ಜತೆಯಲ್ಲಿ ಬಹಳಷ್ಟು ಸಲ, ಆದ್ಯಾ ಶಕ್ತಿ ಆತನ ಲೀಲಾಸಂಗಾತಿಯಾಗಿ ಸ್ತ್ರೀರೂಪದಲ್ಲಿ ಬರುತ್ತಾಳೆ – ಶ್ರೀರಾಮನೊಂದಿಗೆ ಸೀತೆಯಾಗಿ ಬಂದಂತೆ, ಶ್ರೀಕೃಷ್ಣನೊಂದಿಗೆ ರುಕ್ಮಿಣಿಯಾಗಿ ಬಂದಂತೆ. ಹೀಗೆ ಬಂದು ಆತನ ದಿವ್ಯ ಲೀಲೆಯ ಪರಿಪೂರ್ಣತೆಗೆ ನೆರವಾಗುತ್ತಾಳೆ.

ಹಾಗೆಯೇ ಈ ನವಯುಗದ ಅವತಾರ ಪುರುಷರಾದ, ಮತ್ತು ‘ಅವತಾರವರಿಷ್ಠ’ರೆಂದು ಬಣ್ಣಿಸಲ್ಪಟ್ಟ ಶ್ರೀರಾಮಕೃಷ್ಣರೊಂದಿಗೆ ಅವತರಿಸಿ ಬಂದಳು ಅದೇ ಭಗವತಿ, ಆದ್ಯಾಶಕ್ತಿ – ಶ್ರೀಮಾತೆ ಶಾರದಾದೇವಿ. ಕೋಲ್ಕತಾದಿಂದ ಪಶ್ಚಿಮಕ್ಕೆ ಸುಮಾರು ಅರವತ್ತು ಮೈಲಿ ದೂರದಲ್ಲಿ ಬಾಂಕುರ ಎಂಬ ಜಿಲ್ಲೆ. ಆ ಜಿಲ್ಲೆಯ ಈಶಾನ್ಯ ಗಡಿಯಲ್ಲಿ ಜಯರಾಂಬಾಟಿ, ಇಲ್ಲಿ ರಾಮಚಂದ್ರ ಮುಖರ್ಜಿ ಹಾಗೂ ಶಾಮಸುಂದರಿ ದೇವಿ ದಂಪತಿಗಳ ಸುಪುತ್ರಿಯಾಗಿ 22 ಡಿಸೆಂಬರ್ 1853ರಂದು ಜನಿಸಿದಾಕೆ ಶಾರದೆ.

ಸುಮಾರು ಐದನೇ ವಯಸ್ಸಿಗೆ ಇಪ್ಪತ್ಮೂರು ವರ್ಷದ ಯುವಕನಾದ ಗದಾಧರ (ನಂತರದಲ್ಲಿ ಶ್ರೀರಾಮಕೃಷ್ಣರಾಗುತ್ತರೆ) ರೊಂದಿಗೆ ವಿವಾಹವಾದಳು. ಆತ ಸಾಮಾನ್ಯನಲ್ಲ ಋಷಿ, ಲೋಕಗುರು. ವಿವಾಹದ ನಂತರ ರಾಮಕೃಷ್ಣರಿಂದಲೇ ಶಿಕ್ಷಣ ಪಡೆದ ಶಾರದೆ ಅತ್ಯಮೂಲ್ಯ ಅಧ್ಯಾತ್ಮಿಕ ಅನುಭವಗಳನ್ನು ಪಡೆದಳು. ಪತಿಯ ಸೇವೆಯಿಂದಲೇ ತನ್ನ ಜೀವನಾದರ್ಶದ ಪರಿಪೂರ್ಣತೆ ಯನ್ನು ಸಾಧಿಸಿದಳು. ದಿವ್ಯ ಜೀವನದ ತತ್ತ್ವಗಳನ್ನು ಬೆಳಗಿದಳು.

ಅವರಲ್ಲಿ ಅಸಾಧಾರಣ ದೈವಭಕ್ತಿಯಿತ್ತು. ಒಮ್ಮೆ ಜಗದ್ಧಾತ್ರೀ ಪೂಜೆಯ ಕಾಲದಲ್ಲಿ ಅವರು ಧ್ಯಾನಪರವಶರಾದರು. ಅವರ
ನಿಮೀಲಿತ ನೇತ್ರಗಳನ್ನು, ಭಾವೈಕಾಗ್ರತೆಯನ್ನು, ಭಕ್ತಿ ಪರವಶತೆಯನ್ನು ಕಂಡು ಅನೇಕರು ಬೆರಗಾದರು. ಅವರು ಬಾಲ್ಯದಲ್ಲಿ
ದಿನದಿನವೂ ಹೆಚ್ಚುತ್ತಿದ್ದ ಮನೆಗೆಲಸಗಳಿಂದಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಲಿಲ್ಲ. ಅಂದಮಾತ್ರಕ್ಕೆ ಶ್ರೀಶಾರದಾ ದೇವಿಯವರು ನಿರ್ಗಂಧಕುಸುಮವೆಂದಲ್ಲ, ಬದುಕು ಬಾಳುವೆಗಳೇ ವಿದ್ಯೆೆಯ ನಿಜವಾದ ಓರೆಗಲ್ಲು.

ಅಂತಃಸತ್ವ – ಆತ್ಮ ವಿಕಾಸಗಳೇ ವಿದ್ಯೆಯ ನಿಜವಾದ ಅಳತೆಗೋಲು, ಬಹಿರಾಢಂಬರವಲ್ಲ. ಈ ದೃಷ್ಟಿಯಿಂದ ಶ್ರೀಶಾರದಾ ದೇವಿಯವರು ನಿಜವಾಗಿಯೂ ‘ಶಾರದೆ’ಯೇ ಆಗಿದ್ದರು. ಮಾನವ ಉನ್ನತೋನ್ನತವಾದ ಧ್ಯೇಯಗಳನ್ನೂ ಸಂಸ್ಕೃತಿಯ ಉತ್ತಮೋತ್ತಮವಾದ ಆದರ್ಶಗಳನ್ನೂ ಸದ್ದುಗದ್ದಲ ವಿಲ್ಲದೆ ನಿಸರ್ಗಸಹಜವಾದ ರೀತಿಯಲ್ಲಿ ಬಾಳಿದ ಮಹಾನ್ ವ್ಯಕ್ತಿ
ಶ್ರೀಶಾರದಾದೇವಿಯವರು.

1873ರ ಜೂನ್ 5ನೇ ತಾರೀಖು. ಅಂದು ಫಲಹಾರಿಣೀ ಕಾಳಿ ಪೂಜೆಯ ಪವಿತ್ರ ದಿನ. ದಕ್ಷಿಣೇಶ್ವರದ ದೇವಾಲಯವು ವಿಶೇಷ
ಉತ್ಸವದ ಅಂಗವಾಗಿ ಸಿಂಗರಿಸಲ್ಪಟ್ಟಿತ್ತು. ಶ್ರೀರಾಮಕೃಷ್ಣರು ತಾವೂ ಅಂದು ಜಗನ್ಮಾತೆಯ ಪೂಜೆ ಮಾಡಲು ಸಕಲ ಸನ್ನಾಹ
ಮಾಡಿಕೊಂಡಿದ್ದರು – ಆದರೆ ಗರ್ಭಗುಡಿಯಲ್ಲಲ್ಲ, ತಮ್ಮ ಕೋಣೆಯಲ್ಲೆ. ರಾತ್ರಿ ಒಂಭತ್ತರ ವೇಳೆಗೆ ಪೂಜೆಗೆ ಸರಿಯಾಗಿ ಬರುವಂತೆ
ಶ್ರೀಶಾರದಾ ದೇವಿಯವರಿಗೆ ತಿಳಿಸಿದ್ದರು. ಅದರಂತೆ ಅವರು ಕೋಣೆಯೊಳಗೆ ಬಂದರು. ಅಂದು ಶ್ರೀರಾಮಕೃಷ್ಣರು ನೆರವೇರಿಸ
ಲಿದ್ದ ಪೂಜೆಯ ಸ್ವರೂಪವೆಂಥದ್ದು ಎಂಬುದು ಶಾರದಾದೇವಿಯವರು ಸೇರಿದಂತೆ ಯಾರಿಗೂ ತಿಳಿದಿರಲಿಲ್ಲ.

ಪೂಜೆ ಪ್ರಾರಂಭವಾಯಿತು. ಶ್ರೀರಾಮಕೃಷ್ಣರು ದೇವತೆಯನ್ನು ಪೂಜಿಸಬೇಕಾದ ಪೂಜಾಪೀಠದ ಮೇಲೆ ಶಾರದೆಗೆ ಕೂಡುವಂತೆ ತಿಳಿಸಿದರು. ಶಾರದಾದೇವಿಯವರು ಮಂತ್ರಮುಗ್ಧರಂತೆ ಬಂದು ಪೀಠದ ಮೇಲೆ ಪತಿಗೆ ಅಭಿಮುಖವಾಗಿ ಕುಳಿತರು. ಅವರ ಮನಸ್ಸು ಈಗಾಗಲೇ ಭಗವದ್ಭಾವದಿಂದ ರಂಜಿತವಾಗಿತ್ತು. ಶ್ರೀರಾಮಕೃಷ್ಣರು ಅವರ ಮೇಲೆ ಪವಿತ್ರ ಗಂಗಾಜಲವನ್ನು ಪ್ರೋಕ್ಷಿಸುತ್ತ ಜಗನ್ಮಾತೆಯನ್ನು ಆವಾಹನೆ ಮಾಡುವ ಮಂತ್ರವನ್ನು ಉಚ್ಛರಿಸಿ ಶಾರದೆಯಲ್ಲಿ ಜಗನ್ಮಾತೆಯನ್ನು ತಧ್ಯಾತ್ಮ್ಯ ಗೊಳಿಸಿದರು. ಮಾನುಷರೂಪಿಣಿಯಾಗಿ ವಿರಾಜಿಸುತ್ತಿದ್ದ ಜಗನ್ಮಾತೆಯ ಪದತಲದಲ್ಲಿ ತಮ್ಮ ಸಕಲ ಸಾಧನೆಗಳ ಫಲ ಮತ್ತು ಜಪಮಾಲೆ ಇವುಗಳೊಂದಿಗೆ ತಮ್ಮ ಸರ್ವಸ್ವವನ್ನೂ ಸಮರ್ಪಣೆಮಾಡಿಕೊಂಡರು.

ಅಂದಿಗೆ ಶ್ರೀರಾಮಕೃಷ್ಣರ ಅಧ್ಯಾತ್ಮಿಕ ಸಾಧನೆಯು ಪರಿಸಮಾಪ್ತಿಗೊಂಡಿತು. ಅವರ ದೇವ ಮಾನವತ್ವವು ಪರಿಪೂರ್ಣ ಅಭಿವ್ಯಕ್ತಿ ಪಡೆಯಿತು. ಇದರೊಂದಿಗೆ ಶ್ರೀಮಾತೆಯವರು ಜಗನ್ಮಾತೃತ್ವವನ್ನೇರಿದರು. ಶ್ರೀರಾಮಕೃಷ್ಣರ ಮಹಾಸಮಾಧಿಯ ನಂತರ ಶ್ರೀಶಾರದದೇವಿಯವರು ಅನೇಕ ವಿಧವಾದ ಕಷ್ಟ ಕಾಠಿಣ್ಯಗಳನ್ನು ಎದುರಿಸಬೇಕಾಯಿತು. ಅವರು ಪಟ್ಟ ಕಷ್ಟ ಊಹೆಯ ಮಿತಿಯನ್ನು ಮೀರುವಂಥದು. ಅವತಾರಿಣಿ ಎಂದು ಪೂಜಿಸಲ್ಪಡುವ ಶ್ರೀಶಾರದಾದೇವಿಯವರು ಉಪ್ಪಿಗೆ ಕಾಸಿಲ್ಲದೆ ಸಪ್ಪೆ ಅನ್ನವನ್ನು ತಿನ್ನುತ್ತಿದ್ದರೆಂದು ನಂಬಲಾದೀತೆ? ಜೀವನ ನಿರ್ವಹಣೆಗಾಗಿ ಕೈಯಲ್ಲಿ ಗುದ್ದಲಿಯನ್ನು ಹಿಡಿದು ಭೂಮಿಯನ್ನು ಅಗೆದು, ತರಕಾರಿಗಳನ್ನು ಬೆಳೆಯುತ್ತಿದ್ದರೆಂದರೆ ನಂಬುವುದೆಂತು? ಆದರೂ ಅವರು ಇವೆಲ್ಲವನ್ನೂ ಮಾಡುತ್ತಿದ್ದುದು ನಿಜ.

ಅವರ ಜೀವನ ಅಷ್ಟು ಕಷ್ಟಮಯವಾಗಿದ್ದರೂ ಅವುಗಳನ್ನವರು ಶ್ರೀರಾಮಕೃಷ್ಣರಲ್ಲಿಟ್ಟಿದ್ದ ಅಚಲವಾದ ಶ್ರದ್ದೆಯ ಬಲವೊಂದ ರಿಂದಲೇ ಯಶಸ್ವಿಯಾಗಿ ಎದುರಿಸಿದರು. ಈ ಆರ್ಥಿಕ ಸಂಕಟದ ಜತೆಗೆ ಸಂಪ್ರದಾಯ ಶರಣರ ಉಬ್ಬರ ಬೇರೆ. ಪತಿಯ ನಿರ್ಗಮನ ವಾದ ಮೇಲೂ ಶಾರದಾದೇವಿಯವರು ತಮ್ಮ ಕೈಬಳೆಗಳನ್ನು ತೆಗೆಯಲಿಲ್ಲವೆಂದು ಟೀಕೆಗಳ ಸುರಿಮಳೆಯೇ ಆಯಿತು. ಶ್ರೀಮಾತೆ ಯವರ ಕೋಮಲ ಹೃದಯ ಇವುಗಳಿಂದ ಬಹಳ ಗಾಸಿಗೂಂಡರೂ ಅವರು ಬಳೆಗಳನ್ನು ತೆಗೆಯದಂತೆ ಶ್ರೀರಾಮ ಕೃಷ್ಣರು ದರ್ಶನಕೊಟ್ಟು ಆದೇಶ ವನ್ನಿತ್ತರು.

ಸ್ತ್ರೀಯಾದವಳಿಗೆ ಪತಿ ಸಾಕ್ಷಾತ್ ಚಿನ್ಮಯರೂಪಿ ಎಂಬ ಅಂಶ ಅನುಭವವಾಯಿತು. ಕಷ್ಟದ ಕುಲುಮೆಯಲ್ಲಿ ಯಶಸ್ವಿಯಾಗಿ
ಹಾದುಬಂದರು ಅವರು. ಶ್ರೀರಾಮಕೃಷ್ಣರ ಆಜ್ಞೆಯಂತೆ ಶ್ರೀಮಾತೆಯವರು ಗುರುವಿನ ಸ್ಥಾನವನ್ನೇರಿದರು. ಈ ಸ್ಥಾನ ಬರಿಯ
ಪಾಂಡಿತ್ಯದ ಪೀಠವಲ್ಲ ಅನುಭವದ ಆಳದಲ್ಲಿ ಮುಳುಗಿ, ದಿವ್ಯಜ್ಞಾನದ ಬೆಳಕನ್ನು ಕಂಡು, ದಿವ್ಯಪ್ರೇಮದ ಸುಧೆಯನ್ನುಂಡು,
ಪರಾತ್ಪರ ವಸ್ತುವಿನಿಂದ ಅನುಜ್ಞೆ ಅಧಿಕಾರಗಳನ್ನು ಪಡೆದು ಬಂದವರು ಮಾತ್ರ ಗುರುವಿನ ಸ್ಥಾನಕ್ಕೆ ಅರ್ಹರು.

ಗುರುವಿನ ಕೆಲಸ ಬರಿಯ ಉಪದೇಶವನ್ನು ಕೊಡುವುದಲ್ಲ; ಶಿಷ್ಯನಾದವನಿಗೆ ದಾರಿ ತೋರುವುದು ಮಾತ್ರವಲ್ಲ; ಆ ದಾರಿಯಲ್ಲಿ ನಡೆಯಲು ಅಗತ್ಯವಾದ ಚೈತನ್ಯ ಸ್ಫೂರ್ತಿಗಳನ್ನು ಶಿಷ್ಯನಾದವನಲ್ಲಿ ತುಂಬಬೇಕಾದ್ದು ಅತ್ಯಂತ ಮುಖ್ಯ. ಅಂತಹ ಚೈತನ್ಯ ಸ್ಫೂರ್ತಿಗಳನ್ನು ಕೊಡಲೋಸುಗ ಗುರುವಾದವನು ತನ್ನ ತಪಸ್ಸಿನ ಫಲವನ್ನೇ ಶಿಷ್ಯನಿಗೆ ಧಾರೆಯೆರೆದು, ಶಿಷ್ಯನ ಪಾಪಫಲ ಗಳನ್ನು ತಾನು ಅನುಭವಿಸಬೇಕಾಗುತ್ತದೆ. ತನ್ನ ಸ್ವಂತ ಮುಕ್ತಿಯನ್ನು ಬದಿಗಿಟ್ಟು ಶಿಷ್ಯನಾದವನ ಮುಕ್ತಿಯನ್ನು ಸಾಧಿಸ ಬೇಕಾಗುತ್ತದೆ.

ಎಂತಲೇ ಗುರುವಿನ ಸ್ಥಾನಕ್ಕೆ ಅಂತಹ ಮಹತ್ವ. ಶ್ರೀಮಾತೆಯವರ ಉಜ್ವಲವಾದ ಬ್ರಹ್ಮಚರ್ಯ, ತೀವ್ರವಾದ ತಪಸ್ಸು, ಪರಿಶುದ್ಧ ವಾದ ಜೀವನ, ಆತ್ಮಸಾಕ್ಷಾತ್ಕಾರ ಹಾಗೂ ಶ್ರೀರಾಮಕೃಷ್ಣರ ನಿರಂತರ ಸಾನ್ನಿಧ್ಯ ಅವರಿಗೆ ಆ ಗುರುವಿನ ಸ್ಥಾನ ವನ್ನೇರಲು ಅರ್ಹತೆಯನ್ನು ಕೊಟ್ಟಿದ್ದುವು. ಆಚಾರ್ಯಪೀಠ ಅಗ್ನಿಯ ಆಸನವೆಂಬುದು ಶ್ರೀಮಾತೆಯವರಿಗೆ ಗೊತ್ತಿತ್ತು. ಆದರೆ ಅವರ ಮಾತೃಹೃದಯ ಈ ಕಷ್ಟಗಳನ್ನು ಲೆಕ್ಕಿಸಲಿಲ್ಲ. ಈ ಬೆಂಕಿಗೆ ಬೆದರಲಿಲ್ಲ. ಅಪವಿತ್ರ ಜೀವಿಗಳನೇಕರು ಅವರ ಪಾದಸ್ಪರ್ಶದಿಂದ
ಪುನೀತರಾದುದುಂಟು.

ಇದರಿಂದ ಶ್ರೀಮಾತೆಯವರಿಗೆ ದೈಹಿಕವಾಗಿ ಆಗುತ್ತಿದ್ದ ಯಾತನ ವರ್ಣನಾತೀತವಾದುದು. ಆದರೂ ತಮ್ಮನ್ನು ನಂಬಿ ಬಂದವ ರನ್ನು ಶ್ರೀಮಾತೆಯವರು ಎಂದೂ ಕೈಬಿಡುತ್ತಿರಲಿಲ್ಲ. ಒಮ್ಮೆ ಶಿಷ್ಯನೊಬ್ಬ ತಮ್ಮ ಪಾದವನ್ನು ಸ್ಪರ್ಶಿಸಲು ಹಿಂಜರಿಯುತ್ತಿದ್ದಾಗ ಅವರು ‘ಮಗೂ, ನಾವು ಹುಟ್ಟಿರುವುದೇ ಅದಕ್ಕಾಗಿ, ಇತರರ ಪಾಪಗಳನ್ನೂ ದುಃಖಗಳನ್ನೂ ಭರಿಸಲು ನಾವೇ ಹಿಂಜರಿದರೆ, ಮತ್ತಾರು ಹಾಗೆ ಮಾಡಬೇಕು’ ಎಂದು ಸಂತೈಸಿ ಹರಸುತ್ತಾರೆ. ಪತಿತೋದ್ಧರಣಕಾರ್ಯವನ್ನ ಶ್ರೀಮಾತೆ ಯವರು ಯಶಸ್ವಿಯಾಗಿ ನಡೆಸಿದರು.

ತಮ್ಮ ಅನುದಿನದ ಜಪತಪಗಳೆಲ್ಲ ಶಿಷ್ಯರಿಗಾಗಿಯೇ ಎಂದು ಅವರು ಹೇಳುತ್ತಿದ್ದುದುಂಟು. ಅವರು ಬರಿಯ ಉಪದೇಶಕರಾಗಿರ ಲಿಲ್ಲ. ಅವರ ಪ್ರತಿಯೊಂದು ಕೃತಿಯಲ್ಲೂ ಅವರ ಮಾತೃಹೃದಯ ಎದ್ದು ಕಾಣುತ್ತಿತ್ತು. ಕೇವಲ ಸಂಕಲ್ಪಮಾತ್ರದಿಂದ ಒಂದು ಜೀವನವನ್ನೇ ಮಾರ್ಪಡಿಸಬಲ್ಲ ಅದ್ಭುತ ಶಕ್ತಿ ಅವರಲ್ಲಿತ್ತು. ಅವರು ಇಚ್ಚಾಮಾತ್ರದಿಂದ ರೋಗರುಜಿನಗಳನ್ನು ಹೋಗಲಾಡಿಸ ಬಲ್ಲವರಾಗಿದ್ದರು, ಪುತ್ರಸಂಪತ್ತಿಯನ್ನು ಅನುಗ್ರಹಿಸಬಲ್ಲವರಾಗಿದ್ದರು.

ಆದರೂ ತಮ್ಮ ಈ ಶಕ್ತಿಯನ್ನು ಅವರು ವಿಶೇಷವಾಗಿ ಉಪಯೋಗಿಸುತ್ತಿರಲಿಲ್ಲ. ಇಂತಹ ಅದ್ಭುತ ಶಕ್ತಿಯಿದ್ದರೂ, ಶ್ರೀಶಾರದಾ ದೇವಿಯವರು ತೋರಿಕೆಗೆ ಸಾಮಾನ್ಯ ಸ್ತ್ರೀಯಂತೆಯೇ ಇದ್ದರು. ಅವರ ನಡೆನುಡಿಗಳಲ್ಲಿ ಆಡಂಬರದ ಸುಳಿವಿರಲಿಲ್ಲ. ಅವರ ಮಂತ್ರ ದೀಕ್ಷಾವಿಧಿಯಾದರೋ ಆಡಂಬರಕ್ಕೆ ಎಡೆಯಿಲ್ಲದಂತೆ ಆದಷ್ಟು ಸ್ವಲ್ಪ ವಿಧಿಗಳಿಂದಲೇ ನಡೆಯುತ್ತಿತ್ತು. ಶ್ರೀಶಾರದಾ ದೇವಿಯವರ ನಿಜವಾದ ಸ್ವರೂಪ ಅನೇಕರಿಗೆ ಅರ್ಥವಾಗಲಿಲ್ಲ.

ಶ್ರೀಶಾರದಾದೇವಿಯವರ ಮಾತೃಭಾವ ಪರದೇಶೀಯರಾದ ಭಗಿನಿ ನಿವೇದಿತಾ, ಶ್ರೀಮತಿ ಓಲೆ ಬುಲ್, ಭಗಿನಿ ಕ್ರಿಸ್ಟೀನೆ, ಭಗಿನಿ
ದೇವಮಾತಾ ಮುಂತಾದವರೊಡನೆ ಸಹವಾಸ – ಸಹಪಂಕ್ತಿ ಭೋಜನಗಳನ್ನು ಮಾಡಿಸಿತು. ಇದು ಸುಧಾರಣೆಯ ಸೋಗಲ್ಲ.
ಶ್ರೀಮಾತೆಯವರ ಸ್ವಭಾವದ ಸಹಜ ಗುಣ ಅದು. ಅವರ ಸಾಕ್ಷಾತ್ಕಾರದ ನಿಲುವು ಅಂತಹದು. ಅವರ ಅವತಾರದ ಉದ್ದೇಶ
ಅಂತಹದು.

ಶ್ರೀಮಾತೆಯವರೇ ಹೇಳುತ್ತಿದ್ದರು: ಶ್ರೀರಾಮಕೃಷ್ಣರು ಪರಮಾತ್ಮನ ಮಾತೃಶಕ್ತಿಯನ್ನು ಪ್ರಕಟಿಸಲೋಸುಗವೇ ಜಗತ್ತಿಗೆ ನನ್ನನ್ನು ಬಿಟ್ಟು ಹೋಗಿದ್ದಾರೆ. ಅವರ ಜೀವನವೇ ಈ ಮಾತಿನ ಪ್ರತ್ಯಕ್ಷ ವ್ಯಾಖ್ಯಾನ. ಶ್ರೀಶಾರದಾದೇವಿಯವರ ಜೀವನದಲ್ಲಿ ಎದ್ದು ಕಾಣುತ್ತಿದ್ದ ವ್ಯಕ್ತಿತ್ವದ ಇನ್ನೊಂದು ಅಂಶವೆಂದರೆ ಅವರ ಅಸದೃಶವಾದ ಗುರುಭಕ್ತಿ, ಶ್ರೀರಾಮಕೃಷ್ಣರು ಅವರಿಗೆ ಗುರು
ಮಾತ್ರವಲ್ಲದೆ ಪರಾಶಕ್ತಿಯ ಪರಮಪ್ರತೀಕವೂ ಆಗಿದ್ದರು. ಅವರ ಕಣ್ಣೆೆದುರು ಸದಾ ಶ್ರೀರಾಮಕೃಷ್ಣರ ಮೂರ್ತಿ ನಲಿದಾಡು ತ್ತಿತ್ತು.

ಅವರ ಹೃದಯದಲ್ಲಿ ಸದಾ ಶ್ರೀರಾಮಕೃಷ್ಣರ ಆರಾಧನೆ ನಡೆಯುತ್ತಿತ್ತು. ಶ್ರೀರಾಮಕೃಷ್ಣರ ಆದರ್ಶ ಅವರ ಬಾಳಿನ ಬೆಳಕು;
ಅವರ ಅಮೃತವಾಣಿ ಬಾಳಿನ ಊರುಗೋಲು. ಶ್ರೀಮಾತೆಯವರ ಸಮಸ್ತ ಚಟುವಟಿಕೆಗಳ ಕೇಂದ್ರಸ್ಥಾನ ಶ್ರೀರಾಮಕೃಷ್ಣರೆ. ಶ್ರೀರಾಮಕೃಷ್ಣರ ದೇಹ ಮರೆಯಾದರೂ ಶ್ರೀಮಾತೆಯವರು ಅವರ ಸಾನ್ನಿಧ್ಯದ ನಿತ್ಯಾನುಭವದಲ್ಲಿರುತ್ತಿದ್ದರು. ಅವರೊಡನೆ ಎಂದಿನಂತೆಯೇ ವ್ಯವಹರಿಸುತ್ತಿದ್ದರು. ಅವರ ಸೇವೆಯನ್ನು ಎಂದಿನಂತೆಯೇ ಮಾಡುತ್ತಿದ್ದರು.

ಸಾಮಾನ್ಯರಿಗೆ ಸಾಮಾನ್ಯರಂತೆಯೂ, ಅನುಭವಿ ಸಾಧಕರಿಗೆ ಸಾಧಕರಂತೆಯೂ, ಶ್ರೀಮಾತೆಯವರು ಗಹನ ಗಂಭೀರರಾಗಿದ್ದರು. ಶ್ರೀಶಾರದಾದೇವಿಯವರ ಸರಳತೆ, ಸಹನೆ, ಸಂಯಮಗಳಂತೂ ಅವರ ಭವ್ಯ ಜೀವನದ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುತ್ತವೆ. ಅವರ ಹುಟ್ಟು, ಸ್ವಭಾವ, ಸಾಧನೆ, ಸಾಕ್ಷಾತ್ಕಾರ, ಎಲ್ಲದರಲ್ಲಿಯೂ ಅವರ ಸರಳತೆ ಒಡೆದು ತೋರುತ್ತದೆ. ಅವರ ಉಜ್ವಲ ಸಾಧನ, ಅದ್ಭುತ ಸಂಯಮ, ಅಪಾರ ಸಹಿಷ್ಣುತೆ, ಅದ್ವಿತೀಯ ತಪೋತೇಜಸ್ಸುಗಳನ್ನು ನೋಡುವ ನಮಗೆ ಅವರ ಸರಳತೆಯನ್ನು ಕಂಡಾಗ ರೋಮಾಂಚನ ವಾಗುತ್ತದೆ.

ಶ್ರೀಮಾತೆಯವರು ಅಸಾಧಾರಣ ಪ್ರತಿಭಾವಂತ ವ್ಯವಹಾರ ಕುಶಲರೂ ಆಗಿದ್ದರು. ವಿಶ್ವವನ್ನೇ ಬೆರಗುಗೊಳಿಸಿದ ವೀರಸನ್ಯಾಸಿ
ವಿವೇಕಾನಂದರಂಥ ಮಹಾಮೇಧಾವಿಗಳು ಕೂಡ ಶ್ರೀಶಾರದಾದೇವಿಯವರ ಪ್ರತಿಭೆಗೆ ಮಣಿಯುತ್ತಿದ್ದರು. ಇಂತಹ ಅಸಾಧಾರಣ
ಪ್ರತಿಭೆಯಿದ್ದರೂ ಶ್ರೀಮಾತೆಯವರ ಸರಳತೆ ಅದನ್ನು ತೋರಗೊಡುತ್ತಿರಲಿಲ್ಲ. ಮಾತೆಯವರು ಒಂದು ಗಳಿಗೆಯನ್ನೂ ವ್ಯರ್ಥ ವಾಗಿ ಕಳೆಯುತ್ತಿರಲಿಲ್ಲ. ಯಾವಾಗಲೂ ಕಾರ್ಯದಲ್ಲಿ ಮಗ್ನರಾಗಿರುತ್ತಿದ್ದರು. ಅವರ ದೃಷ್ಟಿಯಲ್ಲಿ ಯಾವ ಕೆಲಸವೂ ಕೀಳಲ್ಲ. ಅವರ ಸೇವೆ ಮಾಡಲು ಕಾತರಿಸುತ್ತಿದ್ದ ಬಹುಮಂದಿ ಶಿಷ್ಯರಿದ್ದರೂ ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಿರಲಿಲ್ಲ.

ಹೂವು ಕೊಯ್ಯುವುದರಿಂದ ಹಿಡಿದು, ಅಡುಗೆ ಮಾಡುವುದು, ನೀರು ತರುವುದು, ಬತ್ತ ಕುಟ್ಟುವುದು ಮುಂತಾಗಿ ಎಲ್ಲ ಕೆಲಸ ಗಳನ್ನೂ ತಾವೇ ಮಾಡುತ್ತಿದ್ದರು. ಅಡುಗೆ ಮಾಡಿ ಎಲ್ಲರಿಗೂ ಬಡಿಸಿ ತಣಿಸಿದ ಮೇಲೆಯೇ ಅವರ ಊಟ. ಶಿಷ್ಯವರ್ಗ ದವರಲ್ಲಿ ಯಾರಿಗಾದರೂ ಉಪಚಾರಕ್ಕೆ ಶ್ರೀಮಾತೆಯವರು ಸಿದ್ಧವಾಗಿ ನಿಂತಿರುತ್ತಿದ್ದರು. ಆಹಾರ ನಿದ್ರೆಗಳ ಪರಿವೆಯೂ ಇಲ್ಲದೆ ಉಪ ಚರಿಸುತ್ತಿದ್ದರು. ತಾವು ಮಾತ್ರ ಯಾರಿಗೂ ಎಂದೂ ಕಿಂಚಿತ್ತೂ ತೊಂದರೆ ಕೊಡಲು ಶ್ರೀಮಾತೆಯವರು ಇಷ್ಟಪಡುತ್ತಿರಲಿಲ್ಲ.

ಇಂತಹ ಮಹಾಮಾತೆ ಯಾದ ಶ್ರೀಶಾರದಾದೇವಿಯವರನ್ನು ಪಡೆದ ನಾವು ಭಾಗ್ಯವಂತರೇ ಸರಿ. ಸ್ವಾಮಿ ವಿವೇಕಾನಂದರು ಒಂದು ಪತ್ರದಲ್ಲಿ ತಮ್ಮ ಪ್ರಿಯ ಸೋದರ ಸನ್ಯಾಸಿ ಶಿವಾನಂದರಿಗೆ ಹೀಗೆ ಬರಿಯುತ್ತಾರೆ. ಶ್ರೀಮಾತೆಯವರ ಜೀವನದ ಮಹತ್ವ ವನ್ನು ನಿಮ್ಮಲ್ಲಿ ಇನ್ನೂ ಯಾರೂ ಅರಿತುಕೊಂಡಿಲ್ಲ. ಆದರೆ ಕಾಲಕ್ರಮದಲ್ಲಿ ನೀವು ಅದನ್ನು ಅರಿಯುವಿರಿ. ಆದ್ಯಾಶಕ್ತಿಯ ಅನುಗ್ರಹ ವಿಲ್ಲದ ಜಗತ್ತಿಗೆ ಉದ್ದಾರವಿಲ್ಲ. ಇತರ ಎಲ್ಲ ರಾಷ್ಟ್ರಗಳಿಗಿಂತ ನಮ್ಮ ರಾಷ್ಟ್ರ ದುರ್ಬಲಗೊಂಡಿದೆಯಲ್ಲ ಏಕೆ? ಹಿಂದುಳಿದಿದೆಯಲ್ಲ ಏಕೆ? ಏಕೆಂದರೆ ಇಲ್ಲಿ ಆದ್ಯಾಶಕ್ತಿಯನ್ನುಅವಮಾನಿಸಲಾಗಿದೆ. ಈ ಅದ್ಭುತ ಶಕ್ತಿಯನ್ನು ಜಾಗೃತ ಗೊಳಿಸು ವುದಕ್ಕಾಗಿ ಶ್ರೀಮಾತೆ ಶಾರದಾದೇವಿಯವರು ಅವತರಿಸಿ ಬಂದಿದ್ದಾರೆ.

ಅವರನ್ನು ಕೇಂದ್ರವಾಗಿಸಿಕೊಂಡು ಈ ಜಗತ್ತಿನಲ್ಲಿ ಇನ್ನೊಮ್ಮೆ ಗಾರ್ಗಿಯರು, ಮೈತ್ರೇಯಿಯರು ಉದಿಸಿ ಬರಲಿದ್ದಾರೆ. ಅಮೇರಿಕಾ, ಯೂರೋಪುಗಳಲ್ಲಿ ನೀನೇನು ಕಾಣುತ್ತೀ? ಶಕ್ತಿಪೂಜೆಯನ್ನು ! ಆದರ ಅವರು ಆ ಶಕ್ತಿಯನ್ನು ಇಂದ್ರಿಯ ಭೋಗಗಳ ಮೂಲಕ ಆರಾಧಿಸುತ್ತಿದ್ದಾರೆ. ಹೀಗಿರುವಾಗ, ಯಾರು ಅದೇ ಆದ್ಯಾಶಕ್ತಿಯನ್ನು ತಮ್ಮ ಜನನಿ ಎಂದು ಭಾವಿಸಿ ಸಾತ್ವಿಕ ಭಾವ ದಿಂದ, ಪರಿಶುದ್ಧ ಹೃದಯದಿಂದ ಆರಾಧಿಸುವರೋ ಅವರು ಇನ್ನೆಷ್ಟು ಸನ್ಮಂಗಳವನ್ನು ಸಾಧಿಸಿಕೊಳ್ಳಲಿಕ್ಕಿಲ್ಲ ? ಶ್ರೀಶಾರದಾ ದೇವಿಯವರು ಹಾಗೂ ಅವರ ಸಂತಾನ; ಆಮೇಲೆ ಶ್ರೀರಾಮಕೃಷ್ಣರು ಹಾಗೂ ಅವರ ಪುರುಷ ಸಂತಾನದ ವಿಷಯ.

ನೀನಿದನ್ನು ಅರ್ಥಮಾಡಿಕೊಳ್ಳಬಲ್ಲೆಯೇನು? ಶ್ರೀಮಾತೆಯವರ ಕೃಪೆ ನನ್ನ ಪಾಲಿಗೆ ಶ್ರೀರಾಮಕೃಷ್ಣರ ಕೃಪೆಗಿಂತಲೂ ನೂರು ಸಾವಿರ ಪಟ್ಟು ಅಮೂಲ್ಯ. ಶ್ರೀಮಾತೆಯವರ ಕೃಪೆ, ಶ್ರೀಮಾತೆಯವರ ಆಶೀರ್ವಾದ – ಎಲ್ಲವೂ ನನಗೆ ಪರಮೋತ್ಕಷ್ಟ. ಸೋದರ, ನೋಡು, ನನ್ನ ಹೆಸರು ನಿಜಕ್ಕೂ ವಿವೇಕಾನಂದನೇ ಹೌದಾದಲ್ಲಿ ನಿಮಗೆಲ್ಲ ನಾನು ಜೀವಂತ ದುರ್ಗೆಯನ್ನು ಆರಾಧಿಸಿ
ತೋರಿಸಿಕೊಡುತ್ತೇನೆ. ಸೋದರ, ಹೇಳುತ್ತೇನೆ ಕೇಳು – ನಾನು ಈ ವಿಷಯದಲ್ಲಿ ಸ್ವಲ್ಪ ಮತಾಂಧನೇ ಸರಿ. ಶ್ರೀರಾಮಕೃಷ್ಣರನ್ನು ನೀನು ಬೇಕಾದರೆ ದೇವರೆಂದಾದರೂ ಕರೆ, ಮನುಷ್ಯನೆಂದಾದರೂ ಕರೆ, ಅಥವಾ ಇನ್ನೇನು ಬೇಕೋ ಕರೆದುಕೋ. ಆದರೆ ಶ್ರೀಶಾರದಾದೇವಿ ಯವರನ್ನು ಯಾರು ಸಾಕ್ಷಾತ್ ಜಗನ್ಮಾತೆಯೆಂದು ಒಪ್ಪಿ ಗೌರವಿಸುವುದಿಲ್ಲವೋ ಅವನಿಗೆ ಧಿಕ್ಕಾರವಿರಲಿ! ಎಂದು.

ಜಗತ್ತಿನ ವಿದ್ಯಮಾನಗಳೆಲ್ಲ ನಡೆಯುತ್ತಿರುವುದು ಪರಾಶಕ್ತಿಯ ಇಚ್ಛೆಯಿಂದ. ಬ್ರಹ್ಮನಿಂದ ಜಗತ್ತಿನ ಸೃಷ್ಟಿ, ವಿಷ್ಣುವಿನಿಂದ ಅದರ
ಪಾಲನೆ, ಪರಮೇಶ್ವರನಿಂದ ಅದರ ಲಯ ಈ ಎಲ್ಲ ಕಾರ್ಯಗಳೂ ಪರಾಶಕ್ತಿಯ ಇಚ್ಛೆಯಿಂದಲೇ ನಡೆಯುತ್ತವೆ. ಅವಳು ಸರಸ್ವತಿ
ಯಾಗಿ ಎಲ್ಲರಿಗೂ ವಿದ್ಯೆಯನ್ನು ದಯಪಾಲಿಸುತ್ತಾಳೆ : ಲಕ್ಷ್ಮಿಯಾಗಿ ಸಕಲ ಸಂಪತ್ತನ್ನೂ ಕರುಣಿಸುತ್ತಾಳೆ; ದುರ್ಗೆಯಾಗಿ ಕಷ್ಟಗಳನ್ನು ಪರಿಹರಿಸುತ್ತಾಳೆ.

ಒಂದೊಂದು ಉದ್ದೇಶಕ್ಕಾಗಿ ಒಂದೊಂದು ರೂಪವನ್ನು ಧರಿಸುತ್ತಾಳೆ. ಅಂತೆಯೇ ದುಃಖದಾರಿದ್ರ್ಯಗಳಲ್ಲಿ ನೊಂದವರಿಗೆ ದಾರಿಬೆಳಕಾಗಲು, ವೈವಿಧ್ಯದ ಶಿಲುಬೆಗೆ ತುತ್ತಾದವರಿಗೆ ಸಮಾಧಾನವನ್ನು ಕೊಡಲು, ಪಾಪಕೂಪದಲ್ಲಿ ಬಿದ್ದವರನ್ನು ಮೇಲೆತ್ತಿ ಅನುಗ್ರಹಿಸಲು ಆ ಪರಾಶಕ್ತಿಯೇ ಈಗ ವಾತ್ಸಲ್ಯಮಯಿಯಾಗಿ ಶ್ರೀಮಾತೆ ಶಾರದಾ ದೇವಿಯವರ ರೂಪ ತಾಳಿ ಬಂದಿದ್ದಾಳೆ. ಸನ್ಯಾಸಿನಿಯಾಗಿ, ಆದರೂ ಸಂಸಾರದಲ್ಲಿದ್ದುಕೊಂಡು, ಬ್ರಹ್ಮಚಾರಿಣಿಯಾಗಿ, ಆದರೂ ಪತ್ನಿಯಾಗಿದ್ದುಕೊಂಡು, ಮಾತೆಯಾಗಿ, ಮಾತೃಶಕ್ತಿಯ ಪ್ರತೀಕವಾಗಿ, ಭಾರತೀಯ ಸ್ತ್ರೀಯರಿಗೆ ಆದರ್ಶಪ್ರಾಯರಾಗಿ ಶ್ರೀಶಾರದಾ ದೇವಿಯವರು ತಮ್ಮ ಬಾಳನ್ನು ನಡೆಸಿದರು.

ಸೌಶೀಲ್ಯ – ಸಚ್ಚಾರಿತ್ರ್ಯ ಮೂರ್ತಿಯಾಗಿ ಮೆರೆದರು. ಮಾತು, ಕೃತಿ, ನಡತೆ, ಆಲೋಚನೆ, ನಯವಿನಯಗಳಲ್ಲಿ ಎಳ್ಳಷ್ಟೂ ತಪ್ಪದೆ, ಅಂತರಂಗ ಬಹಿರಂಗಗಳಲ್ಲಿ ಪರಿಶುದ್ಧರಾಗಿ ನಿರಾಡಂಬರ ನಿರ್ವಿಕಾರತೆಗಳಿಂದ ಸೌಜನ್ಯದ ಪರಾಕಾಷ್ಠತೆಯನ್ನು ಮುಟ್ಟಿದ್ದರು.
ಶ್ರೀಮಾತೆಯವರ ಜೀವನವನ್ನು ಅಧ್ಯಯನ ಮಾಡುವುದೆಂದರೆ ಮಹಾ ಆದರ್ಶವೊಂದು ಹೂವಿನಂತೆ ಅರಳಿ ವಿಕಸನಗೊಳ್ಳುವ
ವಿನ್ಯಾಸವನ್ನು ಅಧ್ಯಯನ ಮಾಡುದಂತೆ. ಶಾರದಾದೇವಿಯವರು ಭಾರತದ ಸಮಸ್ತ ಸ್ತ್ರೀ ಕುಲಕ್ಕೆ, ಅಧ್ಯಾತ್ಮಿಕ ಪಥಕ್ಕೆ ಆದರ್ಶ.
ತಾವುಗಳು ಈ ಮಹಾನ್ ಅಧ್ಯಾತ್ಮಿಕ ಚೇತನದ ಜನ್ಮದಿನದಂದು ಅವರ ಬಗ್ಗೆ ತಿಳಿದುಕೊಳ್ಳುವಂತಾಗಿ, ಇವರ ಚಿಂತನೆಗಳಿಂದ ಉನ್ನತಿ ಸಾಧಿಸುವಂತಾದರೆ ಈ ಲೇಖನ ಬರೆದದ್ದಕ್ಕೂ ಸಾರ್ಥಕ.

(ಆಧಾರ: ಶ್ರೀಶಾರದಾ ದೇವಿ ಜೀವನಗಂಗಾ – ಸ್ವಾಮಿ ಪುರುಷೋತ್ತಮಾನಂದರು)