Wednesday, 11th December 2024

ರಾಜಕೀಯ ಹಾಗೂ ಆರ್ಥಿಕ ಸ್ಥಿರತೆಯಿಂದ ದೇಶ ಸುಭದ್ರ

ಬೈಂದೂರು ಚಂದ್ರಶೇಖರ ನಾವಡ

ದೇಶದ ಒಳ-ಹೊರಗಿನ ವಿದ್ಯಮಾನಗಳ ಅರಿವನ್ನು ಹೊಂದುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶ ಹಿತಕ್ಕೆ ಸಂಬಂಽಸಿದಂತೆ ಯಾವುದು ಸರಿ ಯಾವುದು ತಪ್ಪು ಎನ್ನುವ ಅರಿವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವುದು ಆವಶ್ಯಕ.

ಚೀನಾದಿಂದ ತಂದ ಸಾಲದಿಂದ ದೇಶ ಕಟ್ಟಲು ಹೊರಟ ಶ್ರೀಲಂಕಾ, ನೇಪಾಳಗಳ ಆರ್ಥಿಕತೆ ಹಳ್ಳ ಹಿಡಿದಿದೆ. ಸರಕಾರದ ಆರ್ಥಿಕ ನೀತಿಯಿಂದ ಬೇಸತ್ತ ಜನರು ಸರಕಾರದ ವಿರುದ್ಧ ದಂಗೆ ಏಳುತ್ತಿದ್ದಾರೆ. ಚೀನಾದ ಪ್ರಭಾವಕ್ಕೆ ಸಿಲುಕಿರುವ ಬರ್ಮಾ, ಪಾಕಿಸ್ತಾನ ಗಳಲ್ಲೂ ಅರಾಜಕತೆ, ಅಶಾಂತಿ ವ್ಯಾಪಿಸಿದೆ. ಧರ್ಮಾಂಧತೆಯ ಅಮಲೇರಿಸಿಕೊಂಡವರ ಕಪಿಮುಷ್ಟಿಯಲ್ಲಿ ಅಫ್ಘಾನಿಸ್ತಾನ ಜನ ತ್ರಾಹಿ ತ್ರಾಹಿ ಎನ್ನುತ್ತಿದ್ದಾರೆ.

ನಮ್ಮ ವೈಯಕ್ತಿಕ, ಕೌಟುಂಬಿಕ ಬದುಕಿನ ನೆಮ್ಮದಿ- ದೇಶದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ನಿಂತಿರುತ್ತದೆಯಾದರೂ ಸ್ಥಿತಿ ತೀರಾ ಹದಗೆಡುವವರೆಗೆ ಸಾಮಾನ್ಯ ಪ್ರಜೆ ಆ ಕುರಿತು ಹೆಚ್ಚೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಪುಕ್ಕಟೆ ಸೌಲಭ್ಯಗಳು, ಸಾಲ ಮಾಡಿ ತುಪ್ಪ ತಿನ್ನಿಸುವ ರಾಜಕಾರಣಿಗಳ ಸಂಖ್ಯೆ ನಮ್ಮಲ್ಲೂ ಹೆಚ್ಚುತ್ತಿದೆ. ಜನಪ್ರಿಯ ಯೋಜನೆಗಳಿಗೆ ಖಜಾನೆ ಬರಿದು ಮಾಡಿ, ಸರಕಾರ ನಡೆಸಲು ಮತ್ತೆಲ್ಲಿಂದಲೋ ಸಾಲ ತಂದು, ತಮ್ಮ ಶಾಸನ ಕಾಲದಲ್ಲಿ ತಾನು ಉಚಿತವಾಗಿ ಅಕ್ಕಿ ಚಿದ್ದೆ, ಲ್ಯಾಪ್‌ಟಾಪ್, ಸ್ಕೂಟಿ ಕೊಟ್ಟಿದ್ದೆ ಎಂದು ಬೀಗುತ್ತಾರೆ.

ದೂರದೃಷ್ಟಿ ಇಲ್ಲದ ಯೋಜನೆಗಳ ಮೂಲಕ ಜನಮನ ಗೆಲ್ಲುವ ಅಗ್ಗದ ತಂತ್ರದಿಂದಾಗಿ ನಮ್ಮ ಆರ್ಥಿಕತೆ ಒಳಗಿಂದೊಳಗೆ ಟೊಳ್ಳಾಗು ತ್ತಿರುವುದು ನಮಗೆ ಕಾಣಿಸುವುದಿಲ್ಲ. ನೆನಪಿರಲಿ- ಪುಕ್ಕಟೆ ವಿದ್ಯುತ್, ರೇಷನ್, ಮೊದಲಾದ ಯೋಜನೆಗಳಿಂದ ತಾತ್ಕಾಲಿಕವಾಗಿ ನಮಗೆ ಖುಷಿ ಸಿಗಬಹುದು. ಇವುಗಳಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುತ್ತವೆ ಮತ್ತು ರಾಜಕಾರಣಿಗಳು ತಮ್ಮ ವೋಟ್ ಬ್ಯಾಂಕ್‌ ಗಾಗಿ ಅನಗತ್ಯ ಸಾಲ ಮಾಡಿ ಆರ್ಥಿಕತೆಗೆ ಪೆಟ್ಟುಕೊಡುತ್ತಾರೆ.

ಯಾವುದೋ ಒಂದು ಹಂತದಲ್ಲಿ ಅದು ವಿಸ್ಫೋಟಕ ಸ್ಥಿತಿ ತಲುಪಿದಾಗ ನಿಂತ ನೆಲ ಕುಸಿಯುತ್ತದೆ. ವಿದೇಶಗಳಿಂದ ತರಿಸಿಕೊಳ್ಳುವ ಪೆಟ್ರೋಲ್ ಬೆಲೆಯನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗದ ಕೇಂದ್ರ ಸರಕಾರ ಹಿಂದೊಮ್ಮೆ ಆಯಿಲ್ ಬಾಂಡ್ ಬಿಡುಗಡೆಗೊಳಿಸಿ ಮುಂದಿನ ಸರಕಾರಗಳಿಗೆ ಜನಾಕ್ರೋಶದ ತಲೆ ನೋವನ್ನು ವರ್ಗಾಯಿಸಿತ್ತು. ನಂತರದ ದಿನಗಳಲ್ಲಿ ಅದೇ ರಾಜಕಾರಣಿಗಳು ತಮ್ಮ ಅಧಿಕಾರಾವಧಿಯಲ್ಲಿ  ಪೆಟ್ರೋಲ್ ಬೆಲೆಯನ್ನು ನಿಯಂತ್ರಿಸಿದ್ದೆವು ಎಂದು ಜನರನ್ನು ಮೂರ್ಖರಾಗಿಸಲು ಪ್ರಯತ್ನಿಸಿದ್ದರು.

ಸ್ಥಿತಿ ಹೀಗೆ ಮುಂದುವರೆದರೆ ಶ್ರೀಲಂಕಾದ ಇಂದಿನ ಪರಿಸ್ಥಿತಿ ನಾಳೆ ನಮ್ಮಲ್ಲೂ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ . ದೇಶದ ಆಗು ಹೋಗು ಗಳಿಗೆ ತಲೆ ಕೆಡಿಸಿಕೊಳ್ಳದ ಇನ್ನೊಂದು ವರ್ಗ ನಮ್ಮಲ್ಲಿದೆ. ತಮ್ಮ ವೈಯಕ್ತಿಕ ಸುಖಕ್ಕಾಗಿ ಹಣ ಸಂಪಾದಿಸಿ ಗುಡ್ಡೆ ಹಾಕುವುದೇ ಬದುಕಿನ ಉದ್ದೇಶವಾಗಿ ಕಾಣುತ್ತದೆ ಈ ವರ್ಗಕ್ಕೆ. ನಿಜ ಹೇಳಬೇಕೆಂದರೆ ದೇಶ ಹಿತಕ್ಕಾಗಿ ಚಿಂತಿಸುವ ನೂರರಲ್ಲಿ ಓರ್ವನ ದೆಸೆಯಿಂದ ಪರಮಸ್ವಾರ್ಥದಲ್ಲಿ ತನ್ನದಲ್ಲದನ್ನು ಬಿಟ್ಟು ಬೇರೊಂದರ ಗೊಡವೆಗೆ ಹೋಗದ 99 ಜನರ ನೆಮ್ಮದಿಯ ಜೀವನ ನಡೆಯುತ್ತಿದೆ ಎನ್ನುವುದು ವರ್ತಮಾನದ ಕಟು ಸತ್ಯ ಎನ್ನಬೇಕಾಗುತ್ತದೆ.

ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ಮೌಲ್ಯ ಎನ್ನಲಾಗುತ್ತದೆ. ದೇಶದ ಒಳ-ಹೊರಗಿನ ವಿದ್ಯಮಾನಗಳ ಅರಿವನ್ನು ಹೊಂದುವುದು
ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶ ಹಿತಕ್ಕೆ ಸಂಬಂಧಿಸಿದಂತೆ ಯಾವುದು ಸರಿ ಯಾವುದು ತಪ್ಪು ಎನ್ನುವ ಅರಿವನ್ನು ಪ್ರತಿಯೊ ಬ್ಬರೂ ಬೆಳೆಸಿಕೊಳ್ಳುವುದು ಆವಶ್ಯಕ. ದೇಶ, ಸಮಾಜದ ಕುರಿತಾದ ನಮ್ಮ ಸಕಾರಾತ್ಮಕ ಚಿಂತನೆಯೇ ಅತಿ ದೊಡ್ಡ ದೇಶ ಸೇವೆ. ಅದಕ್ಕಾಗಿ ದೇಶದ ಗಡಿಗೆ ಧಾವಿಸಬೇಕಿಲ್ಲ. ಹೇರಳ ಹಣ ಬೇಕಿಲ್ಲ. ದೊಡ್ಡ ಅನಾಥಾಲಯ ಕಟ್ಟಬೇಕಿಲ್ಲ.

ಇದು ನನ್ನ ಹಕ್ಕು, ಇದು ನನ್ನ ಸ್ವಾತಂತ್ರ್ಯ ಎನ್ನುವ ಮೊದಲು ದೇಶಕ್ಕಾಗಿ ನಾನೇನು ಮಾಡಿರುವೆ ಎಂದು ಚಿಂತನೆ ಮಾಡುವ ಸಮಯ ವಿದು. ಯಾವ ಸಂವಿಧಾನದ ಹೆಸರಲ್ಲಿ ನಮ್ಮ ಹಕ್ಕು, ಸ್ವಾತಂತ್ರ್ಯದ ಅಧಿಕಾರ ಮಂಡಿಸುತ್ತೇವೋ ಅದೇ ಸಂವಿಧಾನದ ಆಶಯಗಳನ್ನು, ನ್ಯಾಯಾಂಗದ ನಿರ್ಣಯಗಳನ್ನು ಗೌರವಿಸೋಣ. ಸಂವಿಧಾನದಲ್ಲಿ ಹೇಳಲ್ಪಟ್ಟಿರುವ ಕರ್ತವ್ಯದ ಕುರಿತೂ ಚಿಂತಿಸೋಣ. ದೇಶದ ಭವಿಷ್ಯವನ್ನು ಸುಭದ್ರಗೊಳಿಸೋಣ.