Wednesday, 11th December 2024

ಅಧ್ಯಯನ ಮಾಡುವವರು ಗಮನಿಸಲೇಬೇಕಾದವಳು ಆಕೆ !

ಅಭಿವ್ಯಕ್ತಿ

ಡಾ.ಆರ್‌.ಜಿ.ಹೆಗ್ಡೆ

ಹೆಣ್ತನದ ಭಾರ’ ಆಕೆ ಹೊತ್ತುಕೊಂಡಿದ್ದು ಹದಿನಾರನೇ ವಯಸ್ಸಿಗೇ. ಅವಳಿಗೆ ಆಗಲೇ ಮದುವೆ. (ಹಿಂದಿನ ಶತಮಾನದ ನಲವತ್ತನೇ ದಶಕದ ವಿಷಯ). ಸೀರೆಯೇ ಭಾರವಾಗಿದ್ದ ಹುಡುಗಿಯ ಮೇಲೆ ಈಗ ಸಂಸಾರದ ಭಾರ ಬಿದ್ದಿತ್ತು.

ಬಡತನದ ಸಮಸ್ಯೆಗಳಿರಲಿಲ್ಲ. ನಿಜ. ಶ್ರೀಮಂತರ ಮಗಳು ಆಕೆ. ಗಂಡನ ಮನೆಯವರೂ ದೊಡ್ಡ ಅಡಿಕೆ ತೋಟ ಹೊಂದಿದ್ದ ಶ್ರೀಮಂತರು. ಅಪ್ಪನ ಮನೆ, ಗಂಡನ ಮನೆಯಲ್ಲಿ ಸೇರಿ ಮಣಗಟ್ಟಲೆ ಬಂಗಾರ ಆಕೆಯ ಮೈ ಮೇಲೆ ಹೇರಿಬಿಟ್ಟಿದ್ದರು. ಆದರೂ ಈಕೆ ಹೊತ್ತುಕೊಂಡ ಸವಾಲುಗಳು ಎಲ್ಲ ಹೆಣ್ಣುಮಕ್ಕಳ ರೀತಿಯಲ್ಲಿದ್ದವೇ.

ಅಂದಿನ ಇಂತಹ ಮಹಿಳೆಯರ ವಿಷಯ ಬಂತೆಂದರೆ ನಮ್ಮ ಕಣ್ಣ ಮುಂದೆ ಎದುರಾಗುವುದು ಕನ್ನಡ ಸಿನಿಮಾಗಳ ರೀತಿಯ, ಹೆಣ್ಣಿನ ಜೀವನವನ್ನು ಸ್ಟೀರಿಯೋಟೈಪ್‌ಗೆ ತಂದು ನಿಲ್ಲಿಸಿದ ಕಣ್ಣೀರಿನ ಕಥಾನಕಗಳು. ಸವಾಲುಗಳನ್ನು ಸ್ವೀಕರಿಸಿ ಬದುಕಿ
ಸಂತೃಪ್ತಿಪಟ್ಟ ಮಹಿಳೆಯರ ಕಥೆಗಳನ್ನು ನಾವು ಹೇಳಿಯೇ ಇಲ್ಲ. ಕೇಳಿಯೇ ಇಲ್ಲ. ಅಂತಹ ಬೇರೆ ರೀತಿಯ ಹೆಣ್ಣೊಬ್ಬಳ ಕಥೆ ಇದು.

ಈಕೆ ಹೊತ್ತುಕೊಂಡ ಮೊದಲನೆ ಸವಾಲು ಅಂದಿನ ಎಲ್ಲ ಹೆಣ್ಣುಮಕ್ಕಳಿಗೂ ಇದ್ದಂತೆ ಮಕ್ಕಳನ್ನು ಹೇರಲು ಆರಂಭಿಸುವುದು. ಅಂದು ಕುಟುಂಬ ಯೋಜನೆ ಇರಲಿಲ್ಲ. ಹೀಗಾಗಿ ಮಕ್ಕಳನ್ನು ಹೇರುವ ಕೆಲಸ ಆರಂಭವಾಯಿತು. ಮುಂದಿನ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಹೆಚ್ಚು ಕಡಿಮೆ ಪ್ರತಿ ವರ್ಷವೂ ಆಕೆ ಬಸುರಿ ಅಥವಾ ಬಾಣಂತಿಯೇ. ಕೆಲವು ಮಕ್ಕಳು ಉಳಿದವು.
ಕೆಲವು ಹೋದವು. ಬಸುರಿಗೆ, ಬಾಣಂತಿಗೆ ಮನೆಮದ್ದು. ಹೆರಿಗೆಯಂತೂ ಬಿಡಿ. ಹಾಲು ಕರೆದು ತಂಬಿಗೆ ದೇವರ ಮುಂದಿಟ್ಟು ಬಂದು ಡೆಲಿವರಿಗೆ ಮಲಗಿದ್ದಿದೆ. ಡಾಕ್ಟರು ಬೇಕಿರಲಿಲ್ಲ. ಬೇಕಿದ್ದರೂ ಅವರು ಇಲ್ಲ. ಕುಮಟದಲ್ಲಿ ಇದ್ದವರೇ ಒಬ್ಬರು. ಅವರು ಬರುವ ತನಕ ಎಲ್ಲ ಮುಗಿದಿರುತ್ತಿತ್ತು.

ಹೀಗಾಗಿ ಲಿಂಗಜ್ಜಿ ಡೆಲಿವರಿ ಮಾಡಿಸುವುದು. ಬಾಣಂತನವೂ ದೊಡ್ಡ ಸವಾಲು. ಹೊಗೆ ತುಂಬಿದ ಬಚ್ಚಲಲ್ಲಿ ಸುಡುಸುಡುವ
ನೀರನ್ನು ಮೈಮೇಲೆ ಹಾಕಿಕೊಳ್ಳಬೇಕು. ಪಥ್ಯ ಮಾಡಬೇಕು. ಕಷಾಯ ಕುಡಿದು ಬದುಕಬೇಕು. ಮಗುವಿನ ಸ್ನಾನ ಇತ್ಯಾದಿ ಮಾಡಿಸಬೇಕು. ಅಳುವ ಮಗುವನ್ನು ಸಂತೈಸಲು ಬೆಳತನಕ ಎಚ್ಚರಿರಬೇಕು. ಅಲ್ಲದೆ ಹೆಚ್ಚು ಕಡಿಮೆ ಒಂದೊಂದು ವರ್ಷ ಗ್ಯಾಪ್
ಉಳ್ಳ ಅಂತಹ ಹಲವು ಮಕ್ಕಳು. ಮಕ್ಕಳಿಗೆ ಮನೆಮದ್ದು. ಕೆಲಸದವರು ಇಲ್ಲವೆಂದೇನೂ ಅಲ್ಲ. ಆದರೆ ಅವರು ಮನೆಯೊಳಗೆ ಬರುವಂತಿಲ್ಲ. ಕಾಲು ಶತಮಾನಕ್ಕಿಂತಲೂ ಹೆಚ್ಚಿನ ಆಕೆಯ ಜೀವನ ಹೋಗಿದ್ದು ಹೀಗೆ.

ಮಕ್ಕಳನ್ನು ಹುಟ್ಟಿಸುವುದರಲ್ಲಿ. ಇದು ಆಕೆ ನಿರ್ವಹಿಸಿದ ಜವಾಬ್ದಾರಿಗಳ ಒಂದು ಭಾಗ ಮಾತ್ರ. ಅವಳ ಮುಂದೆ ಜವಾಬ್ದಾರಿಯ ಸರಮಾಲೆಗಳೇ, ಮೂಟೆಗಳೇ ಇದ್ದವು. ದೊಡ್ಡ ಕುಟುಂಬ ಅದು. ಅತ್ತೆ ಮಾವ ಗಂಡ, ಮಕ್ಕಳು, ಯಾರು ಯಾರೋ ಸೇರಿ ಮನೆ ಯವರೇ ಇಪ್ಪತ್ತೈದು ಮೂವತ್ತು ಜನ. ಮತ್ತೆ ಅದು ಕೃಷಿ ಕುಟುಂಬ. ಪ್ರತಿದಿನವೂ ಗಾಡಿ ಹೊಡೆಯುವವರು, ಗೊಬ್ಬರ ಹೊರು ವವರು, ತೋಟದಲ್ಲಿ ಮರಗಳ ಬುಡ ಮಾಡುವವರು, ಬತ್ತ ಬಡಿಯುವವರು, ತೆರಕು ತರುವವರು ಇತ್ಯಾದಿ ಸೇರಿ ಕನಿಷ್ಠ ಹದಿನೈದು ಹೊರಾಕಿಯವರು. ಭಾರೀ ಗಾತ್ರದ ಹದಿನಾರು ಅಂಕಣದ ಮನೆ. ಕೊಟ್ಟಿಗೆಯಲ್ಲಿ ನಾಲ್ಕೈದು ಎಮ್ಮೆ, ಇಪ್ಪತ್ತೈದು ಆಕಳು, ಎತ್ತಿನ ಜೋಡಿಗಳು, ಕೋಣಗಳು, ಕರುಗಳ ಸಂಸಾರ.

ಇಂತಹ ಕುಟುಂಬದ ಗಾಡಿಗೆ ಗಂಡ ಬಲದ ಎತ್ತಾದರೆ ಈಕೆ ಎಡದ ಎತ್ತು. ಸಂಸಾರವೆಂದರೆ ಹಾಗೆ. ಇಬ್ಬರೂ ಸೇರಿಯೇ ಬಂಡಿಯನ್ನು ಎಳೆಯಬೇಕು. ಗಂಡನದೂ ವಿಪರೀತ ದುಡಿತ. ತೋಟ, ಗದ್ದೆ ಎತ್ತಿನಗಾಡಿ, ಬತ್ತದ ವ್ಯಾಪಾರ ಹೀಗೆ. ವಿದ್ಯುತ್ತು ಬಂದಿದ್ದು ಆಕೆ ಬಂದ ಇಪ್ಪತ್ತು ಇಪ್ಪತ್ತೈದು ವರ್ಷದ ನಂತರ. ವಾಷಿಂಗ್ ಮಷಿನ್, ಮಿಕ್ಸರ್, ಗ್ರೈಂಡರ್, ಫ್ರಿಡ್ಜ್ ಯಾವುದೂ ಇಲ್ಲ. ಬಾವಿಯಿಂದ ನೀರನ್ನು ಎತ್ತಿಕೊಳ್ಳಬೇಕು. ಕಟ್ಟಿಗೆ ಒಲೆಯಲ್ಲಿ ಅಡಿಗೆ. ಶ್ರೀಮಂತಿಕೆ ಬೇರೆ ವಿಷಯ. ಆದರೆ ಆಕೆ ಬೆಳಗ್ಗೆ
ನಾಲ್ಕಕ್ಕೇ ಎದ್ದು ಬಚ್ಚಲು ಮನೆಯ ಬೂದಿ ತೋಡಿ ಬೆಂಕಿ ಹಚ್ಚಬೇಕು. ಮನೆಯ ಒಲೆ ಹೊತ್ತಿಸಿ ನೀರು ಕಾಸಲು ಇಡಬೇಕು. ದೇವರಿಗೆ ದೀಪ ಹಚ್ಚಿ ರಂಗೋಲಿ ಹಾಕಬೇಕು. ಮಧ್ಯದಲ್ಲಿಯೇ ಗುಡ್ಡಕ್ಕೆ ಹೋಗಿ (ಬಹಿರ್ದೆಸೆಗೆ) ಬರಬೇಕು.

ಎಮ್ಮೆ ಆಕಳು ಕರೆಯಬೇಕು. ಎಮ್ಮೆ ಒದ್ದು ಬಿಟ್ಟು ಕೈ ಬಾತು ಹೋಗಿದ್ದಿದೆ. ಈ ಕೆಲಸಕ್ಕೆಲ್ಲ ಗಂಡನೂ ಬರುತ್ತಿದ್ದ ನಿಜ. ಆದರೆ
ಇವಳಿಲ್ಲದೆ ಕೆಲಸ ನಡೆಯುವಂತಿಲ್ಲ. ಕೈ ಮರಚಲು ಎಮ್ಮೆಗಳು ಅವು. ಬಂದು ಹಾಲು ಕಾಯಿಸಲು ಇಟ್ಟು ದೋಸೆ ಎರೆಯಲು ಆರಂಭಿಸಬೇಕು. ಕನಿಷ್ಠ ನೂರು ದೋಸೆಯಾದರೂ ಬೇಕು. ನೆಲಕ್ಕೆ ಬಾಳೆ ಕೀಳೆ ಹಾಕಿ ಆಸರಿ ಸಂತೆಗೆ ಸಿದ್ಧಮಾಡಬೇಕು. ಮಾವ ನಿಗೆ ದೋಸೆಗೆ ಗೊಜ್ಜು ಬೇಕೇಬೇಕು. ಒಳಕಲ್ಲಿನಲ್ಲಿ ಗೊಜ್ಜು ಬೀಸಬೇಕು. ಬೆಲ್ಲ ತೋಡಬೇಕು. ತುಪ್ಪ ಬಡಿಸಬೇಕು. ಶ್ರೀಮಂತರ ಮನೆ. ಹಾಗಾಗಿ ಕೆಲವರಿಗೆ ಕಾಫಿ. ಕೆಲವರಿಗೆ ಬಿಸಿಬಿಸಿ ಹಾಲು. ಕೆಲವರಿಗೆ ಚಹಾ.

ಮಧ್ಯವೇ ಮಕ್ಕಳನ್ನೆಬ್ಬಿಸಿ ಅವರ ಮುಖ ತೊಳೆಸಿ ಆಸರೆ ಕುಡಿಸಬೇಕು. ಮುಕಳಿ ತೊಳೆಸಬೇಕು. ಶಾಲೆಗೆ (ಶಾಲೆ ಇತ್ತು) ಹೋಗುವ ಮಕ್ಕಳಿಗೆ ಅಂಗಿ ಚಡ್ಡಿ ಹುಡುಕಿ ಕೊಡಬೇಕು. ಕೆಲಸದವರು ಮಾಡುವುದು ಅಂಗಳ ಗುಡಿಸುವುದು, ಹೊರಗಿಟ್ಟ ಪಾತ್ರೆ ತೊಳೆ ಯುವುದು, ಕೊಟ್ಟಿಗೆಯ ಸಗಣಿ ತೆಗೆಯುವುದು, ಎಮ್ಮೆಗೆ ಅಕ್ಕಚ್ಚು ಕೊಡುವುದು ಇಂತಹ ಹೊರಗೆಲಸ ಮಾತ್ರ. ಅವರ
ಮೇಲೆಯೇ ಬಿಟ್ಟರೆ ಕೆಲಸ ಆಗುವುದಿಲ್ಲ. ಅಕ್ಕಚ್ಚಿನಲ್ಲಿ ಕರಡಿ ಕಲ್ಲು ಹಿಂಡಿಯನ್ನು ಎರಡೇ ದಿನದಲ್ಲಿ ಖರ್ಚು ಮಾಡಿ ಬಿಡುತ್ತಾರೆ. ಮತೆ ಅಕ್ಕಚ್ಚು ಸರಿಯಾಗದಿದ್ದರೆ ಎಮ್ಮೆ ಹಾಲು ಕೊಡುವುದಿಲ್ಲ. ಅಲ್ಲದೆ ಬೇಗ ಬತ್ತಿಸಿಕೊಂಡು ಬಿಡುತ್ತದೆ.

ಮಧ್ಯಾಹ್ನದ ಊಟಕ್ಕೆ ತರಕಾರಿಗಳನ್ನು ಹುಡುಕಬೇಕು. ಊಟಕ್ಕೆ ಹಸಿ ಪಲ್ಯ, ಗೊಜ್ಜು, ಹುಳಿ, ತಂಬಳಿಯಾದರೂ ಆಗಲೇಬೇಕು. ಎಲ್ಲವನ್ನೂ ಒಬ್ಬಳೇ ಮಾಡುವುದೆಂದೇನೂ ಅಲ್ಲ. ಮನೆಯಲ್ಲಿರುವವರು ಹೆಗಲು ಹಾಕುತ್ತಾರೆ. ಅದರೆ ಜವಾಬ್ದಾರಿ ಆಕೆಯದೇ.
ಮಜ್ಜಿಗೆ ಕಡೆದು ಬೆಣ್ಣೆ ಮಾಡಬೇಕು. ಕುಚ್ಚಿಗೆ ಅನ್ನದ ಚರಿಗೆಗಳನ್ನು ಸೌದೆ ಒಲೆಯ ಮೇಲಿಡಬೇಕು. ಸ್ನಾನ ಮುಗಿಸಿ ಬಂದು ಅಡುಗೆಯ ಕೆಲಸ. ಕನಿಷ್ಠ ಮೂವತ್ತು ನಲವತ್ತು ಜನರಿಗೆ. ಅಂದಿನ ದಿನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಬರುವವರು ಯಾರೂ ಹೇಳಿಕೊಂಡು ಬರುತ್ತಿರಲಿಲ್ಲ. ಮದುವೆ ಮುಂಜಿಗೆ ಕರೆಯಲು ಬರುವವರು ಇತ್ಯಾದಿ. ತಿಳಿಸಿ ಬರಲು ಫೋನಿಲ್ಲ.

ಹಾಗಾಗಿ ಆರೆಂಟು ಊಟ ಹೆಚ್ಚು ತಯಾರಿಸಿ ಇರಲೇಬೇಕು. ಮಧ್ಯಾಹ್ನ ಊಟ ಬಡಿಸಲು ಬಾಳೆ ಹಾಕಬೇಕು. ಎಂಜಲು ಬಾಳೆ ತೆಗೆದು ಸ್ವತಃ ಊಟ ಮಾಡಿ ನಂತರ ಕೆಲಸದವರಿಗೆ ಬಡಿಸಬೇಕು. ಎದೆ ಹಾಲು ಕುಡಿಯುವ ಮಕ್ಕಳಿದ್ದರೆ ಮಧ್ಯೆ ಮಧ್ಯೆ ಹಾಲು ಕುಡಿಸಬೇಕು. ಮೆಣಸು, ಹುಣಿಸೆಹಣ್ಣು ಇತ್ಯಾದಿ ಸಾಮಾನು ಒಣಗಿಸಲು ಸೌಡು ಸಿಗುವುದು ಈಗಲೇ. ಮತ್ತೆ ಮಧ್ಯಾಹ್ನದ ಮೇಲೆ, ಬಂದು ಹೋಗುವವರಿಗೆ ಚಹಾ ತಿಂಡಿ ಮಾಡಿ ಕೊಡುತ್ತಿರಬೇಕು.ಪುರುಸೊತ್ತಿದ್ದರೆ ಒಮ್ಮೆ ಹುಲ್ಲಿಗೆ ಹೋಗಿಬರಬೇಕು ಅಥವಾ ತೋಟದ ಕಡೆ ಒಮ್ಮೆ ಹೋಗಿ ನೋಡಿ ಬರಬೇಕು.

ಅತ್ತೆ ಮಾವ ಗಂಡ ಸಿಟ್ಟು ಮಾಡಿಕೊಂಡರೆ ಸಹಿಸಿಕೊಳ್ಳಬೇಕು. ಸಾಯಂಕಾಲ ಮಕ್ಕಳಿಗೆ ಬಾಯಿ ಬೇಡಿಕೆ ಕರೆ,ಲಾಡು, ಇತ್ಯಾದಿ
ಮಾಡಿಡಬೇಕು. ಸಾಮಾನುಗಳಿಗೆ ಮನೆಯಲ್ಲಿ ಕೊರತೆಯಿಲ್ಲ. ಮಾಡುವುದೇನು ದೊಡ್ಡದು? ಸಂಜೆ ಅಡುಗೆಗೆ ತಯಾರಿ ಮಾಡ ಬೇಕು. ದೋಸೆ ಬೀಸಬೇಕು. ಕೊಟ್ಟಿಗೆಗೆ ಹೋಗಿ ಹಾಲು ಕರೆದು ಬರಬೇಕು. ಹಾಲು ಕಾಸಬೇಕು.ಮತ್ತೆ ರಾತ್ರಿ ಬಡಿಸಬೇಕು. ಕುಡಿ ಯುವವರಿಗೆ ಹಾಲು ಕೊಡಬೇಕು. ಔಷಧ ಕೊಡುವವರಿಗೆ ಕೊಡಬೇಕು. ಹಾಲಿಗೆ ಹೆಪ್ಪುಹಾಕಬೇಕು. ಮಲಗಬೇಕಾದರೆ ಎಷ್ಟು ಗಂಟೆಯಾಗುತ್ತದೆ ಯಾರಿಗೆ ಗೊತ್ತು. ಮತ್ತೆ ದಿನದಿನವೂ ಅದೇ ಚಕ್ರ.

ಮಧ್ಯದಲ್ಲಿಯೇ ಆಕೆ ಬಸುರಿ ಬಾಣಂತಿ. ಅದು ಇರುವುದೇ. ಇನ್ನೂ ಹಬ್ಬಗಳು ಬಂದರಂತೂ ಭಾರಿ ಸಂಭ್ರಮ. ನೆಂಟರು, ಕೇರಿಯವರೆಲ್ಲ ಸೇರಿ ಕನಿಷ್ಠ ನೂರು ಜನರಿಗೆ ಎರಡು ಹೊತ್ತು ಊಟ. ಬೇರೆ ಬೇರೆ ರೀತಿಯ ಸ್ವೀಟ್ ಆಗಲೇಬೇಕು. ವಿವಿಧ ರೀತಿಯ
ಹಪ್ಪಳ, ಉಪ್ಪಿನಕಾಯಿ ಖಾರ, ಸಾಂಬಾರ ಅವಲಕ್ಕಿ ಇರಲೇಬೇಕು. ಅದೆಲ್ಲ ಮನೆಯ ಪ್ರೆಸ್ಟೀಜ್. ಲಾಡು, ಜಿಲೇಬಿ ಒಬ್ಬೊಬ್ಬರೇ ಹದಿನೈದು ಇಪ್ಪತ್ತು ತಿಂದರೂ ಕಡಿಮೆಯಾಗಬಾರದು. ಆಕೆ ಮಾಡಿದ ತಿಂಡಿ, ತಿನಿಸು ತಿನ್ನಲು ಬೆಂಗಳೂರು ಮುಂಬೈಗಳಲ್ಲಿದ್ದ ಸಂಬಂಧಿಕರೂ ಬರುವುದು. ಹದಿನೈದು ದಿನ ಉಳಿಯುವುದು.

ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೀಕರಣೆ, ಕಾಯಿಸೊಳೆ ತೆಳ್ಳವು. ಸಮಯ ಸರಿದಂತೆ ಹೆಣ್ಣು ಮಕ್ಕಳ ಮದುವೆ ಆರಂಭ. ಕೆಲಸ ನೂರು ಪಟ್ಟು ಹೆಚ್ಚು. ನಂತರ ಸೊಸೆ ಯರು ಬಂದರು. ಮೊಮ್ಮಕ್ಕಳು ಬರಲಾರಂಭಿಸಿದರು. ಈಗ ಹೆಣ್ಣು ಮಕ್ಕಳ ಬಾಣಂತನ, ಮಕ್ಕಳ ಆರೈಕೆ. ಸೊಸೆಯರನ್ನು ಬಿಡಲಿಕ್ಕೆ ಸಾಧ್ಯವಾಗುತ್ತದೆಯೇ? ಶಾಲೆಯ ರಜೆಯ ದಿನಗಳಲ್ಲಿಯಂತೂ ಮೂರು ನಾಲ್ಕು ತಿಂಗಳು ಇಡೀ ಮನೆಯೆಲ್ಲ ಮೊಮ್ಮಕ್ಕಳ ಗೋಲೆ. ಈಗ ಅವರಿಗೆ ವಿವಿಧ ರೀತಿಯ ತಿಂಡಿ, ತಿನಿಸು ಮಾಡಿಕೊಡಬೇಕು. ಮಕ್ಕಳೆಲ್ಲ ‘ಅಜ್ಜಿ ಇದು ಮಾಡಿಕೊಡು’ ಎಂದು ದುಂಬಾಲು ಬೀಳುವವರು.

ಬಿಡಲಾಗುತ್ತದೆಯೇ?. ಆಕೆಗೆ ಕೂದಲು ಬಿಳಿಯಾಗುತ್ತ ಹೋದಂತೆ ಈಗ ಮೊಮ್ಮಕ್ಕಳಿಗೂ ಮಕ್ಕಳು ಬಂದರು. ಅಜ್ಜಿಗೆ ಅವರು ಅಂದರೆ ತುಂಬಾ ಪ್ರೀತಿ. ರಜೆ ಬಂದ ಹಾಗೆ ಮಕ್ಕಳು, ಮೊಮ್ಮಕ್ಕಳು, ಮೊಮ್ಮಕ್ಕಳ ಮಕ್ಕಳು, ಎಲ್ಲರೂ ಇಲ್ಲಿಯೇ. ಅಜ್ಜಿಗೆ ಖುಷಿ.ಆಕೆ
ಈಗ ಮತ್ತಷ್ಟು ಬ್ಯುಸಿ ಕೂಡ. ಹೀಗೆ ವರ್ಷಗಳು ಕಳೆದುಹೋದವು. ಗಡಿಬಿಡಿಯಲ್ಲಿ, ಉತ್ಸಾಹದಲ್ಲಿ.ಸಂತೋಷ ತುಂಬಿ. ಈಗ ಆಕೆ
ಮುದುಕಿ. ೮೦ ಆಗುತ್ತಾ ಬಂತು. ಬೆನ್ನು ಬಾಗಲೇ ಇಲ್ಲ. ಕನ್ನಡಕವೂ, ಪೇಪರ್ ಓದಲು, ಅಕ್ಕಿ ಆರಿಸಲು ಮಾತ್ರ. ಬಸುರಿ ಬಾಣಂತಿ ಬಿಟ್ಟರೆ ಶೀತ ಬಂದು ಮಲಗಿದ್ದು ಇಲ್ಲ. ಗಂಡನೂ ಹಗಲು ರಾತ್ರಿ ದುಡಿದವನು.

ಮತ್ತೆ ಚೂರು ಪಾರು ಚಟ, ಆಚೆ ಈಚೆ ನೋಡುವುದು ಎಲ್ಲ ಗಂಡಸರಿಗೂ ಇರುವುದೇ. ಅದರಲ್ಲಿ ವಿಶೇಷವೇನೂ ಇಲ್ಲ ಎನ್ನುವುದು ಆಕೆಗೆ ಗೊತ್ತು. ಮತ್ತೆ ಗಂಡ, ರೇಶ್ಮೆ ಸೀರೆ, ಬೇಕಾದಷ್ಟು ಬಂಗಾರ, ಮಕ್ಕಳು, ಮೊಮ್ಮಕ್ಕಳು, ತೋಟ, ಗದ್ದೆ ಬಂಧು ಬಾಂಧವರು ಇದ್ದಾಗ ಕೆಲಸ ಇರುವುದೇ ಎಂದು ಆಕೆಗೆ ಗೊತ್ತು. ಹೀಗಾಗಿ ಸಂತ್ರಪ್ತ ಜೀವನ. ಹೀಗೆ ಬದುಕಿದ ಆಕೆಗೆ ಮಹಿಳೆಯ ಜಗತ್ತಿನ, ಬದುಕಿನ ಸ್ವರೂಪ,ಆಳ, ಅಗಲ ತಿಳಿದು ಹೋಯಿತು. ಅದರ ಮೇಲೆ ಹಿಡಿತವೂ ಬಂದು ಹೋಯಿತು.

ಹೆಣ್ಣಿನ ಶರೀರ ರಚನೆ, ಬಸುರಿ, ಬಾಳಂತಿ ಆಗುವುದು ಇತ್ಯಾದಿ ಒಳನೋಟಗಳು ದಕ್ಕಿಬಿಟ್ಟವು. ಹಾಗೆಯೇ, ಗಂಡಸರ ಶರೀರ, ಜಗತ್ತು, ಅವರನ್ನು ಹೇಗೆ ಮ್ಯಾನೇ ಜ್ ಮಾಡಬೇಕು ಇತ್ಯಾದಿ ಕಲೆಗಳು ಸಿದ್ಧಿಸಿಹೋದವು. ತಾರುಣ್ಯ, ಮಧ್ಯ ವಯಸ್ಸು, ವೃದ್ಧಾಪ್ಯದ ಗುಟ್ಟುಗಳು ಅರ್ಥವಾಗಿ ಬಿಟ್ಟವು. ಸಿಗುವ ಗಿಡಮೂಲಿಕೆಗಳಿಂದ ಔಷಧಗಳನ್ನು ತಯಾರಿಸುವುದು ತಿಳಿದು ಹೋಯಿತು. ಪಕ್ಕಾ ಬಂಗಾರ, ಬೆಳ್ಳಿ ಯಾವುದು? ಇತ್ಯಾದಿ ಲೋಹಗಳ ಬಗ್ಗೆ ತಿಳಿದು ಹೋಯಿತು.

ಉಪ್ಪಿನಕಾಯಿ, ಮಾವಿನ ಮಿಡಿಗಳ, ಹಲಸಿನ ಕಾಯಿಗಳ ಬಗ್ಗೆ ಅವಳದೇ ಅಂತಿಮ ತೀರ್ಮಾನ. ಹತ್ತಾರು ಊರುಗಳಲ್ಲಿ ಅವಳಂತಹ ಸಿಹಿತಿಂಡಿ ಮಾಡುವವರು ಇಲ್ಲ. ಮದುವೆಗಳಲ್ಲೂ ಕೇಸರಿಗೆ ಅವಳ ಸಲಹೆ ಬೇಕೇ ಬೇಕು. ಜತೆಗೆ ಎಮ್ಮೆ, ಆಕಳು, ಕರು, ಕೋಣ, ನಾಯಿ, ಬೆಕ್ಕು ಇತ್ಯಾದಿಗಳ ಒಳ ವಿವರಗಳೆಲ್ಲವೂ ತಿಳಿದುಬಿಟ್ಟವು.

ಯಾವ ಎಮ್ಮೆಯನ್ನು ಮರುಗಲಿಗೆ ಯಾವಾಗ ಒಯ್ಯಬೇಕು? ತಿಳಿದುಹೋದವು. ಹಾಗೆಯೇ ಅರ್ಥವಾಗಿ ಹೋಗಿದ್ದು ಕೃಷಿ ಜಗತ್ತು: ಅಡಿಕೆ, ತೆಂಗು, ಬತ್ತ, ಮಾವಿನ ಮರ, ಗೇರು ಮರ, ಇತ್ಯಾದಿ ವಿಷಯಗಳು. ಮಹತ್ವದ, ಗಮನಿಸಬೇಕಾದ ವಿಷಯ ಹೀಗೆ ’ಹೆಣ್ತನದ ಭಾರವನ್ನು’ ಅದೂ ದೊಡ್ಡ ಕೃಷಿ ಕುಟುಂಬದ ಹಿನ್ನೆಲೆಯಲ್ಲಿ ನಿರ್ವಹಿಸಿದ ಆಕೆ ಅದೆಲ್ಲವನ್ನೂ ಒಳಗೊಂಡು ತ್ರಿವಿಕ್ರಮನಂತೆ ಬೆಳೆದು ನಿಂತಿದ್ದು. ಕ್ರಮೇಣ ಒಂದು ಕೃಷಿ ಮಹಿಳಾ ವಿಶ್ವಕೋಶ, ವಿಕಿಪೀಡಿಯ, ವಿಶ್ವವಿದ್ಯಾಲಯವೇ ಆಗಿ ಪರಿವರ್ತನೆ ಗೊಂಡಿದ್ದು.’ಪುರುಷ ಪ್ರಧಾನ’ ಸಮಾಜದಲ್ಲಿ ಮಹಿಳೆಯ ಶಕ್ತಿಯ ಅನಿವಾರ್ಯತೆ, ವಿಭಿನ್ನತೆ ಮತ್ತು ಮಹತ್ವ ತೋರಿಸಿಕೊಟ್ಟು ಪುರುಷನಿಗೆ ಸಮಾನವಾಗಿ, ವಿಭಿನ್ನವಾಗಿ ನಿಂತಿದ್ದು.

ಹೆಣ್ತನಕ್ಕೆ ತೆರೆದುಕೊಡು ಅದರ ಶಕ್ತಿಗಳನ್ನು ತೋರಿಸಿ, ಅವನ್ನು ನಿರಂತರ ವಿಸ್ತರಿಸಿ ಬದುಕಿದ್ದು. ಒಂಬತ್ತು ವರ್ಷ ದಾಟಿದ್ದ, ಗಟ್ಟಿಯಾಗೇ ಇದ್ದ ಆಕೆ ಮೊನ್ನೆ ಮೊನ್ನೆ ತೀರಿಕೊಂಡಳು. ನಮ್ಮ ಮಹಿಳೆಯ ಅಧ್ಯಯನಗಳು ಮಹತ್ವವಾಗಿ ಗಮನಿಸಲೇಬೇಕಾದ ಮಾದರಿಯ ಮಹಿಳೆ ಅವಳು.