Sunday, 3rd November 2024

ಯಶಸ್ವಿ ದಾಂಪತ್ಯದ ರಹಸ್ಯ

ಮದುವೆ ಅಂದ ಮೇಲೆ ಹೊಂದಾಣಿಕೆ ಇಲ್ಲದೇ ಸಾಧ್ಯವಿಲ್ಲ. ಹಾಗೆಂದು ಏಕಮುಖ ಹೊಂದಾಣಿಕೆ ಸರಿಯಲ್ಲ. ಪತಿ-ಪತ್ನಿ ಇಬ್ಬರೂ ಪರಿಸ್ಥಿತಿಗೆ ಅನುಗುಣವಾಗಿ ಕೆಲಮಟ್ಟಿಗೆ ಹೊಂದಾಣಿಕೆ, ಅನುಸರಿಸಿಕೊಂಡು ಹೋಗಲೇಬೇಕು.

ಡಾ.ಕೆ.ಎಸ್.ಚೈತ್ರಾ

ಮೊನ್ನೆ ರಾಜಿ ಆಂಟಿ- ವಿಶು ಅಂಕಲ್ ಮದುವೆಯ ಐವತ್ತನೇ ವರ್ಷದ ಸಂಭ್ರಮ. ಕರೋನಾ ಕಾರಣದಿಂದ ಮನೆಯಲ್ಲೇ ತೀರಾ ಹತ್ತಿರದ ಮೂವತ್ತು ಜನರಿಗೆ ಔತಣ ಕೂಟ. ಜನ ಕಡಿಮೆ ಇದ್ದರು, ಸಮಯವೂ ಸಾಕಷ್ಟಿತ್ತು. ಟೈಂ ಪಾಸ್‌ಗೆ ಕೆಲವು ಜೋಕ್ಸ್‌, ಹಾಡು ನಂತರ ಅವರಿಬ್ಬರಿಗೆ ಪ್ರಶ್ನೆಗಳು.

ನಿಮ್ಮ ಯಶಸ್ವಿ ದಾಂಪತ್ಯದ ಗುಟ್ಟೇನು ಎಂಬ ಹಾಸ್ಯಮಿಶ್ರಿತ ಪ್ರಶ್ನೆ ಅಂಕಲ್-  ಆಂಟಿಗೆ. ಎಂದಿ ನಂತೆ ಅಂಕಲ್ ‘ನಿಮ್ಮ ಆಂಟಿಗೆ ಸ್ಮಾರ್ಟ್ ಗಂಡ, ಚೆಂದದ ಮನೆ, ಸೀರೆ-ಒಡವೆ, ಒಂದಿಷ್ಟು ಓಡಾಟ, ಮಕ್ಕಳು, ಸಿಕ್ಕಾಪಟ್ಟೆ ಪ್ರೀತಿ ಹೀಗೆ ಏನೇನೋ ನಿರೀಕ್ಷೆ ಇತ್ತು. ಅದನ್ನೆಲ್ಲಾ ನಾನು ಹೆಣಗಾಡಿ ಪೂರೈಸಿದೆ. ಹಾಗಾಗಿ ಇಲ್ಲಿತನಕ ಮದುವೆ ಮುಂದುವರಿದಿದೆ’ ಎಂದಾಗ ಆಂಟಿಯೂ ಸೇರಿದಂತೆ ಎಲ್ಲರ ಮುಖದಲ್ಲೂ ನಗು.

ಈಗ ಆಂಟಿಯ ಸರದಿ. ಅವರು ಹೇಳತೊಡಗಿದರು ‘ನಿಮ್ಮ ಅಂಕಲ್ ಹೇಳಿದ್ದು ನಿಜ. ಎಲ್ಲರಂತೆ ನನಗೆ ಏನೇನೋ ನಿರೀಕ್ಷೆ ಗಳಿದ್ದವು. ಆದರೆ ಈಗ ಐವತ್ತು ವರ್ಷ ಸಂಸಾರ ನಡೆಸಿ, ಸಾಕಷ್ಟು ಜೀವನ ಕಂಡು ವಿವಾಹಕ್ಕೆ ಮೊದಲು ಯುವಕ, ಯುವತಿ ಏನು ನಿರೀಕ್ಷೆ ಇಟ್ಟುಕೊಳ್ಳಬೇಕು ಎಂಬುದು ಅರಿವಾಗಿದೆ. ಹಾಗಾಗಿ ನನ್ನ ಪ್ರಕಾರ ಸುಖೀ ಸಂಸಾರಕ್ಕೆ ಸಪ್ತ ನಿರೀಕ್ಷೆಗಳು ಎನ್ನಬ ಹುದು.’

ಜಗಳಗಳು: ಎಷ್ಟೇ ಪ್ರೀತಿ, ಸಮಾನ ಆಸಕ್ತಿ – ಅಭಿರುಚಿ ಇದ್ದರೂ ಜಗಳಗಳು ಆಗೇ ಆಗುತ್ತವೆ. ಪರಸ್ಪರ ಅರ್ಥ ಮಾಡಿಕೊಂಡಿ ದ್ದೇವೆ, ಹಾಗಾಗಿ ಜಗಳ ಆಗುವುದೇ ಇಲ್ಲ ಎನ್ನುವುದು ಸುಳ್ಳು. ಹಾಗೊಮ್ಮೆ ಜಗಳ ಆಡದೇ ಇದ್ದಲ್ಲಿಎನೋ ಸಮಸ್ಯೆೆ ಇದೆ ಎಂದರ್ಥ. ಜಗಳಗಳು ಆಗುತ್ತವೆ, ಆಗಬೇಕು. ಆದರೆ ಮುಗಿಯಬೇಕು; ಅದರಿಂದ ಪರಸ್ಪರರನ್ನು ತಿಳಿಯಬೇಕು, ಕಲಿಯಬೇಕು.

ನಿರಾಶೆ: ನಾನು ಸಂಗಾತಿಯ ಮನಸ್ಸಿಗೆ ನೋವಾಗದಂತೆ, ಕಣ್ಣಲ್ಲಿ ನೀರು ಬರದಂತೆ ಕಾಪಾಡುತ್ತೇನೆ ಎಂಬ ಮಾತು ಕೇಳಲು ಚೆನ್ನ, ಆದರೆ ವಾಸ್ತವವಲ್ಲ. ಬಯಸಿದ ವಸ್ತು ಸಿಗದೇ ಇದ್ದಾಗ, ಮನಸ್ಸಿಗೆ ಬೇಕಾದಂತೆ ನಡೆಯದೇ ಇದ್ದಾಗ ಬೇಸರ -ನಿರಾಶೆ ಇಬ್ಬರಿಗೂ ಸಹಜವೇ. ನಿರಾಶೆ, ಹತಾಶೆಯಾಗಬಾರದು. ಅದನ್ನು ಮೀರಿ ಒಟ್ಟಾಗಿ ಮುಂದುವರಿಯುವುದನ್ನು ಎದುರು ನೋಡ ಬೇಕು.

ಸೋಲು: ನಾವಿಬ್ಬರೂ ಒಟ್ಟಾಗಿ, ಪ್ರೀತಿಯಿಂದ ಇಡೀ ಜಗತ್ತನ್ನೇ ಗೆಲ್ಲಬಲ್ಲೆವು. ನಮ್ಮನ್ನು ಯಾರೂ-ಯಾವುದೂ ಸೋಲಿಸಲು ಸಾಧ್ಯವಿಲ್ಲ ಎಂಬುದು ನಿಜಕ್ಕೂ ಮನಸ್ಸಿಗೆ ಧೈರ್ಯವನ್ನು ನೀಡುತ್ತದೆ. ನಿಜಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಎಲ್ಲಾ ಪ್ರಯತ್ನದ ನಡುವೆಯೂ ಸೋಲಾಗಬಹುದು. ನೆನಪಿನಲ್ಲಿಡಬೇಕಾದ ವಿಷಯವೆಂದರೆ ಒಟ್ಟಾಗಿ ನಾವು ಎಲ್ಲವನ್ನೂ (ಸೋಲ ನ್ನೂ!) ಎದುರಿಸುತ್ತೇವೆ ಮತ್ತು ಬಾಳುತ್ತೇವೆ.

ಪ್ರೀತಿಯಲ್ಲಿ ಪಾಲು: ‘ನೀನೇ ನನ್ನ ಜೀವ, ಪ್ರಪಂಚದಲ್ಲಿ ನಿನ್ನ ಬಿಟ್ಟರೆ ನನಗೆ ಬೇರೆ ಯಾರಿಲ್ಲ’. ಎಷ್ಟು ಚಂದದ ರೊಮ್ಯಾಂಟಿಕ್ ಸಾಲುಗಳು! ಆದರದು ಸಾಧ್ಯವಿಲ್ಲ, ಸರಿಯೂ ಅಲ್ಲ. ಸಂಗಾತಿ ಎಂದರೆ ತನ್ನದೇ ಆದ ವ್ಯಕ್ತಿತ್ವ, ಬಂಧುಗಳು, ಗೆಳೆಯರನ್ನು ಹೊಂದಿರುವ ಬೇರೆ ವ್ಯಕ್ತಿ. ಜೀವನಕ್ಕೆ ಗಂಡ-ಹೆಂಡತಿ ಮಾತ್ರ ಇದ್ದರೆ ಸಾಲದು. ಅಪ್ಪ-ಅಮ್ಮ, ಗೆಳೆಯರು, ಸಹೋ ದ್ಯೋಗಿಗಳು ಎಲ್ಲರೂ ಬೇಕು. ಸ್ನೇಹ, ಪ್ರೀತಿ, ಮಮತೆ ಇವೆಲ್ಲವೂ ಬದುಕಿಗೆ ಬಣ್ಣ ತುಂಬಬೇಕು. ಪ್ರೀತಿಯನ್ನು ಹಂಚುವು ದರಿಂದ ಅದು ಪಾಲಾಗುವುದಿಲ್ಲ, ಬೆಳೆಯುತ್ತದೆ ಎಂಬುದು ನೆನಪಿರಲಿ.

ಸಂಗಾತಿ ಸರಿಯೇ ಎಂಬ ಸಂಶಯ: ಮದುವೆಯ ಆರಂಭದಲ್ಲಿ ಪರಿಪೂರ್ಣ ವ್ಯಕ್ತಿ ಅನ್ನಿಸಿದ್ದು ಕಾಲ ಕಳೆದಂತೆ ಹೇಗೆ ಒಪ್ಪಿದೆ, ಏಕೆ ಒಪ್ಪಿದೆ ಎನ್ನುವ ಸಂಶಯ ಮೂಡಿಸಬಹುದು. ಇಷ್ಟವಾದ ಗುಣಗಳೇ ನಿಧಾನವಾಗಿ ಕಿರಿಕಿರಿ ಉಂಟುಮಾಡುತ್ತವೆ. (ಉದಾ-ಗಂಭೀರ ಎಂದು ಇಷ್ಟವಾಗಿದ್ದು, ಎಲ್ಲಿ ಹೋದರೂ ಬಾಯಿಯನ್ನೇ ತೆರೆಯುವುದಿಲ್ಲ ಎಂಬ ಅಸಮಾಧಾನ ಮೂಡಿಸುತ್ತದೆ). ವಯಸ್ಸು ಹೆಚ್ಚಾದಂತೆ ದೈಹಿಕ ಆಕರ್ಷಣೆ ಕಡಿಮೆಯಾಗುವುದು ಸಹಜ. ಅದರೊಂದಿಗೇ ನಡೆ-ನುಡಿಗಳೂ ಬದಲಾಗಿ ಸಂಗಾತಿ ಮಾತ್ರವಲ್ಲ ಮದುವೆ ಎಂಬ ವ್ಯವಸ್ಥೆಯ ಬಗ್ಗೆಯೇ ಸಂಶಯ ಮೂಡಬಹುದು. ಇಂಥ ಸಂದರ್ಭದಲ್ಲಿ ದೈಹಿಕ-ಮಾನಸಿಕವಾಗಿ
ಬದಲಾಗಿದ್ದು ಇಬ್ಬರೂ, ತನ್ನಂತೆ ಸಂಗಾತಿಗೂ ಅನ್ನಿಸುತ್ತದೆ.  ಹಾಗಿದ್ದೂ ಇದನ್ನು ಮೀರಿದ ಬಂಧ ಮದುವೆಯದ್ದು ಎಂಬು ದನ್ನು ಯೋಚಿಸಿದರೆ ಪರಿಸ್ಥಿತಿ ಸುಧಾರಿಸುತ್ತದೆ.

ಪರಸ್ಪರ ಹೊಂದಾಣಿಕೆ
‘ನಾನು ಎಲ್ಲವನ್ನೂ ಸರಿಯಾಗಿಯೇ ಯೋಚಿಸಿ ಮಾಡುತ್ತೇನೆ, ಸರಿಯಾಗಿದೆ ಎಂದ ಮೇಲೆ ನಾನೇಕೆ ಸೋಲಲಿ, ಅಷ್ಟಿದ್ದರೆ ಈ
ಮದುವೆಯೇ ಬೇಡ’ ಎನ್ನುವುದು ಸಣ್ಣ ಪುಟ್ಟ ವಿಷಯಗಳಿಗೆ ಸರಿಯಲ್ಲ. ಮದುವೆ ಅಂದ ಮೇಲೆ ಹೊಂದಾಣಿಕೆ ಇಲ್ಲದೇ ಸಾಧ್ಯ ವಿಲ್ಲ. ಹಾಗೆಂದು ಏಕಮುಖ ಹೊಂದಾಣಿಕೆ ಸರಿಯಲ್ಲ. ಪತಿ-ಪತ್ನಿ ಇಬ್ಬರೂ ಪರಿಸ್ಥಿತಿಗೆ ಅನುಗುಣವಾಗಿ ಕೆಲಮಟ್ಟಿಗೆ
ಹೊಂದಾಣಿಕೆ, ಅನುಸರಿಸಿಕೊಂಡು ಹೋಗಲೇಬೇಕು.

ಜೀವನದಲ್ಲಿ ಸೋತು ಗೆಲ್ಲಲು ಸಾಧ್ಯವಿದೆ ಎಂಬುದು ತಿಳಿದಿದ್ದರೆ ಒಳ್ಳೆಯದು. ಮಕ್ಕಳ ಪಾಲನೆಯಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಪ್ರೀತಿ, ಮದುವೆ, ಮಕ್ಕಳು- ಸುಖೀ ಸಂಸಾರ ಎಂಬುದು ಸಿನಿಮಾಗಳು ಕೊನೆಗೊಳ್ಳುವ ರೀತಿ. ನಿಜ ಜೀವನದಲ್ಲಿ ಮಗು ಹುಟ್ಟಿದ ಬಳಿಕ ಭಿನ್ನಾಭಿಪ್ರಾಯವೂ ಹುಟ್ಟುವ ಸಾಧ್ಯತೆ ಇದೆ!

ಮಗು ಬಂದ ನಂತರ ದೈಹಿಕ, ಮಾನಸಿಕ, ಆರ್ಥಿಕ ಜವಾಬ್ದಾರಿ ಹೆಚ್ಚುತ್ತದೆ. ಮಕ್ಕಳನ್ನು ಬೆಳೆಸುವಲ್ಲಿ ಸಿದ್ಧ ಸೂತ್ರವಿಲ್ಲ. ಅನು ಭವದಿಂದ ಕಲಿಯುತ್ತಾ ಸಹನೆಯಿಂದ ನಿರ್ವಹಿಸಬೇಕಾದ ಮಹತ್ವದ ಜವಾಬ್ದಾರಿ ಅದು. ಈ ಸಂದರ್ಭದಲ್ಲಿ ಸಾಕಷ್ಟು ಸಂಘರ್ಷ ನಿರೀಕ್ಷಿತ.

ಮಗು ನಮ್ಮಿಬ್ಬರದ್ದು, ಅದರ ಹೊಣೆ ನಮ್ಮದು ಎಂಬುದನ್ನು ನೆನೆಪಿಸಿಕೊಂಡು ಒಟ್ಟಾಗಿ ಬೆಳೆಸುವುದು ಮುಖ್ಯ.  ನೀವೆಲ್ಲಾ ನಾನು ಸೂರ್ಯ ಚಂದ್ರರಿರುವ ತನಕ ನಮ್ಮ ಪ್ರೀತಿ, ಜಗಳವೇ ಇಲ್ಲದ ಸಂಸಾರ ಹೀಗೆ ಏನೇನೋ ಅಂದುಕೊಂಡಿದ್ದೀರಿ ಅಲ್ವಾ? ಈಗ ನಾನು ಹೇಳಿದ್ದು ನಮ್ಮಿಬ್ಬರ ಐವತ್ತು ವರ್ಷಗಳಲ್ಲಿ ನಡೆದಿರುವ ವಿಷಯಗಳು. ಎಲ್ಲಾ ದಾಂಪತ್ಯದಲ್ಲೂ ಇವು ಇರುತ್ತವೆ. ಆದರೂ ಅವು ಯಶಸ್ವಿಯಾಗಲು ಕಾರಣ ತಾಳ್ಮೆ, ಸಹನೆ ಮತ್ತು ಪ್ರೀತಿ.

ಮದುವೆ ಮುರಿಯುವುದು ನಿಮಿಷದ ಕೆಲಸ; ಆದರೆ ಮದುವೆ ಉಳಿಸಿ, ಸಂಸಾರ ಕಟ್ಟುವುದು ಇಡೀ ಜೀವಮಾನದ ಕೆಲಸ. ಹಾಗಾಗಿ ಈಗಿನ ಮಕ್ಕಳಿಗೆ ರಮ್ಯ ಕಲ್ಪನೆಗಳು ಇದ್ದರೂ ಅದರೊಂದಿಗೇ ಈ ನಿರೀಕ್ಷೆಗಳನ್ನು ಇಟ್ಟುಕೊಂಡೇ ಮದುವೆಯಾದರೆ ಒಳ್ಳೆಯದು’ ಎಂದು ತಮ್ಮ ಮಾತು ಮುಗಿಸಿದರು ಆಂಟಿ. ನಿಜ, ಏನೋ ನಿರೀಕ್ಷೆ ಮಾಡಿದ್ದ ನಮಗೆ ಆಂಟಿಯ ಮಾತು ಅನಿರೀಕ್ಷಿತವಾಗಿದ್ದರೂ ಯೋಚಿಸುವಂತೆ ಮಾಡಿತ್ತು. ನೆರಿಗೆ ಚರ್ಮದ ಅಂಕಲ್- ಬೆಳ್ಳಿ ಕೂದಲ ಆಂಟಿ ನಗುತ್ತಾ ಕೇಕ್ ಕತ್ತರಿಸುತ್ತಿದ್ದ ದೃಶ್ಯ ಮನಸ್ಸಿಗೆ ಮುದ ನೀಡಿತ್ತು!