Tuesday, 15th October 2024

ಭಯೋತ್ಪಾದನೆ ಗುಂಪುಗಳಿಗೆ ಯುವಕರ ಸೇರ್ಪಡೆ: ಎನ್​ಐಎ ದಾಳಿ, ಶೋಧ

ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದನಾ ಚಟುವಟಿಕೆಗಳು ಗರಿಗೆದರುತ್ತಿವೆ ಎಂಬ ಮಾಹಿತಿ ಸಿಕ್ಕಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಕಾಶ್ಮೀರ ಕೌಂಟರ್ ಇಂಟೆಲಿಜೆನ್ಸ್ (ಸಿಐಕೆ) ಪುಲ್ವಾಮಾ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮಂಗಳವಾರ ದಾಳಿ ಮಾಡಿ, ತನಿಖೆ ಆರಂಭಿಸಿದೆ.

ಉಗ್ರ ಸಂಘಟನೆಗಳಿಗೆ ಯುವಕರ ಸೇರ್ಪಡೆ, ಅದರ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿರುವ ಬಗ್ಗೆ ಸೂಚನೆ ಸಿಕ್ಕಿದ್ದರ ಆಧಾರದ ಮೇಲೆ ಎನ್​ಐಎ ಈ ದಾಳಿ ನಡೆಸಿದೆ.

ಪುಲ್ವಾಮಾ ಜಿಲ್ಲೆಯ ರಹ್ಮೋ ಪ್ರದೇಶದಲ್ಲಿ ಮೊಹಮ್ಮದ್ ಅಶ್ರಫ್ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಲಾಗಿದೆ. ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯ ಲಾಗಿದೆ.

ಸಿಐಕೆ ಪಡೆ ಜಿಲ್ಲೆಯ ದರ್ಬಗಾಮ್ ಕರಿಮಾಬಾದ್, ಏಗಂಡ್ ಸೇರಿದಂತೆ ಮೂರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ. ದರ್ಬಗಾಮ್ ಪ್ರದೇಶದಲ್ಲಿ ಹಿಲಾಲ್ ಅಹ್ಮದ್ ದಾರ್ ಎಂಬುವರ ಮನೆ ಮೇಲೆ ದಾಳಿ ನಡೆಸ ಲಾಗಿದ್ದು, ಕರೀಮಾಬಾದ್ ಪ್ರದೇಶದಲ್ಲಿ ವಸೀಂ ಫಿರೋಜ್ ಮತ್ತು ಇನಾಯತುಲ್ಲಾ ಎಂಬುವರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಅಗತ್ಯ ದಾಖಲೆಗಳು ಮತ್ತು ಇತರ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ನೆರವಿನಿಂದ ಈ ದಾಳಿ ನಡೆಸಲಾಗಿದೆ. ಆದರೆ, ಈವರೆಗೂ ಯಾರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಭಯೋತ್ಪಾದನೆ ಸಂಬಂಧಿತ ಪ್ರಕರಣದ ತನಿಖೆಯ ಭಾಗವಾಗಿ ಜೂನ್‌ನಲ್ಲಿ ತನಿಖಾ ಸಂಸ್ಥೆಗಳು ಪುಲ್ವಾಮಾದ ನಾಲ್ಕು ಕಡೆ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ದಾಳಿ ನಡೆಸಿತ್ತು. ಎನ್‌ಐಎ ದೆಹಲಿ ಶಾಖೆ 2021 ರಲ್ಲಿ, 2022 ರಲ್ಲಿ ಜಮ್ಮು ಶಾಖೆಯಲ್ಲಿ ಪ್ರತ್ಯೇಕ ಎರಡು ಕೇಸ್​ ದಾಖಲಿಸಿ ಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲ ಬಾಂಬ್‌ಗಳು, ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು) ಮತ್ತು ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಹಿಂಸಾತ್ಮಕ ಭಯೋತ್ಪಾದಕ ದಾಳಿಗಳನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಗಳು ನಡೆಸುವ ಪಿತೂರಿ ಮತ್ತು ಯೋಜನೆಗಳನ್ನು ಹತ್ತಿಕ್ಕುವ ಭಾಗವಾಗಿ ಈ ದಾಳಿ ನಡೆಸಲಾಗುತ್ತಿದೆ.