Friday, 13th December 2024

ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಹತ್ಯೆೆ: ಈ-ಮೇಲ್ ಸಂದೇಶ ರವಾನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಹತ್ಯೆ ಗೈಯ್ಯುವುದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಗೆ ಈ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನೆಯಾಗಿದೆ.

ಆತ್ಮಾಹುತಿ ಬಾಂಬ್ ದಾಳಿ ಮೂಲಕ ಹತ್ಯೆ ಮಾಡುವುದಾಗಿ ಮುಂಬೈನ ಸಿಆರ್ ಪಿಎಫ್ ಪ್ರಧಾನ ಕಚೇರಿಗೆ ಈ-ಮೇಲ್ ಸಂದೇಶ ರವಾನಿಸಿರುವ ವಿಷಯ ಬೆಳಕಿಗೆ ಬಂದಿದೆ.

ಕೆಲವು ದಿನಗಳ ಹಿಂದೆ ಮುಂಬೈನಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ಪ್ರಧಾನ ಕಚೇರಿಗೆ ಬೆದರಿಕೆ ಸಂದೇಶ ರವಾನಿಸ ಲಾಗಿತ್ತು. ಧಾರ್ಮಿಕ ಕೇಂದ್ರ ಮತ್ತು ಪ್ರಮುಖ ನಗರಗಳಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.

ಕಳೆದ ವರ್ಷ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ದ ಪ್ರಧಾನ ಕಚೇರಿಗೆ ಇದೇ ರೀತಿ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿತ್ತು. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು.