ಕಮಲಾಕರ ಕೆ.ಆರ್ ತಲವಾಟ
ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ ತುರಹಳ್ಳಿ ಅರಣ್ಯವನ್ನು ನಾಶಪಡಿಸಲು ಸದ್ದಿಲ್ಲದೇ ಯೋಜನೆಯೊಂದು ಸಿದ್ಧವಾಗಿದೆ. ಪರಿಸರ ನಾಶಮಾಡುವ ಇಂತಹ ಯೋಜನೆಯ ಅಂಗವಾಗಿ ಅದಾಗಲೇ ಮರಗಿಡಗಳನ್ನು ಬುಲ್ ಡೋಜರ್ ಕಿತ್ತು ಎಸೆದಿದೆ. ಆದರೆ ತುರಹಳ್ಳಿ ಕಾಡು ಉಳಿಯಬೇಕು ಎಂಬುದು ಪರಿಸತ ತಜ್ಞರ, ಸ್ಥಳೀಯರ ಒಕ್ಕೊರಲ ಒತ್ತಾಸೆ. ಏಕೆಂದರೆ ನಮ್ಮ ಸುತ್ತಲೂ ಹಸಿರು ಇದ್ದರೆ ತಾನೆ ನಮ್ಮ ಉಸಿರು ಉಳಿಯುವುದು!
ಫೆಬ್ರವರಿ ಮೊದಲ ವಾರ ಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಬೆಂಗಳೂರು ಬೆಚ್ಚಗೆ ಹೊದ್ದು ಮಲಗಿತ್ತು. ಆದರೆ ತುರಹಳ್ಳಿ ಕಾಡಿನ ಹಕ್ಕಿ ಪಕ್ಷಿಗಳು, ಹುಳಹುಪ್ಪಟೆಗಳು ಗರಿ ಕೊಡವಿ ತಮಗೆ ಮತ್ತು ತಮ್ಮ ಪುಟ್ಟ ಹಕ್ಕಿಗಳಿಗೆ ಆಹಾರ ತರುವ ಕೆಲಸಕ್ಕೆ ಸಿದ್ಧತೆ ಪ್ರಾರಂಭಿಸಿದ್ದವು. ಆಗಲೊಂದು ಸಣ್ಣ ಮುದ್ದು ಪಕ್ಷಿ ಮರದೊಳಗಿನ ಬೆಚ್ಚಗಿನ ಗೂಡಿನ ಒಳಗಿಂದಲೇ ಅದರಮ್ಮನ್ನು ಕೇಳಿತು-
‘ಅಮ್ಮ, ಇಲ್ಲೆಲ್ಲೋ ಹತ್ತಿರದಲ್ಲಿ ಎಂದೂ ಇಲ್ಲದ ಕರ್ಕಶ ಶಬ್ದ ಕೇಳುತ್ತಿದೆ. ಏನಮ್ಮಾ ಅದು?’ ಅದರಮ್ಮನೂ ಸ್ವಲ್ಪ ಕಿವಿಗೊಟ್ಟು ಆಲೈಸಿದಾಗ ದೊಡ್ಡ ಯಂತ್ರದ ದಡಬಡ ಶಬ್ದ ಕೇಳತೊಡಗಿತು. ಅದು ತನ್ನ ಇತರ ಪಕ್ಷಿಮಿತ್ರರನ್ನು ಕೂಗಿ ಕರೆಯತೊಡಗಿತು.
ಕ್ಷಣಾರ್ಧದಲ್ಲಿ ಸುತ್ತ ಮುತ್ತ ಇದ್ದ ಅದರ ಮಿತ್ರ ಪಕ್ಷಿಗಳು, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲವೂ ಇದರ ಕೂಗಿಗೆ ಓಗೊಟ್ಟು ಅಲ್ಲಿಯ ಗಿಡಮರಗಳ ಕೊಂಬೆಗೆ ಬಂದು ಸೇರಿದವು. ಒಂದಿಷ್ಟು ಪಕ್ಷಿಗಳು ಶಬ್ದ ಬಂದ ದಿಕ್ಕಿನಡೆಗೆ ಹಾರಿಹೋಗಿ ನೋಡಿಬಂದು ಎಲ್ಲರೆದುರು ವಿಷಯ ಅರುಹಿದವು. ತಮ್ಮ ನೆಚ್ಚಿನ ಕಾಡಿನಲ್ಲಿ ದೈತ್ಯ ಯಂತ್ರವೊಂದು ತಮ್ಮ ಪ್ರೀತಿಯ ಮರಗಿಡ ಗಳನ್ನು ಬೀಳಿಸುತ್ತಿದೆ!
ಸಂತಸದಿಂದಿದ್ದ ಅವರ ಹಾರಾಟಕ್ಕೆ ಅಂದು ಕುತ್ತು ಬಂದಿತ್ತು. ಮಾನವ ಜೆಸಿಬಿ ಯಂತ್ರದ ಸಹಾಯದಿಂದ ಕಾಡಿನ ನಾಶಕ್ಕೆ ಪಣ ತೊಟ್ಟಿದ್ದ. ಮತ್ತೊಂದು ಪುಟ್ಟ ಹಕ್ಕಿ ಕೇಳಿತು – ಈ ಭೂಮಿ, ಕಾಡು ಎಲ್ಲಾ ಈ ಮಾನವನಿಗೆ ಮಾತ್ರ ಸೇರಿದ್ದಾ? ಅವನ ದುರಾಸೆ ಗೊಂದು ಮಿತಿ ಬೇಡವಾ? ಅವ ಏಕೆ ಮರ, ಗಿಡಗಳನ್ನು ಕೆಡಹುತ್ತಿದ್ದಾನೆ? ನಮ್ಮೆಲ್ಲರ ಬದುಕ ಕಸಿದುಕೊಂಡು?’ ಆ ಹಕ್ಕಿಯ ಬಾಯಿಂದ ಮುಂದಿನ ದನಿ ಹೊರಬರಲೇ ಇಲ್ಲ.
ಅಷ್ಟರಲ್ಲೇ ಮತ್ತೊಂದು ಹಕ್ಕಿ ಹಾರಿ ಬಂದು ನೆಮ್ಮದಿ ತಾಳುವಂತಹ ವಿಷಯವನರುಹಿತು – ಮನುಷ್ಯರೆಲ್ಲರೂ ಕೆಟ್ಟವರೆಲ್ಲ. ಅವರೊಳಗೊಂದಿಷ್ಟು ಜನ, ಮಕ್ಕಳು ಗಿಡಮರಗಳ ಉಳಿವಿಗಾಗಿ, ನಮ್ಮ ಪಕ್ಷಿಸಂಕುಲದ ಉಳಿವಿಗಾಗಿ, ಅವರದೇ ಮುಂದಿನ ಪೀಳಿಗೆಯ ಉಳಿವಿಗಾಗಿ ಅಂತಃಕರಣ ಹೊಂದಿದವರಿದ್ದಾರೆ. ಈ ಕಾಡಿನಲ್ಲಿ ಮಾನವ ಚಟುವಟಿಕೆಗಳು ಬೇಡ, ಕಾಡನ್ನು ಈಗಿರುವ ಸ್ಥಿತಿಯಲ್ಲಿಯೇ ಉಳಿಸುವ ಬಗೆಗೆ ಹೋರಾಟ ಮಾಡಲು ಪ್ರಾರಂಭಿಸಿದ್ದಾರೆ.
ನೋಡೋಣ ದೇವರಿದ್ದಾನೆ, ಕೈ ಬಿಡಲಾರ’ ಎಂದು ಎಲ್ಲ ಪಕ್ಷಿಗಳಲ್ಲೂ ಸ್ವಲ್ಪ ಆಶಾಭಾವನೆ ಮೂಡಿಸಿತು. ಬೆಂಗಳೂರಿನಲ್ಲಿ ಉದ್ಯಾನವನ ಅಥವಾ ಹೆಚ್ಚು ಮರಗಿಡಗಳಿರುವ ಪ್ರದೇಶವೆಂದರೆ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಮಾತ್ರ ಎಂಬ ಕಲ್ಪನೆ ಬಹಳಷ್ಟು ಜನರಿಗಿದೆ. ತುರಹಳ್ಳಿ ಕಾಡು ಅಥವಾ ಮೀಸಲು ಅರಣ್ಯ ಪ್ರದೇಶ ಇರುವುದು, ಅದರ ಪ್ರಾಮುಖ್ಯತೆ ಸಾಮಾನ್ಯ ಜನರಿಗೆ ಗೊತ್ತಾಗಿದ್ದು ಮಾತ್ರ ಇತ್ತೀಚಿನ ಹಲವು ವರ್ಷಗಳಿಂದ ಮಾತ್ರ.
ಇದು ಬೆಂಗಳೂರಿನ ಕನಕಪುರ ರಸ್ತೆಯ ಹತ್ತಿರವಿದೆ. ಇದರ ವಿಸ್ತೀರ್ಣ ಸುಮಾರು 590 ಎಕರೆಗಳಿಷ್ಟರಬಹುದು. ಸರಕಾರವು ಇದನ್ನು ಮೀಸಲು ಅರಣ್ಯ ಎಂದು ಪರಿಗಣಿಸಿದೆ. ಬೆಂಗಳೂರಿನ ಸರಹದ್ದಿನಲ್ಲಿರುವ ಕಾಡು ಇದೊಂದೇ. ಇದು ಹಿಂದೆ ಆನೆಗಳ ಕಾರಿಡಾರ್ ಆಗಿತ್ತು. ಇಲ್ಲಿ ಸಾಕಷ್ಟು ಜೀವ ವೈವಿಧ್ಯವಿದೆ. ವಿಧವಿಧದ ಸಸ್ಯ ಸಂಕುಲವಿದೆ. ಹತ್ತಾರು ಬಗೆಯ ಪ್ರಾಣಿಪಕ್ಷಿಗಳಿವೆ. ನವಿಲು, ನರಿ, ಜಿಂಕೆ, ಮುಂಗುಸಿ, ಗೂಬೆ, ಹದ್ದು, ಕೋಗಿಲೆ , ಸರೀಸೃಪಗಳು ಮತ್ತು ಬಗೆಬಗೆಯ ಬಣ್ಣಬಣ್ಣದ ಚಿಟ್ಟೆಗಳನ್ನು ಕಾಣಬಹುದು.
ಕಾಡಿನಲ್ಲಿ ಬುಲ್‌ಡೋಜರ್ ಸದ್ದು!
ಈಗ ಒಮ್ಮಿಂದೊಮ್ಮೆಗೇ ಸರಕಾರದ ಇಲಾಖೆಗಳು ತುರಹಳ್ಳಿಯಲ್ಲಿ ‘ಟ್ರೀ ಪಾರ್ಕ್’ ನಿರ್ಮಿಸಲು ಕಾಮಗಾರಿ ಆರಂಭಿಸಿದ್ದಾರೆ! ಬೆಂಗಳೂರಿನ ಹತ್ತಿರದ ಅಪರೂಪದ ಸಹಜ ಕಾಡೆನಿಸಿರುವ ತುರಹಳ್ಳಿಯಲ್ಲಿ, ಮರಗಳನ್ನು ಕಡಿದು, ಬುಲ್ ಡೋಜರ್‌ನಿಂದ ನೆಲ ಹಸನುಗೊಳಿಸಿ, ಕೃತಕ ‘ಟ್ರೀಪಾರ್ಕ್’ ಮಾಡಲು ಹೊರಟಿದ್ದಾರೆ.
ಇದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದಾರೆ. ತುರಹಳ್ಳಿ ಕಾಡನ್ನು ಹಾಳುಮಾಡಲು ‘ಟ್ರೀ ಪಾರ್ಕ್’ ಹೆಸರಲ್ಲಿ
ಮತ್ತೊಂದು ಯೋಜನೆ ಬಂದಿದೆ ಎಂದು ಹಲವರ ಬಲವಾದ ಶಂಕೆ. ಆರಂಭದಲ್ಲಿ ಸಣ್ಣದಾಗಿ ಶುರುವಾಗುವ ಇಂತಹ ಯೋಜನೆಗಳು ಕ್ರಮೇಣ ಹೊಸಹೊಸ ಸರ್ಕಾರ, ಅಧಿಕಾರಿಗಳು ಬಂದಂತೆಲ್ಲಾ ಇಡೀ ಕಾಡನ್ನೇ ನುಂಗಿ ನೀರು ಕುಡಿಯುತ್ತವೆ.
ಕೇಳಿದರೆ ಇದು ಹಿಂದಿನ ಸರ್ಕಾರ ಪ್ರಾರಂಭಿಸಿದ ಯೋಜನೆಯೆಂದು ಒಬ್ಬರ ಮೇಲೊಬ್ಬರು ಆಪಾದಿಸುತ್ತಾರೆ. ಇದರ ಮಧ್ಯದಲ್ಲಿ ರಿಯಲ್ ಎಸ್ಟೇಟ್ ಕುಳಗಳು, ಜಮೀನು ನುಂಗುವ ಗ್ಯಾಂಗುಗಳು ತಲೆ ಎತ್ತಿ ಸಾಮಾನ್ಯ ಜನರ ದನಿಯನ್ನು ಅಡಗಿಸುತ್ತವೆ.
ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಈ ಪರಿಸರವಾದಿಗಳ ವಿರೋಧ ಇದ್ದದ್ದೇ ಎಂದು ಟೀಕಿಸುತ್ತಾ, ಇಂತಹ ಕಾಮಗಾರಿಗಳನ್ನು ಇಷ್ಟಪಡುವ ಪ್ರಭಾವಶಾಲಿ ಗುಂಪು ಸಹ ನಮ್ಮ ನಾಡಿನಲ್ಲಿದೆ! ಈ ಉದ್ದೇಶಿತ ಟ್ರೀ ಪಾರ್ಕ್‌ನಲ್ಲಿ ನಗರದ ಜನ ಓಡಾಡಲು, ಸಿಮೆಂಟಿನ ಪಾದಚಾರಿ ರಸ್ತೆ ನಿರ್ಮಿಸಲು ಒಂದಿಷ್ಟು ಮರಗಳನ್ನು ಕಡಿಯಲಾಗುತ್ತದೆ. ಅಲ್ಲಿಗೆ ಅರಣ್ಯ ಇಲಾಖೆಯ
‘ಕಾಡು ಬೆಳಸಿ ನಾಡು ಉಳಿಸಿ’ ಎಂಬ ಘೋಷಣಾ ವಾಕ್ಯಕ್ಕೆ ತರ್ಪಣ ಬಿಟ್ಟಂತೆ. ನಂತರ ಆ ಪ್ರಶಾಂತ ವಾತಾವರಣದಲ್ಲಿ
ಪರಿಸರ ಜಾಗೃತಿ ಎಂಬ ನೆಪದಲ್ಲಿ ಗ್ರಂಥಾಲಯ ಕಟ್ಟಡ, ಇತರ ಕಟ್ಟಡಗಳು ಮೇಲೇಳುತ್ತದೆ. ಆ ಗ್ರಂಥಾಲಯದಲ್ಲಿ ಕಾಡಿನ
ಬಗೆಗೆ, ಪಕ್ಷಿಸಂಕುಲಗಳ ಕುರಿತು, ಅವುಗಳ ಉಳಿಸುವ ಬಗೆಗೆ ನೂರಾರು ಪುಸ್ತಕಗಳನ್ನು ಇಡಲಾಗುತ್ತದೆ.
ವಾಕ್ ಮಾಡಿ ಸುಸ್ತಾದಾಗ ಕುಳಿತುಕೊಳ್ಳಲು ಅಲ್ಲಲ್ಲಿ ಬೆಂಚುಗಳ ನಿರ್ಮಾಣ. ಜತೆಗೆ ಕೆಫೆಟೇರಿಯಾ! ಆಗ ಇದು ಪಕ್ಷಿಗಳ ತಾಣವಾಗುವುದರ ಬದಲು ಪ್ರೇಮಿಗಳ ಪಿಸುಗುಟ್ಟುವಿಕೆಯ ತಾಣವಾಗುವುದೇ ಜಾಸ್ತಿ. ಸಣ್ಣದಾಗಿ ಶುರುವಾಗುವ ಕಾಫಿ ತಿಂಡಿ, ಜ್ಯೂಸ್, ಕ್ಯಾಂಟೀನ್, ಪಾನಿಪುರಿ ಅಂಗಡಿಗಳು. ಎಲ್ಲಾ ಕಡೆ ಪ್ಲಾಸ್ಟಿಕ್ ಕಪ್, ಬಾಟಲಿ, ಖಾಲಿ ಪಾಪ್ ಕಾರ್ನ್ ಪಟ್ಟಣಗಳು , ಚಿಪ್ಸ್ ಪೊಟ್ಟಣಗಳು, ಮತ್ತಾವುದೊ ಪ್ಯಾಕೆಟ್ಟುಗಳು ರಾಶಿರಾಶಿ ಬೀಳುತ್ತವೆ.
ಮುಂದೊಂದು ದಿನ ತುರಹಳ್ಳಿ ಮೀಸಲು ಅರಣ್ಯವಾಗಿತ್ತು ಎಂದು ಪುಸ್ತಕಗಳಲ್ಲಿ ಓದಬೇಕಷ್ಟೆ. ಅಚ್ಚರಿಯ ವಿಚಾರವೆಂದರೆ ಈ ಕೃತಕ ಟ್ರೀ ಪಾರ್ಕಿಗೆ ಹೆಸರು ‘ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್’ ಎಂಬ ಆಕರ್ಷಕ ಹೆಸರನ್ನಿಡುತ್ತಾರಂತೆ!
ಸಾಕಷ್ಟು ಒತ್ತುವರಿ
ಈಗಾಗಲೆ ತುರಹಳ್ಳಿ ಅರಣ್ಯದ ಕೆಲವು ಭಾಗ ಬೇರೆ ಉದ್ದೇಶಗಳಿಗೆ ಬಳಕೆಯಾಗಿದೆ, ಬಳಕೆಯಾಗುತ್ತಿದೆ. ಒತ್ತುವರಿಯಾಗಿ ವ್ಯವಸಾಯಕ್ಕೆ (ನಂತರ ಇವು ಬಡಾವಣೆಯಾಗಿ ಬದಲಾಗಿದೆ), ನಗರದ ಕಸವನ್ನು ಅಕ್ರಮವಾಗಿ ಸುರಿಯಲು, ಚಾರಣಗಳಿಗೆ, ಸೈಕಲ್ ಮತ್ತು ಬೈಕಿನಲ್ಲಿ ಸಂಚರಿಸಲು, ರಾಕ್ ಕ್ಲೈಂಬಿಂಗ್ ಮುಂತಾದ ಉದ್ದೇಶಕ್ಕೆ ಬಳಕೆಯಾಗಿದೆ.
2011ರಲ್ಲಿಯೇ ಸುಮಾರು 35 ಎಕರೆಗಿಂತಲೂ ಮಿಗಿಲಾದ ಪ್ರದೇಶದಲ್ಲಿ ವೃಕ್ಷೋದ್ಯಾಾನ (ಟ್ರೀ ಪಾರ್ಕ್) ತಲೆ ಎತ್ತಿದೆ. ವಿಷನ್ 2022 ಅಂಗವಾಗಿ ಸರ್ಕಾರ ಇನ್ನೂ ಸುಮಾರು 400 ಎಕರೆಯಷ್ಟು ತುರಹಳ್ಳಿ ಕಾಡನ್ನು ‘ವೃಕ್ಷೋದ್ಯಾನ’ ಮಾಡುವುದಾಗಿ ಘೋಷಿಸಿದೆ. ಕಬ್ಬನ್ ಪಾರ್ಕ್ ಮಾದರಿಯಲ್ಲಿ ಉದ್ಯಾನ ರೂಪಿಸುವ ಇರಾದೆ ಸರ್ಕಾರದ್ದಂತೆ. ಇದರ ಭಾಗವಾಗಿಯೇ ಫೆಬ್ರವರಿ ಮೊದಲ ವಾರದಲ್ಲಿ ಇಲ್ಲಿಯ ಬುಲ್ಡೋಝರ್ ಸದ್ದು ಪ್ರಾಣಿಪಕ್ಷಿಗಳನ್ನಲ್ಲದೆ ಪರಿಸರಪ್ರಿಯರ ನಿದ್ದೆ ಗೆಡಿಸಿತು. ಆಗಿಂದ ಪರಿಸರಾಸಕ್ತರು, ಮಕ್ಕಳು, ಸುತ್ತಮುತ್ತಲಿನ ನಿವಾಸಿಗಳು ಇಲ್ಲಿ ಮರದ ಉದ್ಯಾನ ಬೇಡವೇ ಬೇಡ, ತುರಹಳ್ಳಿ ಕಾಡನ್ನು ಪ್ರಾಣಿ ಪಕ್ಷಿಗಳಿಗಾಗಿ, ಮುಂದಿನ ನಮ್ಮದೇ ಪೀಳಿಗೆಗಾಗಿ ಹಾಗೆಯೇ ಬಿಟ್ಟು ಉಳಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
‘ಸೇವ್ ತುರಹಳ್ಳಿ ಫಾರೆಸ್ಟ್’ ಅಭಿಯಾನ ಪ್ರಾರಂಭವಾಗಿದ್ದು, ಟ್ವಿಟರ್, ಮಿಸ್ ಕಾಲ್ ಅಭಿಯಾನ ಕೂಡ ನಡೆದಿದೆ. ಕೆಲಸ ತಾತ್ಕಾಲಿಕ ಸ್ಥಗಿತ ಜನರ ಪ್ರತಿಭಟನೆಯ ನಂತರ ಇಲ್ಲಿನ ‘ಕಾಮಗಾರಿ’ ಈಗ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ರಾಜ್ಯ ವನ್ಯಜೀವಿ
ಮಂಡಳಿಯಿಂದ ಅನುಮತಿ ಪಡೆದಿಲ್ಲ, ಅರಣ್ಯ ಇಲಾಖೆ ವಿಸ್ತೃತ ವರದಿ ಸಿದ್ಧಪಡಿಸಿಲ್ಲ, ಅರಣ್ಯೇತರ ಚಟುವಟಿಕೆ ನಡೆಸುವುದು ಅರಣ್ಯ ಕಾಯಿದೆಯ ಉಲ್ಲಂಘನೆ ಎಂಬಿತ್ಯಾದಿ ಹಲವು ಅನುಮಾನಗಳ ಹುತ್ತವೂ ಬೆಳೆದಿದೆ. ಆದರೆ ಈ ಕಾರಣಗಳಿಗಾಗಿ ಮಾತ್ರ ವಿರೋಧ ಸೀಮಿತವಾದರೆ ಸರ್ಕಾರದ ಅಧೀನದಲ್ಲಿರುವ ಈ ಎಲ್ಲಾ ಇಲಾಖೆಗಳು ಅಗತ್ಯವಿರುವ ಎಲ್ಲಾ ಅನುಮತಿ ಪಡೆದೇ, ಕಾಮಗಾರಿ ಕೆಲಸ ಮುಂದುವರಿಯಬಹುದು.
ಹಾಗಾಗಿ ಸಾರಾ ಸಗಟಾಗಿ ಈ ಅರಣ್ಯದಲ್ಲಿ ಯಾವುದೇ ಚಟುವಟಿಕೆಗೆ ಅವಕಾಶ ಕೊಡದೆ, ಅರಣ್ಯವನ್ನು ಈಗ ಇದ್ದಂತೆಯೇ ರಕ್ಷಿಸಬೇಕೆಂದು ಹಲವು ಪ್ರಾಜ್ಞರು, ಪರಿಸರ ತಜ್ಞರು ಮತ್ತು ಸ್ಥಳೀಯರು ಹಕ್ಕೊತ್ತಾಯ ನಡೆಸಿದ್ದಾರೆ. ಆದರೆ ಈ ಕಾಲಮಾನದ ದುರಂತ ಏನೆಂದರೆ ಸರ್ಕಾರದ ಪ್ರತಿ ನಡೆಯನ್ನು, ನಿರ್ಧಾರವನ್ನು ಪ್ರಶ್ನಿಸುವ ವಿರೋಧ ಪಕ್ಷಗಳು, ತುರಹಳ್ಳಿ ಕಾಡು ಉಳಿಯಬೇಕೆಂಬ ವಿಷಯದಲ್ಲಿ ಮಾತ್ರ ಗಪ್ ಚುಪ್. ಯಾಕೆ ಇಂತಹ ನಿಗೂಢ ಮೌನ.
ಸೈಲೆಂಟ್ ವ್ಯಾಲಿ ಆಗಲಿ
ಈ ಹಿಂದೆ ಕೇರಳದ ಸೈಲೆಂಟ್ ವ್ಯಾಲಿ ಕಾಡನ್ನು ನಾಶಪಡಿಸುವ ಜಲವಿದ್ಯುತ್ ಯೋಜನೆಯನ್ನು ಕೊನೆಗೂ ಜನರ ವಿರೋಧಕ್ಕೆ ಮಣಿದು ಕೈಬಿಡಲಾಯಿತು. ಪರಿಸರ ಉಳಿಸುವ ಏಕೈಕ ಉದ್ದೇಶದಿಂದ ಅಂದು ಕೇಂದ್ರ ಸರಕಾರ ಆ ಕಾಡನ್ನು ಉಳಿಸಿತು. ಅದೇ ರೀತಿ ತುರಹಳ್ಳಿ ಕಾಡನ್ನು ಉಳಿಸಲು ಸರಕಾರ ಮನಸ್ಸು ಮಾಡಿದರೆ, ಪ್ರಾಣಿಪಕ್ಷಿಗಳು, ಪರಿಸರಪ್ರಿಯರು ಸಂತೋಷಗೊಂಡಾರು. ಮುಂದೆ ಯಾವ ಸರ್ಕಾರ ಬಂದರೂ, ಈ ಕಾಡನ್ನು ನಾಶಪಡಿಸದೇ ಉಳಿಯುವಂತಹ ಕಾನೂನು ಮಾಡಬೇಕು. ಪರಿಸರ
ಉಳಿಸಬೇಕು ಎಂದು ಸರಕಾರವೇ ಹೇಳುತ್ತಿದ್ದರೂ, ಈ ಕಾಡು ನಾಶ ಮಾಡಿದರೆ ಭರಿಸಲಾರದ ನಷ್ಟವಾಗುವುದೆಂಬ ಅರಿವಿದ್ದರೂ, ಸರಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಅದೊಂದು ದೊಡ್ಡ ದುರಂತವಾದೀತು. ಹಾಗಾಗದಿರಲಿ, ತುರಹಳ್ಳಿ ಕಾಡು ಉಳಿಯಲಿ!
ತುರಹಳ್ಳಿ ಉಳಿಯಲಿ
*ಬೆಂಗಳೂರಿನಲ್ಲಿ ಉಳಿದಿರುವ ಕಾಡಿನ ಕೊನೆಯ ಕೊಂಡಿ ತುರಹಳ್ಳಿ ಮೀಸಲು ಅರಣ್ಯ.
*ಇಂತಹ ಕಾಡಿಲ್ಲದಿದ್ದರೆ ಮುಂದೆ ಮಳೆರಾಯನೂ ಬೆಂಗಳೂರಿನ ಸುತ್ತಮುತ್ತ ಮುನಿಸಿಕೊಂಡಾನು.
*ಮನುಷ್ಯನಿಗೆ ಈಗಾಗಲೇ ಸಾಕಷ್ಟು ಸಾರ್ವಜನಿಕ ಪಾರ್ಕುಗಳಿವೆ. ಈ ಕಾಡಿಗೆ ಮನುಷ್ಯ ಕೈ ಹಾಕುವುದು ಬೇಡ.
*ಮಾನವ ತಾನಷ್ಟೆೆ ಬೆಳೆಯದೆ ಪ್ರಾಣಿಪಕ್ಷಿ ಸಂಕುಲಗಳನ್ನೂ ಉಳಿಸಿ ಬೆಳಸಬೇಕಿದೆ.
*ಇಲ್ಲಿರುವ ಅಪರೂಪದ ಅರಣ್ಯವನ್ನು ಉಳಿಸಿಕೊಳ್ಳಬೇಕಾದದ್ದು ಈ ನಗರವಾಸಿಗಳ ಕರ್ತವ್ಯ