Wednesday, 11th December 2024

ಕಾನೂನು ಎಂಬ ಕತ್ತೆಯಿಂದ ಒದೆಸಿಕೊಳ್ಳುವವರು ನಾವು

ನಾಡಿಮಿಡಿತ

ವಸಂತ ನಾಡಿಗೇರ

ಇತ್ತೀಚಿನ ಒಂದು ದಿನ. ಕಾರಿನಲ್ಲಿ ಹೋಗುತ್ತಿದ್ದೆವು. ಅದೊಂದು ಜಂಕ್ಷನ್‌ನಲ್ಲಿ ಪೊಲೀಸ್ ವಾಹನ ನಿಂತಿತ್ತು. ಅಲ್ಲಿದ್ದ
ಪೊಲೀಸರು ಗಾಡಿಯನ್ನು ಆದರದಿಂದ ಬರಮಾಡಿಕೊಂಡು ಸೈಡಿಗೆ ಹಾಕಿಸಿದರು. ತಕ್ಷಣವೇ, ಸೈನಿಕರಂತೆ ಡ್ರೆಸ್ ಧರಿಸಿದ್ದ ಮಾರ್ಷಲ್ ಒಬ್ಬರು ಬಂದರು. ಅವರ ಕೈಯಲ್ಲಿ ಬಿಲ್ಲಿಂಗ್ ಮಷಿನ್ ಇತ್ತು. ‘ನಿಮ್ಮ ಹೆಸರು, ಫೋನ್ ನಂಬರ್ ಹೇಳಿ’ ಎಂದರು.
‘ಮಾಸ್ಕ್ ಹಾಕಿಲ್ಲ 250 ರು. ದಂಡ ಕಟ್ಟಿ’ ಎಂದರು.

’ಕ್ಯಾಷಾ, ಕಾರ್ಡಾ, ಗೂಗಲ್ ಪೇ, ಫೋನ್ ಪೇ, ಭೀಮ್… ಯಾವುದರಲ್ಲಿ ಕಟ್ಟುತ್ತೀರಿ..’ ಎಂದು ಹೋಟೆಲ್‌ನಲ್ಲಿ ತಿಂಡಿಗಳ ಪಟ್ಟಿ ಥರ ಒಪ್ಪಿಸಿದರು. ಅದಕ್ಕೆ ನಾನು, ಕ್ಯಾಷ್ ಕಟ್ಟುತ್ತೇನೆ ಎಂದೆ. ಅಲ್ಲದೆ, ‘ನಾವು ಇಬ್ಬರಿದ್ದೇವೆ. 500ರು. ಅಲ್ವಾ’ ಅಂತ ಅಧಿಕ ಪ್ರಸಂಗಿಯ ಥರ ಕೇಳಿದೆ. ಅದಕ್ಕವರು, ‘ಇಲ್ಲ, ಕಾರಿನಲ್ಲಿ ಒಬ್ಬರಿದ್ದರೆ ದಂಡ ಇಲ್ಲ. ಇಬ್ಬರಿದ್ದರೆ ಮಾತ್ರ ಮಾಸ್ಕ್ ಧರಿಸದಿದ್ರೆ ದಂಡ. ಮೇಡಂ ಮಾಸ್ಕ್ ಹಾಕಿದ್ದಾರೆ. ನೀವು ಹಾಕಿಲ್ಲ. ಆದ್ದರಿಂದ 250 ರುಪಾಯಿ ಕಟ್ಟಿ ಸಾಕು ಎಂದು, ಕನ್ಸಿಷನ್ ಸಹಿತ ವಿವರಣೆ ಕೊಟ್ಟರು.

ನಾನು ಹಣ ಪಾವತಿ ಮಾಡಿ ಮುಂದೆ ಸಾಗಿದೆ. ಮೊದಲೆಲ್ಲ ಗ್ಯಾಸ್ ಏಜೆನ್ಸಿಯವರ ನಂಬರ್‌ಗೆ ಫೋನ್ ಮಾಡಿ ಸಿಲಿಂಡರ್ ರಿಫಿಲ್ ಬುಕ್ ಮಾಡಬೇಕಿತ್ತು. ಅನಂತರ ಆಯಾ ಕಂಪನಿಗಳಿಗೆ, ಅಂದರೆ ಇಂಡೇನ್, ಎಚ್.ಪಿ ಇತ್ಯಾದಿಗೆ ಅನುಸಾರವಾಗಿ ಒಂದು ನಿರ್ದಿಷ್ಟ ನಂಬರ್‌ಗೆ ಕರೆ ಮಾಡಿ ಸಿಲಿಂಡರ್ ತರಿಸಿಕೊಳ್ಳುವ ವ್ಯವಸ್ಥೆ ಆರಂಭವಾಯಿತು. ಆ ಪ್ರಕಾರ ನಡೆಯುತ್ತಿರಲಾಗಿ
ಇತ್ತೀಚೆಗೆ ಅದೇ ರೀತಿ ಸಿಲಿಂಡರ್ ಬುಕ್ ಮಾಡಲು ಹೋದರೆ, ನಂಬರ್ ಬದಲಾಗಿದೆ, ಹೊಸ ನಂಬರ್‌ಗೆ ಫೋನ್ ಮಾಡಿ ಎಂದು ಹೆಣ್ಣು ದನಿ ಉಲಿಯಿತು.

ಅಲ್ಲಿಯವರೆಗೆ ಫೋನ್ ಮಾಡಿದಾಗ ಬರುವ ಒಂದೆರಡು ಕೋವಿಡ್ ಸಂದೇಶ ಆಲಿಸಿದ ಬಳಿಕ ಒಂದನ್ನು ಒತ್ತಿ, ಎರಡನ್ನು ಒತ್ತಿ ಇತ್ಯಾದಿ ಪ್ರಕ್ರಿಯೆಯ ‘ಒತ್ತಿ’ಯಾಳಾಗಿದ್ದ ನಾನು ಹೊಸ ನಂಬರ್ ಸೇವ್ ಮಾಡಿಕೊಂಡು ಪ್ರಯತ್ನಿಸಿದರೆ, ಮತ್ತಾವುದೋ
ಮಾಹಿತಿಯನ್ನು ಹೊಸದಾಗಿ ಕೊಡಿ ಎಂಬ ವರಾತ. ಕೊನೆಗೆ ಬಗೆಹರಿಯದೆ ಗ್ಯಾಸ್ ಏಜೆನ್ಸಿಗೇ ಹೋದೆ. ಅಲ್ಲಿ ಅಸಡ್ಡೆಯೊಡನೆ ಮತ್ತೊಂದು ಎನ್‌ಕೌಂಟರ್. ಕೊನೆಗೂ ಆ ಕೆಲಸ ಮಾಡಿದಾಗ ಯುದ್ಧ ಗೆದ್ದ ಅನುಭವ.

ಇಂಥ ಅನುಭವಗಳು ನನಗಷ್ಟೇ ಅಲ್ಲ, ಎಲ್ಲರಿಗೂ ಆಗಿರುತ್ತದೆ. ಇದಕ್ಕಿಂತ ಭಿನ್ನ, ಭೀಕರ, ಘೋರವಾದ, ವಿಚಿತ್ರ, ವಿಕ್ಷಿಪ್ತವಾದ ಅನುಭವಗಳೂ ಆಗಿರಬಹುದು. ಒಂದು ಕಾನೂನು ಹಾಗೂ ವ್ಯವಸ್ಥೆಯನ್ನು ನೆಟ್ಟಗೆ ಮಾಡಲು ನಮಗೆ ಬರುವುದಿಲ್ಲವಾ ಎಂಬ ವಿಷಯ ನನಗೆ ಸದಾ ಕಾಡಿದೆ. ಬಾರಿ ಬಾರಿ ಅನುಭವಕ್ಕೆ ಬಂದಿದೆ. ಈ ವಿಚಾರವನ್ನು ಹಂಚಿಕೊಳ್ಳುವ ಇರಾದೆ ಅಷ್ಟೇ.
ಮತ್ತೆ ಮೇಲಿನ ಉದಾಹರಣೆಗಳಿಗೆ ಬರೋಣ. ನಾನು ನನ್ನ ಕಾರಿನಲ್ಲಿ ಸದಾ ಮಾಸ್ಕ್ ಇಟ್ಟಿರುತ್ತೇನೆ. ಹೋಗುವಾಗ ಅದನ್ನು ಧರಿಸಿರುತ್ತೆನೆ. ಆದರೆ ಮೂಗಿಗೆ ಏರಿಸಿರುವುದಿಲ್ಲ. ಇದಕ್ಕೆ ಕಾರಣ ನಾನೊಬ್ಬನೇ ಇರುವಾಗ ಮಾಸ್ಕ್ ಹಾಕಿಕೊಳ್ಳುವ ಅಗತ್ಯ ಇಲ್ಲ. ಆದರೆ ಮರೆಯಬಾರದು ಅಂತ ಇಟ್ಟುಕೊಂಡಿರುತ್ತೇನೆ.

ಮೂಗಿಗೆ ಏರಿಸಿಕೊಳ್ಳದಿರುವುದಕ್ಕೆ ಮತ್ತೊಂದು ಕಾರಣವೂ ಇದೆ. ಇದು ನನ್ನಂಥ ‘ಕನ್ನಡಕ’ ಕಂದರೆಲ್ಲರೂ ಎದುರಿಸುವ ಸಮಸ್ಯೆ. ಏನೆಂದರೆ ಹಾಗೆ ಮಾಡಿದಾಗ ನಮ್ಮ ಚಷ್ಮಾ ಮೇಲೆ ಉಸಿರಹಬೆ ಅಡರುತ್ತದೆ. ನೋಡಲು ಕಷ್ಟ ಆಗುತ್ತದೆ. ಕರೋನಾಗೆ
ಸ್ಪಷ್ಟ ಚಿಕಿತ್ಸೆ ಇಲ್ಲದಿರಬಹುದು, ಲಸಿಕೆ ಇನ್ನೂ ಸಿಗದಿರಬಹುದು. ಆದರೆ ಸ್ಪೆಕ್ಸ್‌ಮೇಕರ್‌ಗಳು ಈ ಸಮಸ್ಯೆಗೆ ಆಗಲೇ ಪರಿಹಾರ ಕಂಡುಹಿಡಿದಿದ್ದಾರೆ.

ಅದೆಂಥದೋ ಆಂಟಿ ಫಾಗ್ ಲೆನ್ಸ್ ಅಂತೆ. ಅದನ್ನು ಕೊಂಡು ಹಾಕ್ಕೊಂಡರೆ ಬಿಸಿಯುಸಿರ ಸಮಸ್ಯೆ ಆವಿಯಾಗಿ ಹೋಗುತ್ತದಂತೆ. ಅಂದರೆ ಪರಿಹಾರವಾಗುತ್ತದಂತೆ. ಅಂದರೆ ಈಗಿರುವ ಸ್ಪೆಕ್ಸ್ ಬಿಟ್ಟು ಹೊಸದನ್ನು ಖರೀದಿಸಬೇಕು. ಹಾಗೆ ಮಾಡುವುದಾದರೆ ಅದಕ್ಕೂ ಮೊದಲು ಐ ಕ್ಲಿನಿಕ್‌ಗೆ ಹೋಗಬೇಕು. ಯಾಕೆಂದರೆ ನಂಬರ್ ಏನಾದರೂ ಚೇಂಜ್ ಆಗಿದ್ದರೆ ? ಯಾವುದಕ್ಕೂ ಚೆಕ್
ಮಾಡಿಸಿಕೊಳ್ಳುವುದು ಒಳ್ಳೇದು. ಅಲ್ಲಿಗೆ ಕನ್ನಡಕ ಮಾರುವವವರಿಗೆ ಲಾಭ. ಇದನ್ನೆಲ್ಲ ನೋಡಿ, ಈ ಪಂಚಾಯ್ತಿಯೇ ಬೇಡ ಎಂದು ನಾನು ಮತ್ತು ನನ್ನಂಥವರು ಆದಷ್ಟು ಮೂಗಿನ ಕೆಳಗೆ ಇಟ್ಟುಕೊಳ್ಳುವುದು.

ಇದೇ ಅಭ್ಯಾಸವಾಗಿದ್ದು ನಮ್ಮ ಪಕ್ಕ ಇನ್ನೊಬ್ಬರು ಇದ್ದಾಗಲೂ ಅದರತ್ತ ಗಮನ ಹೋಗುವುದು ಕಡಿಮೆ. ಹಾಗೆಂದು ಇದು ರಿಯಾಯಿತಿ ಕೇಳಲು ಕಾರಣ, ನೆಪ ಅಲ್ಲ. ಆ ಮಾತು ಬೇರೆ. ಅತ್ತಕಡೆ ನನ್ನ ಪತ್ನಿ ಮಾಸ್ಕ್ ಧರಿಸುವುದನ್ನು ಇಷ್ಟಪಡುವುದಿಲ್ಲ.
ಯಾಕೆಂದರೆ ಉಸಿರುಗಟ್ಟಿದ ಅನುಭವ ಆಗುವುದಂತೆ. ಹೀಗೆ ಮಾಡುತ್ತಿದ್ದರೆ ಒಮ್ಮೆ ಪೊಲೀಸರ ಕೈಗೆ ಸಿಗುವುದು ಗ್ಯಾರಂಟಿ ಎಂದು ಆಗಾಗ ಎಚ್ಚರಿಸಿ ಮಾಸ್ಕ್ ಹಾಕಿಕೊಳ್ಳಲು ತಿಳಿಸುತ್ತಿದೆ. ಆ ದಿನವೂ ಹಾಗೇ ಆಯಿತು. ಪೊಲೀಸಪ್ಪ ನಮ್ಮನ್ನು ಸೈಡಿಗೆ ಕರೆದಾಗ
ಅಭ್ಯಾಸಬಲದಂತೆ ನನ್ನ ಮಾಸ್ಕ್ ಕೆಳಗಿಳಿದಿತ್ತು. ಆದರೆ ಪೊಲೀಸರನ್ನು ನೋಡುತ್ತಿದ್ದಂತೆ ಮಾಸ್ಕು ನನ್ನ ಪತ್ನಿಯ ಮೂಗಿನ ಮೇಲೇರಿಯಾಗಿತ್ತು. ನಾನು ಮಾತ್ರ ವಿಲನ್ ಆಗಿದ್ದೆ. ಆದರೆ ಯಾವುದೇ ಕಾರಣ, ಸಬೂಬು ಹೇಳದೆ ದಂಡ ಕಟ್ಟಿದ್ದಾಯಿತು.

ಮುಂದಿನ ವಿಚಾರಗಳನ್ನು ಹೇಳುವ ಮೊದಲು ಈ ವಿಷಯವನ್ನು ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಮಾಸ್ಕ್ ವಿರೋಧಿಯಲ್ಲ. ಈಗಿನ ಲೆಕ್ಕದಲ್ಲಿ ಹೊರಗಡೆ ಹೋದಾಗ ಮಾಸ್ಕ್ ಧರಿಸದೆ ವಿಧಿಯಿಲ್ಲ ಎಂಬುದನ್ನು ಸಾರ್ವತ್ರಿಕವಾಗಿ ಒಪ್ಪಿಕೊಂಡಿರುವಾಗ ಎಲ್ಲರೂ ಧರಿಸುವುದು ಒಳ್ಳೆಯದು. ಅಲ್ಲದೆ ಈ ನಿಟ್ಟಿನಲ್ಲಿ ಕಾನೂನು ಮಾಡಿದರೆ ಅದನ್ನು ಪಾಲಿಸುವುದು
ಸಾಧುವಾದುದು. ಅದು ಸಾಧ್ಯವೂ ಹೌದು. ದೇಶಾದ್ಯಂತ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಳ; ಕರೋನಾ ಎರಡನೇ ಅಲೆ ಬರುತ್ತದೆಯಂತೆ; ಇನ್ನೂ ಸೂಕ್ತ ಚಿಕಿತ್ಸೆ ಇಲ್ಲ, ವ್ಯಾಕ್ಸೀನ್ ಬರುವವರೆಗೆ ಎಚ್ಚರಿಕೆಯಿಂದ ಇರಬೇಕು; ಲಾಕ್‌ಡೌನ್ ತೆರವಾಗಿದೆ,
ಮದುವೆ ಸೀಸನ್.

ಹೀಗಾಗಿ ಕರೋನಾ ಹರಡುವ ಅಪಾಯ ಹೆಚ್ಚು – ಈ ರೀತಿಯ ಸುದ್ದಿಗಳನ್ನು ದಿನನಿತ್ಯ ಓದುತ್ತಿದ್ದೇವೆ, ಕೇಳುತ್ತಿದ್ದೇವೆ. ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಮತ್ತೆ, ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಅಂತರ ಕಾಯ್ದುಕೊಕೊಳ್ಳುವುದೇ ನಮಗಿರುವ ಉಪಾಯ ಎಂಬುದನ್ನೂ ಪದೇ ಪದೆ ಹೇಳಲಾಗುತ್ತಿದೆ. ಮಾಸ್ಕ್ ಧರಿಸದೆ ಓಡಾಡಿದರೆ ದಂಡ ಮಾತ್ರವಲ್ಲದೆ ಜೈಲು ಶಿಕ್ಷೆ ವಿಽಸಲೂ ದೆಹಲಿ ಮತ್ತಿತರ ಸರಕಾರಗಳು
ಚಿಂತಿಸುತ್ತಿವೆಯಂತೆ. ಆ ಪ್ರಕಾರ ನಮ್ಮ ರಾಜ್ಯದಲ್ಲೂ ಹಲವರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಪ್ಪೇನಿಲ್ಲ.

ಆದರೆ ಮಾಸ್ಕ್ ಕಡ್ಡಾಯವನ್ನು ಅದೆಷ್ಟು ಬಾರಿ ಮಾಡಲಾಗಿದೆಯೋ ಎಂಬುದು ಬಹುಷಃ ಅವರಿಗೇ ಗೊತ್ತಿರಲಿಕ್ಕಿಲ್ಲ. ಮಾಸ್ಕ್ ಧರಿಸದಿದ್ದರೆ ೧೦೦೦ ರುಪಾಯಿ ದಂಡ ಎಂದು ಒಂದು ಬಾರಿ ಒಮ್ಮೆಲೇ ಪ್ರಕಟಿಸಲಾಯಿತು. ಇದು ಅಮಾನವೀಯ, ಕ್ರೂರ,
ದುಡ್ಡು ಮಾಡುವ ಹುನ್ನಾರ ಎಂದೆಲ್ಲ ವಿರೋಧ, ಟೀಕೆ ಕೇಳಿಬಂದಾಗ ರಾತ್ರೋ ರಾತ್ರಿ ದಂಡದ ಮೊತ್ತವನ್ನು 250
ರುಪಾಯಿಗೆ ಇಳಿಸಲಾಯಿತು.

ಈಗಲೂ ಅದೇ ಜಾರಿಯಲ್ಲಿದೆ. ಇದೇನೊ ಸರಿ. ಆದರೆ ದಂಡದ ಮೊತ್ತವನ್ನು 1000 ರುಪಾಯಿಗೆ ಹೆಚ್ಚಿಸುವಾಗ ಯಾವ ಮಾನ ದಂಡ ಅನುಸರಿಸಿದ್ದು, ಯಾರ ಸಲಹೆಯ ಮೇರೆಗೆ ಹಾಗೆ ಮಾಡಿದ್ದು? ಹೋಗಲಿ. ಎಲ್ಲವನ್ನೂ ಯೋಚಿಸಿಯೇ ನಿರ್ಧಾರ ಮಾಡಿದ್ದಾಗಿದ್ದರೆ ಅದನ್ನು ಮರುಪರಿಶೀಲನೆ ಮಾಡುವುದು ಯಾಕೆ? ಮತ್ತೊಂದು ಸೋಜಿಗದ ವಿಷಯ. ಮನೆಯಲ್ಲಿ ಕುಟುಂಬ ಸದಸ್ಯರೆಲ್ಲ ಒಟ್ಟಿಗೇ ಇರುತ್ತಾರೆ. ಸಾಮಾನ್ಯವಾಗಿ ಅಲ್ಲಿ ಮಾಸ್ಕ್ ಧರಿಸಿರುವುದಿಲ್ಲ. ಅದೇರೀತಿ ಹೊರಗೆ ಹೋಗುವ ಪ್ರಸಂಗ ಬಂದಾಗ ಒಟ್ಟಿಗೇ ಒಂದೇ ಕಾರಿನಲ್ಲಿ ಹೋಗುವುದು ತಾನೇ? ಆದರೆ ಕಾನೂನು ಹಾಗಲ್ಲ.

ಮನೆಯಲ್ಲಿ ಏನೇ ಮಾಡಿದರೂ ಅಡ್ಡಿ ಇಲ್ಲ. ಆದರೆ ಹೊರಗೆ ಬಂದಾಗ ಮಾತ್ರ ಕುಟುಂಬದ ಲೆಕ್ಕ ಬರುವುದಿಲ್ಲ. ಒಬ್ಬರು, ಇಬ್ಬರು ಎಂಬ ಸಂಖ್ಯೆಯ ಲೆಕ್ಕ ಮಾತ್ರ. ಈ ರೀತಿಯ ಕಾನೂನನ್ನು ಹೇಳಿಕೊಟ್ಟವರು ಯಾರು? ಇವೆಲ್ಲ ಉತ್ತರವಿಲ್ಲದ ಪ್ರಶ್ನೆಗಳು. ಆದರೆ ಕಾನೂನು ಎಂದರೆ ಕಾನೂನು. ವಿಚಿತ್ರ ಆದರೂ ಸತ್ಯ. ಇನ್ನು ಗ್ಯಾಸ್ ವಿಚಾರ. ಗ್ಯಾಸ್ ದುರ್ಬಳಕೆ ತಡೆ ಇತ್ಯಾದಿ ಪರಿಗಣಿಸಿ ಒಂದೇ ನಂಬರ್‌ಗೆ ಕರೆಮಾಡಬೇಕು ಎಂಬ ವ್ಯವಸ್ಥೆ ಜಾರಿಗೆ ತಂದರು. ಆದರೆ ಒಮ್ಮೆ ಒಂದು ನಂಬರ್‌ನಿಂದ ಕರೆ ಮಾಡಿ ಗ್ಯಾಸ್ ಬುಕ್ ಮಾಡಿದರೆ ಆ ನಂಬರ್ ನೋಂದಣಿ ಆಗಿಬಿಡುತ್ತದೆ. ಬೇರೆ ಯಾವ ನಂಬರಿನಿಂದಲೂ ಗ್ಯಾಸ್ ಬುಕ್ ಮಾಡುವುದು
ಅಸಾಧ್ಯ. ಇದರ ಹಿಂದಿನ ಲಾಜಿಕ್ ಏನೋ ಅರ್ಥವಾಗದು. ಅಥವಾ ಅದನ್ನು ಯಾರೂ ವಿವರಿಸಿ, ಬಿಡಿಸಿ ಹೇಳುವುದಿಲ್ಲ.

ಇಂದಿನಿಂದ ಈ ವ್ಯವಸ್ಥೆ ಎಂದು ಪ್ರಕಟಣೆ ಹೊರಡಿಸಿದರೆ ಉಂಟು. ಇಲ್ಲದಿದ್ದರೆ ಹಾಗೆಯೇ ಅದು ಜಾರಿಗೆ ಬಂದು ಬಿಡುತ್ತದೆ. ಈ ಬಾರಿ ನಂಬರ್ ಬದಲಾವಣೆ ಮಾಡಿದಾಗಲೂ ಅಷ್ಟೆ. ನಾವು ಹಳೆಯ ನಂಬರ್‌ಗೆ ಕರೆ ಮಾಡಿದಾಗ, ‘ನಂಬರ್ ಬದಲಾವಣೆ ಆಗಿದೆ’ ಎಂಬ ಸಂದೇಶ. ಆ ಪ್ರಕಾರ ಹೊಸ ನಂಬರಿಗೆ ಕರೆ ಮಾಡಿದರೆ ಮತ್ತಿನ್ನೇನೋ ವಿವರ ಕೇಳುತ್ತಾರೆ. ಅದು ಗೊತ್ತಿರುವುದಿಲ್ಲ. ಒಂದು ರೀತಿ ಡೆಡ್ ಎಂಡ್. ಬೇರೆ ದಾರಿ ಇಲ್ಲದೆ ಗ್ಯಾಸ್ ಏಜೆನ್ಸಿಗೆ ಹೋದರೆ ಅಲ್ಲಿಯದು ಬೇರೆಯೇ ಕಥೆ. ನಮ್ಮ ಗ್ಯಾಸ್ ಏಜೆನ್ಸಿಯವರು ಒಳಗೇ ಬಿಡಲಿಲ್ಲ. ಏಕೆ ಎಂದು ಕೇಳಿದರೆ ಉತ್ತರವಿಲ್ಲ. ಗೇಟಿನ ಹೊರಗೆ ನಾಯಿಯಂತೆಯೋ, ಭಿಕ್ಷುಕರಂತೆಯೋ  ಅಸಹಾಯಕ ರಾಗಿ ಕಾಯಬೇಕು. ಕೊನೆಗೆ ಯಾರೋ ಒಬ್ಬರು ಬಂದಾಗ ಅವರಿಗೆ ಎಲ್ಲವನ್ನೂ ವಿವರಿಸಬೇಕು.

ಅಷ್ಟೊತ್ತಿಗೆ ಅಲ್ಲಿದ್ದ ಮತ್ತೊಬ್ಬ ಗ್ರಾಹಕ ಮತ್ತೊಂದು ವಿಷಯ ಕೇಳುತ್ತಾನೆ. ಆತನ ಗಮನ ಆ ಕಡೆ ಹೋಗುತ್ತದೆ. ನಮ್ಮ ಕೆಲಸ
ಅಲ್ಲಿಗೇ ನಿಲ್ಲುತ್ತದೆ. ಮತ್ತೊಮ್ಮೆ ಸರ್, ಎಂದಾಗ ಮತ್ತೆ ನಮ್ಮತ್ತ ಅವರ ಚಿತ್ತ ಹರಿಯುತ್ತದೆ. ಅಷ್ಟೊತ್ತಿಗೆ ಇನ್ನೊಬ್ಬರ ಕರೆ. ಹೀಗೇ ಸಾಗುತ್ತದೆ. ನಮ್ಮ ಕೆಲಸವನ್ನು ಮಾಡಿಕೊಂಡು ಬರುವಾಗ ಸಾಕುಬೇಕಾಗಿರುತ್ತದೆ. ವ್ಯವಸ್ಥೆಯ ಬಗ್ಗೆ ರೇಜಿಗೆ ಹುಟ್ಟುತ್ತದೆ. ಇಲ್ಲೂ ಅಷ್ಟೆ. ಹೊಸ ವ್ಯವಸ್ಥೆ ಜಾರಿಗೆ ತರುವಾಗ ಅದಕ್ಕೆ ವ್ಯಾಪಕ ಪ್ರಚಾರ ನೀಡಬೇಕಲ್ಲವೆ. ಆ ವಿವರ ನೀಡುವುದು ಕಷ್ಟ
ಎಂದಾದರೆ ಅದನ್ನು ಪರಿಹರಿಸಬೇಕು.

ಇದಾವುದೂ ಇಲ್ಲದೆ ಹೊಸ ಉಪಕ್ರಮ ಜಾರಿಗೆ ಬಂದರೆ ಅದರಿಂದ ತೊಂದರೆಯಾಗುವುದು ಗ್ರಾಹಕರು, ಅಂದರೆ ಜನರಿಗೇ
ಹೊರತು ಗ್ಯಾಸ್ ಎಜೆನ್ಸಿಯವರಿಗಾಗಲೀ, ಗ್ಯಾಸ್ ಕಂಪನಿಗಳಿಗಾಗಲೀ ಅಲ್ಲ. ಅಲ್ಲದೆ ಸಂಶಯ ಬಂದಾಗ ಅದನ್ನು ಪರಿಹರಿಸಲು ಏಜೆನ್ಸಿ ಕಚೇರಿಗೆ ಹೋದರೆ ಅಲ್ಲಿ ನಮ್ಮನ್ನು ನಿಕೃಷ್ಟವಾಗಿ ನೋಡಿದರೆ ಹೇಗೆ ಅನಿಸುತ್ತದೆ. ಹೊಸ ವ್ಯವಸ್ಥೆ ಏನು ಎತ್ತ ಎಂದು ತಿಳಿಯದೆ ನನ್ನಂತೆ ಅನೇಕ ಗ್ರಾಹಕರು ಅಲ್ಲಿ ಬಂದು ವಿಚಾರಿಸುತ್ತಿದ್ದರು.

ಆದರೆ ಯಾರಿಗೂ ಸೌಜನ್ಯದ ಉತ್ತರ ಇರಲಿಲ್ಲ. ಈ ರೀತಿಯ ಇನ್ನೂ ಅನೇಕಾನೇಕ ಉದಾಹರಣೆಗಳನ್ನು ಕೊಡುತ್ತ ಹೋಗ ಬಹುದು. ಇನ್ನು ಮೇಲೆ ಎಲ್ಲ ದಾಖಲೆಗಳೂ ಆನ್‌ಲೈನ್‌ನಲ್ಲೆ ಅಂತ ಹೇಳುತ್ತಾರೆ. ಆದರೆ ಆ ವೆಬ್‌ಸೈಟೊ ಮತ್ತೊಂದೋ ಓಪನ್ ಆಗುವುದೇ ಇಲ್ಲ. ಕೇಳಿದರೆ ಸರ್ವರ್ ಪ್ರಾಬ್ಲಮ್ಮೋ, ಇನ್ನೇನೊ ಹೇಳುತ್ತಾರೆ. ಯಾವುದೋ ಸಹಾಯವಾಣಿ ಎಂದು ಆರಂಭಿಸು ತ್ತಾರೆ ಎಂದಿಟ್ಟುಕೊಳ್ಳಿ. ಅದಕ್ಕೆ ಕರೆ ಮಾಡಿದರೆ ಅಲ್ಲಿ ಫೋನ್ ಸ್ವೀಕರಿಸುವವವರು ಇರುವುದೇ ಇಲ್ಲ. ಮತದಾರರ ಪಟ್ಟಿಗೆ ಮಿಂಚಿನ ನೋಂದಣಿ ಎಂದು ದೊಡ್ಡದಾಗಿ ಪ್ರಚಾರ ಮಾಡುತ್ತಾರೆ.

ಸಂಬಂಧಪಟ್ಟ ಕಚೇರಿಗೆ ಹೋದರೆ ಅಲ್ಲಿ ಹೇಳುವವವರು ಕೇಳುವವರು ಯಾರೂ ಇರುವುದಿಲ್ಲ. ಅಥವಾ ಅವರು ಹೇಳಿದ್ದೇ ಖರೆ. ಹೆಚ್ಚೇನನ್ನಾದರೂ ಕೇಳಿದರೆ ನಮಗೆ ಗೊತ್ತಿಲ್ಲ ಎಂಬ ಸಿದ್ಧ ಉತ್ತರ. ಹೀಗೆ ಎಲ್ಲವನ್ನೂ ಆನ್‌ಲೈನ್, ಡಿಜಿಟಲ್ ಎಂದು
ಮಾಡಲಾಗುತ್ತಿದೆ. ಆದರೆ ತಕ್ಕ ಪೂರಕ ವ್ಯವಸ್ಥೆ, ಸೌಲಭ್ಯಗಳಿರುವುದಿಲ್ಲ. ಬಹುತೇಕ ಜನರಿಗೂ ಇವುಗಳ ಉಪಯೋಗದ ಅರಿವು ಇರುವುದಿಲ್ಲ. ಇತ್ತಕಡೆ ಆಫ್‌ ಲೈನ್ ಕೂಡ ಆಫ್‌ ಆಗಿರುತ್ತದೆ. ಇದರಿಂದ ಕೊನೆಗೆ ತೊಂದರೆಗೆ ಒಳಗಾಗುವುದು ಜನರೇ. ಈ ಎಲ್ಲ ಪ್ರಕರಣಗಳ ಮುಖ್ಯಾಂಶ ಅಂದರೆ ರೂಲ್ಸ್ ರೂಲ್ಸ್ ರೂಲ್ಸ್. ಸರಕಾರ ಕಾನೂನು ಮಾಡುತ್ತೆ.

ಎಲ್ಲರೂ ಅದನ್ನು ಪಾಲಿಸಬೇಕು. ಯಾಕೆ ಎಂದು ನಾವು ಕೇಳುವ ಹಾಗಿಲ್ಲ. ಹೀಗೆ ಎಂದು ಅವರು ಅವರು ಹೇಳುವುದಿಲ್ಲ. ಯಾಕೆ ಹೀಗೆ ಎಂಬ ಪ್ರಶ್ನೆ ಈ ರೀತಿಯ ಸಮಸ್ಯೆಯಾದಾಗಲೆಲ್ಲ ಕಾಡಿದೆ. ಆದರೆ ಕಾನೂನುಗಳಲ್ಲಿ ಎಷ್ಟೇ ಅಪಸವ್ಯಗಳಿರಲಿ, ಲೋಪ ದೋಷಗಳಿರಲಿ. ಅವರು ಮಾಡಿದ ಮೇಲೆ ಆಯಿತು. ನಮ್ಮಂಥ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲ ಕಾನೂನುಗಳು ಪ್ರಜಾಸತಾತ್ಮಕ ರೀತಿಯಲ್ಲಿ, ಪಾರದರ್ಶಕ ರೀತಿಯಲ್ಲಿ ಆಗಬೇಕು. ಆದರೆ ಆಗುತ್ತಿಲ್ಲ. ಇಲ್ಲಿ ಗ್ರಾಹಕರಿಗೆ ಅಂದರೆ ಜನಸಾಮಾನ್ಯರಿಗೆ, ಅವರ ಅಭಿಪ್ರಾಯಗಳಿಗೆ ವುದೇ ಕಿಮ್ಮತ್ತಿಲ್ಲ. ಸಲಹೆಗಳನ್ನು ಕೊಟ್ಟರೂ ಯಾರೂ ಕೇಳುವುದಿಲ್ಲ. ಇದು ನಿಜಕ್ಕೂ ದುರಂತ.

ನಾಡಿಶಾಸ್ತ್ರ
ಕಾನೂನು ಕಟ್ಟಳೆಗಳ ಹೊರೆ
ಅವುಗಳಿಗಿಲ್ಲ ವಿವೇಚನೆಯ ಗೆರೆ
ಜನರಿಗೆ ಮಾತ್ರ ಬರಿ ಬರೆ
ಆಡಳಿತಗಾರರು ಇದನರಿಯರೆ ?