Wednesday, 11th December 2024

ಆಸ್ತಿ ಪಾಲು ನೀಡದ ಪತಿಯ ವಿರುದ್ದ ಸಂಚು: ಪತ್ನಿ ಬಂಧನ

ತಿರುವನಂತಪುರಂ: ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದಲ್ಲಿ ತನ್ನ ಪತಿಯ ಆಹಾರಕ್ಕೆ ಮಾದಕವಸ್ತು ನೀಡಿದ ಆರೋಪದಲ್ಲಿ  ಮಹಿಳೆಯನ್ನು ಬಂಧಿಸಲಾಗಿದೆ. ಪತಿ ಸತೀಶ್ (38 ವ) ನೀಡಿದ ದೂರಿನ ಮೇರೆಗೆ ಆಶಾ (36 ವ) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ದಂಪತಿಗಳು 2006 ರಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ತನ್ನ ವ್ಯವಹಾರದಲ್ಲಿ ಕಷ್ಟಪಡುತ್ತಿದ್ದ ಸತೀಶ್, ನಂತರ ಐಸ್ ಕ್ರೀಮ್ ಉದ್ಯಮ ಆರಂಭಿಸಿ ದ್ದರು. 2012 ರಲ್ಲಿ, ದಂಪತಿಗಳು ಪಾಲಕ್ಕಾಡ್‌ನಲ್ಲಿ ತಮ್ಮ ಸ್ವಂತ ಮನೆ ಖರೀದಿಸಿದರು.

ಆಶಾ ಕ್ಷುಲ್ಲಕ ವಿಚಾರಕ್ಕೆ ಸತೀಶ್ ಜೊತೆ ಜಗಳವಾಡುತ್ತಿದ್ದಳು. ಸಮಯ ಕಳೆದಂತೆ, ಸತೀಶ್ ಅವರು ಬಹಳ ಸುಸ್ತಾಗುತ್ತಿದ್ದರು. ವೈದ್ಯರನ್ನು ಸಂಪರ್ಕಿಸಿದ ವೇಳೆ ಅವರು ಸಕ್ಕರೆ ಅಂಶ ಕಡಿಮೆಯಾಗಿರುವುದು ಸುಸ್ತಿಗೆ ಕಾರಣವಾಗಿರಬಹುದು ಎಂದು ಸಲಹೆ ನೀಡಿದ್ದರು. ಆದರೆ, ಔಷಧ ಸೇವಿಸಿದರೂ ಸತೀಶ್ ಆರೋಗ್ಯ ಸುಧಾರಿಸಿರಲಿಲ್ಲ.

2021ರ ಸೆಪ್ಟೆಂಬರ್ ನಂತರ ಸತೀಶ್ ಅವರು ಮನೆಯ ಆಹಾರ ಸೇವಿಸುವುದನ್ನು ತಪ್ಪಿಸಿಕೊಂಡರು, ನಂತರ ಕ್ರಮೇಣ ಆರೋಗ್ಯ ಸ್ಥಿತಿ ಸುಧಾರಿಸ ತೊಡಗಿತು. ಅನುಮಾನಗೊಂಡು, ಆಶಾ ಆಹಾರಕ್ಕೆ ಯಾವುದಾದರೂ ಔಷಧವನ್ನು ಸೇರಿಸುತ್ತಿದ್ದಾಳೆಯೇ ಎಂದು ಪತ್ತೆ ಮಾಡಲು ಸ್ನೇಹಿತನ ಸಹಾಯ ಕೇಳಿದ್ದ.

ಸತೀಶ್ ಸ್ನೇಹಿತ ಆಶಾಳನ್ನು ಸಂಪರ್ಕಿಸಿದಾಗ, ಅವಳು ಸತೀಶ್‌ ನ ಆಹಾರಕ್ಕೆ ಮಾದಕ ವಸ್ತುವೊಂದನ್ನು ಸೇರಿಸುತ್ತಿದ್ದ ವಿಚಾರ ಹೇಳಿದ್ದಳು.

ಪೊಲೀಸರ ಪ್ರಕಾರ, ಸತೀಶ್ ಕಚೇರಿಗೆ ಕೊಂಡೊಯ್ಯುತ್ತಿದ್ದ ಆಹಾರ ಮತ್ತು ನೀರಿಗೂ ಸಹ ಪತ್ನಿ ಡ್ರಗ್ ಬೆರೆಸಿದ್ದಳು. ಎಲ್ಲಾ ಆಸ್ತಿಯನ್ನು ತನ್ನ ಕುಟುಂಬ ಸದಸ್ಯರು ಮತ್ತು ಸಹೋದರರಿಗೆ ನೀಡುವುದಾಗಿ ಹೇಳಿದ್ದಾನೆ ಎಂದು ಆಶಾ ಪೊಲೀಸರ ಬಳಿ ಹೇಳಿಕೆ ನೀಡಿದ್ದಾಳೆ.