Monday, 8th March 2021

ನಮ್ಮ ನಡಿಗೆ ನಭದ ಕಡೆಗೆ

ವಿದೇಶವಾಸಿ

ಕಿರಣ್‌ ಉಪಾಧ್ಯಾಯ ಬಹ್ರೈನ್‌

ಕಳೆದ ವಾರದ ಅಂಕಣದಲ್ಲಿ ಬುರ್ಜ್ ಖಲೀಫಾ ವಿಷಯ ಬರೆದಿದ್ದಕ್ಕೆ ಪ್ರತಿಕ್ರಿಯಿಸಿದ ಕೆಲವರು ಗಗನಚುಂಬಿ ಕಟ್ಟಡಗಳ ವಿಷಯ ದಲ್ಲಿ ಇನ್ನಷ್ಟು ಮಾಹಿತಿ ಕೇಳಿದ್ದಾರೆ. ನನಗೆ ತಿಳಿದ ಮಾಹಿತಿ ನೀಡುವ ಮೊದಲು, ದುಬೈನಲ್ಲಿರುವ ಮಿತ್ರ, ಸಿವಿಲ್ ಎಂಜಿನಿಯರ್
ರತ್ನಾಕರ ಮರ್ ನೀಡಿದ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಳ್ಳಲೇಬೇಕು.

ಜೋರಾಗಿ ಬೀಸುವ ಗಾಳಿಯ ಒತ್ತಡಕ್ಕೆ ಬುರ್ಜ್ ಖಲೀಫಾ ಕಟ್ಟಡ ಎರಡು ಮೀಟರ್‌ನಷ್ಟು ಓಲಾಡುವಂತೆ ವಿನ್ಯಾಸಗೊಳಿಸ ಲಾಗಿದೆಯಂತೆ. ಬಾತ್ ಟಬ್ ನಲ್ಲಿರುವ ನೀರು ಆಚೀಚೆ ಸಿಡಿಯುವಾಗ ಈ ಅನುಭವವಾಗುತ್ತದೆ ಹೊರತು ಸಾಧಾರಣವಾಗಿ
ಅನುಭವಕ್ಕೆ ಬರುವಂಥದ್ದಲ್ಲ. ಸ್ವತಃ ಎಂಜಿನಿಯರ್ ಆದ ಮರ್, ಬಹ್ರೈನ್ ದೇಶದ ಅತಿ ಎತ್ತರದ ಕಟ್ಟಡವಾದ ‘-ನಾನ್ಶಿಯಲ್ ಹಾರ್ಬರ್’ನ ನಿರ್ಮಾಣಕಾರ್ಯದಲ್ಲಿಯೂ ಭಾಗಿಯಾದವರು.

ಈ ಕಟ್ಟಡವೂ ನಲವತ್ತು ಮಿಲಿಮೀಟರ್ ವಾಲುತ್ತದೆ ಎನ್ನುತ್ತಾರೆ ಮರ್. ಅಂದಹಾಗೆ, 53 ಮಹಡಿಯುಳ್ಳ ಈ ಕಟ್ಟಡದ ಎತ್ತರ 260 ಮೀಟರ್. ಹಾಗೆ ನೋಡಿದರೆ ಎತ್ತರದ ಸ್ಥಾವರ ನಿರ್ಮಾಣದ ಕಾರ್ಯ ನಿನ್ನೆ ಮೊನ್ನೆಯದಲ್ಲ. ಕ್ರಿ. ಪೂ. 2560 ರಲ್ಲಿ
ಈಜಿಪ್ಟ್‌ನ ಗೀಜಾ ಪಿರಾಮಿಡ್‌ಗಳು ಮಾನವ ನಿರ್ಮಿತ ಎತ್ತರದ ಸ್ಥಾವರಗಳು. 146 ಮೀಟರ್ ಎತ್ತರದ ಈ ಪಿರಾಮಿಡ್ ಸುಮಾರು 3800 ವರ್ಷ ಈ ದಾಖಲೆ ಹೊಂದಿತ್ತು. ಈ ದಾಖಲೆ ಮೊದಲು ಮುರಿದದ್ದು 1311 ರಲ್ಲಿ 160 ಮೀಟರ್ ಎತ್ತರದ ಲಿಂಕನ್ ಕೆಥೆಡ್ರಲ್ ನಿರ್ಮಾಣಗೊಂಡಾಗ.

ಇದೂ ಕೂಡ ಸುಮಾರು 238 ವರ್ಷಗಳ ಕಾಲ ವಿಶ್ವದ ಎತ್ತರದ ಸ್ಥಾವರ ಎಂಬ ದಾಖಲೆ ಹೊಂದಿತ್ತು. ಆ ದಿನಗಳಲ್ಲಿ ಎತ್ತರದ ಸ್ಥಾವರಗಳು ಎಂದರೆ ಕೆಥೆಡ್ರಲ್ ಅಥವಾ ಚರ್ಚುಗಳದ್ದೇ ಇರುತ್ತಿದ್ದವು. ಸಾಧ್ಯವಾದಷ್ಟು ಎತ್ತರದಲ್ಲಿ ಗಂಟೆ ನೇತು ಹಾಕುವುದು
ಮತ್ತು ಸಾಧ್ಯವಾದಷ್ಟು ದೂರದಿಂದ ಜನರು ಈ ಸ್ಥಳಗಳನ್ನು ಗುರುತಿಸಲು ಅನುಕೂಲವಾಗಲಿ ಎಂಬುದು ಇದರ ಮೂಲ ಉದ್ದೇಶವಾಗಿತ್ತು. ನಂತರದ ದಿನಗಳಲ್ಲಿ ಸಾಕಷ್ಟು ರೇಡಿಯೋ ಮತ್ತು ಟೆಲಿವಿಷನ್ ಟವರ್‌ಗಳು ನಿರ್ಮಾಣಗೊಂಡವು. ಈ
ದಾಖಲೆ ಮುರಿದದ್ದು 1884ರಲ್ಲಿ ನಿರ್ಮಾಣಗೊಂಡ ವಾಷಿಂಗ್ಟನ್ ಸ್ಥಾವರ ಅಥವಾ ವಾಷಿಂಗ್ಟನ್ ಮೆಮೊರಿಯಲ್. ಇದರ ನಿರ್ಮಾಣ ಕಾರ್ಯ ಆರಂಭವಾದದ್ದು 1833ರಲ್ಲಿ.

ಆಗ ಕಟ್ಟಡಕ್ಕೆಂದು ನಿಧಿ ಸಂಗ್ರಹಣೆಗೊಂಡದ್ದು ಇಪ್ಪತ್ತೆಂಟು ಸಾವಿರ ಡಾಲರ್ ಗಳು ಮಾತ್ರ. ಆರಂಭಗೊಂಡು ಮೂರುವರ್ಷದ
ಹಣದ ಅಭಾವದಿಂದ ಕಾರ್ಯ ಸ್ಥಗಿತಗೊಂಡಿತ್ತು. ಕಾರ್ಯ ಪುನಃ ಆರಂಭಗೊಳ್ಳಲು ಹನ್ನೆರಡು ವರ್ಷಗಳೇ ಹಿಡಿದವು. ಈ ಸ್ಮಾರಕ ಸಂಪೂರ್ಣ ಗೊಂಡು ಕಾರ್ಯಾರಂಭ ಮಾಡುವವರೆಗೆ ಭರ್ತಿ ಐದು ದಶಕಗಳೇ ಕಳೆದಿದ್ದವು. ಅದಾಗಿ ಇಪ್ಪತ್ತು ವರ್ಷಗಳ ನಂತರ ಹದಿನೈದು ಮಿಲಿಯನ್ ಡಾಲರ್ ವೆಚ್ಚದಲ್ಲಿ ಇದನ್ನು ನವೀಕರಿಸಿ, ಹೊಸ ರೂಪ ನೀಡಲಾಯಿತು. ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಐವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸೆಳೆಯುವಲ್ಲಿ ಇದು ಸಫಲವಾಯಿತು.

ನಿಜವಾಗಿ ಜನರು ಆಕಾಶಕ್ಕೆ ಸಮೀಪವಾಗಲು ಆರಂಭವಾದದ್ದೇ ಇಲ್ಲಿಂದ ಎಂದರೆ ತಪ್ಪಾಗಲಾರದು. ಆದರೆ ಈ ದಾಖಲೆಯ ಆಯಸ್ಸು ಐದು ವರ್ಷಕ್ಕೇ ಮುಗಿದುಹೋಯಿತು. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ 324 ಮೀಟರ್ ಎತ್ತರದ ಐಫೆಲ್ ಟಾವರ್ ನಭದ ಓಟದಲ್ಲಿ ಇದನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸಿತು. 1998ರಲ್ಲಿ ಈ ದಾಖಲೆ ಮುರಿದದ್ದು ಮಲೇಶಿಯಾ. ರಾಜಧಾನಿ ಕೌಲಾಲಂಪುರ್‌ನಲ್ಲಿ ನಿರ್ಮಿಸಲಾದ 452 ಮೀಟರ್ ಎತ್ತರದ ಪೆಟ್ರೊನಾಸ್ ಅವಳಿ ಸ್ಥಾವರಗಳು ನೂತನ ವಿಶ್ವದಾಖಲೆ ಬರೆದವು. ಇಂದು ಅದೇ ಪೆಟ್ರೊನಾಸ್ ಏಳನೆಯ ಸ್ಥಾನದಲ್ಲಿದೆ.

ಮೊದಲೆಲ್ಲ ಸ್ಥಾವರಗಳೆಂದರೆ ಪ್ರೇಕ್ಷಣೀಯ ಸ್ಥಳಗಳಾಗಿದ್ದು, ಜನರು ಹತ್ತಿ ಇಳಿದು ಬರುತ್ತಿದ್ದರು. ಕ್ರಮೇಣ ಗಗನಚುಂಬಿ ಕಟ್ಟಡ ಗಳಲ್ಲಿ ಮಾಲ್‌ಗಳು,  ಕಚೇರಿಗಳು, ಮನೆಗಳು ನಿರ್ಮಾಣಗೊಂಡು ನಗರ ಗಳು ಅಡ್ಡಡ್ಡ ಬೆಳೆಯುವ ಬದಲು ಎತ್ತರಕ್ಕೆ ಬೆಳೆಯಲಾ ರಂಭಿಸಿದವು. ಚಿಕಾಗೊ ಮೂಲದ ‘ಕೌನ್ಸಿಲ್ ಆನ್ ಟಾಲ್ ಬಿಲ್ಡಿಂಗ್ಸ್ ಎಂಡ್ ಅರ್ಬನ್ ಹೆಬಿಟ್ಯಾಟ್’ (ಸಿಟಿಬಿ ಯುಎಚ್) ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರಕಾರ ವಸತಿ, ವ್ಯವಹಾರ, ವ್ಯಾಪಾರಗಳನ್ನೊಳಗೊಂಡ ಬಹು ಮಹಡಿಯುಳ್ಳ ಕಟ್ಟಡಗಳು ಮಾತ್ರ ಕಟ್ಟಡಗಳು.

ಉಳಿದವು ಸ್ಮಾರಕಗಳು ಅಥವಾ ಸ್ಥಾವರಗಳು. ಎತ್ತರದ ಕಟ್ಟಡಕ್ಕೆ ಮೂರು ಮಾನದಂಡಗಳಿವೆ. ಕಟ್ಟಡದ ಯಾವುದೇ ಭಾಗದ ಎತ್ತರವನ್ನು ಪರಿಗಣಿಸುವುದು ಒಂದು, ಅತಿ ಎತ್ತರದ ಮಹಡಿಯನ್ನು ಪರಿಗಣಿಸುವುದು ಇನ್ನೊಂದು, ಕಟ್ಟಡದ ವಾಸ್ತುಶಿಲ್ಪದ ಎತ್ತರವನ್ನು ಪರಿಗಣಿಸುವುದು ಮತ್ತೊಂದು. ಮೂರೂ ಬೇರೆ ಬೇರೆ ಫಲಿತಾಂಶ ನೀಡಬಲ್ಲುವಾದ್ದರಿಂದ ಕೊನೆಯದನ್ನೇ ಹೆಚ್ಚಾಗಿ
ಪರಿಗಣಿಸಲಾಗುತ್ತಿದೆ. ಅಂದಹಾಗೆ, ಕಟ್ಟಡದ ಮೇಲಿರುವ ಲೈಟನಿಂಗ್ ಅರೆಸ್ಟರ್ (ಮಿಂಚು ಬಂಧಕ), ಧ್ವಜಸ್ತಂಭ ಅಥವಾ ಅಂಟೆನಾಗಳು ಎತ್ತರ ಅಳೆಯುವಾಗ ಲೆಕ್ಕಕ್ಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ನೋಡುವುದಾದರೆ, ಮುಗಿಲನ್ನು ತಲುಪುವ ತವಕದಲ್ಲಿದ್ದದ್ದು ಅಮೆರಿಕವೇ.

1899ರಲ್ಲಿ ನಿರ್ಮಿಸಿದ ಮ್ಯಾನ್ಹಟ್ಟನ್ ಲೈಫ್ ಇನ್ಸುರನ್ಸ್ ಬಿಲ್ಡಿಂಗ್ ನೂರು ಮೀಟರ್ ಗಡಿ ದಾಟಿದ ಮೊದಲ ಇಮಾರತು.
ಅಲ್ಲಿಂದ 1998ರಲ್ಲಿ ಕಾರ್ಯಾರಂಭ ಮಾಡಿದ 442 ಮೀಟರ್ ಎತ್ತರದ ಚಿಕಾಗೊದಲ್ಲಿರುವ ಸೀಯರ್ಸ್ ಟಾವರ್‌ವರೆಗೆ ಒಂದು ಶತಮಾನಕ್ಕೂ ಹೆಚ್ಚು ಅಮೆರಿಕವೇ ದಾಖಲೆ ವೀರ. ಈ ಅವಧಿಯಲ್ಲಿ ಪಾರ್ಕ್ ರೋವ್, ಸಿಂಗರ್ ಬಿಲ್ಡಿಂಗ್, ಮೆಟ್ರೊ
ಪೊಲಿಟನ್ ಲೈಫ್ ಟಾವರ್, ವೂಲ್ವರ್ತ್, ವಾಲ್ ಸ್ಟ್ರೀಟ್, ಕ್ರೈಸ್ಲರ್, ಎಂಪಾಯರ್ ಸ್ಟೇಟ್, 1 ವರ್ಲ್ಡ್ ಟ್ರೇಡ್ ಸೆಂಟರ್ ಹೀಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡದ ಮೊದಲ ಹತ್ತು ಸ್ಥಾನಗಳೂ ದೊಡ್ಡಣ್ಣನ ಹೆಸರಿನಲ್ಲಿಯೇ ಇದ್ದವು.

ಸದ್ಯ ದುಬೈನ ಬುರ್ಜ್ ಖಲೀ- ವಿಶ್ವದ ಅತ್ಯಂತ ಎತ್ತರದ ಕಟ್ಟಡ. ಎರಡನೆಯ ಸ್ಥಾನದಲ್ಲಿರುವುದು 632 ಮೀಟರ್ ಎತ್ತರದ, ಚೀನಾದಲ್ಲಿರುವ ಶಾಂಘೈ ಟಾವರ್. ಸೌದಿ ಅರೇಬಿಯಾದ ಮೆಕ್ಕಾದಲ್ಲಿರುವ 601 ಮೀಟರ್ ಎತ್ತರದ ಅಬ್ರಾಜ್ ಅಲ್ ಬೈತ್ ಕ್ಲಾಕ್
ಟಾವರ್, ಚೀನಾದ ಶೆಂಜೆನ್‌ನಲ್ಲಿರುವ 599 ಮೀಟರ್ ಎತ್ತರದ ಪಿನ್ ಅನ್ ಸೆಂಟರ್, ದಕ್ಷಿಣ ಕೋರಿಯಾದ ಸಿಯೋಲ್‌ ನಲ್ಲಿರುವ 556 ಮೀಟರ್ ಎತ್ತರದ ಲಾಟೆ ವಲ್ಡ ಟಾವರ್ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೆಯ ಸ್ಥಾನದಲ್ಲಿವೆ.

ಒಂದು ವಿಷಯ ತಿಳಿದಿರಲಿ, ಆಗಸಕ್ಕೆ ಏಣಿ ಹಾಕುವ ಆಟದಲ್ಲಿ ಯಾರ ಸ್ಥಾನವೂ ಶಾಶ್ವತವಲ್ಲ. ಸದ್ಯ ಉತ್ತುಂಗ ದಲ್ಲಿರುವ ಬುರ್ಜ್ ಖಲೀಫಾ ಕೂಡ ಇದಕ್ಕೆ ಹೊರತಲ್ಲ. ಅದನ್ನು ಮೀರಿಸಲು ಇತರ ರಾಷ್ಟ್ರಗಳಲ್ಲ, ದುಬೈಯೇ ಸಿದ್ಧವಾಗಿ ನಿಂತಿದೆ!
2016ರಲ್ಲಿ ಸುಮಾರು 1300 ಮೀಟರ್‌ಎತ್ತರದ (ಎತ್ತರ ಅಧಿಕೃತವಾಗಿ ಘೋಷಣೆಯಾಗಿಲ್ಲ) ದುಬೈ ಕ್ರೀಕ್ ಟಾವರ್ ಸ್ಥಾವರದ ಕಾರ್ಯ ಆರಂಭವಾಗಿತ್ತು.

ಬುರ್ಜ್ ಖಲೀಫಾದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಒಂದು ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿರುವ ಈ ಸ್ಥಾವರ 2022ರಲ್ಲಿ ಸಂಪೂರ್ಣಗೊಳ್ಳಬೇಕಿತ್ತು. ಎಪ್ಪತ್ತೈದು ಮೀಟರ್ ಆಳದ ಅಡಿಪಾಯದ ಕಾರ್ಯ
ನಿರೀಕ್ಷೆಗಿಂತ ಎರಡುತಿಂಗಳು ಮೊದಲೇ ಮುಗಿದಿತ್ತು. ಇದರ ಅಡಿಪಾಯಕ್ಕೆ ಇಪ್ಪತ್ತು ಸಾವಿರ ಟನ್ ಕಾಂಕ್ರೀಟ್ ಬಳಸಲಾಗಿದೆ ಎಂದು ಹೇಳುತ್ತಾರೆ. ಅಂದರೆ ಹೆಚ್ಚುಕಮ್ಮಿ ಅಮೆರಿಕದ ಒಂದು ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಅರ್ಧದಷ್ಟು ತೂಕ! ಸದ್ಯ
ಇದರ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ಇದರಲ್ಲಿ ಕೇವಲ ಇಪ್ಪತ್ತು ಅಂತಸ್ತುಗಳಿದ್ದು, ಇದೊಂದು ನಿರೀಕ್ಷಣಾ ಸ್ಥಾವರವಾಗಿದ್ದು, ವ್ಯಾವಹಾರಿಕವಾಗಿ ಅಷ್ಟೊಂದು ಲಾಭದಾಯಕ ಅಲ್ಲವಾದದ್ದು ಸ್ಥಗಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇದೊಂದು ಅದ್ಭುತ ಭೌಗೋಳಿಕ ರಚನೆಯಾಗಲಿದ್ದು ದುಬೈಗೆ ವಿಶ್ವದಾದ್ಯಂತ ಇನ್ನಷ್ಟು ಹೆಸರು ತಂದುಕೊಡಲಿದೆ ಮತ್ತು ಅತ್ಯಂತ ಎತ್ತರದ ಸ್ಥಾವರವಾಗ ಲಿರುವುದರಿಂದ ನಿರ್ಮಾಣ ಕಾರ್ಯ ಮುಂದುವರಿಯುತ್ತದೆ ಎನ್ನಲಾಗುತ್ತಿದೆ.

ಅಂದ ಹಾಗೆ ಇದರ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವುದು ಬುರ್ಜ್ ಖಲೀಫಾ ನಿರ್ಮಿಸಿದ ‘ಎಮಾರ್’ ಸಂಸ್ಥೆ. ಇಷ್ಟರ ನಡುವೆ 2013 ರಲ್ಲಿ ಸೌದಿ ಅರೇಬಿಯಾದಲ್ಲಿ ಕಿಂಗ್ಡಮ್ ಟಾವರ್ ಕಟ್ಟಡದ ಕಾರ್ಯ ಆರಂಭ ವಾಗಿತ್ತು. ಈ ಕಟ್ಟಡಕ್ಕೆ ಹಣ ಹೂಡಿದವರಲ್ಲಿ ಪ್ರಮುಖರಾದ ಪ್ರಿನ್ಸ್ ವಲೀದ್ ಬಿನ್ ತಲಾಲ್ ಮತ್ತು ಬಾಕರ್ ಬಿನ್ ಲಾದೆನ್ ಭ್ರಷ್ಟಾಚಾರದ ಆರೋಪ ದಡಿ ಬಂಧಿತರಾದ್ದರಿಂದ ಜನವರಿ 2018ರಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ಈಗಾಗಲೇ ಅರವತ್ತು ಮಹಡಿಗಳು ಅಥವಾ ಇನ್ನೂರೈವತ್ತು ಮೀಟರ್‌ಗಿಂತಲೂ ಹೆಚ್ಚಿನ ಕಾರ್ಯ ಪೂರ್ಣಗೊಂಡಿದ್ದು, ಬಂಧಿತರೂ ಬಿಡುಗಡೆಗೊಂಡಿದ್ದು, ಯಾವ ಸಮಯದಲ್ಲೂ ನಿರ್ಮಾಣ ಮುಂದುವರಿಯುವ ಸಾಧ್ಯತೆಯಿದ್ದು, 2030ರ ಒಳಗೆ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಇಪ್ಪತ್ತು ಬಿಲಿಯನ್ ಡಾಲರ್ ವೆಚ್ಚದಲ್ಲಿ ದೇಶದ ಪಶ್ಚಿಮ ಭಾಗದಲ್ಲಿರುವ ಮಹಾ ನಗರ ಜೆದ್ದಾದಲ್ಲಿ ನಿರ್ಮಿಸಲಾಗುತ್ತಿರುವ ಈ ಕಟ್ಟಡಕ್ಕೆ ‘ಜೆದ್ದಾ ಟಾವರ್’ ಎಂದು ಮರು ನಾಮಕರಣ ಮಾಡಲಾಯಿತು.
ಬರೊಬ್ಬರಿ ಒಂದು ಕಿಲೋ ಮೀಟರ್ ಎತ್ತರದ, ಒಟ್ಟೂ ಇನ್ನೂರು ಮಹಡಿಯ ಈ ಕಟ್ಟಡ ಗಾಳಿಯ ಒತ್ತಡ ತಡೆದುಕೊಳ್ಳಲು ಅನುಕೂಲವಾಗುವಂತೆ ಕೆಲವು ಮೀಟರ್ ಅಂತರದಲ್ಲಿ ಆಕಾರ ಬದಲಿಸುವಂತೆ ವಿನ್ಯಾಸಗೊಳಿಸಲಾಗಿದ್ದು, 664 ಮೀಟರ್ ಎತ್ತರದಲ್ಲಿ ನಗರ ವೀಕ್ಷಣೆಗೆ (ಆಬ್ಸರ್ವೇಷನ್ ಡೆಕ್) ಅವಕಾಶ ಒದಗಿಸಲಾಗಿದೆ.

ಇದಕ್ಕೂ ಮೊದಲು 2007ರಲ್ಲಿ ಕುವೈತ್ ಕೂಡ ಗಗನಚುಂಬಿ ಕಟ್ಟಡದ ಪ್ರಸ್ತಾಪ ಮಾಡಿತ್ತು. ಅರೇಬಿಯನ್ ನೈಟ್ಸ್‌ನಲ್ಲಿ ಬರುವ 1001 ಕತೆಗಳ ನೆನಪಿನ ದ್ಯೋತಕವಾಗಿ 1001 ಮೀಟರ್ ಎತ್ತರದ ಬುರ್ಜ್ ಮುಬಾರಕ್ ಅಲ್ ಕಬೀರ್ ನಿರ್ಮಿಸುವುದಾಗಿ ಹೇಳಿಕೊಂಡಿತ್ತು. ಎಂಬತ್ತು ಬಿಲಿಯನ್ ಡಾಲರ್ ವೆಚ್ಚದಲ್ಲಿ ಗಂಟೆಗೆ ಇನ್ನೂರ ನಲವತ್ತು ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಿದ ಈ ಯೋಜನೆ ಇದುವರೆಗೂ ಆರಂಭವಾಗಲಿಲ್ಲ.

ಇದನ್ನು ವಿನ್ಯಾಸಗೊಳಿಸಿದ ಆರ್ಕಿಟೆಕ್ಟ್ ಎರಿಕ್ ಕುಹ್ನೆ ನಾಲ್ಕು ವರ್ಷದ ಹಿಂದೆ ತೀರಿಹೋದರೂ 2019ರಲ್ಲಿ ಚೀನಾದೊಂದಿಗೆ
ಒಪ್ಪಂದ ಮಾಡಿಕೊಂಡಿದ್ದು, 2023ರಲ್ಲಿ ಕಾರ್ಯ ಆರಂಭವಾಗುವ ವರದಿಯಿದೆ. ಇಂದು ವಿಶ್ವದಾದ್ಯಂತ ಅರ್ಧ ಕಿಲೋ ಮೀಟರ್ ನಷ್ಟು ಎತ್ತರದ ಸುಮಾರು ಐವತ್ತು ಕಟ್ಟಡಗಳು ತಲೆ ಎತ್ತಿ ನಿಲ್ಲಲು ಸಜ್ಜಾಗುತ್ತಿವೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಇವುಗಳಲ್ಲಿ ಇಪ್ಪತ್ತೆರಡು ಚೀನಾ ಒಂದರ ಎದ್ದು ನಿಲ್ಲಲಿದ್ದು, ದುಬೈನಲ್ಲಿ ಆರು, ಇತರ ಕೊಲ್ಲಿ ರಾಷ್ಟ್ರಗಳಲ್ಲಿ ನಾಲ್ಕು, ಪೂರ್ವ ಏಷ್ಯಾ ರಾಷ್ಟ್ರಗಳಾದ ಮಲೇಷಿಯಾ, ಇಂಡೋನೇಷಿಯಾ, ಕೋರಿಯಾ ಥೈಲೆಂಡ್‌ನಲ್ಲಿ ಹತ್ತು ಕಟ್ಟಡಗಳು ಜನ್ಮಪಡೆಯಲಿವೆ.

ಇವುಗಳಲ್ಲಿ ಕೆಲವು ಇನ್ನೂ ಭ್ರೂಣಾವಸ್ಥೆಯಲ್ಲಿದ್ದರೂ ಇನ್ನೊಂದು ಹತ್ತು ವರ್ಷಕ್ಕಂತೂ ಇವುಗಳಿಗೆಲ್ಲ ನಾಮಕರಣವಾಗು ವುದು ಖಂಡಿತ. ಒಂದು ನೂರು ವರ್ಷ ಮೊದಲು ಯಾರಾದರೂ ಒಂದು ಕಿಲೋಮೀಟರ್ ಎತ್ತರದ ಕಟ್ಟಡ ನಿರ್ಮಾಣ ಮಾಡುತ್ತೇನೆ ಎಂದರೆ ಹುಚ್ಚು ಎಂದು ನಗುತ್ತಿದ್ದರು. ಇಂದು ಹಣ ಇದ್ದರೆ, ಎಂಜಿನಿಯರ್‌ಗಳ ಕ್ಷಮತೆ, ವಿಜ್ಞಾನ ಮತ್ತು
ತಂತ್ರಜ್ಞಾನದಿಂದಾಗಿ ನಾಲ್ಕರಿಂದ ಐದು ವರ್ಷಗಳ ಅವಧಿಯ ಒಳಗೆ ಇದು ಸಾಧ್ಯವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದೊಂದು ದಿನ ಈ ಕಟ್ಟಡಗಳಲ್ಲಿ ವಾಸಿಸುವವರು ಹಕ್ಕಿಗಳನ್ನು ನೋಡಲು ಕೆಳಗೆ ಇಳಿದು ಬರಬೇಕಾದೀತು!

ಒಂದು ಸಂತಸದ ಸಂಗತಿಯೆಂದರೆ ಇಲ್ಲಿ ಉಳಿಯುವವರಿಗೆ ಸೊಳ್ಳೆ ಕಾಟವಿಲ್ಲ, ಏಕೆಂದರೆ ಸೊಳ್ಳೆ ಅಷ್ಟು ಮೇಲಕ್ಕೆ ಹಾರುವು ದಿಲ್ಲ! ಕೊನೆಯದಾಗಿ ನಿಮಗೆ ಎಕ್ಸ್ – ಸೀಡ್ 4000  (X-Seed 4000) ವಿಷಯ ಹೇಳಲೇಬೇಕು. ಜಪಾನ್ನ ಟೋಕಿಯೋದಲ್ಲಿ ನಿರ್ಮಿಸಬೇಕೆಂದಿರುವ ಈ ಕಟ್ಟಡದ ಎತ್ತರವೇ ನಾಲ್ಕು ಸಾವಿರ ಮೀಟರ್, ಅಂದರೆ ನಾಲ್ಕು ಕಿಲೋಮೀಟರ್.

1995ರಲ್ಲಿ ತೈಸೀ ಕನ್ಸ್ಟ್ರಕ್ಷನ್ ಕಂಪನಿಯ ಎಂಜಿನಿಯರ್ ಮಾರ್ಟಿನ್ ಪಾಸ್ಕೋ ವಿನ್ಯಾಸಗೊಳಿಸಿರುವ ಈ ಕಟ್ಟಡ ನೋಡಲು
ಪರ್ವತದಂತೆ ಕಾಣುತ್ತಿದ್ದು, ಎಂಟು ನೂರು ಮಹಡಿಗಳಿವೆ. ಕಟ್ಟಡ ಬುಡದಲ್ಲಿ ಆರು ಕಿಲೋಮೀಟರ್ ಅಗಲವಾಗಿದ್ದು, ಇದರಲ್ಲಿ ಒಟ್ಟೂ ಹತ್ತು ಲಕ್ಷ ನಿವಾಸಿಗಳಿಗೆ ಅವಕಾಶ ಒದಗಿಸಿ ಕೊಡಲಾಗುತ್ತದೆ. ಮೂವತ್ತು ಲಕ್ಷ ಟನ್ ಉಕ್ಕು ಬಳಸಿ ನಿರ್ಮಿಸ ಲಾಗುವ ಈ ಕಟ್ಟಡದಲ್ಲಿ ಸೌರ ಶಕ್ತಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಕಟ್ಟಡದ ಮೇಲಕ್ಕೇರಲು ಗಂಟೆಗೆ ನಾಲ್ಕುನೂರರಿಂದ ಐದು ನೂರು ಕಿಲೋಮೀಟರ್ ವೇಗದಲ್ಲಿ ಚಲಿಸುವ ಮ್ಯಾಗ್ನೆಟಿಕ್ ಲೆವಿಯೇಷನ್ (Maglev) ರೈಲನ್ನು ಬಳಸಲಾಗುತ್ತದೆ. ಎತ್ತರದಲ್ಲಿ ಇದು ಜಪಾನ್‌ನ ಟೊಕಿಯೋದ ನಿರ್ಮಾಣಗೊಳ್ಳಬೇಕಿದ್ದ ‘ಶಿಮಿಜು ಮೆಗಾಸಿಟಿ ಪಿರಾಮಿಡನ ಎರಡರಷ್ಟಿದೆ. ಇದನ್ನು ವಿನ್ಯಾಸಗೊಳಿಸಿರುವುದು ಕಾಲ್ಪನಿಕವಾಗಿದ್ದು, ನಿರ್ಮಾಣಕ್ಕಾಗಿ
ಅಲ್ಲ, ಇದು ಸಂಸ್ಥೆಯ ಪ್ರಚಾರ ತಂತ್ರದ ಭಾಗವಾಗಿದೆ ಎಂದು ತೈಸೀ ಕಂಪನಿಯೇ ಹೇಳಿಕೊಂಡಿದೆ. ಆದರೂ ಮುಂದೊಂದು ದಿನ ಇದು ನಿಜವಾದರೂ ಆಶ್ಚರ್ಯವಿಲ್ಲ. ಎಲ್ಲರೂ ಆಗಸಕ್ಕೇರುವ ತವಕದಿಂದಿರುವಾಗ ಯಾರನ್ನೂ ನಂಬಲು ಸಾಭ್ಯವಿಲ್ಲ. ಮನಸು ಮಾಡಿದರೆ ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ!

ಅಷ್ಟಕ್ಕೂ ಮುಗಿಲಿಗೆ ಏರಬೇಕು ಎನ್ನುವುದು ಮಾನವನ ಇಂದು ನಿನ್ನೆಯ ಬಯಕೆಯಲ್ಲವಲ್ಲ!

Leave a Reply

Your email address will not be published. Required fields are marked *