Tuesday, 18th January 2022

ಪಾದಯಾತ್ರೆ; ಕಾಂಗ್ರೆಸ್ಸಿನ ಡ್ರಾಮಾ !

ವೀಕೆಂಡ್ ವಿತ್ ಮೋಹನ್

ಮೋಹನ್ ವಿಶ್ವ

camohanbn@gmail.com

ಕಳೆದ ವರ್ಷದಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಮೇಕೆದಾಟಿನ ವಿಷಯವನ್ನು ಎಷ್ಟು ನಿಮಿಷಗಳ ಕಾಲ ಪ್ರಸ್ತಾಪಿಸಲಾಗಿದೆ ? ನಿನ್ನೆ ಮೊನ್ನೆ ಬೆಳಗಾವಿ ಯಲ್ಲಿ ನಡೆದ ವಿಧಾನಸಭಾ ಕಲಾಪದಲ್ಲಿ ನನಗೆ ತಿಳಿದಿರುವಂತೆ ಮೇಕೆದಾಟಿನ ವಿಷಯವನ್ನು ಗಂಭೀರವಾಗಿ ಚರ್ಚಿಸಲೇ ಇಲ್ಲ.

1985 ರಲ್ಲಿ ಕನ್ನಡದಲ್ಲಿ ಕುರಿದೊಡ್ಡಿ ಕುರುಕ್ಷೇತ್ರ ಸಿನಿಮಾ ತೆರೆಕಂಡಿತ್ತು, ಈ ಸಿನಿಮಾದಲ್ಲಿ ಲೋಕನಾಥ್ ಹಾಗೂ ಧೀರೇಂದ್ರ ಗೋಪಾಲ ನಡುವೆ ತಮ್ಮ ಗ್ರಾಮದ ನಾಯಕತ್ವದ ವಿಚಾರದಲ್ಲಿ ನಡೆಯುವ ವಿವಾದಗಳೇ ಸಿನಿಮಾದ ಮುಖ್ಯ ಕಥಾ ಹಂದರ. ಗ್ರಾಮದವರೆ ಸೇರಿ ಕುರುಕ್ಷೇತ್ರ ನಾಟಕವಾಡಲು ನಿರ್ಧರಿ ಸುತ್ತಾರೆ.

ನಾಟಕದ ಮೇಷ್ಟ್ರಾಗಿ ಮುಸುರಿ ಕೃಷ್ಣಮೂರ್ತಿಯ ಆಗಮನವಾಗುತ್ತದೆ. ನಾಟಕದ ಪಾತ್ರಗಳ ಹಂಚಿಕೆಯಲ್ಲಿನ ಪೀಕಲಾಟ, ಅಭ್ಯಾಸ ಮಾಡುವಾಗುಂಟಾಗುವ ಪೀಕಲಾಟ ಪ್ರೇಕ್ಷಕನಿಗೆ ಒಳ್ಳೆಯ ಮನೋರಂಜನೆ ನೀಡುತ್ತದೆ. ಲೋಕನಾಥ್ ಹಾಗೂ ಧೀರೇಂದ್ರ ಗೋಪಾಲ ನಡುವಣ ಸಾಮರ್ಥ್ಯವನ್ನು ತಮ್ಮ ಹಿರಿಯ ರಾಜಕೀಯ ನಾಯಕರಿಗೆ ಸಾಬೀತುಪಡಿಸುವಲ್ಲಿ ಕಾಣಬರುವ ವಿವಾದಗಳು ಪ್ರೇಕ್ಷಕನಿಗೆ ಮತ್ತಷ್ಟು ಮನೋ ರಂಜನೆಯನ್ನು ನೀಡುತ್ತದೆ. ಈಗ ಆ ಚಿತ್ರ ಏಕೆ ನೆನಪಾಯಿತೆಂದರೆ ಕುರಿದೊಡ್ಡಿ ಕುರುಕ್ಷೇತ್ರ ಸಿನಿಮಾದಲ್ಲಿ ನಡೆಯುವ ಕುರುಕ್ಷೇತ್ರ ನಾಟಕದ ಮನೋರಂಜನೆಯ ರೀತಿಯಲ್ಲಿ ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆ ಕರ್ನಾಟಕದ ಜನರಿಗೆ ಉತ್ತಮ ಮನೋರಂಜನೆ ನೀಡಿತ್ತು. ಆ ಚಿತ್ರದಲ್ಲಿರುವಂತೆ ಇಲ್ಲಿಯೂ ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ನಡುವೆ ತಮ್ಮ ರಾಜಕೀಯ ಸಾಮರ್ಥ್ಯದ ಪೈಪೋಟಿಯ ಮನೋರಂಜನೆ ಎದ್ದು ಕಾಣುತ್ತಿತ್ತು.

ಸಿದ್ದರಾಮಯ್ಯ ಗಣಿ ಹಗರಣದ ಸಂದರ್ಭದಲ್ಲಿ ಬಳ್ಳಾರಿಯಿಂದ ಪಾದಯಾತ್ರೆ ಮಾಡಿ ಮುಖ್ಯಮಂತ್ರಿಯಾದ ರೀತಿಯಲ್ಲಿ ತಾನೂ ಸಹ ಪಾದಯಾತ್ರೆ ಮಾಡಿದರೆ ಮುಖ್ಯಮಂತ್ರಿಯಾಗಬಹುದೆಂಬ ಕನಸನ್ನು ಡಿ.ಕೆ.ಶಿವ ಕುಮಾರ್ ಕಂಡು, ಪಾದಯಾತ್ರೆಗೆ ದುಮುಕಿದ್ದರು. ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಒಂದಷ್ಟು ಗಟ್ಟಿ ಅಂಶಗಳಿದ್ದವು, ಆದರೆ ಮೇಕೆದಾಟಿನ ವಿಷಯದಲ್ಲಿ ಯಾವ ದಿಕ್ಕಿನಿಂದ ನೋಡಿದರೂ ಸಹ ಕಾಂಗ್ರೆಸ್ಸಿನ ಬುಡಕ್ಕೆ ವಿವಾದ ಗಳು ಬರುತ್ತಿದ್ದವು. ಅದ್ಯಾವ ಪುಣ್ಯಾತ್ಮ ಡಿ.ಕೆ.ಶಿವಕುಮಾರಿಗೆ ಮೇಕೆದಾಟಿನ ಪಾದಯಾತ್ರೆಯ ಕಲ್ಪನೆಯನ್ನು ನೀಡಿದನೋ ತಿಳಿದಿಲ್ಲ. ಕುರಿದೊಡ್ಡಿ ಕುರುಕ್ಷೇತ್ರ ಸಿನಿಮಾದಲ್ಲಿ ಬರುವ ನಾಟಕದ ಮೇಷ್ಟ್ರಾದ ಮುಸುರಿ ಕೃಷ್ಣಮೂರ್ತಿಯ ರೂಪದಲ್ಲಿ DESIGN BOX ಕಂಪನಿ ಡಿ.ಕೆ.ಶಿವ ಕುಮಾರರನ್ನು ಮುಖ್ಯಮಂತ್ರಿ ಅಭ್ಯರ್ಥಿಯ ಪಾತ್ರ ಮಾಡಿಸುತ್ತಿದೆ.

ನರೇಂದ್ರ ಮೋದಿಯವರು ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ಸ್ನಾನ ಮಾಡಿ, ಪೂಜೆಗೆ ತೆರಳುವ ನೈಜ ಅಂಶವನ್ನು ಡಿ.ಕೆ.ಶಿವಕುಮಾರ ಬಳಿ ನಾಟಕೀಯವಾಗಿ
ಕಾವೇರಿ ನದಿಯ ಪೂಜೆಯಲ್ಲಿ ಸ್ನಾನ ಮಾಡುವ ರೀತಿಯಲ್ಲಿ ತೋರಿಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿ,ಇಡೀ ಕರ್ನಾಟಕದ ಜನರಿಗೆ ಬಿಟ್ಟಿ ಮನರಂಜನೆ ನೀಡಿತ್ತು.ಮತ್ಯಾವುದೋ ಶಾಲೆಯಲ್ಲಿ ಸಣ್ಣ ಸಣ್ಣ ಮಕ್ಕಳು ಡಿ.ಕೆ.ಶಿವಕುಮಾರರ ಬಳಿ ಬಂದು ಕಾಲಿಗೆ ಬೀಳುವ ರೀತಿಯಲ್ಲಿ ಪ್ರಚಾರಗಿಟ್ಟಿಸುವ ಪ್ರಯತ್ನವನ್ನು ಅವರ ನಾಟಕದ ಮೇಷ್ಟ್ರು ಮಾಡಿದರು.

ಅಧಿಕಾರದಲ್ಲಿದ್ದಾಗ ಮಹದಾಯಿ ಹೋರಾಟಗಾರರಿಗೆ ಲಾಠಿ ಚಾರ್ಜ್ ಮಾಡಿಸಿದಂತಹ ಕಾಂಗ್ರೆಸ್ ಪಕ್ಷ ಯಾವ ನೈತಿಕತೆಯ ಆಧಾರದ ಮೇಲೆ ಮೇಕೆದಾಟು ಯೋಜನೆಯ ಹೆಸರಿನಲ್ಲಿ ಪಾದಯಾತ್ರೆ ಮಾಡುವುದಕ್ಕೆ ಹೊರಟಿತ್ತು? 2013 ರಿಂದ 2018ರ ನಡುವೆ ತಾವು ಆಡಳಿತದಲ್ಲಿದ್ದಾಗ ಮಾಡಿದ್ದು ಕೇವಲ ಈP ಅಷ್ಟೆ! 2007ರಲ್ಲಿ ಕಾವೇರಿ ಪ್ರಾಧಿಕಾರದ ತೀರ್ಪು ಬಂದು ನೀರಿನ ಹಂಚಿಕೆಯ ಪ್ರಮಾಣ ನಿಗದಿಯಾಗಿತ್ತು ಆದರೆ ತೀರ್ಪನ್ನು ಅನುಷ್ಠಾನಗೊಳಿಸಿದ ನಂತರ ವಷ್ಟೇ ಮೇಕೆದಾಟು ಯೋಜನೆಯನ್ನು ಕೈಗೆತ್ತುಕೊಳ್ಳಬಹುದಾಗಿತ್ತು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಗೆಜೆಟ ನೋಟಿಫಿಕೇಶನ್ ತಂದದ್ದು 2013ರಲ್ಲಿ, ಆರು ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ಸರಕಾರ ಸಮಯ ವ್ಯರ್ಥ ಮಾಡಿ ಸುಮ್ಮನೆ ಕುಳಿತಿತ್ತು ಅಥವಾ ತಮ್ಮ ರಾಜಕೀಯ ಪಾಲುದಾರ ತಮಿಳುನಾಡಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಗೆಜೆಟ ನೋಟಿಫಿಕೇಶನ್ ತಂದಿರಲಿಲ್ಲ.

ಆಗ ಕಾಂಗ್ರೆಸ್ಸಿನಿಂದ ಗೆದ್ದಿದ್ದಂತಹ ಘಟಾನುಘಟಿ ನಾಯಕರಾದಂತಹ ಮಲ್ಲಿಕಾರ್ಜುನ ಖರ್ಗೆ,ವೀರಪ್ಪ ಮೊಯ್ಲಿ ಏನು ಕಡಲೆಕಾಯಿ ತಿನ್ನುತ್ತಿದ್ದರೇ ? ಇವರು ಅಧಿಕಾರದಲ್ಲಿದ್ದಾಗ ಸಮಯ ವ್ಯರ್ಥ ಮಾಡಿ, ಈಗ ಕಾವೇರಿಯ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಪಾದಯಾತ್ರೆಯೆಂಬ ದೊಡ್ಡ ನಾಟಕ ಆಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಮೇಕೆದಾಟಿನ ವಿಷಯವನ್ನು ಎಷ್ಟು ನಿಮಿಷಗಳ ಕಾಲ ಪ್ರಸ್ತಾಪಿಸಲಾಗಿದೆ ? ನಿನ್ನೆ ಮೊನ್ನೆ ಬೆಳಗಾವಿ ಯಲ್ಲಿ ನಡೆದ ವಿಧಾನಸಭಾ ಕಲಾಪದಲ್ಲಿ ನನಗೆ ತಿಳಿದಿರುವಂತೆ ಮೇಕೆದಾಟಿನ ವಿಷಯವನ್ನು ಗಂಭೀರವಾಗಿ ಚರ್ಚಿಸಲೇ ಇಲ್ಲ.

ಸಂಡೂರಿನ ಶಾಸಕ ತುಕಾರಾಂ ತನ್ನ ತಾಲೂಕಿನಲ್ಲಿ ತಹಶೀಲ್ದಾರ್ ಒಬ್ಬರು ತನಗೆ ಮರ್ಯಾದೆ ನೀಡಲಿಲ್ಲವೆಂಬ ವಿಷಯವನ್ನು ಒಂದು ಘಂಟೆಗಳ ಕಾಲ ಚರ್ಚಿಸಿದ ಸಿದ್ದರಾಮಯ್ಯರಿಗೆ ಮೇಕೆದಾಟಿನ ಗಂಭೀರತೆಯ ಅರಿವಿರಲಿಲ್ಲವೇ? ಕಿಲೋಮೀಟರುಗಟ್ಟಲೆ ಪಾದಯಾತ್ರೆ ಮಾಡುವೆನೆಂದು ಅಬ್ಬರಿಸುವ ಡಿ.ಕೆ.ಶಿವಕುಮಾರ್ ಎಷ್ಟು ನಿಮಿಷಗಳ ಕಾಲ ಬೆಳಗಾವಿಯ ಅಽವೇಶನದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಚರ್ಚಿಸಿದರು ? 2013 ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಮೊದಲ ಆರು ತಿಂಗಳು ಏನು ಮಾಡಿರಲಿಲ್ಲ, ನವೆಂಬರ್ 2013ರಲ್ಲಿ ಮೇಕೆದಾಟಿನ ಯೋಜನೆಯ ಡಿಪಿಆರ್ ತಯಾರಿ ಸಲು ೪ಎ ವಿನಾಯಿತಿಗಾಗಿ ಸರಕಾರದ ಮುಂದೆ ಅರ್ಜಿ ಬರುತ್ತದೆ.

ಅರ್ಜಿ ಬಂದ ಆರು ತಿಂಗಳ ನಂತರ ಅಂದರೆ ಏಪ್ರಿಲ್ 2014ರಂದು 4ಎ ವಿನಾಯಿತಿಯನ್ನು ತಿರಸ್ಕರಿಸಿ ಜಾಗತಿಕ ಟೆಂಡರ್ ಕರೆಯಲು ಸೂಚಿಸಲಾಗುತ್ತದೆ. ಸೂಚನೆ ಬಂದ ಆರು ತಿಂಗಳ ನಂತರ ಅಂದರೆ ಅಕ್ಟೋಬರ್ 2014 ರಲ್ಲಿ ಡಿಪಿಆರ್ ತಯಾರಿಸುವ ಕಂಪನಿಯನ್ನು ಆಯ್ಕೆ ಮಾಡಲು ಜಾಗತಿಕ ಟೆಂಡರ್ ಕರೆಯಲಾಗುತ್ತದೆ. ಅಧಿಕಾರಕ್ಕೆ ಬಂದ 16 ತಿಂಗಳ ಬಳಿಕ ಕರೆದ ಮೊದಲ ಟೆಂಡರ್ ಇದಾಗಿತ್ತು. ತಾಂತ್ರಿಕ ಬಿಡ್ ಹಾಗೂ ಆರ್ಥಿಕ ಬಿಡ್‌ಗಳಲ್ಲಿ ಒಮ್ಮತ ಮೂಡದ ಕಾರಣ ಸುಮಾರು ಒಂದು ವರ್ಷದ ನಂತರ ನವೆಂಬರ್ 2015ರಲ್ಲಿ ಎಲ್ಲಾ ಟೆಂಡರ್ ಬಾಗಿದಾರರನ್ನು ತಿರಸ್ಕರಿಸಲಾಗಿತ್ತು. ಅಧಿಕಾರಕ್ಕೆ ಬಂದ ಸುಮಾರು ಮೂರು ವರ್ಷಗಳ ನಂತರ ಡಿಪಿಆರ್ ರಚಿಸಲು ಬೇಕಿರುವ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ೪ಎ ಅನುಮತಿ ನೀಡಿದ ಕಾಂಗ್ರೆಸ್ ಮೂರು
ವರ್ಷಗಳಲ್ಲಿ ಮೇಕೆದಾಟಿನ ವಿಷಯದಲ್ಲಿ ಸಾಧಿಸಿದ್ದು ದೊಡ್ಡದೊಂದು ಸೊನ್ನೆ. 4ಎ ವಿನಾಯಿತಿ ಸಿಕ್ಕ ಕೂಡಲೇ ಮತ್ತದೇ ಹಳೆಯ EI Technologies ಕಂಪನಿಗೆ ಡಿಪಿಆರ್ ತಯಾರಿಸುವ ಕೆಲಸವನ್ನು ನೀಡಲಾಗಿತ್ತು.

ಸುತ್ತಿ ಬಳಸಿ ಮೂರುವರ್ಷಗಳ ಕಾಲಹರಣ ಮಾಡಿ ಒಂದು ಡಿಪಿಆರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದನ್ನು ಕಾಂಗ್ರೆಸ್ ತನ್ನ ದೊಡ್ಡ ಸಾಧನೆಯೆಂದು ಹೇಳಿಕೊಳ್ಳುತ್ತಿದೆ. ಜೂನ್ 2016 ರಲ್ಲಿ ಈ ಕಂಪನಿಯೂ ಸುಮಾರು 5612 ಕೋಟಿಯ ಡಿಪಿಆರ್ ವರದಿಯನ್ನು ನೀಡಿತು. ವರದಿ ನೀಡಿದ ಹತ್ತು ತಿಂಗಳ ಬಳಿಕ ಅಂದರೆ ಮಾರ್ಚ್ ೨೦೧೭ರಂದು ಕಾಂಗ್ರೆಸ್ ಸರಕಾರ ತಾತ್ವಿಕ ಒಪ್ಪಿಗೆಯನ್ನು ನೀಡಿತ್ತು. ಇದಾದ ನಂತರ ಕೇಂದ್ರ ಜಲ ಆಯೋಗಕ್ಕೆ ವರದಿಯನ್ನು ಸಲ್ಲಿಸಿದ ಕಾಂಗ್ರೆಸ್,
ಜಲ ಆಯೋಗವು ಸೂಚಿಸಿದ ಬದಲಾವಣೆಗಳನ್ನು ಮಾಡಿ ಮಾರ್ಚ್ 2018 ರಲ್ಲಿ ಪರಿಷ್ಕರಿಸಿದ ವರದಿಯನ್ನು ನೀಡಿತ್ತು.

ತನ್ನ ಒಟ್ಟಾರೆ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಕಾಂಗ್ರೆಸ್ ಸರಕಾರ ಕೇವಲ ಡಿಪಿಆರ್ ತಯಾರಿಸಿ ಈಗ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಿ ಎಂದು ಪಾದಯಾತ್ರೆ ನಡೆಸುತ್ತಿರುವುದು ಹಾಸ್ಯಾಸ್ಪದವಲ್ಲದೆ ಮತ್ತೇನು? ಈತನ್ಮದ್ಯೆ ಅರಣ್ಯ ಇಲಾಖೆಯಿಂದ ಬೇಕಿರುವಂತಹ ಒಪ್ಪಿಗೆಯನ್ನು ಪಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲಿಲ್ಲ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಮೋದಿ ಬಹಿರಂಗ ಸಭೆ ಮಾಡುವುದರಿಂದ ಕರೋನಾ ಹರಡುತ್ತದೆಯೆಂದು ಬೊಬ್ಬೆ
ಹೊಡೆದು ತಾನೇ ವರ್ಚುಯಲ ಸಭೆ ಮಾಡುತ್ತಿದೆ.

ಕರ್ನಾಟಕದಲ್ಲಿ ಪಾದಯಾತ್ರೆಯ ನೆಪದಲ್ಲಿ ಸಾವಿರಾರು ಜನರನ್ನು ಸೇರಿಸಿಕೊಂಡು ಕರೋನ ಹರಡಿಸುವುತ್ತಿದೆ. ಡಿ.ಕೆ.ಶಿವಕುಮಾರ್ ಎರಡನೇ ಬಾರಿಗೆ ಸಾಮೂಹಿಕ ನಾಯಕನಾಗುವ ಪ್ರಯತ್ನವನ್ನು ಪಾದಯಾತ್ರೆಯ ಮೂಲಕ ಮಾಡುತ್ತಿದ್ದಾರೆ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ರೂವಾರಿ ತಾನೇ ಎಂಬಂತೆ ಬಿಂಬಿಸಿಕೊಂಡಂತಹ ಡಿ.ಕೆ.ಶಿ, ಬೆಳಗಾವಿಯ ಅಖಾಡಕ್ಕೆ ಬಂದು ಲಕ್ಷ್ಮಿ ಹೆಬ್ಬಾಳ್ಕರ್ ಮೂಲಕ ರಮೇಶ್ ಜಾರಕಿಹೊಳಿಯವರನ್ನು ಕಟ್ಟಿ ಹಾಕುವ
ಪ್ರಯತ್ನ ಮಾಡಿದರು. ಪ್ರತಿಯೊಂದು ಜಿಲ್ಲೆಯಲ್ಲಿನ ಪ್ರಭಾವಿ ನಾಯಕರನ್ನು ಕಟ್ಟಿ ಹಾಕುವಲ್ಲಿ ಎಡವಿದ ಡಿ.ಕೆ.ಶಿ.ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣರಾದರು.
ಈಗ ಎರಡನೇ ಬಾರಿಗೆ ಸಿದ್ದರಾಮಯ್ಯರ ಹಳೇ ಸಿಲೆಬಸ್ ಪಾದಯಾತ್ರೆಯನ್ನು ಆಯ್ಕೆ ಮಾಡಿಕೊಂಡು ಅಲ್ಪ ಸ್ವಲ್ಪ ಇದ್ದಂತಹ ನಾಯಕತ್ವವನ್ನೂ ಕಳೆದು ಕೊಳ್ಳುವತ್ತ ಸಾಗಿದ್ದಾರೆ.

ಕನಕಪುರದ ಅಕ್ಕ ಪಕ್ಕದ ರಾಮನಗರ, ಚನ್ನಪಟ್ಟಣ, ಮಾಗಡಿ, ಮದ್ದೂರು ಕ್ಷೇತ್ರಗಳಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದ ಡಿ.ಕೆ.ಶಿವಕುಮಾರ್ ಹೇಗೆ ತಾನೆ ತನ್ನನ್ನು ತಾನು ಕರ್ನಾಟಕದ ಸಾಮೂಹಿಕ ನಾಯಕನೆಂದುಕೊಳ್ಳಲು ಸಾಧ್ಯ? ಹಣವೊಂದಿದ್ದರೆ ಸಾಕು ಏನನ್ನು ಬೇಕಾದರೂ ಪಡೆಯಬಹುದೆಂಬ ಹಠಕ್ಕೆ ಬಿದ್ದಂತಿದೆ ಡಿ.ಕೆ.ಶಿವಕುಮಾರ್ ಲೆಕ್ಕಾಚಾರ, ಕೇವಲ ಹಣದಿಂದ ಎಲ್ಲವನ್ನೂ ಪಡೆಯುವ ಹಾಗಿದ್ದರೆ ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿ ಆಗುತ್ತಿರಲಿಲ್ಲ, ಬರಾಕ್ ಒಬಾಮ ಅಮೆರಿಕಾದ ಅಧ್ಯಕ್ಷರಾಗುತ್ತಿರಲಿಲ್ಲ.

ಮೇಕೆದಾಟಿನ ಪಾದಯಾತ್ರೆಯ ಮೂಲಕ ಮುಖ್ಯಮಂತ್ರಿ ಕನಸು ಕಂಡಿರುವ ಡಿ.ಕೆ.ಶಿವಕುಮಾರರಿಗೆ, ರಾಜಕೀಯ ಜೀವನದ ಮೇಲೆ ಕಳೆದ ಒಂದು ವಾರದಿಂದ
ಬಿದ್ದಿರುವ ಪೆಟ್ಟಿನ ಅರಿವಾಗಿರುವಂತೆ ಕಾಣುತ್ತಿಲ್ಲ. ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ, ಡ್ರಾಮಾ ಮಾಡಿ ತಾನೊಬ್ಬ ದೊಡ್ಡ ನಾಯಕನಾಗುತ್ತೇನೆಂದು
ಅಂದುಕೊಂಡಿದ್ದರೆ ಅದಕ್ಕಿಂತಲೂ ದೊಡ್ಡ ವಿಪರ್ಯಾಸ ಮತ್ತೊಂದಿಲ್ಲ. ಪಾದಯಾತ್ರೆಯ ಲಾಭ ಪಡೆಯಲು ನಾ ಮುಂದು ತಾ ಮುಂದು ಎಂಬಂತೆ ಕಾಂಗ್ರೆಸ್ಸಿನ ನಾಯಕರು ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದರೂ, ಕ್ಯಾಮೆರಾ ಕಣ್ಣಿಗೆ ಡಿಕೆ ಮಾತ್ರ ಕಾಣಿಸುತ್ತಿದ್ದರು. ಯಾವಾಗ ಡಿ.ಕೆ.ಶಿಯ ಮೇಕೆದಾಟು ಪಾದಯಾತ್ರೆ ವೈಫಲ್ಯವನ್ನು ಕಂಡಿತೋ ಸಿದ್ದರಾಮಯ್ಯ ನಿಧಾನವಾಗಿ ಅದರಿಂದ ದೂರವಾಗುತ್ತಾ ಬಂದರು. ಒಟ್ಟಿನಲ್ಲಿ ಕಾಂಗ್ರೆಸ್ಸಿನ ನಾಟಕದ ಮೇಷ್ಟ್ರು ಸೃಷ್ಟಿ ಮಾಡಿದ ಮೇಕೆದಾಟು ಪಾದಯಾತ್ರೆಎಂಬ ಬಹುದೊಡ್ಡ ಡ್ರಾಮಾವೊಂದು ಒಂದು ವಾರಗಳ ಕಾಲ ಇಡೀ ಕರ್ನಾಟಕದ ಜನತೆಗೆ ಬಿಟ್ಟಿ ಮನರಂಜನೆ ನೀಡಿದ್ದು ಸುಳ್ಳಲ್ಲ.