ಹಾಜಬ್ಬ ಕಿತ್ತಳೆ ಹಣ್ಣನ್ನು ಮಾರುತ್ತಿದ್ದ ರಸ್ತೆ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಎಂದು ನಾಮಕರಣ ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ.
ಹರೇಕಳ ಹಾಜಬ್ಬ ರಾಷ್ಟ್ರದ ಅತ್ಯುನ್ನತ ನಾಲ್ಕನೇ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಹಾಜಬ್ಬರತ್ತ ಇಡೀ ದೇಶವೇ ತಿರುಗಿ ನೋಡಿದೆ. ಸವೆದ ಹವಾಯಿ ಚಪ್ಪಲಿ, ಇಸ್ತ್ರಿಯನ್ನೇ ನೋಡದ ಮೇಲಿನ ಗುಂಡಿ ಬಿಚ್ಚಿದ, ಅರ್ಧ ಕೈ ಮಡಚಿದ ಬಿಳಿ ಅಂಗಿ, ಮೊಣಕಾಲುದ್ದದ ಬಿಳಿ ಪಂಚೆಯ ಹಾಜಬ್ಬರು ಈಗ ಸಮಯವೇ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ.
ಕಿತ್ತಳೆ ಹಣ್ಣು ಮಾರುತ್ತಾ, ಅದರಲ್ಲಿ ಬಂದ ಹಣದಿಂದ ಶಾಲೆ ಆರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ ಹರೇಕಳ ಹಾಜಬ್ಬರು ಕಿತ್ತಳೆ ಹಣ್ಣನ್ನು ಮಾರಿದ ಸ್ಟೇಟ್ ಬ್ಯಾಂಕ್ ರಸ್ತೆಗೆ ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ ಎಂಬುದಾಗಿ ನಾಮಕರಣ ಮಾಡಲು ಮುಂದಾಗಿದೆ.
ಸ್ಟೇಟ್ ಬ್ಯಾಂಕ್ ವೃತ್ತದಿಂದ ರಾವ್ & ರಾವ್ ವೃತ್ತದವರೆಗಿನ ರಸ್ತೆಗೆ ಹೊಂದಿಕೊಂಡಿರುವ ಮೂರು ರಸ್ತೆಗಳ ಪೈಕಿ ಯಾವುದಾದರೂ ರಸ್ತೆಗೆ ಅಥವಾ ವೃತ್ತಕ್ಕೆ ಹೆಸರಿಡುವಂತೆ ಮಹಾನಗರ ಪಾಳಿಕೆ ಸದಸ್ಯ ಅಬ್ದುಲ್ ಲತೀಫ್ ಮನವಿ ಮಾಡಿದ್ದರು.
ಹರೇಕಳ ಹಾಜಬ್ಬರ ಹೆಸರು ಹಾಜಬ್ಬರು ಕಿತ್ತಳೆ ಮಾರಿದ ರಸ್ತೆ ಗೆ ಇಡುವ ನಿರ್ಧಾರ ಕರಾವಳಿಗರಲ್ಲಿ ಹರ್ಷ ತಂದಿದೆ. ಈ ಮೂಲಕ ಶಿಕ್ಷಣ ಸಂತನಿಗೆ ಗೌರವ ನೀಡಲಾಗಿದೆ.