Thursday, 19th May 2022

ಪ್ಯಾರಿಸ್‌ನಲ್ಲಿ ಲಿಡೋ ಶೋ

ಡಾ.ಕೆ.ಎಸ್‌.ಪವಿತ್ರ

ಮಹಿಳೆಯರ ಕ್ಯಾಬರೆ ನೃತ್ಯವನ್ನು ಪ್ರದರ್ಶಿಸುವ ಲಿಡೋ ಶೋ, ಪ್ಯಾರಿಸ್‌ನಲ್ಲಿ ಬಹು ಪ್ರಸಿದ್ಧ. ಆ ಶೋ ಕಂಡ ಲೇಖಕಿಯ ಮನದಲ್ಲಿ ಮೂಡಿದ್ದು ಮಿಶ್ರಭಾವ.

ಪ್ಯಾರಿಸ್ ಮೆಟ್ರೋ ಟ್ರೇನ್‌ನಲ್ಲಿ ಕುಳಿತು ‘ಮೌಲೀನ್ ರೋಜ್’ ಸ್ಟೇಷನ್‌ನಲ್ಲಿ ಇಳಿದಾಗಿತ್ತು. ರಾತ್ರಿ 8 ಗಂಟೆಯ ಶೋ. ನನಗೆ-ನಾಗರಾಜ್ ಇಬ್ಬರಿಗೂ ‘ಕ್ಯಾಬರೆ’ ನೋಡಲು ಹೋಗುತ್ತಿರುವ ಬಗ್ಗೆ ಸ್ವಲ್ಪ ಕುತೂಹಲ-ಮುಜುಗರ. ಏನೋ ಮಾಡಬಾರದ್ದನ್ನು ಮಾಡುತ್ತಿದ್ದೇವೆ ಅನ್ನುವಂತಹ ಆತಂಕ. ಸ್ವಲ್ಪ ‘ಥ್ರಿಲ್’! ಏಕೆ ? ನಮ್ಮ ಮನಸ್ಸಿನಲ್ಲಿ ‘ಕ್ಯಾಬರೆ’ ಅಂದರೆ ‘ಕ್ಯಾಬರೆ’! ನಾನು ಬಾಲ್ಯದಲ್ಲಿ ‘ಕ್ಯಾಬರೆ’ ಎಂದರೆ ನೆನಪಾಗುತ್ತಿದ್ದದ್ದು, ನೋಡಿ ದ್ದದ್ದು ಹಳೆಯ ಹಿಂದಿ ಸಿನಿಮಾಗಳಲ್ಲಿ ಮೈ ಕೈ ಕುಣಿಸುತ್ತಿದ್ದ ಹೆಲೆನ್ ಮತ್ತು ಕನ್ನಡ ಸಿನಿಮಾಗಳ ಜಯ ಮಾಲಿನಿಯರಿಬ್ಬರನ್ನೇ.

‘ಕ್ಯಾಬರೆ’ ಡಾನ್ಸರ‍್ಸ್ ಅನ್ನು ಸಿನಿಮಾದಲ್ಲಿ ನಾಯಕಿಯರಿಗಿಂತ ಬೇರೆಯಾಗಿ ನಾವು ನೋಡುತ್ತಿದ್ದರೂ, ಅದು ರಸಾಸ್ವಾದನೆ ಯಷ್ಟೇ ಆಗಿರುತ್ತಿತ್ತು. ಅದು ಎಂದೂ ಮನಸ್ಸನ್ನು ಪ್ರಚೋದಿಸುತ್ತಿರಲಿಲ್ಲ. ಬಾಲ್ಯದಲ್ಲಿ ನಾನು ನೋಡಿದ ಕ್ಯಾಬರೆ ಇಷ್ಟೇ. ಎಂ.ಬಿ.ಬಿ.ಎಸ್. ಕೊನೆಯ ವರ್ಷದಲ್ಲಿ ಅಪ್ಪ ನಮ್ಮನ್ನು ಮೊದಲ ಹೊರದೇಶ ಪ್ರವಾಸಕ್ಕೆ ಕರೆದೊಯ್ದಿದ್ದರು. ಆಗ ವಿದೇಶ ಪ್ರವಾಸ ಎಂದರೆ ಸಿಂಗಪೂರ್-ಮಲೇಷಿಯಾ- ಥೈಲ್ಯಾಂಡ್. ಮೊದಲು ನಾವು ಹೋದ ಬ್ಯಾಂಕಾಕ್‌ನಲ್ಲಿ ಹಲವು ‘ಶೋ’ಗಳಿದ್ದವು. ಅವುಗಳಲ್ಲಿ ಕೊಂಚ ಮಾದಕ ಅನ್ನುವಂತೆ ಹಾಡಿ -ಕುಣಿದಿದ್ದರು.

ರಾತ್ರಿ ಹೊತ್ತು ಸುಮಾರು 12 ಗಂಟೆಯವರೆಗೆ ನಡೆಯುವ ಮತ್ತೊಂದು ‘ಪ್ಯಾಟ್ ಪಾಂಗ್’ ಶೋ ಎನ್ನುವ ಪ್ರದರ್ಶನವನ್ನು ಅದರಲ್ಲಿ ಏನೆಲ್ಲಾ ನಡೆಯಬಹುದು ಎಂದು ಊಹಿಸಿಯೇ ನಾವು ಹೋಗಲು ಹಿಂಜರಿದಿದ್ದೆವು. ಅದರ ನಂತರ ಬ್ಯಾಂಕಾಕ್‌ಗೆ ಹೋಗುವುದು ಎಂದರೆ ‘ಅಲ್ಲಿ ಏನೇ ಇದ್ದರೂ, ಮನಸ್ಸಿಗೆ ಮುಜುಗರ
ತರುವಂಥದ್ದು, ಗಂಡು ಮಕ್ಕಳನ್ನು ‘ರಕ್ಷಿಸಿ’ಕೊಂಡೇ ಜನ ತಿರುಗಾಡಬೇಕಾಗುತ್ತದೆ’ ಎಂಬ ಭಾವನೆ ಮನಸ್ಸಿಗೆ ಬರುತ್ತಿತ್ತು. ಇದಾದ ಬಹು ವರ್ಷಗಳ ನಂತರ ‘ನೈಟ್ ಲೈಫ್’ ನಿಂದ ನಾನು ದೂರವೇ ಉಳಿದಿದ್ದೆ. ವಿದೇಶಗಳಿಗೆ ಹೋಗುವುದಿದ್ದರೂ ಅಲ್ಲಿ ಸಾಂಸ್ಕೃತಿಕ ಷೋಗಳಿಗೆ ಹೋಗುತ್ತಿದ್ದೆ ಬಿಟ್ಟರೆ, ಕ್ಯಾಬರೆ ಕಡೆ ಕ್ಯಾರೇ ಎನ್ನುತ್ತಿರಲಿಲ್ಲ! ಆದ್ದರಿಂದಲೇ ನಾವಿಬ್ಬರು ‘ಲಿಡೋ ಶೋ’ ಗೆ ಹೋಗಬೇಕೆಂದು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿಯೇ ಬಿಟ್ಟಿದ್ದೆವು.

ನೈಟ್‌ಕ್ಲಬ್ ನೃತ್ಯ
ಲಿಡೋ ಶೋ ಅಂದರೆ ಒಂದು ಕ್ಯಾಬರೆ. ಕ್ಯಾಬರೆ ಅಂದರೆ? ಹಾಡು-ವಾದ್ಯ-ನೃತ್ಯ-ಮಾತು-ನಾಟಕ ಎಲ್ಲವೂ ಒಟ್ಟಿಗೆ ನಡೆಯುವ ಒಂದು ರೀತಿಯ ಮನರಂಜನೆ. ಈ ಮನರಂಜನೆ ನಡೆಯುವ ಸ್ಥಳ ಪಬ್, ಕ್ಯಾಸಿನೋ (ಜೂಜುಕಟ್ಟೆ), ನೈಟ್ ಕ್ಲಬ್. ಪ್ರೇಕ್ಷಕರು ಕುಳಿತು, ತಿನ್ನುತ್ತಾ-ಕುಡಿಯುತ್ತಾ ನೋಡುತ್ತಾರೆ ಹೊರತು, ನೃತ್ಯದಲ್ಲಿ ಪಾಲ್ಗೊಳ್ಳಲು ಇಲ್ಲಿ ಅವಕಾಶವಿಲ್ಲ. ಫ್ರಾನ್ಸ್ ಈ ಕ್ಯಾಬರೆಗೆ ಪ್ರಸಿದ್ಧ. ೧೫ನೇ ಶತಮಾನದ ಕೊನೆಯ ಭಾಗದಲ್ಲಿ ಆರಂಭವಾದ ‘ಟ್ಯಾವರ್ನ್’ ಎಂಬ ತಾಣಗಳು ಆಹಾರ ಮತ್ತು ವೈನ್ ಎರಡನ್ನೂ, ಮನರಂಜನೆಯ ಜೊತೆ ನೀಡುತ್ತಿದ್ದವು.

ಫ್ರಾನ್ಸ್‌ನಲ್ಲಿ ಹೀಗೆ ಆರಂಭವಾದ ಕ್ಯಾಬರೆಗಳು ಬರೆಹಗಾರರು, ನಟರು ಮತ್ತು ಕಲಾವಿದರ ಭೇಟಿಯ ತಾಣವಾಗಿದ್ದವು.  ಈಗ ನಾವು ನೋಡಿದ ‘ಲಿಡೋ ಶೋ’ಗೆ ಬರೋಣ. 1946ರಲ್ಲಿ ಜೋಸೆಫ್ ಮತ್ತು ಲೂಯಿ ಕ್ಲರಿಕೋ ಅವರಿಂದ ತೆರೆಯಲ್ಪಟ್ಟ ಕೃತಕ ಬೀಚ್ ಆಗಿ ಒಂದು ಟೌನ್‌ಹಾಲ್‌ನ ನೆಲಮಾಳಿಗೆಯಲ್ಲಿ ಮೊದಲು ಆರಂಭವಾಯಿತು. 1977ರಲ್ಲಿ ಈಗಿರುವ ಚ್ಯಾಂಪ್ ಎಲಿಸೀಸ್‌ಗೆ ಇದು ಬಂತು. 2006ರಲ್ಲಿ ಸೋಡೆಕ್ಸ್ ಎಂಬ ಆಹಾರದ ಕಂಪೆನಿ ‘ಲಿಡೋ ಶೋ’ ಅನ್ನು ಖರೀದಿಸಿ, 24 ಮಿಲಿಯನ್ ಯೂರೋಗಳ ಬಂಡವಾಳವನ್ನು ‘ಶೋ’ ಅಭಿವೃದ್ಧಿಗಾಗಿ ಹೂಡಿತು.

ಈಗಿರುವ ‘ಶೋ’ನ ನಿರ್ಮಾತೃ ಫ್ರಾಂಕೋ ಡ್ರ್ಯಾಗೋನ್. ಪ್ರತಿ ಶೋ 10ರಿಂದ 20 ದೃಶ್ಯಗಳನ್ನು ಒಳಗೊಳ್ಳುತ್ತದೆ. ‘ಶೋ’ ಗೆ ಮೊದಲು ಶ್ಯಾಂಪೇನ್ ಮತ್ತು ಊಟವನ್ನು ನೀವು ಕಾಯ್ದಿರಿಸಬಹುದು. ನೀವು ಒಳಗೆ ಹೊಕ್ಕ ತಕ್ಷಣ ಮೊದಲು ನೆನಪಿಸಿಕೊಳ್ಳಬೇಕಾದ್ದು ಶಿಷ್ಟಾಚಾರಗಳು! ಒಳಗೆ ಹೋಗುವಾಗ ಜ್ಯಾಕೆಟ್‌ ಗಳನ್ನು ಲಾಕರ್‌ ನಲ್ಲಿಡುವುದು, ಫೋಟೋ ತೆಗೆಯುವಂತಿಲ್ಲ ಎಂದು ಎಚ್ಚರಿಸುವುದು, ರಿಸರ್ವೇಷನ್ ನೋಡಿ ನಿಮ್ಮನ್ನು ಟೇಬಲ್‌ಗೆ ಕರೆದೊಯ್ಯುವುದು ಇವೆಲ್ಲವೂ ನಡೆಸಲು ಟಿಪ್‌ಟಾಪಾಗಿ ಡ್ರೆಸ್ ಮಾಡಿ ಕೊಂಡವರು ಬರುತ್ತಾರೆ.

ವಿವಿಧ ಎಫೆಕ್ಟ್‌ಗಳು

‘ಬ್ಲೂಬೆಲ್ ಗರ್ಲ್ಸ್’ ಎಂಬ ಪ್ರಸಿದ್ಧ ತಂಡದಿಂದ ಆರಂಭವಾಗುವ ‘ಲಿಡೋ ಶೋ’ ವೈಭವೋಪೇತ ವೇಷಭೂಷಣಗಳು, ಡಾಲರ್‌ಗಳನ್ನು ರೆಕ್ಕೆಪುಕ್ಕಗಳಲ್ಲಿ ಸಿಲುಕಿಸಿರುವುದು, ಉತ್ತಮ ಗುಣಮಟ್ಟದ ಫರ್‌ಗಳಿಂದ ಕಂಗೊಳಿಸುತ್ತವೆ. ಪ್ರತಿ ‘ಶೋ’ ವಿನ ಕಲರ್ ಥೀಮ್ ಬೇರೆ ಬೇರೆ. ನೀರಿನ ಎಫೆಕ್ಟ್‌ ಗಳು ಕನಿಷ್ಟ ಒಂದೆರಡು ದೃಶ್ಯಗಳಲ್ಲಾದರೂ ಬರುತ್ತದೆ. ಸರ್ಕಸ್ ರೀತಿಯ, ಬ್ಯಾಲೆ ರೀತಿಯ ಚಲನೆಗಳು, ನೀರಿನಲ್ಲಿ ಸ್ನಾನ ಮಾಡುವ, ಈಜುವ ದೃಶ್ಯಗಳು, ಕಡ್ಡಾಯವಾಗಿ ಕಾಣುತ್ತವೆ. ‘ಬ್ಲೂಬೆಲ್ ಗರ್ಲ್ಸ್’ ಪ್ರಸಿದ್ಧ ತಂಡವೆಂದೆನಷ್ಟೆ. ಜಗತ್ತಿನ ಎಲ್ಲಾ ಕಡೆಗಳಿಂದ ಕಲಾವಿದರು ಇದರಲ್ಲಿರುತ್ತಾರೆ. ಅವರ ಎತ್ತರ ಸಾಮಾನ್ಯವಾಗಿ 5 ಅಡಿ 11 ಇಂಚುಗಳು. ಅಥ್ಲೀಟ್ ತರಹದ ಮೈಕಟ್ಟು, ಮುಖದಲ್ಲಿ ಮಾತ್ರ ನಿರ್ಭಾವುಕತೆಯೇ ಪ್ರಮುಖ ಅಭಿನಯ!

ಮಕ್ಕಳೂ ಪ್ರೇಕ್ಷಕರು!
ಬೇರೆ ಬೇರೆ ಶೀರ್ಷಿಕೆಗಳ ನಿರ್ಮಾಣಗಳು-ಮಿಸಿಸ್ಸಿಪ್ಪಿ, ಎನ್ ಟ್ಯಾಂಚ್‌ಮೆಂಟ್, ವೊಯಿಲಾ, ಪ್ಯಾರಿಸ್ ಮಾರ್ವೆಲಸ್, ಇಲ್ಲಿ ಪ್ರದರ್ಶಿತ. ಒಂದು ವಿಷಯ ಗಮನಾರ್ಹ. ಅರೆನಗ್ನತೆ, ನಿತಂಬಗಳು, ಸ್ತನಗಳು ಇವು ಪ್ರದರ್ಶಿತವಾದರೂ ಅವು ‘ಅಸಹ್ಯ’ ಎನಿಸಲಿಲ್ಲ. ಕಲಾತ್ಮಕತೆಯಿಂದ ದೇಹ-ಪ್ರದರ್ಶನ ನಡೆದು, ಪ್ರಚೋದನೆಯಿಂದ ಅದು ದೂರವೇ ಉಳಿಯಿತು.

ಪ್ರೇಕ್ಷಕರಲ್ಲಿ ಕೆಲ ಮಕ್ಕಳೂ ಇದ್ದರು! ಅವರ ಮನಸ್ಸಿನಲ್ಲಿ ಅದು ಯಾವ ಭಾವ/ಕುತೂಹಲ ಮೂಡಿಸಿತೋ ನಾನರಿಯೆ. ಆದರೆ ನನಗೆ ವೈಯಕ್ತಿಕವಾಗಿ ಎಲ್ಲರ ಜೊತೆ ಕುಳಿತು, ಮುಕ್ತವಾಗಿ ನೋಡಲು, ಪ್ರಶಂಸಿಸಲು ಮುಜುಗರ ಎನಿಸಿತು! ಅದು ನನ್ನ ಸೂಕ್ಷ್ಮತೆಯೋ ಅಥವಾ ಭಾರತೀಯ ಮಹಿಳಾ ಮನಸ್ಸುಗಳಿಗೆ
ಅದು ಸಹಜವಾದದ್ದೋ ಗೊತ್ತಿಲ್ಲ. ‘ಲಿಡೋ ಶೋ’ ಮುಗಿಸಿ ಹೊರಬರುವಾಗ ಮನಸ್ಸಿಗೆ ಒಂದು ತರಹದ ಸಂತಸ-ವಿಷಾದಗಳ ಮಿಶ್ರ ಭಾವ. ಇದೊಂದು ಕಲೆ ಅಂದುಕೊಂಡರೂ ಅರ್ಥವಾಗದ ಕಸಿವಿಸಿ! ‘ಲಿಡೋ ಷೋ’ ನೋಡಿದ ಇತರರು ಅದನ್ನೊಂದು ಪ್ರದರ್ಶನವಾಗಿಯಷ್ಟೇ ನೋಡಿ ಸಂತಸ ಪಟ್ಟಿರಬಹುದು. ಆದರೆ ನನಗೆ ಆಹಾರ-ಪಾನೀಯಗಳೊಂದಿಗೇ ದೇಹ-ಕಲೆಗಳೂ ಒಂದಾದವು ಎಂಬ ಭಾವ ಬಂದದ್ದು ಸತ್ಯ!

ಬಲವಂತವಿಲ್ಲದ ಫೋಟೋಶೂಟ್

‘ಲಿಡೋಷೋ’ ನಲ್ಲಿ ಕುಳಿತ ತಕ್ಷಣ ದೊಡ್ಡ ಕ್ಯಾಮೆರಾ ತಗುಲಿಸಿಕೊಂಡ ಕ್ಯಾಮೆರಾಮನ್ ಬರುತ್ತಾನೆ, ಆತನೊಂದಿಗೆ ಒಬ್ಬಳು ಸುಂದರ ಸಹಾಯಕಿ. ಇಬ್ಬರೂ ಬಂದು ‘ಖರೀದಿಸಬೇಕೆಂದೇನೂ ಇಲ್ಲ’ ಎನ್ನುತ್ತಲೇ ಫೋಟೋ ಕ್ಲಿಕ್ಕಿಸುತ್ತಾರೆ. ಅವೆಲ್ಲವೂ ದೊಡ್ಡ ಫ್ರೇಮಿನಲ್ಲಿ ಪ್ರಿಂಟಾಗಿ ಬರುತ್ತವೆ! ಒಂದಕ್ಕೆ ಬರೋಬ್ಬರಿ 25 ಯೂರೋ ಅಂದಾಜು 2500 ರೂಪಾಯಿಗಳು! ‘ಖರೀದಿಸಬೇಕೆಂದೇನೂ ಇಲ್ಲ’ ಎಂದರೂ ‘ತೆಗೆಸಿ-ಪ್ರಿಂಟ್ ಮಾಡಿಸಿದ್ದೇವಲ್ಲ’ ಎಂಬ ಮುಲಾಜೇ 100 ಕ್ಕೆ 99 ಜನರು ಕೊಂಡುಕೊಳ್ಳುವಂತೆ ಮಾಡುತ್ತದೆ. ನಮ್ಮ ಕ್ಯಾಮೆರಾ ಹೊರ ತೆಗೆಯುವಂತೆಯೂ ಇಲ್ಲ!

ಹಾಗಾಗಿ ಹೆಚ್ಚಿನ ಜನ ‘ನೆನಪಿಗಿರಲಿ’ ಎಂದು ಖರೀದಿಸದೆ ಬಿಡುವುದಿಲ್ಲ. ನಾನು  ಮಾತ್ರ ‘ನಾವೇನು ಇವರಿಗೆ ಮತ್ತೆ ಮತ್ತೆ ಸಿಕ್ಕುವುದಿಲ್ಲ, ಹಾಗಾಗಿ ಮುಜುಗರ ವೇನು? ಅಷ್ಟು ದುಡ್ಡು ಕೊಡಲು ಸಾಧ್ಯವಿಲ್ಲ. ಹೊರಗೆ ‘ಲಿಡೋ ಶೋ’ ಬೋರ್ಡಿನ ಮುಂದೆಯೇ ಫೋಟೋ ತೆಗೆದುಕೊಂಡರೆ ಆಯ್ತು. ಕಣ್ಣಿನಲ್ಲಿ ನೋಡುವಂತ ದ್ದನ್ನೆಲ್ಲಾ ತುಂಬಿಕೊಂಡು, ನೆನಪಿಟ್ಟುಕೊಂಡರೆ ಫೋಟೋ ತೆಗೆದುಕೊಂಡ ಹಾಗೇ’ ಎಂದು ‘ಬೇಡ’ ಎಂದೆ. ನಾಗರಾಜ್ ತುಂಬಾ ಮುಜುಗರ ಪಟ್ಟುಕೊಂಡು, ‘ಯಾರೂ ಹೀಗೆ ಮಾಡಲಾರರು’ ಎಂದು ಕ್ಯಾಮೆರಾಮನ್ ಮುಖ ನೋಡಲೂ ನಿರಾಕರಿಸಿದರು!

ಕ್ಯಾಮೆರಾಮನ್ ಮತ್ತು ಸುಂದರಿ ಸಹಾಯಕಿ ಮಾತ್ರ ನಗುತ್ತಲೇ ‘ನೋ ಪ್ರಾಬ್ಲಂ ಮ್ಯಾಮ್’ ಎಂದು ಫೋಟೋಗಳನ್ನು ವಾಪಸ್ ತೆಗೆದುಕೊಂಡು ಹೋದರು!