Thursday, 2nd February 2023

ರಾಮನಗರ, ಮಂಡ್ಯದಲ್ಲಿ ಶಾಂತಿಯುತ ಮತದಾನ

ರಾಜಕೀಯ ಜಿದ್ದಾಜಿದ್ದಿನ ಜಿಲ್ಲೆಗಳಲ್ಲಿ ಅಹಿಕರ ಘಟನೆಗಳಿಗೆ ಬ್ರೇಕ್ 

ಮತಗಟ್ಟೆಗಳ ಹೊರಗೆ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದ ಯುವಕರ ದಂಡು 

ಅಲ್ಲಲ್ಲಿ ಮದ್ಯದ ನಿಶಾಬಾಜಿ, ಬಾಡೂಟದ ಘಮಲು

ಮಂಡ್ಯ / ರಾಮನಗರ : ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದೆ. ಮಂಡ್ಯ ಜಿಲ್ಲೆಯಲ್ಲಿ ಶೇಕಡ 86 ಮತ್ತು ರಾಮನಗರ ಜಿಲ್ಲೆಯಲ್ಲಿ ಶೇಕಡ 90 ರಷ್ಟು ಮತಗಳು ಚಲಾವಣೆಗೊಂಡಿವೆ.

ಮಂಡ್ಯ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಮಂಡ್ಯ, ಮದ್ದೂರು ಮತ್ತು ಮಳವಳ್ಳಿಯಲ್ಲಿ, ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ರಾಮನಗರ, ಕನಕಪುರ ತಾಲೂಕುಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಿತು. ಬೆಳಗ್ಗೆ ಮಂದಗತಿ ಯಲ್ಲಿ ಪ್ರಾರಂಭಗೊಂಡ ಮತದಾನ ಮಧ್ಯಾಹ್ನದ ವೇಳೆಗೆ ಬಿರುಸುಗೊಂಡಿತು.

ಅಲ್ಲಲ್ಲಿ ಮದ್ಯದ ನಿಶಾಬಾಜಿಯಲ್ಲಿ ತೇಲುತ್ತಿದ್ದವರು ಕಂಡು ಬಂದರು. ಕಟ್ಟುನಿಟ್ಟಿನ ಕ್ರಮದ ಹೊರತಾಗಿಯೂ ಅಭ್ಯರ್ಥಿಗಳ ಪರವಾಗಿ ಬಾಡೂಟದ ಆಯೋಜನೆ ಸಾಮಾನ್ಯವಾಗಿತ್ತು. ಮತಗಟ್ಟೆಗಳ ಹೊರಗೆ ಮತದಾರರಿಗೆ ಹಣದ ಆಮಿಷ, ಬಳುವಳಿಗಳ ಹಂಚಿಕೆ ದೃಶ್ಯಗಳು ಕಂಡು ಬಂದವು.

ಮಧ್ಯಾಹ್ನ ಬಳಿಕ ಬಿರುಸು: ರಾಮನಗರ ಜಿಲ್ಲೆಯಲ್ಲಿ ಬೆಳಗ್ಗೆ 9ರ ವೇಳೆಗೆ ಶೇಕಡ 10.48, ಬೆಳಗ್ಗೆ 11ರ ವೇಳೆಗೆ 27.08, ಮಧ್ಯಾಹ್ನ 1ರ ವೇಳೆಗೆ 54.07, ಮಧ್ಯಾಹ್ನ 3ರ ವೇಳೆಗೆ 72.53ರಷ್ಟು ಮತದಾನವಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಬೆಳಗ್ಗೆ 9ರ ವೇಳೆಗೆ ಶೇಕಡ 8.9, ಬೆಳಗ್ಗೆ 11ರ ವೇಳೆಗೆ 25.16, ಮಧ್ಯಾಹ್ನ 1ರ ವೇಳೆಗೆ 48.25, ಮಧ್ಯಾಹ್ನ 3ರ ವೇಳೆಗೆ 68.88ರಷ್ಟು ಮತದಾನವಾಗಿತ್ತು.

ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಮತಗಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪೊಲೀಸರು ಮಧ್ಯೆ ಪ್ರವೇಶಿಸಿ, ಎರಡೂ ಗುಂಪಿನವರನ್ನು ಸಮಾಧಾನಪಡಿಸುವ ಮೂಲಕ ಅಹಿತಕರ ಘಟನೆಯನ್ನು ತಪ್ಪಿಸಿದ್ದಾರೆ. ಇದನ್ನು ಹೊರತುಪಡಿಸಿ ಉಳಿದೆಲ್ಲೂ ಅಹಿತಕರ ಘಟನೆ ಸಂಭವಿಸಿಲ್ಲ.

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆAಕಟೇಶ್ ಅವರು ಮಂಡ್ಯ, ಮದ್ದೂರು, ಮಳವಳ್ಳಿ ಮೂರೂ ತಾಲೂಕುಗಳ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಇತ್ತ ರಾಮನಗರದಲ್ಲೂ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ರಾಮನಗರ, ಕನಕಪುರ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.

ಗಣ್ಯರಿಂದ ಮತದಾನ: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಮತಗಟ್ಟೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ ಚಲಾವಣೆ ಮಾಡಿದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಅಂಬರೀಶ್ ಅವರ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಮತಗಟ್ಟೆಯಲ್ಲಿ ಸರತಿಯಲ್ಲಿ ನಿಂತು ಮತ ಚಲಾವಣೆ ಮಾಡಿದರು.
ಮಳವಳ್ಳಿ ತಾಲೂಕಿನ ಪೂರಿಗಾಲಿ ಮತಗಟ್ಟೆಯಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಕುಟುಂಬ ಸಮೇತ ಮತದಾನ ಮಾಡಿದರು. ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಅವರು ಹನಕೆರೆ ಮತಗಟ್ಟೆಯಲ್ಲಿ, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರು ದೊಡ್ಡರಸಿನಕೆರೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಅವರು ಹುಸ್ಕೂರು  ಮತಗಟ್ಟೆಯಲ್ಲಿ, ಮಾಜಿ ಸಂಸದ ಜಿ.ಮಾದೇಗೌಡ ಅವರು ಮದ್ದೂರು ತಾಲೂಕಿನ ಗುರುದೇವರಹಳ್ಳಿ ಮತಗಟ್ಟೆಯಲ್ಲಿ, ಪಿಇಟಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ, ಮಾಜಿ ಶಾಸಕ ಎಚ್.ಬಿ.ರಾಮು ಅವರು ಹೊಳಲು ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಯುವಕರದ್ದೇ ಪಾರುಪತ್ಯ: ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಬಹುತೇಕ ಯುವ ಹುರಿಯಾಳುಗಳೇ ಅಧಿಕ ಸಂಖ್ಯೆ ಯಲ್ಲಿ ಸ್ಪರ್ಧಿಸಿದ್ದು, ಅವರ ಪರವಾಗಿ ಪ್ರಚಾರದಲ್ಲೂ ಯುವಕರ ದಂಡು ತೊಡಗಿಸಿಕೊಂಡಿತ್ತು. 18 ವಯಸ್ಸು ತುಂಬಿದ ಶೇಕಡ 5ರಷ್ಟು ಮತದಾರರು ಚೊಚ್ಚಲ ಬಾರಿಗೆ ಅತ್ಯುತ್ಸಾಹದಿಂದಲೇ ಮತ ಚಲಾವಣೆ ಮಾಡಿದರು.

ನೋ ಕಾಮೆಂಟ್ಸ್ ; ಸುಮಲತಾ
ಬಿಜೆಪಿ ಜತೆಗೆ ಜೆಡಿಎಸ್ ವಿಲೀನ ಪ್ರಕ್ರಿಯೆ ತಮಗೇನೂ ತಿಳಿದಿಲ್ಲ. ಆ ಬಗ್ಗೆ ಪ್ರತಿಕ್ರಿಯಿಸದಿರುವುದೇ ಸೂಕ್ತ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಮತಗಟ್ಟೆಯಲ್ಲಿ ಮತ ಚಲಾವಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ತಾವು ಪ್ರತಿಕ್ರಿಯಿಸದಿರುವುದು ಲೇಸು ತಂದರು.

ವಿಲೀನಕ್ಕೆ ಅನ್ನದಾನಿ ವಿರೋಧ
ಬಿಜೆಪಿ ಜತೆಗೆ ಜೆಡಿಎಸ್ ವಿಲೀನ ಆಗುವುದಕ್ಕೆ ತಮ್ಮ ವಿರೋಧವಿದೆ. ಈ ಬಗ್ಗೆ ತಮ್ಮ ಪಕ್ಷದ ವರಿಷ್ಠರಿಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುವುದಾಗಿ ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದ್ದಾರೆ. ಮಳವಳ್ಳಿ ತಾಲೂಕಿನ ಹುಸ್ಕೂರು ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಪ್ರಸ್ತುತ ರಾಜಕಾರಣದಲ್ಲಿ ಅಗತ್ಯವಾಗಿದೆ ಎಂದರು.

ಮಳವಳ್ಳಿ ಕ್ಷೇತ್ರದೆಲ್ಲೆಡೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಹೋರಾಟ ನಡೆಸ ಲಾಗಿದೆ. ಜೆಡಿಎಸ್ ಬೆಂಬಲಿತ ಹುರಿಯಾಳುಗಳು ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಅನ್ನದಾನಿ ಹೇಳಿದರು.

ವಿಶೇಷ ಚೇತನಗೆ ಡಿಸಿ ನೆರವು: ಮಂಡ್ಯ ಜಿಲ್ಲೆಯ ವಿವಿಧೆಡೆ ಮತದಾನ ಪ್ರಕ್ರಿಯೆ ವೀಕ್ಷಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕ ಟೇಶ್ ಅವರು ಮತಗಟ್ಟೆಯೊಂದರಲ್ಲಿ ವೀಲ್ ಚೇರ್‌ನಲ್ಲಿ ಆಗಮಿಸಿದ್ದ ವಿಶೇಷ ಚೇತನ ವ್ಯಕ್ತಿಯೊಬ್ಬರ ಕುಶಲೋಪರಿ ವಿಚಾರಿಸಿ, ಮತದಾನ ಮಾಡುವುದಕ್ಕೆ ನೆರವಾದರು.

ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಲ್ಪಿಸಿದ್ದ ಊಟ, ವಸತಿ ಸೌಲಭ್ಯದ ಬಗ್ಗೆಯೂ ವಿಚಾರಿಸಿಕೊಂಡರು. ಕೆಲವೆಡೆ ಎದುರಾಗಿದ್ದ ಸಣ್ಣಪುಟ್ಟ ಗೊಂದಲಗಳನ್ನು ನಿವಾರಣೆ ಮಾಡುವಲ್ಲೂ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ತೊಡಗಿದ್ದರು.

ಪ್ರಜಾಪ್ರಭುತ್ವ ಹಬ್ಬಕ್ಕೆ ಸ್ವಾಗತ: ಮದ್ದೂರು ತಾಲೂಕಿನ ಗೆಜ್ಜಲಗೆರೆ ಸರಕಾರಿ ಶಾಲೆಯ ಮತಗಟ್ಟೆ ಎದುರು ಪ್ರಜಾಪ್ರಭುತ್ವದ ಹಬ್ಬಕ್ಕೆ ಸ್ವಾಗತ ಎನ್ನುವ ಫ್ಲೆಕ್ಸ್ ಅಳವಡಿಸಿದ್ದು ಗಮನ ಸೆಳೆಯಿತು. ಕೊರೋನಾ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ಮತ ಚಲಾವಣೆಗೆ ಬಂದ ಬಹುತೇಕರು ಮಾಸ್ಕ್ ತೊಡದಿರುವುದು ಕಂಡು ಬಂದಿತು.

ಮದ್ದೂರು ತಾಲೂಕಿನ ಬೂದಗುಪ್ಪೆ, ಬೆಸಗರಹಳ್ಳಿ, ಚಾಮನಹಳ್ಳಿ ಸೇರಿದಂತೆ ಕೆಲವೆಡೆ ಮತಗಟ್ಟೆ ಹೊರಗೆ ಮತದಾರರ ಮನವೊಲಿಸಲು ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಆಗಾಗ್ಗೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈ ಮೀರುವಷ್ಟರಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದರು.

ಸೋಂಕಿತರಿಂದ ಮತದಾನ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೊರೋನಾ ಸೋಂಕಿತರ ಮತದಾನಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದ ಮತಗಟ್ಟೆಯಲ್ಲಿ ಕೊರೋನಾ ಸೋಂಕಿತರೊಬ್ಬರು ಪಿಪಿಇ ಕಿಟ್ ತೊಟ್ಟು ಆಗಮಿಸಿ, ಮತ ಚಲಾವಣೆ ಮಾಡಿದರು.

ವೈದ್ಯಕೀಯ ಸಿಬ್ಬಂದಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ಕೊರೋನಾ ಸೋಂಕಿತ ವ್ಯಕ್ತಿಯನ್ನು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ಸ್ವಾಗತಿಸಿ, ಮತ ಚಲಾವಣೆಗೆ ಅನುವು ಮಾಡಿಕೊಟ್ಟರು. ಆ ವೇಳೆ ಸರತಿಯಲ್ಲಿ ನಿಂತಿದ್ದವರು ಕೊರೋನಾ ಸೋಂಕಿತ ವ್ಯಕ್ತಿಯಿಂದ ಅಂತರ ಕಾಯ್ದುಕೊಂಡು, ಮುಂದೆ ಹೋಗಿ ಮತ ಚಲಾಯಿಸಲು ಅವಕಾಶ ನೀಡಿದರು.

ಮಂಡ್ಯ ಜಿಲ್ಲೆ ಮತದಾನ ವಿವರ: ಮಂಡ್ಯ ಜಿಲ್ಲೆಯ 126 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಶೇಕಡ 86ರಷ್ಟು ಮತದಾನವಾಗಿದೆ. ಮಂಡ್ಯ ತಾಲೂಕಿನಲ್ಲಿ ಶೇಕಡ 86.21, ಮದ್ದೂರು ತಾಲೂಕಿನಲ್ಲಿ ಶೇಕಡ 87.03ರಷ್ಟು ಮತ್ತು ಮಳವಳ್ಳಿ ತಾಲೂಕಿನಲ್ಲಿ ಶೇಕಡ 84.53ರಷ್ಟು ಮತಗಳು ಚಲಾವಣೆಯಾಗಿವೆ. 6,04,495 ಮತದಾರರ ಪೈಕಿ 5,19,621 ಮಂದಿ ಮತ ಚಲಾಯಿಸಿದ್ದಾರೆ.

ಮಂಡ್ಯ ತಾಲೂಕಿನಲ್ಲಿ 94,608 ಪುರುಷರು ಮತ್ತು 94,838 ಮಹಿಳೆಯರು ಸೇರಿದಂತೆ 1.89.446 ಮಂದಿ ಮತ ಚಲಾಯಿಸಿದ್ದಾರೆ. ಮದ್ದೂರು ತಾಲೂಕಿನಲ್ಲಿ 86,227 ಪುರುಷರು ಮತ್ತು 86,337 ಮಹಿಳೆಯರು ಸೇರಿದಂತೆ 1,72,564 ಮಂದಿ, ಮಳವಳ್ಳಿ ತಾಲೂಕಿ ನಲ್ಲಿ 80,693 ಪುರುಷರು ಮತ್ತು 76,918 ಮಹಿಳೆಯರು ಸಹಿತ 1,57,611 ಮತದಾರರು ಮತ ಚಲಾವಣೆ ಮಾಡಿದ್ದಾರೆ.

error: Content is protected !!