Sunday, 27th November 2022

ಮೇಷ್ಟ್ರುಗಳಿಗೇ ಸರಿಯಾದ ಅಡಿಪಾಯ ಇಲ್ಲದಿ‌ದ್ದಾಗ ಮಕ್ಕಳ ಕತೆ !?

ಬುಲೆಟ್ ಪ್ರೂಫ್

ವಿನಯ್ ಖಾನ್

vinaykhan078@gmail.com

ಚಿಕ್ಕ ಮಗುವಿನಲ್ಲಿ ಕುತೂಹಲ ಜಾಸ್ತಿ ಅದಕ್ಕೆಲ್ಲ ನೀರೆರಚುತ್ತಿರುವುದೇ ನಮ್ಮ ಶಿಕ್ಷಣ, ನಮಗೆಲ್ಲ ವಿಜ್ಞಾನ, ಗಣಿತ, ಭೌತಶಾಸ, ಕೆಮಿಸ್ಟ್ರಿ ಸಬ್ಜೆಕ್ಟ್‌ಗಳಿವೆ ಅಷ್ಟೇ. ಆದರೆ ಅದನ್ನು ನಿಜಜೀನದಲ್ಲಿ ಬಳಸುವುರ ಬಗ್ಗೆ ಯಾರಿಗೂ ಕನಿಷ್ಟ ಜ್ಞಾನವಿಲ್ಲ. ಪಠ್ಯದಲ್ಲಿ ಬರುವ ಯಾವುದೇ ವಿಷಯವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಎಷ್ಟೋ ಜನರಿಗೆ ಸ್ವಲ್ಪವೂ ಜ್ಞಾನವೇ ಇಲ್ಲ.

ಇಷ್ಟನ್ನೆಲ್ಲ ಯಾರ್ ಓದ್ತಾರೆ, ಈ ಎಕ್ಸಾಂಗೆ ಜಸ್ಟ್ ಪಾಸಿಂಗ್ ಮಾರ್ಕ್ಸ್ ಬಂದ್ರೂ ಸಾಕಪ್ಪಾ, ಅಂತ ಅಷ್ಟಷ್ಟೇ ಓದಿಕೊಂಡು ಅದರಲ್ಲೇ ಕೆಲವೊಂದಿಷ್ಟನ್ನು ಬರೆದು ಹೇಗೋ ಪಾಸಾಗಿ, ಮತ್ತೆ ಕೆಲವು ಜನ ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್‌ ಗಳನ್ನೂ ಪಡೆದು ನಮ್ಮ ದೇಶದಲ್ಲೋ ಅಥವಾ ಬೇರೆ ಯಾವುದೇ ದೇಶದಲ್ಲೋ ಉನ್ನತ ಶಿಕ್ಷಣಕ್ಕೆ ಹೋಗುತ್ತಾರೆ.

ಯಾವುದೋ ಸಿಕ್ಕ ಕೆಲಸವನ್ನು ಮಾಡಿ ಭಾರತದ ಶಿಕ್ಷಣ ವ್ಯವಸ್ಥೆಯೇ ಸರಿಯಿಲ್ಲ ಅಂತ ಅಲವತ್ತುಕೊಳ್ಳುವವರನ್ನು ಪ್ರತಿ ದಿನ ನೋಡಿಯೇ ಇರುತ್ತೇವೆ. ಇಲ್ಲಿಗೆ ಒಬ್ಬನ ಶಿಕ್ಷಣ ಮುಗಿದೇ ಹೋಯಿತು. ಇದೇ ರೀತಿ ಭಾರತೀಯ ಶಿಕ್ಷಣದ ಬಗ್ಗೆ, ಅದರಲ್ಲಿರೋ ನ್ಯೂನತೆ ಗಳನ್ನು ತಿಳಿಸಲು ‘ಫಾಲ್ತು’, ‘2 ಈಡಿಯಟ್ಸ್’, ‘ತಾರೇ ಜಮೀನ್ ಪರ್’ ಅಂತಹ ಹಲವಾರು ಸಿನಿಮಾಗಳು ಬಂದರೂ, ಹಲವಾರು ಶಿಕ್ಷಣತಜ್ಞರು, ವಿಜ್ಞಾನಿಗಳು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಬಗ್ಗೆ ಆಗಾಗ ಮಾತನಾಡುತ್ತಾ.

ಸರಕಾರವೂ ಕೆಲವೊಂದು ಬದಲಾವಣೆಗಳನ್ನು ತಂದಿದ್ದರೂ ಸಹ. ಇನ್ನೂವರೆಗೂ ಶಿಕ್ಷಣ ನಿಂತ ನೀರೇ! ಗುರುಕುಲಗಳನ್ನು ಮಟ್ಟಹಾಕಿ ಮೆಕಾಲೆ ಶುರುಮಾಡಿದ ಭಾರತೀಯ ಶಿಕ್ಷಣ ಬರೀ ಕ್ಲರ್ಕ್‌ಗಳನ್ನು ಕೆಲ ವರ್ಗದ ಅಧಿಕಾರಿಗಳನ್ನು, (ಬ್ರಿಟೀಷರಿಗೆ ಬೇಕಾದದ್ದೂ ಅವರ ಕೈಕೆಳಗೆ ಕೆಲಸ ಮಾಡುವ ಆಳುಗಳೇ, ಅದಕ್ಕೆ ಅವರ ಶಿಕ್ಷಣವನ್ನು ಪಡೆದವರು ಆಳುಗಳಾಗುವುದಕ್ಕೇ ಲಾಯಕ್ಕು) ಬರೀ ಓದಿ ತಲೆತುಂಬಿಸಿಕೊಂಡು ರ‍್ಯಾಂಕ್‌ಗಳನ್ನು ಪಡೆಯುವವರಿಗೆ ಎಂದು ಹಲವರಿಗೆ ಗೊತ್ತೇ ಇದೆ.

ನೀವೇ ನೋಡಿ, ವಿಶ್ವದ ಎಷ್ಟೋ ರಾಷ್ಟ್ರಗಳು ಇನ್ನೋವೇಷನ್‌ನಲ್ಲಿ, ತಂತ್ರಜ್ಞಾನದಲ್ಲಿ ಎಷ್ಟೋ ಮುಂದೆಯೇ ಇದೆ. ಸಾಫ್ಟ್
ವೇರ್ ಮತ್ತು ಹಾರ್ಡ್‌ವೇರ್ ಬಗೆಯ ಹೊಸ ತಂತ್ರಜ್ಞಾನಗಳಿಗೆ ಅಮೆರಿಕ, ಆಟೋಮೊಬೈಲ್‌ಗಳಿಗೆ ಜರ್ಮನಿ, ಎಲೆಕ್ಟ್ರಿಕಲ್ ಸಾಮಗ್ರಿ, ರೋಬೋಟಿಕ್ಸ್, ಮನೆಬಳಕೆ ಉತ್ಪನ್ನಗಳಿಗೆ ಜಪಾನ್, ಡಿಫೆನ್ಸ್ ಸೆಕ್ಟರ್‌ನಲ್ಲಿ ಹೊಸ ಬಗೆಯ ಶಸ್ತ್ರಾಸ್ತ್ರಕ್ಕೆ ರಷ್ಯಾ. ಇಂಥ ಹಲವು ದೇಶಗಳ ಉತ್ಪನ್ನಗಳ ಕಾಪಿಯನ್ನೇ ಕಡಿಮೆ ದರಕ್ಕೆ ಮಾರುವ ಚೀನಾ.

ಇವರೆಲ್ಲರ ಸಾಮಾಗ್ರಿಗಳನ್ನು ಸಿಕ್ಕಾಪಟ್ಟೆ ದುಡ್ಡು ಕೊಟ್ಟು ಖರೀದಿಸಲು ಭಾರತ. ಕೆಲವರು ಕೇಳಬಹುದು ಭಾರತದಲ್ಲಿ ಸ್ಟಾರ್ಟ್‌ಅಪ್ ಗಳು ಆಗುತ್ತಿವೆ. ಹೊಸ ಹೊಸ ತಂತ್ರಜ್ಞಾನವನ್ನೂ ಭಾರತೀಯರು ಕಂಡು ಹಿಡಿಯುತ್ತಿದ್ದಾರೆ ಅಂತ. ಆದರೆ, ಅವೆಲ್ಲ ತಂತ್ರಜ್ಞಾನಗಳು ಬೇರೆ ದೇಶದ ಕಂಪನಿಗಳಿಂದ ಎರವಲು ಪಡೆದಿದ್ದೇ. ಅಥವಾ ಅದನ್ನೇ ಇನ್ನಷ್ಟು ಅಭಿವೃದ್ಧಿಪಡಿಸಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಇನ್ನೋವೇಷನ್‌ಗಳಿಗೆ ಭಾರತ ಇನ್ನೂ ಅಣಿಯಾಗಿಲ್ಲ.

ಭಾರತದ ಎಂಜಿನಿಯರ್‌ಗಳಷ್ಟೇ ಜನಸಂಖ್ಯೆ ಸ್ವಿಜ್ಜರ್ ಲ್ಯಾಂಡ್‌ನಲ್ಲಿದೆ. ಆದರೆ, ಸ್ವಿಜ್ಜರ್‌ಲ್ಯಾಂಡ್ ರಿಸರ್ಚ್ ಆಂಡ್ ಡೆವಲಪ್‌ ಮೆಂಟ್‌ನಲ್ಲಿ ಭಾರತಕ್ಕಿಂತ ಮೇಲೆಯೇ ಇದೆ. 2019ರ ಒಂದು ಸರ್ವೇಯು ಪ್ರಕಾರ 80 ರಷ್ಟು ಎಂಜಿನಿಯರ್‌ ಗಳು ಉದ್ಯೋಗಕ್ಕೆ ಅರ್ಹರೇ ಅಲ್ಲ ಅಂತ ಹೇಳುತ್ತದೆ. ಅದೇ ಎಲ್ಲೂ ಕೆಲಸ ಸಿಗದೇ ಇರುವ ಎಂಜಿನಿಯರಿಂಗ್ ಪದವಿ ಪಡೆದವರು ಯಾವುದೋ ಇನ್ಸ್‌ಟಿಟ್ಯೂಟ್‌ನಲ್ಲಿ ಮೂರೋ, ಆರೋ ತಿಂಗಳುಗಳ ಕೋಚಿಂಗ್ ಪಡೆದುಕೊಂಡು, ಕೆಲಸ ಸಿಕ್ರೆ ಮಾಡೋದು ಅಥವಾ ಬೇರೆ ಯಾವುದೋ ಫೀಲ್ಡ್ ಅಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳುವುದು.

ಅದಕ್ಕೇ ಇರಬಹುದು ‘engineers can fit in every fields’ಅಂತ ಹೇಳೊದು. ಇದೆಲ್ಲದಕ್ಕೂ ಕಾರಣ ಶಿಕ್ಷಣ ವ್ಯವಸ್ಥೆ, ಫೀಲ್ಡ್ ನಲ್ಲಿ ಸರಿಯಾದ ಕೆಲಸ ಸಿಗದವರೇ ಪ್ರೈವೇಟ್ ಕಾಲೇಜುಗಳಲ್ಲಿ ಶಿಕ್ಷಕರಾಗುವುದು. ಇನ್ನು ಗವರ‍್ನಮೆಂಟ್ ಕಾಲೇಜಿನಲ್ಲಿ ಶಿಕ್ಷಕರಾದವರಿಗೆ ತುಂಬಾ ವಿಷಯದ ಜ್ಞಾನ ಇದ್ದರೂ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುವ ಮನಸ್ಸನ್ನು ಮಾಡಲ್ಲ ಅಥವಾ ವಿದ್ಯಾರ್ಥಿಯೇ ಅವರ ಪಾಠವನ್ನು ಕೇಳದೆಯೇ ಇರಬಹುದು.

ಇನ್ನು ಐಐಎಸ್‌ಸಿ, ಐಐಟಿಗಳಂತಹ ಕಾಲೇಜುಗಳಲ್ಲಿ ಕಲಿತವರು ಹೆಚ್ಚನವರು ಬೇರೆ ದೇಶಕ್ಕೆ ಹೋಗಿಯೇ ಕೆಲಸ
ಪಡೆಯುತ್ತಾರೆ ಬಿಟ್ಟರೆ ಹೊಸದೇನನ್ನೂ ಹೇಳಬೇಕಿಲ್ಲ. ಇದನ್ನೆಲ್ಲ ಏಕೆ ಹೇಳಬೇಕಾಯಿತೆಂದರೆ, ಮೊನ್ನೆ ಮೊನ್ನೆ ನಡೆದ ಇನೋಸಿಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿರುವಾಗ ನಾರಾಯಣ ಮೂರ್ತಿ ಅವರು, ‘2022 ನೇ ಸಾಲಿನ ಗ್ಲೋಬಲ್ ರ‍್ಯಾಂಕಿಂಗ್‌ನಲ್ಲಿ ಭಾರತದ ಯಾವುದೇ ಒಂದು ಉನ್ನತ ಶಿಕ್ಷಣ ಸಂಸ್ಥೆಯೂ ಟಾಪ್-250 ಅಲ್ಲಿ ಇಲ್ಲ. ಐಐಟಿ ಮತ್ತು ಐಐಎಸ್ ಸಿಗಳೂ ಇದರಲ್ಲಿ ಇಲ್ಲ. ಭಾರತವು ಕರೋನಾಗೆ ವ್ಯಾಕ್ಸಿನ್ ಅನ್ನು ತಯಾರಿಸಿದ್ದು ತನ್ನ ಸ್ವಂತ ಟೆಕ್ನಾಲಜಿಗಳಿಂದಲ್ಲ,
ಬೇರೆ ದೇಶಗಳ ಟೆಕ್ನಾಲಜಿಯನ್ನು ಎರವಲು ಪಡೆದಿದ್ದರಿಂದ.

ಭಾರತದ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಸಾಧ್ಯವಾಗುತ್ತಿಲ್ಲ, ಏಕೆಂದರೆ, ಎಳೆಯ ವಯಸ್ಸಿನಲ್ಲಿಯೇ ಮಗುವಿನಲ್ಲಿ ಕುತೂಹಲವನ್ನು ಉಂಟುಮಾಡುವ ಕೆಲಸ ಆಗುತ್ತಿಲ್ಲ. ಈ ಎಲ್ಲದರಲ್ಲಿ ಮೊದಲನೇ ಅಂಶವೆಂದರೆ ಶಾಲೆ ಮತ್ತು
ಕಾಲೇಜು ಕಲಿಕೆಯಲ್ಲಿ ಮಗುವಿಗೆ socratic ಪ್ರಶ್ನೆಗಳು ಏಳುವ ಹಾಗೆ ಮಾಡುವುದು. ಮತ್ತು ಶಾಲೆಯಲ್ಲಿ ಕಲಿತದ್ದನ್ನು ಪರೀಕ್ಷೆಯಲ್ಲಿ ಬರೆದು ಪಾಸಾಗುವುದಕ್ಕಿಂತ, ಅದನ್ನು ನಿಜ ಜೀವನದಲ್ಲಿ ಅಳವಡಿಕೆ ಮಾಡುವುದನ್ನು ಕಲಿಸುವುದು. ಈ ರೀತಿಯ ಸಿಂಡ್ರೋಮ್‌ಗೆ ಐಐಟಿಗಳೂ ಬಲಿಯಾಗಿದ್ದಾವೆ ಇವುಗಳಿಗೆಲ್ಲ ಕಾರಣ ಕೋಚಿಂಗ್ ಕ್ಲಾಸ್‌ಗಳ tyrrany’ ಅಂತ ಹೇಳಿದರು.

ಚಿಕ್ಕ ಮಗುವಿನಲ್ಲಿ ಕುತೂಹಲ ಜಾಸ್ತಿ ಅದಕ್ಕೆಲ್ಲ ನೀರೆರಚುತ್ತಿರುವುದೇ ನಮ್ಮ ಶಿಕ್ಷಣ, ನಮಗೆಲ್ಲ ವಿಜ್ಞಾನ, ಗಣಿತ, ಭೌತಶಾಸ್ತ್ರ, ಕೆಮಿಸ್ಟ್ರಿ ಸಬ್ಜೆಕ್ಟ್‌ಗಳಿವೆ ಅಷ್ಟೇ. ಆದರೆ ಅದನ್ನು ನಿಜಜೀನದಲ್ಲಿ ಬಳಸುವುರ ಬಗ್ಗೆ ಯಾರಿಗೂ ಕನಿಷ್ಟ ಜ್ಞಾನವಿಲ್ಲ. ಹತ್ತನೆಯ ತರಗತಿಯಲ್ಲಿ ಪೈಥಾಗೋರಸ್ ಥೇರಂ ಅನ್ನು ಬಾಯಿಪಾಠ ಮಾಡಿಕೊಂಡ ಎಕ್ಸಾಂನಲ್ಲಿ ಬರೆದು ಮುಗಿಸಿದರೆ ಆಯ್ತು. ಪಿಯುಸಿ ಸ್ಟೇಜ್‌ನಲ್ಲಿ ಬರುವ ಯಾವುದೇ ಪಠ್ಯ ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಎಷ್ಟೋ ಜನರಿಗೆ ಸ್ವಲ್ಪವೂ
ಜ್ಞಾನವೇ ಇಲ್ಲ. ಇದು ಬರೀ ಸ್ಥಳೀಯ ಶಾಲಾ ಕಾಲೇಜುಗಳಲ್ಲಿ ಕಲಿತವರದ್ದಲ್ಲ.

ದೇಶದ ಪ್ರತಿಷ್ಠಿತ ಐಐಟಿ, ಐಐಎಸ್‌ಸಿಗಳಲ್ಲಿ ಕಲಿತವರದ್ದೂ ಇದೆ ಹಳವಂಡ. ಒಂದು ಸಲ ಯೋಚನೆ ಮಾಡಿ, ಪ್ರತಿಯೊಬ್ಬ ರಿಗೂ ಚೆನ್ನಾಗಿ ಪರೀಕ್ಷೆಯಲ್ಲಿ ಬರೆದು ಅಂಕ ಪಡೀಬೇಕೆನ್ನುವ ಅನ್ನುವ ಆಸೆ ಇದ್ದೇ ಇದೆ. ಅದಕ್ಕಾಗಿಯೇ ಹಳೇ ವರ್ಷದ ಪ್ರಶ್ನೆಪತ್ರಿಕೆಗಳನ್ನು ಜಾಲಾಡಿ, ಅದರಲ್ಲಿ ಜಾಸ್ತಿ ಕೇಳಿರುವ ಪ್ರಶ್ನೆಗಳನ್ನೇ ಓದಿ. ಪಾಸ್ ಅಗಿಬಿಡುವುದು. ಇದು ಬರೀ ವಿದ್ಯಾರ್ಥಿಗಳು ಮಾಡುವ ಕೆಲಸವಲ್ಲ, ಮೇಸ್ಟ್ರುಗಳೂ ಇದನ್ನೇ ಹೇಳುತ್ತಾರೆ.

ಪಾಠ ಮಾಡುವ ಸಮಯದಲ್ಲೇ ಆ ವಿಷಯಕ್ಕೆ ಇನ್ನಷ್ಟು ಒತ್ತು ನೀಡಿ, ಅದರ ಪಕ್ಕಕ್ಕೆ important question ಅಂತ ಹಾಕಿಸಿಯೇ ಹಾಕಿಸಿರುತ್ತಾರೆ. ತಮ್ಮ ಕಾಲೇಜಿನಲ್ಲಿ ನಡೆಯುವ ಯುನಿಟ್ ಟೆಸ್ಟ್, ಮಂಥ್ಲಿ ಟೆಸ್ಟ್‌ಗಳಲ್ಲಿ ಅದೇ ಪ್ರಶ್ನೆಗಳನ್ನೇ
ಕೇಳುತ್ತಾರೆ. ಹೀಗಾದಾಗ ಅದೇ ಮಗು ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಏಕೆ ಹೋಗುತ್ತಾನೆ? ಅಂತಹ ಶಾಲೆಗಳಲ್ಲೇ ಸೈನ್ಸ್ ಎಕ್ಸಿಬಿಷನ್ ನಡೆದಾಗ ಹಿಂದೆ ಯಾರೋ ಮಾಡಿದ್ದ ಮಾಡೆಲ್ ತಂದು ಮೇಷ್ಟ್ರು ಬರೆದುಕೊಟ್ಟಿರೋ ‘ಸ್ಕ್ರಿಪ್ಟ್’ ಅನ್ನು ಓದಿದವನಿಗೆ ಕ್ರಿಯೇಟಿವಿಟಿ ಆದರೂ ಹೇಗೆ ಬರುತ್ತೆ? if you find science is boring then you are learning it
from wrong person ಅಂತ ಮಾತಿದೆ.

ಆದರೆ ಈಗಿನ ಕಾಲದಲ್ಲಿ ಮೇಷ್ಟ್ರುಗಳಿಗೇ ಸರಿಯಾದ ಮಾಹಿತಿ ಇಲ್ಲದಿರುವಾಗ, (ಏಕೆಂದರೆ ಅವರೂ, ಅವರ ವಿದ್ಯಾರ್ಥಿ
ಯಾಗಿದ್ದಾಗ ಹೀಗೆಯೇ ಓದಿಕೊಂಡು ಬಂದವರು) ಮಕ್ಕಳಿಗಾದರೂ ಏನು ಕಲಿಸಿಯಾರು? ಗಣಿತದಲ್ಲಿ ಪಠ್ಯಕ್ಕೆ ಬಂದ ಪ್ರಶ್ನೆಗಳನ್ನಷ್ಟೇ ತಿಳಿದುಕೊಂಡವನಿಗೆ ಸ್ವಲ್ಪ ಬೇರೆ ರೀತಿಯ ಪ್ರಶ್ನೆಗಳನ್ನು ಖುದ್ದಾಗಿ ಕೇಳಿದರೆ, ಅಥವಾ ಪರೀಕ್ಷೆಯಲ್ಲಿ ಕೇಳಿದಾಗ, ‘ಔಟ್ ಆಫ್ ಸಿಲೆಬಸ್’ ಎಂದು ಕರೆಯುವುದನ್ನು ಕೇಳಿಲ್ಲವೇ? ಇದರೆಲ್ಲದರ ಮೇಲೆ ನೀವು ಕೇಳಬಹುದು, ಸತ್ಯ
ನಡೆಲ್ಲ, ಸುಂದರ್ ಪಿಚೈ, ಪರಾಗ್ ಅಗರ್‌ವಾಲ್ ಇನ್ನೂ ಹಲವಾರು ಜನ ವಿಶ್ವದ ಅತಿದೊಡ್ಡ ಕಂಪನಿಗಳನ್ನು ನಿಭಾಯಿಸುತ್ತಿ ದ್ದಾರೆ ಅವರೂ ಭಾರತದಲ್ಲೇ ಶಿಕ್ಷಣವನ್ನು ಪಡೆದವರು ಅಂತ.

ಆದರೆ, ಇವರೆಲ್ಲರೂ ಆ ದೇಶದಲ್ಲಿ ಅತ್ಯುನ್ನತ ವಿವಿಗಳಲ್ಲಿ ಹೈಯರ್ ಎಜುಕೇಶನ್ ಮುಗಿಸಿದವರೇ. ಅದಾದ ಮೇಲೇ ಅವರು ಆಯಾ ಕಂಪನಿಗಳಲ್ಲಿ ಕೆಲಸಗಿಟ್ಟಿಸಿಕೊಂಡು ಆ ಸ್ಥಾನಕ್ಕೆ ಹೋದವರು. ಇಲ್ಲಿ ಭಾರತದಲ್ಲೇ ತಮ್ಮದೇ ಆದ ಕಂಪನಿಯನ್ನು
ಕಟ್ಟಿಕೊಂಡವರ ಬಗ್ಗೆ ನೋಡಿದರೆ, ಅವರುಗಳು ಅದನ್ನೆಲ್ಲ ಸ್ವಂತಕ್ಕೆ ಕಲಿತವರೇ. ಸೆಲ್ಫ್ ಲರ್ನರ್‌ಗಳೇ! ಇದಕ್ಕೆಲ್ಲ ಮೂಲ ಕಾರಣ, ಮೊದಲೇ ಹೇಳಿದ್ದೇ ಹಾಗೆ, ಪ್ರಶ್ನೆಗಳನ್ನು ಹಾಕುವ ಛಾತಿ ಇಲ್ಲದ್ದು.

ಮತ್ತೆ ಶಾಲಾ, ಕಾಲೇಜುಗಳಲ್ಲಿ ಸೈಂಟಿಫಿಕ್ ರಿಸರ್ಚ್‌ನ ಜ್ಞಾನವೇ ಇಲ್ಲದ್ದನ್ನೂ ಕಡೆಗಣಿಸಲಾಗದು. ಬೇಸಿಕ್ ಸೈನ್ಸ್ ಮತ್ತು
ಅಪ್ಲೈಡ್ ಸೈನ್ಸ್‌ನ ಚೂರೂ ಮಾಹಿತಿಯಿಲ್ಲದ್ದು, ಮತ್ತೆ ರಿಸರ್ಚ್‌ಗಳನ್ನು ಮಾಡಲು ಬೇಕಾದ ‘ಫ್ರೆಂಡ್’ ಸಹ ಸಿಗುವುದಿಲ್ಲ. ಆ ರೀತಿಯ ರಿಸರ್ಚ್‌ಗಳಿಗಾಗಿ ಬೇಕಾಗುವ ಪರಿಕರಗಳ ಸಮಸ್ಯೆಯೂ ಇಲ್ಲಿದೆ. ಶಿಕ್ಷಣ ಬರೀ ಒಂದು ವರ್ಷ ಶಾಲೆಗಳಿಗೆ ಹೋಗಿ
ಪರೀಕ್ಷೆ ಬರೆದು ಬರುವುದಕ್ಕಿಂತ ತನ್ನ ಸುತ್ತಮುತ್ತಲೇ ನಡೆಯುವ ವಿಸ್ಮಯಗಳು ಅಥವಾ ಅವನಿಗೆ ಇರುವ ಇನ್ಟ್ರೆಸ್ಟ್ ಅನ್ನು ನೋಡಿ ಕಲಿಸುವುದೂ ಬಹುಮುಖ್ಯ.

ಇತ್ತೀಚೆಗೆ ತುಂಬಾ ಪರ ವಿರೋಧ ಕಟ್ಟಿಕೊಂಡು ಬಂದ ಎನ್‌ಇಪಿ ಬಗ್ಗೆ ಆಶಾಭಾವವೇನೋ ಇದೆ. ಎನ್‌ಇಪಿ ಜಾರಿ ಮಾಡಿ ಹಾಗೆಯೇ ಬಿಟ್ಟರೆ ಪ್ರಯೋಜನವಿಲ್ಲ. ಮೂಲಸೌಕರ್ಯಗಳ ಅಭಿವೃದ್ಧಿಯನ್ನೂ ಮಾಡಿ. ಈಗಿನ ಹೊಸ ಪೀಳಿಗೆ ಕಲಿಯುವತ್ತ ಆಕರ್ಷಿಸಬೇಕು. ಕಲಿಯುವವರನ್ನಾಗಿ ಮಾಡಬೇಕು. ಹೌದಲ್ವಾ?