Mehandi Awareness 2025: ಹೆಚ್ಚಾದ ಬೀದಿ ಬದಿ ಮದರಂಗಿ ಹಾಕುವ ಕಲಾಕಾರರು
Mehandi Awareness: ಇತ್ತೀಚೆಗೆ ಉದ್ಯಾನನಗರಿ ಮಾತ್ರವಲ್ಲ, ರಾಜ್ಯದ ನಾನಾ ಕಡೆಯ ಪ್ರಮುಖ ಬೀದಿ ಬದಿಗಳಲ್ಲಿಯೂ ಕೈಗಳಿಗೆ ಮದರಂಗಿ ಚಿತ್ತಾರ ಮೂಡಿಸುವ ಉತ್ತರ ಭಾರತದ ಕಲಾಕಾರರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ದೂರದ ಉತ್ತರ ಭಾರತದಿಂದ ಬಂದಂತಹ ಇಂತಹ ಸಾಕಷ್ಟು ಮಂದಿ ಮೆಹೆಂದಿ ಕಲಾಕಾರರು ಇದೀಗ ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದ ನಾನಾ ಕಡೆಗಳಲ್ಲಿ ಸ್ಟ್ರೀಟ್ ಶಾಪಿಂಗ್ ಪ್ರಿಯ ಮಹಿಳೆಯರನ್ನು ಸೆಳೆಯತೊಡಗಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.
ಚಿತ್ರಕೃಪೆ: ಪಿಕ್ಸೆಲ್ -
ಶೀಲಾ ಸಿ ಶೆಟ್ಟಿ
Nov 2, 2025 8:00 AM
ಇತ್ತೀಚೆಗೆ ಬಹುತೇಕ ಸಿಟಿಗಳ ಪ್ರಮುಖ ರಸ್ತೆಗಳ ಅಕ್ಕ-ಪಕ್ಕ ಬೀದಿ ಬದಿ ಮದರಂಗಿ ಅಥವಾ ಮೆಹೆಂದಿ ಚಿತ್ತಾರ ಕೈಗಳ ಮೇಲೆ ಮೂಡಿಸುವ ಕಲಾಕಾರರು ಹೆಚ್ಚಾಗಿದ್ದಾರೆ. ತಮ್ಮ ಬಳಿ ಬರುವ ಸ್ತ್ರೀಯರಿಗೆ ಫಟಾಫಟ್ ಮೆಹೆಂದಿ ಚಿತ್ತಾರ ಮೂಡಿಸುತ್ತಾ, ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ರಾಜ್ಯದೆಲ್ಲೆಡೆ ವಿಸ್ತರಿಸಿಕೊಳ್ಳತೊಡಗಿದ್ದಾರೆ.
ಬೀದಿ ಬದಿ ಮೆಹೆಂದಿ ಕಲಾಕಾರರ ಕರಾಮತ್ತು
ದೂರದ ಉತ್ತರ ಭಾರತದಿಂದ ಬಂದಂತಹ ಇಂತಹ ಸಾಕಷ್ಟು ಮಂದಿ ಮೆಹೆಂದಿ ಕಲಾಕಾರರು ಇದೀಗ ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯದ ನಾನಾ ಕಡೆಗಳಲ್ಲಿ ಸ್ಟ್ರೀಟ್ ಶಾಪಿಂಗ್ ಪ್ರಿಯ ಮಹಿಳೆಯರನ್ನು ಸೆಳೆಯತೊಡಗಿದ್ದಾರೆ. ಮಹಿಳೆಯರನ್ನು ಹೆಚ್ಚು ಕಾಯಿಸದೇ, ಕೈಗೆಟಕುವ ದರದಲ್ಲಿ ಚಿತ್ತಾರ ಮೂಡಿಸುತ್ತಾರೆ. ಹೆಚ್ಚು ಕಾಯಿಸದೇ, ರಸ್ತೆಯ ಫುಟ್ಪಾತ್ನಲ್ಲೆ ಕುರ್ಚಿ ಹಾಕಿ ಕುಳ್ಳಿರಿಸಿ, ಕೆಲ ಗಂಟೆಯೊಳಗೆ ಕೈಕಾಲುಗಳಿಗೆ ಸುಂದರ ಚಿತ್ತಾರ ಮೂಡಿಸುತ್ತಾರೆ ಹಾಗಾಗಿ ಬ್ಯೂಟಿ ಪಾರ್ಲರ್ಗೆ ಚಿಕ್ಕ ಪುಟ್ಟ ಮೆಹೆಂದಿ ಹಾಕಿಸಿಕೊಳ್ಳಲು ಬರುವವರು ಕಡಿಮೆಯಾಗಿದ್ದಾರೆ ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್.
ಕಡಿಮೆ ದರದಲ್ಲಿ ಮದರಂಗಿ ಚಿತ್ತಾರ
ಬ್ಯೂಟಿ ಪಾರ್ಲರ್ಗಳಿಗೆ ಹೋಲಿಸಿದಲ್ಲಿ ಇವರ ಬಳಿ ತೀರಾ ಕಡಿಮೆ ದರದಲ್ಲಿ ಚಿತ್ತಾರ ಮೂಡಿಸಿಕೊಳ್ಳಬಹುದು. ಕಡಿಮೆ ಎಂದರೇ 100 ರಿಂದ ಆರಂಭವಾಗುವ ದರ ಸಾವಿರಾರು ರೂ.ಗಳವರೆಗೂ ಆಯಾ ಡಿಸೈನ್ ಆಧಾರದ ಮೇಲೆ ನಿಗದಿಪಡಿಸುತ್ತಾರೆ. ಹಾಗಾಗಿ ಮಹಿಳೆಯರು ಬ್ಯೂಟಿಷಿಯನ್ಗಳಿಗಿಂತ ಇವರ ಬಳಿಯೇ ಹೆಚ್ಚಾಗಿ ಕೈಗಳಿಗೆ ಮೆಹೆಂದಿ ಹಾಕಿಸತೊಡಗಿದ್ದಾರೆ ಎನ್ನುತ್ತಾರೆ ಮೆಹೆಂದಿ ಎಕ್ಸ್ಪರ್ಟ್ ಆಯಿಷಾ.
ಬೀದಿ ಬದಿ ಮೆಹೆಂದಿ ಹಚ್ಚಿಸಿಕೊಳ್ಳುವವರ ಗಮನಕ್ಕಿರಲಿ
- ಹಚ್ಚಿಸಿಕೊಳ್ಳುವ ಮುನ್ನ, ಆ ಕಲಾಕಾರರು ಯಾವ ಬಗೆಯ ಮೆಹೆಂದಿ ಕೋನ್ ಬಳಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ.
- ಬೀದಿ ಬದಿ ಕಡಿಮೆ ದರದಲ್ಲಿ ಮದರಂಗಿ ಹಾಕಿಸಿಕೊಳ್ಳಬಹುದು ಎಂಬ ಯೋಚನೆಯಲ್ಲಿ, ಯಾವುದೋ ಕಳಪೆ ಗುಣಮಟ್ಟದ ಕೋನ್ ಬಳಸಲು ಅನುವು ಮಾಡಿಕೊಡಬೇಡಿ.
- ಒಬ್ಬರಿಗೆ ಬಳಸಿದ ಕೋನ್ ಮತ್ತೊಮ್ಮೆ ಬಳಸಲು ಬಿಡಬೇಡಿ.
- ಅಲರ್ಜಿಯಾದಲ್ಲಿ ತಕ್ಷಣ ತೊಳೆದುಬಿಡಿ.
- ಮದರಂಗಿ ಹಾಕುವವರ ಬಗ್ಗೆ ಅಕ್ಕ-ಪಕ್ಕದವರ ಬಳಿ ಒಂದಿಷ್ಟು ತಿಳಿದುಕೊಂಡು ಮುಂದುವರೆಯಿರಿ.
ರಾಜ್ಯದ ನಾನಾ ಕಡೆಯ ಪ್ರಮುಖ ಬೀದಿ ಬದಿಗಳಲ್ಲಿ ಕೈಗಳಿಗೆ ಮದರಂಗಿ ಚಿತ್ತಾರ ಮೂಡಿಸುವ ಉತ್ತರ ಭಾರತದ ಕಲಾಕಾರರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ.