ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶ್ರೀಲೀಲಾ, ಶಿಲ್ಪಾ ಶೆಟ್ಟಿ, ನಯನತಾರಾ...: ಸ್ಯಾಂಡಲ್‌ವುಡ್‌ಗೆ ಮರಳಿದ ಸೂಪರ್‌ ಸ್ಟಾರ್‌ಗಳು ಇವರು

ಕರ್ನಾಟಕ ಮೂಲದ ಅನೇಕ ಕಲಾವಿದರು ವಿವಿಧ ಭಾಷೆಯ ಚಿತ್ರರಂಗಗಳಲ್ಲಿ ಮಿಂಚುತ್ತಿದ್ದಾರೆ. ಅದರಲ್ಲಿಯೂ ಇದೀಗ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ನಂದಿತಾ ಶ್ವೇತಾ, ಶಿಲ್ಪಾ ಶೆಟ್ಟಿ ಮತ್ತಿತರರು ಬಾಲಿವುಡ್‌, ಟಾಲಿವುಡ್‌ ಮುಂತಾದ ಕಡೆ ಛಾಪು ಮೂಡಿಸಿದ್ದಾರೆ. ವಿಶೇಷ ಎಂದರೆ ಪರಭಾಷೆಗಳಲ್ಲಿ ಸೂಪರ್‌ ಸ್ಟಾರ್‌ ಎನಿಸಿಕೊಂಡವರು ಹಲವು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಅವರ್ಯಾರೆಲ್ಲ ಎನ್ನುವ ವಿವರ ಇಲ್ಲಿದೆ.

1/5

ಶಿಲ್ಪಾ ಶೆಟ್ಟಿ

ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಸದ್ಯ ಬಾಲಿವುಡ್‌ನ ಟಾಪ್‌ ನಾಯಕಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಹಿಂದಿಯ ಬಹುತೇಕ ಎಲ್ಲ ಸೂಪರ್‌ಸ್ಟಾರ್‌ಗಳ ಜತೆಗೆ ತೆರೆ ಹಂಚಿಕೊಂಡಿರುವ ಅವರು ಸದ್ಯ ಅಲ್ಲೊಂದು ಇಲ್ಲೊಂದು ಚಿತ್ರಗಳನ್ನಷ್ಟೇ ಒಪ್ಪಿಕೊಳ್ಳುತಿದ್ದಾರೆ. ಚಿತ್ರರಂಗ ಪ್ರವೇಶಿಸಿ 3 ದಶಕ ಕಳೆದಿದ್ದರೂ ಅದೇ ಬೇಡಿಕೆ, ಚಾರ್ಮ್‌ ಉಳಿಸಿಕೊಂಡ ಅವರು ಇದೀಗ ಅನೇಕ ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಈ ಹಿಂದೆ ರವಿಚಂದ್ರನ್‌ ಜತೆ ಕನ್ನಡದ ʼಪ್ರೀತ್ಸೋದ್‌ ತಪ್ಪಾ?ʼ, ʼಒಂದಾಗೋಣ ಬಾʼ, ಉಪೇಂದ್ರ ಅಭಿನಯದ ʼಆಟೋ ಶಂಕರ್‌ʼ ಸಿನಿಮಾಗಳಲ್ಲಿ ನಟಿಸಿದ್ದ ಅವರು ಬರೋಬ್ಬರಿ 20 ವರ್ಷಗಳ ಬಳಿಕ ʼಕೆಡಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಪ್ರೇಮ್‌ ನಿರ್ದೇಶನದ ಈ ಚಿತ್ರದಲ್ಲಿ ಧ್ರುವ ಸರ್ಜಾ, ರವಿಚಂದ್ರನ್‌, ಸಂಜಯ್‌ ದತ್‌, ರಮೇಶ್‌ ಅರವಿಂದ್‌, ರೀಷ್ಮಾ ನಾಣಯ್ಯ ಮತ್ತಿತತರು ನಟಿಸುತ್ತಿದ್ದಾರೆ. ರಿಲೀಸ್‌ ಡೇಟ್‌ ಸದ್ಯದಲ್ಲೇ ಘೋಷಣೆಯಾಗಲಿದೆ.

2/5

ನಯನತಾರಾ

ಬಹುಭಾಷಾ ತಾರೆ, ಕೇರಳ ಮೂಲದ ನಯನತಾರಾ ದಕ್ಷಿಣ ಭಾರತದ ಜನಪ್ರಿಯ ನಟಿ. ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಇವರೂ ಒಬ್ಬರು. ಮಲಯಾಳಿ ಮೂಲದ ಇವರು ಜನಸಿದ್ದು ಬೆಂಗಳೂರಿನಲ್ಲಿ. 2003ರಲ್ಲಿ ರಿಲೀಸ್‌ ಆದ ʼಮನಸ್ಸಿನಕ್ಕರೆʼ ಎನ್ನುವ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಆ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಟಾಪ್‌ ನಟಿಯಾಗಿದ್ದ ಅವರು 2010ರಲ್ಲಿ ತೆರೆಕಂಡ ʼಸೂಪರ್‌ʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡಿದ್ದರು. ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಈ ಚಿತ್ರ ಬಾಕ್ಸ್‌ ಆಪೀಸ್‌ನಲ್ಲಿ ಯಶಸ್ವಿಯಾಗಿದ್ದಲ್ಲದೆ ನಯನತಾರಾ ಅಭಿನಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಸುಮಾರು 15 ವರ್ಷಗಳ ಬಳಿ ಇದೀಗ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಯಶ್‌ ನಟಿಸುತ್ತಿರುವ, ಗೀತು ಮೋಹನ್‌ದಾಸ್‌ ನಿರ್ದೇಶನದ ʼಟಾಕ್ಸಿಕ್‌ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಈ ಚಿತ್ರ ರಿಲೀಸ್‌ ಆಗಲಿದೆ.

3/5

ಜೆನಿಲಿಯಾ ಡಿʼಸೋಜಾ

ಬಬ್ಲಿ ಕ್ಯಾರೆಕ್ಟರ್‌ಗಳಿಂದಲೇ ಸಿನಿಮಾಸಕ್ತರ ಗಮನ ಸೆಳೆದ ಜೆನಿಲಿಯಾ ಡಿʼಸೋಜಾ ಹುಟ್ಟಿ ಬೆಳೆದಿದ್ದು ಎಲ್ಲ ಮುಂಬೈಯಲ್ಲಾದರೂ ಅವರ ಕುಟುಂಬದ ಮೂಲ ಇರುವುದು ಮಂಗಳೂರಿನಲ್ಲಿ. ಇಂದಿಗೂ ಅವರ ಕುಟುಂಬಸ್ಥರು ಮಂಗಳೂರಿನಲ್ಲಿದ್ದಾರೆ. ಈ ಬಗ್ಗೆ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬಾಲಿವುಡ್‌ ನಟ ರಿತೇಶ್‌ ದೇಶ್‌ಮುಖ್‌ ಅವರನ್ನು ವಿವಾಹವಾದ ಬಳಿಕ ಚಿತ್ರರಂಗದಿಂದ ಸ್ವಲ್ಪ ಬ್ರೇಕ್‌ ಪಡೆದುಕೊಂಡಿದ್ದ ಅವರು ಇದೀಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2008ರಲ್ಲಿ ಶಿವ ರಾಜ್‌ಕುಮಾರ್‌ ಜತೆ ʼಸತ್ಯ ಇನ್‌ ಲವ್‌ʼ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಅವರು ಅನೇಕ ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ ಕಡೆಗೆ ಮುಖ ಮಾಡಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ನಾಯಕನಾಗಿ ಬಣ್ಣ ಹಚ್ಚಿದ ಮೊದಲ ಚಿತ್ರ ʼಜೂನಿಯರ್‌ʼನ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾದ ಈ ಚಿತ್ರ ಜುಲೈ 18ರಂದು ತೆರೆಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನಮದ ಈ ಸಿನಿಮಾದಲ್ಲಿ ಅವರು ವಿಜಯಾ ಸೌಜನ್ಯಾ ಎನ್ನುವ ಪವರ್‌ಫುಲ್‌ ಪಾತ್ರವನ್ನು ನಿರ್ವಹಿಸಿದ್ದಾರೆ.

4/5

ಶ್ರೀಲೀಲಾ

ಸದ್ಯ ತೆಲುಗು ಚಿತ್ರರಂಗದ ಟಾಪ್‌ ನಟಿಯರಲ್ಲಿ ಒಬ್ಬರೆನಿಕೊಂಡಿರುವ ಶ್ರೀಲೀಲಾ ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. 2019ರಲ್ಲಿ ರಿಲೀಸ್‌ ಆದ ಕನ್ನಡ ʼಕಿಸ್‌ʼ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಿತರಾದ ಅವರು 2021ರಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಬ್ಯಾಕ್‌ ಟು ಬ್ಯಾಕ್‌ ಟಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಹಲವು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ʼಜೂನಿಯರ್‌ʼ ಚಿತ್ರದ ಮೂಲಕ ಮರಳಿದ್ದಾರೆ. ಈ ಸಿನಿಮಾದಲ್ಲಿ ಅವರು ಡ್ಯಾನ್ಸ್‌ ಮಾಡಿರುವ ʼವೈರಲ್‌ ವಯ್ಯಾರಿʼ ಹಾಡು ಜನಪ್ರಿಯವಾಗಿದ್ದು, ಪಡ್ಡಗಳ ಹಾಟ್‌ ಫೆವರೇಟ್‌ ಎನಿಸಿಕೊಂಡಿದೆ. ಈ ವರ್ಷ ಬಾಲಿವುಡ್‌ಗೆ ಕಾಲಿಟ್ಟ ಅವರು ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ಕಾನಿಸಿಕೊಳ್ಳಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

5/5

ನಂದಿತಾ ಶ್ವೇತಾ

ಲೂಸ್‌ ಮಾದ ಯೋಗೇಶ್‌ ಜತೆಗೆ ʼಜಿಂಕೆ ಮರೀನಾ...ʼ ಎಂದು ಕುಣಿದು ಕನ್ನಡಿಗರ ನಿದ್ದೆಕದ್ದ ಬೆಂಗಳೂರು ಬೆಡಗಿ ನಂದಿತಾ ಶ್ವೇತಾ. ಸುವರ್ಣ ವಾಹಿನಿಯಲ್ಲಿ ನಿರೂಪಕಿಯಾಗಿದ್ದ ಅವರು 2008ರಲ್ಲಿ ರಿಲೀಸ್‌ ಆದ ʼನಂದ ಲವ್ಸ್‌ ನಂದಿತಾʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಮೊದಲ ಚಿತ್ರದಲ್ಲೇ ಭರವಸೆ ಹುಟ್ಟು ಹಾಕಿದ್ದ ಅವರು ಆ ಬಳಿಕ ತಮಿಳು, ತೆಲುಗಿನತ್ತ ಮುಖ ಮಾಡಿದರು. ಅಲ್ಲಿನ ಟಾಪ್‌ ನಾಯಕಿ ಎನಿಸಿಕೊಂಡು, ಅಭಿನಯಕ್ಕೆ ಒತ್ತು ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾದರು. ಇದೀಗ ಹಲವು ವರ್ಷಗಳ ಬಳಿಕ ಅವರು ಮತ್ತೆ ತವರಿಗೆ ಮರಳಿದ್ದಾರೆ. ಅಂದರೆ ಸ್ಯಾಂಡಲ್‌ವುಡ್‌ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಶ್ರೀಲೇಶ್ ಎಸ್. ನಾಯರ್ ನಿರ್ದೇಶನದ ಮಹಿಳಾ ಪ್ರದಾನ ಸಿನಿಮಾ ʼಬೆನ್ನಿʼಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ಕೂತೂಹಲ ಕೆರಳಿಸಿದೆ.