Thursday, 11th August 2022

ಬೆಂಗಳೂರು ಸುಧಾರಣೆ ಮಾಡಿದ ಪ್ಲೇಗ್

ಹಿಂದಿರುಗಿ ನೋಡಿದಾಗ

ಬೆಂಗಳೂರು ಉತ್ತರದಲ್ಲಿ ನಿರ್ಮಾಣವಾದ ಬಡಾವಣೆಯಲ್ಲಿ ಕಾಡುಮಲ್ಲೇಶ್ವರ ದೇವಾಲಯವಿತ್ತು. ಆ ಬಡಾವಣೆ ಯನ್ನು ಮಲ್ಲೇಶ್ವರ ಎಂದು, ಬೆಂಗಳೂರು ದಕ್ಷಿಣ ಬಡಾವಣೆಯಲ್ಲಿ ದೊಡ್ಡ ಬಸವಣ್ಣನಿದ್ದ, ಹಾಗಾಗಿ ಈ ಪ್ರದೇಶ ವನ್ನು ಬಸವನಗುಡಿ ಎಂದು ಕರೆದರು.

ಪ್ಲೇಗ್ ಮಹಾಮಾರಿಯ ಮೂರನೆಯ ಜಾಗತಿಕ ಮಹಾನ್ ಅಲೆಯು ಚೀನಾದಲ್ಲಿ ಆರಂಭವಾಗಿ 1894ರ ವೇಳೆಗೆ ಹಾಂಗ್ ಕಾಂಗ್ ನಗರವನ್ನು ತಲುಪಿತು. ಹಾಂಗ್‌ಕಾಂಗ್ ಮತ್ತು ಮುಂಬಯಿ ನಗರಗಳ ನಡುವೆ ಜಹಜುಗಳು ಓಡಾಡುತ್ತಿದ್ದವು. ಹಾಗಾಗಿ ಪ್ಲೇಗ್ ಗ್ರಸ್ತ ಇಲಿಗಳು ಹಡಗುಗಳ ಮೂಲಕ ಮುಂಬಯಿ ನಗರವನ್ನು ತಲುಪಿದವು.

1897ರಲ್ಲಿ ಮುಂಬಯಿ ನಗರದಲ್ಲಿ ಗಡ್ಡೆ ಪ್ಲೇಗ್ ತೀವ್ರ ಪ್ರಮಾಣದಲ್ಲಿ ಏರಿತು. ಆಗ ಮುಂಬಯಿ ಪ್ರಾಂತಕ್ಕೆ ಸೇರಿದ ಉತ್ತರ ಕರ್ನಾಟಕಕ್ಕೂ ಪ್ಲೇಗ್ ವ್ಯಾಪಿಸಿತು. ದಕ್ಷಿಣ ಕರ್ನಾಟಕಕ್ಕೆ, ವಿಶೇಷವಾಗಿ ಬೆಂಗಳೂರು ನಗರಕ್ಕೆ ಪ್ಲೇಗ್ ಆಗಮಿಸುವುದಕ್ಕೆ ಮೊದಲೇ, ಬ್ರಿಟಿಶ್ ಸರಕಾರವು ಪಿಡುಗು ರೋಗಗಳ ಕಾಯಿದೆ 1897 ಜಾರಿಗೆ ತಂದಿತು. ಜತೆಗೆ ಅಂದಿನ ಕಾಲಕ್ಕೆ ಬಹು ದೊಡ್ಡ ಮೊತ್ತವಾಗಿದ್ದ 2,45,970 ರುಪಾಯಿಯನ್ನು ಪ್ಲೇಗ್ ನಿಧಿ ಯನ್ನಾಗಿ ಎತ್ತಿಟ್ಟು, ಒಂದು ಪ್ಲೇಗ್ ಆಯೋಗವನ್ನು ರೂಪಿಸಿ, ಆ ಆಯೋಗದ ಕಮಿಷನರ್ ಆಗಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ವಿ.ಪಿ.ಮಾಧವರಾವ್ ಅವರನ್ನು ಆಯ್ಕೆ ಮಾಡಿತು.

ಬೆಂಗಳೂರು ನಗರದಲ್ಲಿ ಪ್ಲೇಗ್ ನಿಯಂತ್ರಣ ಕಾನೂನು ಜಾರಿಗೆ ಬಂದಿತು. ಬೆಂಗಳೂರು ನಗರಕ್ಕೆ ರೈಲಿನ ಮೂಲಕ ಆಗಮಿಸುವ ಪ್ರಯಾಣಿಕರನ್ನು ಪೊಲೀಸರು ಸ್ವಾಗತಿಸುತ್ತಿದ್ದರು. ರೈಲ್ವೇ ನಿಲ್ದಾಣದಲ್ಲಿಯೇ ಅವರ ವೈದ್ಯಕೀಯ ಪರೀಕ್ಷೆಯು ನಡೆಯುತ್ತಿತ್ತು. ನಂತರ ಸ್ವಯಂ ಪೊಲೀಸರೇ ಅವರನ್ನು, ಅವರವರ ಮನೆಗಳಿಗೆ ತಲುಪಿಸುತ್ತಿದ್ದರು. ಇವರು ೧೦ ದಿನಗಳ ಕಾಲ, ಪ್ರತಿದಿನವೂ ವೈದ್ಯರನ್ನು ಭೇಟಿಯಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತಿತ್ತು.

ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣಕ್ಕೆ ರೈಲಿನ ಮೂಲಕ ಆಗಮಿಸಿದ ಹಲವು ಪ್ರಯಾಣಿಕರಲ್ಲಿ ಓರ್ವ ರೈಲ್ವೇ
ಲೋಕೋ ಸೂಪರಿಂಟೆಂಡೆಂಟ್ ಹಾಗೂ ಅವರ ಅಡುಗೆಯವನು ಇದ್ದ. ಆ ಅಡುಗೆಯವನು ಅಸ್ವಸ್ಥನಾಗಿದ್ದ. ಕೊನೆಗೆ ಆಗಸ್ಟ್ 15, 1898ರಲ್ಲಿ ಆತ ಪ್ಲೇಗ್ ಪೀಡಿತನಾಗಿ ಮರಣಿಸಿದ. ಇದು ಬೆಂಗಳೂರಿನಲ್ಲಿ ಸಂಭವಿಸಿದ ಮೊದಲ ಪ್ಲೇಗ್ ಪ್ರಕರಣವಾಯಿತು. ಇದನ್ನು ಬ್ರಿಟೀಷ್ ಅಧಿಕಾರಿ ಪಿ.ಆರ್.ಕ್ಯಾಂಡೆಲ್ ತನ್ನ ವರದಿಯಲ್ಲಿ ದಾಖಲಿಸಿದ. ಇದೇ ವೇಳೆಗೆ ಧಾನ್ಯಗಳನ್ನು ಹೊತ್ತ ಒಂದು ಗೂಡ್ಸ್ ರೈಲು ಇಂದಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಆಗಮಿಸಿತು.

ಈ ರೈಲಿನೊಡನೆ ಮೂಟೆಗಳನ್ನು ಹೊರುವ 22 ಕಾರ್ಮಿಕರೂ ಸಹ ಬಂದಿದ್ದರು. ಅವರನ್ನು ರೈಲ್ವೇ ನಿಲ್ದಾಣಕ್ಕೆ ಹೊಂದಿ ಕೊಂಡಿರುವ ಗೋಡೌನ್ ಪೇಟೆ (ಗೂಡ್ಸ್ ಶೆಡ್) ಪ್ರದೇಶದಲ್ಲಿ ಕ್ವಾರಂಟೈನ್ ಮಾಡಿದರು. ಆಗಸ್ಟ್ 24ರ ಹೊತ್ತಿಗೆ 12 ಜನರು ಪ್ಲೇಗ್ ಪೀಡಿತರಾಗಿ ಮರಣಿಸಿದರು. ಕೆಲವೇ ದಿನಗಳಲ್ಲಿ ಪ್ಲೇಗ್ ಕಾಟನ್ ಪೇಟೆ, ಅಕ್ಕಿಪೇಟೆ ಪ್ರದೇಶದಲ್ಲಿ ಒಮ್ಮೆಲೆ ಹಲವು ಪ್ಲೇಗ್ ಪ್ರಕರಣ ಗಳು ಕಾಣಿಸಿಕೊಂಡವು.

1898ರ ಬೆಂಗಳೂರು ಜಿಲ್ಲಾ ಗೆಜ಼ೆಟ್ ಅನ್ವಯ, ಸೆಪ್ಟೆಂಬರ್ 9 ರನಂತರ ಬೆಂಗಳೂರು ನಗರದಲ್ಲಿ ಪ್ರತಿವಾರ ಸರಾಸರಿ 105 ಜನರು ಸಾಯಲಾರಂಬಿಸಿದರು. ಪೇಟೆ ಪ್ರದೇಶದಲ್ಲಿ 2,807ಜನರು ಸತ್ತರೆ, ಕಂಟೋನ್ಮೆಂಟ್ ಪ್ರದೇಶದಲ್ಲಿ 1547ಜನರು ಮರಣಿಸಿದರು. ಜನರು ಬೆಂಗಳೂರು ನಗರವನ್ನು ಬಿಟ್ಟು ಹೊರಹೋಗಲಾರಂಭಿಸಿದರು. ರೋಗಪೀಡಿತ ಬಂಧು ಬಳಗದವರನ್ನು ನಗರಲ್ಲೇ ಬಿಟ್ಟು, ತಮ್ಮ ಜೀವವನ್ನು ಉಳಿಸಿಕೊಳ್ಳಲು ಓಡಿ ಹೋದವರ ಸಂಖ್ಯೆ ಸಾಕಷ್ಟಿತ್ತು.

1898ರಲ್ಲಿ ಬೆಂಗಳೂರು ನಗರದ ಜನಸಂಖ್ಯೆಯು 90000 ಇತ್ತು. 1899ರ ಹೊತ್ತಿಗೆ 48,236ಕ್ಕೆ ಇಳಿಯಿತು. ಬೆಂಗಳೂರಿನಲ್ಲಿ ಉಳಿದವರ ಬದುಕು ಅಸಹನೀಯವಾಗಿತ್ತು. ದಿನಬಳಕೆಯ ವಸ್ತುಗಳು ದೊರೆಯುತ್ತಿರಲಿಲ್ಲ. ದೊರೆತರೂ ದುಬಾರಿ ಬೆಲೆ. ಜನರಿಗೆ ಮಾಡಲು ಉದ್ಯೋಗಗಳೇ ಇರಲಿಲ್ಲ. ಹಾಗಾಗಿ ದುಡಿಮೆಯಿಲ್ಲದೆ ಜನರು ಬಸವಳಿದರು. ಪ್ಲೇಗ್ ಪೀಡಿತರ ಮೃತ ಶರೀರವನ್ನು ವಿಲೇವಾರಿ ಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಮೃತ ಶರೀರಗಳು ಎಲ್ಲೆಂದರಲ್ಲಿ ಬಿದ್ದಿದ್ದವು.

ಮೋರಿಗಳಲ್ಲಿ ಶವಗಳು, ಕಸದ ತೊಟ್ಟಿಯಲ್ಲಿ ಶವಗಳು, ಸಾರ್ವಜನಿಕ ಶೌಚಾಲಯಗಳಲ್ಲಿ ಶವಗಳು ಬಿದ್ದಿದ್ದವು. ಬಂಧುಗಳು ಪ್ಲೇಗ್ ಪೀಡಿತರನ್ನು ಅವರವರ ಮನೆಯಲ್ಲಿಯೇ ಬಿಟ್ಟು ಪರಾರಿಯಾದ ಮೇಲೆ, ರೋಗಿಗಳು ತಮ್ಮ ಮನೆಯಲ್ಲಿಯೇ ಶವ ವಾಗಿ ಹೋದರು. ಬೆಂಗಳೂರು ಮುನಿಸಿಪಾಲಿಟಿಯು 2565 ರುಪಾಯಿಗಳನ್ನು ಖರ್ಚು ಮಾಡಿ 22 ಎತ್ತಿನ ಬಂಡಿಗಳನ್ನು ಹಾಗೂ 22 ಜತೆ ಎತ್ತುಗಳನ್ನು ಕೊಂಡುಕೊಂಡಿತು.

ಅವನ್ನು ಪೌರಕಾರ್ಮಿಕರಿಗೆ ನೀಡಿತು. ಅವರು ಅನಾಥ ಶವಗಳನ್ನು ಈ ಎತ್ತಿನ ಗಾಡಿಯಲ್ಲಿ ತುಂಬಿಕೊಂಡು ಶವಸಂಸ್ಕಾರ ಮಾಡಲು ನಗರದ ಹೊರಗೆ ಸಾಗಿಸಿದರು. ಪ್ಲೇಗ್ ಆಯೋಗವು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತು. ಬೆಂಗಳೂರು ನಗರದಲ್ಲಿ ಎಲ್ಲ ರೀತಿಯ ಉತ್ಸವ, ಜಾತ್ರೆ, ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಇಂದಿನ ಮಾಗಡಿ ರಸ್ತೆಯು ಅಂದಿನ ಬೆಂಗಳೂರು ನಗರದ ಹೊರವಲಯವಾಗಿತ್ತು. ಅಲ್ಲಿ ಪ್ಲೇಗ್ ಕ್ಯಾಂಪುಗಳನ್ನು ಆರಂಭಿಸಲಾಯಿತು. ಪ್ಲೇಗ್ ಸೋಂಕಿತರ ಆರೈಕೆಗಾಗಿಯೆ 588 ಶೆಡ್ಡುಗಳನ್ನು ಕಟ್ಟಿದರು. ಪ್ಲೇಗ್ ಸೋಂಕು ಅನುಮಾನಿತರನ್ನು 10 ದಿನಗಳ ಕಾಲ ಈ ಶೆಡ್ಡು ಗಳಲ್ಲಿ ಇರಿಸಿ ಆರೈಕೆಯನ್ನು ಮಾಡಿದರು.

ಇಲಿ ಮತ್ತು ಹೆಗ್ಗಣಗಳನ್ನು ಕೊಂದು ತಂದವರಿಗೆ ಬಹುಮಾನವನ್ನು ಘೋಷಿಸಿದರು. ಒಂದು ಡಜನ್ ಸತ್ತ ಹೆಗ್ಗಣವನ್ನು ತಂದರೆ ಆರು ಆಣೆ, ಒಂದು ಡಜನ್ ಇಲಿಗಳಿಗೆ ಮೂರು ಆಣೆ, ಒಂದು ಡಜನ್ ಸತ್ತ ಸುಂಡಿಲಿಗೆ 2 ಆಣೆಗಳನ್ನು ನೀಡಲಾರಂಭಿಸಿದರು. ಈ ಬಹುಮಾನವನ್ನು ನೀಡುವ ಕ್ರಮವನ್ನು 1911ರವರೆಗೆ ಮುಂದುವರೆಸಿದರು. ಒಟ್ಟು 92,25,116 ಇಲಿಗಳನ್ನು ಕೊಂದು ತಂದವ ರಿಗೆ ಒಟ್ಟು ರು.5457 ರುಪಾಯಿಗಳನ್ನು ನಗದು ಬಹುಮಾನವನ್ನು ನೀಡಲು ಖರ್ಚು ಮಾಡಲಾಯಿತು ಎಂದು ಗೆಜೆಟ್ ಹೇಳುತ್ತದೆ.

ಅಂದಿನ ಬೆಂಗಳೂರು ನಗರವು ವಾಸ್ತವದಲ್ಲಿ ಕಿಷ್ಕಿಂಧಾ ನಗರಿಯಾಗಿತ್ತು. ಸಣ್ಣ ಸಣ್ಣ ಗಲ್ಲಿಗಳು, ಒಂದಕ್ಕೊಂದು ಒತ್ತಾಗಿದ್ದ ಮನೆಗಳು, ಕಿಟಕಿಗಳೇ ಇಲ್ಲದ ಮನೆಗಳು, ಗಾಳಿ-ಬೆಳಕಿನ ಕೊರತೆಯೆ ಜತೆಗೆ, ಒಳಚರಂಡಿಯ ಪರಿಕಲ್ಪನೆಯೇ ಇರಲಿಲ್ಲ. ಕಸ ವನ್ನು ನಿತ್ಯ ವಿಲೇವಾರಿ ಮಾಡುವ ಪರಿಣಾಮಕಾರಿ ವ್ಯವಸ್ಥೆಯಿರಲಿಲ್ಲ. ಹಾಗಾಗಿ ಅಂದಿನ ಬೆಂಗಳೂರಿನ ಪೇಟೆಗಳು ಇಲಿಗಳ ಆವಾಸ ಸ್ಥಾನವಾಗಿ ಪ್ಲೇಗ್ ಹರಡಲು ಕಾರಣವಾಗಿದ್ದವು. ಹಾಗಾಗಿ ಬೆಂಗಳೂರು ನಗರವನ್ನು ಸುಧಾರಿಸಬೇಕು ಎನ್ನುವ ಸಲಹೆ ಯು ಎಲ್ಲೆಡೆ ಕೇಳಿಬಂದಿತು.

ಅಂದಿನ ಬೆಂಗಳೂರಿನಲ್ಲಿ ಒಟ್ಟು 17,275 ಮನೆಗಳಿದ್ದವು. ಇವುಗಳಲ್ಲಿ ವಾಸಕ್ಕೆ ಯೋಗ್ಯವಲ್ಲದ 651 ಮನೆಗಳನ್ನು ಕೆಡವಿ ದರು. 707 ಕಟ್ಟಡಗಳನ್ನು ಒಡೆದು ಅಗಲವಾದ ರಸ್ತೆಗಳನ್ನು ನಿರ್ಮಿಸಿದರು. ಒಟ್ಟು 1356 ಕಟ್ಟಡಗಳ ನಿವಾರಣೆಯಾದವು. ಉಳಿದ ಪ್ರತಿಯೊಂದು ಮನೆಯನ್ನು ಮುನಿಸಿಪಲ್ ಅಧಿಕಾರಿಗಳು ಖುದ್ದಾಗಿ ವೀಕ್ಷಿಸಿದರು. ಗಾಳಿ ಬೆಳಕಿನ ಕೊರತೆಯಿದ್ದ ಮನೆಗಳಲ್ಲಿ ಹೆಂಚನ್ನು ತೆಗೆದು ಅಲ್ಲಿ ಗಾಜಿನ ಹೆಂಚನ್ನು ಹಾಕಿದರು. ಗೋಡೆಗಳಲ್ಲಿ ದೊಡ್ಡ ಕಿಂಡಿಯನ್ನು ಕೊರೆದು ಕಿಟಕಿ ಗಳನ್ನಿರಿಸಿದರು. 8113 ಮನೆಗಳಿಗೆ ಕ್ರಿಮಿನಾಶಕಗಳನ್ನು ಸಿಂಪಡಿಸಿದರು.

36,259 ಜನರಿಗೆ ಪ್ಲೇಗ್ ನಿರೋಧಕ ಲಸಿಕೆಯನ್ನು ನೀಡಿದರು. ಹೊಸ ಕಟ್ಟಡಗಳನ್ನು ನಿಗದಿತ ನಿಯಮದ ಅನ್ವಯವೇ ಕಟ್ಟ ಬೇಕೆಂದು ಹೊಸ ಕಾನೂನನ್ನು ರೂಪಿಸಿದರು. ಬೆಂಗಳೂರು ನಗರದಲ್ಲಿ ಸ್ವಲ್ಪ ಗಾಳಿ-ಬೆಳಕು ಬರಲಾರಂಭಿಸಿತು. ಬೆಂಗಳೂರು ನಗರದ ಉತ್ತರದಲ್ಲಿ 291 ಎಕರೆ ಪ್ರದೇಶವನ್ನು ಹಾಗೂ ಬೆಂಗಳೂರು ದಕ್ಷಿಣದಲ್ಲಿ 440 ಎಕರೆ ಪ್ರದೇಶವನ್ನು ಗುರುತಿಸಿದರು. ಬೆಂಗಳೂರು ಉತ್ತರದಲ್ಲಿ ನಿರ್ಮಾಣವಾದ ಬಡಾವಣೆಯಲ್ಲಿ ಕಾಡುಮಲ್ಲೇಶ್ವರ ದೇವಾಲಯವಿತ್ತು.

ಹಾಗಾಗಿ ಈ ಹೊಸ ಬಡಾವಣೆಯನ್ನು ಮಲ್ಲೇಶ್ವರ ಎಂದು ಕರೆದರು. ಬೆಂಗಳೂರು ದಕ್ಷಿಣ ಬಡಾವಣೆಯಲ್ಲಿ ದೊಡ್ಡ ಬಸವಣ್ಣ ನಿದ್ದ. ಹಾಗಾಗಿ ಈ ಪ್ರದೇಶವನ್ನು ಬಸವನಗುಡಿ ಎಂದು ಕರೆದರು. ಆಗ ಬೆಂಗಳೂರು ನಗರದ ವಿಸ್ತೀರ್ಣವು ಸುಮಾರು 500 ಎಕರೆಯಷ್ಟಿತ್ತು. ಹೊಸ ಬಡಾವಣೆಗಳು ಬಂದಮೇಲೆ ಅದು 1123 ಎಕರೆಗಳಷ್ಟು ವಿಸ್ತಾರವಾಯಿತು. ಈ ಹೊಸ ಬಡಾವಣೆ ಗಳಲ್ಲಿ ನೀಳವಾದ ರಸ್ತೆಗಳಿದ್ದವು. ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ಸೈಟುಗಳನ್ನು ಮಾಡಿದರು. ಪ್ರತಿ ಮನೆಯ ಸಾಲಿನ ಹಿಂದೆ ಒಂದು ಓಣಿಯನ್ನು ನಿರ್ಮಿಸಿದರು. ಈ ಓಣಿಯು ಸ್ವಚ್ಛ ಸಂರಕ್ಷಣಾ ಓಣಿ ಅಥವ ಕನ್ಸರ್ವೆನ್ಸಿ ರೋಡ್ ಎಂದು ಕರೆಯುತ್ತಿದ್ದರು.

ಏಕೆಂದರೆ ಪ್ರತಿಯೊಂದು ದೊಡ್ಡ ಮನೆಯ ಹಿಂಭಾಗಗಳಲ್ಲಿ ಪಾಯಿಖಾನೆಗಳು ಇರುತ್ತಿದ್ದವು. ಆಗ ಇಂದಿನಂತೆ ಫ್ಲಶ್ ವ್ಯವಸ್ಥೆಯ ಪಾಯಿಖಾನೆಗಳಿರಲಿಲ್ಲ. ಗುಂಡಿ ಪಾಯಿಖಾನೆಗಳಿದ್ದವು. ಹಾಗಾಗಿ ಝಾಡಮಾಲಿಗಳು ನಿಯಮಿತವಾಗಿ ಬಂದು ಗುಂಡಿ ಗಳಲ್ಲಿದ್ದ ಮಲವನ್ನು ಬಾಚಿ ಈ ಹಿಂಬದಿಯ ರಸ್ತೆಯ ಮೂಲಕ ಹೊರ ಸಾಗಿಸುತ್ತಿದ್ದರು. ಹಾಗಾಗಿ ಇಂದಿಗೂ ಸಹ ಈ ರಸ್ತೆಗಳನ್ನು ಮಲ್ಲೇಶ್ವರ ಹಾಗೂ ಬಸವನಗುಡಿಯಲ್ಲಿ ನೋಡಬಹುದು.

1911ರ ವೇಳೆಗೆ ಫೈಜರ್ ಟೌನ್ ಮತ್ತು ರಿಚರ್ಡ್ಸ್ ಟೌನ್ ಬಡಾವಣೆಗಳು ಆರಂಭವಾದವು. ಬೆಂಗಳೂರು ನಗರದ ಈ ಸುಧಾರಣೆಗಳ ಜತೆಯಲ್ಲಿ ಪ್ಲೇಗಮ್ಮನ ದೇವಾಲಯಗಳು ಅಲ್ಲಲ್ಲಿ ಹುಟ್ಟಿಕೊಂಡದ್ದು ಬಹು ದೊಡ್ಡ ವಿಪರ್ಯಾಸ. ಅಂದಿನ ಮೈಸೂರು ಸಂಸ್ಥಾನದಲ್ಲಿ ಪ್ಲೇಗಿನ ಹೆಸರಿನಲ್ಲಿ ಆರೋಗ್ಯ ವ್ಯವಸ್ಥೆಯು ಗಣನೀಯವಾಗಿ ಸುಧಾರಿಸಿತು. ಲಂಡನ್ನಿನಲ್ಲಿ ಬ್ಯಾಕ್ಟೀರಿಯ ವಿಜ್ಞಾನದಲ್ಲಿ ತರಬೇತಿಯನ್ನು ಪಡೆದಿದ್ದ ಡಾ.ಪದ್ಮನಾಭನ್ ಪಲ್ಪು ಎನ್ನುವುವರನ್ನು, ತಿಂಗಳಿಗೆ ರೂ.400/- ವೇತನವನ್ನು ನೀಡಿ, ಸಂಸ್ಥಾನವು ತನ್ನ ಮೊದಲ ವೈದ್ಯಾಧಿಕಾರಿಯಾಗಿ ನೇಮಿಸಿಕೊಂಡಿತು.

ಅವರು ಮೈಸೂರು ಸಂಸ್ಥಾನದ ವೈದ್ಯಕೀಯ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಗಳನ್ನು ತಂದರು. 1881ರಲ್ಲಿ ಇಡೀ
ಮೈಸೂರು ಸಂಸ್ಥಾನದಲ್ಲಿ 24 ಆಸ್ಪತ್ರೆಗಳಿದ್ದವು. 1918ರ ವೇಳೆಗೆ 178 ಆಸ್ಪತ್ರೆಗಳನ್ನು ನಿರ್ಮಿಸಿದರು. 1900ರಲ್ಲಿ ಬೆಂಗಳೂರು ನಗರದಲ್ಲಿ ವಿಕ್ಟೋರಿಯ ಆಸ್ಪತ್ರೆಯನ್ನು ಕಟ್ಟಿಸಿದರು. ಈ ಆಸ್ಪತ್ರೆಯನ್ನು ಲಾರ್ಡ್ ಕರ್ಜನ್ ಉದ್ಘಾಟಿಸಿದರು. ಪ್ಲೇಗ್ ಆರಂಭ ವಾದ 1898ರಲ್ಲಿ ಪ್ಲೇಗ್ ಸಾವಿನ ಸಂಖ್ಯಾ ಪ್ರಮಾಣವು 2.7% ಇತ್ತು. 1913-1918ರ ನಡುವೆ ಮರಣ ಸಂಖ್ಯೆಯು 1.17% ಇಳಿಯಿತು. ಇದೇ ವೇಳೆಗೆ ಪದ್ಮನಾಭನ್‌ರವರು ಬೆಂಗಳೂರಿನಲ್ಲಿ ಒಂದು ಪ್ಲೇಗ್ ಆಸ್ಪತ್ರೆಯನ್ನೂ ನಿರ್ಮಿಸಿದರು. (ಮಾಗಡಿ ರಸ್ತೆಯಲ್ಲಿ ನಿರ್ಮಾಣವಾದ ಈ ಆಸ್ಪತ್ರೆಯು ಈಗ ಕುಷ್ಠರೋಗಿಗಳ ಆಸ್ಪತ್ರೆ ಯಾಗಿದೆ. ಸೋಂಕುರೋಗಗಳ ಆಸ್ಪತ್ರೆಯು ಹಳೇ ಮದ್ರಾಸ್ ರಸ್ತೆಗೆ ವರ್ಗಾವಣೆಯಾಯಿತು.) ಇದೇ ವೇಳೆಗೆ ಬೆಂಗಳೂರಿನಲ್ಲಿ ಸೈಂಟ್ ಮಾರ್ಥಾಸ್ ಆಸ್ಪತ್ರೆಯೂ ಸಹ ಆರಂಭವಾಗಿ ಕೆಲಸ ವನ್ನು ಮಾಡುತ್ತಿತ್ತು.

ಈ ಸುಧಾರಿಸಿದ ವೈದ್ಯಕೀಯ ಸವಲತ್ತಿನ ಕಾರಣ, 1918ರಲ್ಲಿ ಮೈಸೂರು ಸಂಸ್ಥಾನವನ್ನೂ ಅಪ್ಪಳಿಸಿದ ಸ್ಪ್ಯಾನಿಶ್ ಫ್ಲೂವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಸಾಧ್ಯವಾಯಿತು. ಭಾರತದ ಇತರ ಭಾಗಗಳಲ್ಲಿ ಸ್ಪ್ಯಾನಿಶ್ – ಕಾರಣ ಮರಣ ಪ್ರಮಾಣವು
5.7%ರಷ್ಟಿದ್ದರೆ, ಮೈಸೂರು ಸಂಸ್ಥಾನದಲ್ಲಿ 2.37%ಕ್ಕೆ ಮಾತ್ರ ಸೀಮಿತವಾಯಿತು. ಮೈಸೂರು ಸಂಸ್ಥಾನಕ್ಕೆ ಅನುಪಮ
ಸೇವೆಯನ್ನು ಸಲ್ಲಿಸಿದ ಡಾ.ಪದ್ಮನಾಭನ್ ಪಲ್ಪು ಅವರನ್ನು ಮೈಸೂರು ಮಹಾರಾಜರು ಸನ್ಮಾನಿಸಿದರು.