Monday, 16th May 2022

ಜಕಾರ್ತದಿಂದ ಹೊರಟಿದ್ದ ವಿಮಾನ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನ

ಜಕಾರ್ತ: ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್‌ ಏರ್‌ಲೈನ್‌ ಕಂಪನಿಯ ವಿಮಾನ ಶನಿವಾರ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಇದ್ದರು.

ಭಾರಿ ಮಳೆಯ ಕಾರಣ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ಬೋಯಿಂಗ್‌ 737-500 ವಿಮಾನವು ಟೇಕ್‌ ಆಫ್‌ ಆಗಿತ್ತು. ಪಶ್ಚಿಮ ಕಾಲಿಮಂತನ್‌ ಪ್ರಾಂತ್ಯದ ಪಾಂಟಿಯಾನಾಕ್‌ಗೆ ತೆರಳುತ್ತಿದ್ದ ಈ ವಿಮಾನವು ಕೆಲವೇ ನಿಮಿಷದಲ್ಲಿ ರೇಡಾರ್ ‌ನಿಂದ ನಾಪತ್ತೆಯಾಗಿತ್ತು. ವಿಮಾನವು 26 ವರ್ಷ ಹಳೆಯದಾಗಿತ್ತು.

ಫ್ಲೈಟ್‌ ಎಸ್‌ಜೆ 182ನಲ್ಲಿ 62 ಜನರಿದ್ದರು. ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿರುವ ಲಾಕಿ ದ್ವೀಪದ ಸಮೀಪ ವಿಮಾನ ಪತನವಾಗಿದೆ’ ಎಂದು ಇಂಡೊನೇಷ್ಯಾ ಸಾರಿಗೆ ಸಚಿವ ಬುದಿ ಕರ್ಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ ಪ್ರಯಾಣಿಕ ರೆಲ್ಲರೂ ಇಂಡೊನೇಷ್ಯಾದವರೇ ಆಗಿದ್ದಾರೆ ಎಂದು ಸಾರಿಗೆ ಸುರಕ್ಷತಾ ಸಮಿತಿ ತಿಳಿಸಿದೆ.

‘ಟೇಕ್‌ಆಫ್‌ ಆದ ನಾಲ್ಕು ನಿಮಿಷದ ಬಳಿಕ 29 ಸಾವಿರ ಅಡಿಗೆ ಏರಲು ಪೈಲಟ್‌ ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗೆ ಸಂಪರ್ಕಿಸಿ ದ್ದರು’ ಎಂದು ಬುದಿ ಕರ್ಯಾ ತಿಳಿಸಿದರು.

ಇಂಡೊನೇಷ್ಯಾ ನೌಕಾಪಡೆಯು ವಿಮಾನ ಪತನವಾದ ನಿಖರ ಸ್ಥಳವನ್ನು ಗುರುತಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಹಡಗುಗಳನ್ನು ನಿಯೋಜಿಸಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದರು. 2003ರಲ್ಲಿ ಪ್ರಾರಂಭವಾಗಿದ್ದ ಈ ಏರ್‌ಲೈನ್ಸ್‌, ಹೆಚ್ಚಾಗಿ ಇಂಡೊನೇಷ್ಯಾದ ಒಳಗೆ ವಿಮಾನ ಸೇವೆ ನೀಡುತ್ತಿದೆ.