ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhiar Election: ಬಿಹಾರ ವಿಧಾನಸಭೆ ಚುನಾವಣೆ; ಮಹಿಳಾ ಮತದಾರದಿಂದ ನಿರ್ಧಾರವಾಗಲಿದೆಯೇ ಫಲಿತಾಂಶ?

Bihar Polls 2025: ಎರಡು ಹಂತದಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆ ಈ ಬಾರಿ ನಾನಾ ವಿಷಯಗಳಿಗೆ ವಿಶೇಷವಾಗಿದ್ದು, ಫಲಿತಾಂಶ ಮಹಿಳಾ ಮತದಾರರ ಮೇಲೆ ನಿಂತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮಹಿಳಾ ಮತದಾರರ ಮೇಲೆ ಹೆಚ್ಚಿನ ಭರವಸೆ ಇಡಲಾಗಿದ್ದು, ಪುರುಷರಿಗಿಂತ ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಸಾಂಧರ್ಬಿಕ ಚಿತ್ರ

ಪಾಟ್ನಾ: ಎರಡು ಹಂತದಲ್ಲಿ ನಡೆದ ಬಿಹಾರದ 18ನೇ ವಿಧಾನಸಭಾ ಚುನಾವಣೆ (Bihar Assembly election)ಯಲ್ಲಿ ಪುರುಷರಿಗಿಂತ ಮಹಿಳೆಯರೇ (Woman Voters) ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಿದ್ದು, ಮಹಿಳಾ ಮತದಾರರು ಹೆಚ್ಚಾಗುವ ಪ್ರವೃತ್ತಿ ಮುಂದುವರಿದಿರುವುದನ್ನು ಇದು ಸೂಚಿಸಿದೆ. ಕೇಂದ್ರ ಚುನಾವಣಾ ಆಯೋಗವು (Election Commission of India) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಪುರುಷರ ಮತದಾನ ಪ್ರಮಾಣ ಶೇ. 62.8 ಆಗಿದ್ದರೆ, ಮಹಿಳೆಯರ ಮತದಾನ ಪ್ರಮಾಣ ಶೇ. 71.6. ಒಟ್ಟು 1,00,16,921 ಪುರುಷರು ಮತ ಚಲಾಯಿಸಿದರೆ 1,00,20,796 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಅಂದರೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರು 3,875 ಹೆಚ್ಚಿರುವುದನ್ನು ಇದು ತೋರಿಸಿದೆ.

ಮೊದಲ ಹಂತದ ಚುನಾವಣೆಯಲ್ಲಿ ಶೇ. 65.08ರಷ್ಟು ಮಹಿಳೆಯರು ಮತದಾನ ಮಾಡಿದ್ದು, ಎರಡನೇ ಹಂತದಲ್ಲಿ ಶೇ. 79.04ರಷ್ಟು ಹೆಂಗಳೆಯರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಒಟ್ಟಾರೆ ಲೆಕ್ಕ ನೋಡುವುದಾದ್ದರೆ ಮೊದಲ ಹಂತದ ಚುನಾವಣೆಯಲ್ಲಿ 3.75 ಕೋಟಿ ಜನರು ಮತ ಚಲಾಯಿಸಿದ್ದು, ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮಾಹಿತಿಯ ಪ್ರಕಾರ ಈ ಬಾರಿ ಶೇ. 65.08 ಮತದಾನವಾಗಿದೆ. ಇದು ಈವರೆಗೆ ಬಿಹಾರದಲ್ಲಿ ನಡೆದ ಐತಿಹಾಸಿಕ ಮತದಾನವಾಗಿದ್ದು, 2020ರಲ್ಲಿ ಶೇ 57.29ರಷ್ಟು ಮತದಾನವಷ್ಟೇ ನಡೆದಿತ್ತು. ಈ ಹಿಂದಿನ ಮತದಾನ ಪ್ರಮಾಣಕ್ಕಿಂತ ಈ ಬಾರೀ ಶೇ. 7.79 ರಷ್ಟು ಹೆಚ್ಚು ಮತ ಚಲಾಯಿಸಲಾಗಿದೆ. ಈ ಬೆಳವಣಿಗೆಯಿಂದ ಬಿಹಾರ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮತದಾರರು ಬದಲಾವಣೆಯನ್ನು ತರಲಿದ್ದಾರೆ ಎಂಬ ಚರ್ಚೆಗಳಾಗುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಎರಡು ಕಾರಣಗಳಿವೆ ಎನ್ನಲಾಗಿದೆ.

ಚುನಾವಣೆ ಪ್ರಚಾರದ ವೇಳೆ ಮಹಿಳಾ ಮತದಾರರನ್ನು ಸೆಳೆಯಲು ಮೈತ್ರಿಕೂಟಗಳು ನೀಡಿರುವ ಕಲ್ಯಾಣ ಭರವಸೆಗಳು ಮಹಿಳೆಯರಲ್ಲಿ ಆಶಾಭಾವನೆ ಮೂಡಿಸಿದ್ದು, ಇವುಗಳು ಈಡೇರುವ ನಿರೀಕ್ಷೆಯಲ್ಲಿ ಮತದಾನದತ್ತ ಹೆಚ್ಚು ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಸಮೀಕ್ಷೆಗಳ ಪ್ರಕಾರ, ಮಹಿಳಾ ಮತದಾರರು ಸ್ವಾಲಂಬಿ ಜೀವನ ಬೆಂಬಲಿತ ಯೋಜನೆ, ಶಿಕ್ಷಣಕ್ಕೆ ಸಹಾಯಧನ ಮತ್ತು ಮದ್ಯ ನಿಷೇಧದಂತಹ ಯೋಜನೆಗಳ ಜಾರಿಯ ಕುರಿತು ಎದುರು ನೋಡುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ದೇಗುಲದ ಒಳಗೆ ವೃದ್ಧಅಸ್ವಸ್ಥ; ಸಾವಿನ ಕೊನೆಯ ಕ್ಷಣದ ವಿಡಿಯೊ ವೈರಲ್!

ಮಹಿಳೆ ಮತದಾನ ಪ್ರಮಾಣ ಹೆಚ್ಚಾಗಿರುವುದರ ಕುರಿತು ನಾನಾ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, “ಮಹಿಳಾ ಮತದಾರರು ಈ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಮೈತ್ರಿ ಮಹಾಘಟಬಂಧನ್ ಎರಡರ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿ ಹೊರಹುಮ್ಮಿದ್ದಾರೆ” ಎಂದು ಹಲವರು ಹೇಳಿದ್ದಾರೆ. ಕಳೆದ ಒಂದು ತಿಂಗಳ ಕಾಲ ನಡೆದ ಪ್ರಚಾರದಲ್ಲಿ ಎರಡೂ ಮೈತ್ರಿಕೂಟಗಳು ಮಹಿಳಾ ಮತದಾರರನ್ನು ಸೆಳೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದ್ದು, ಆರ್‌ಜೆಡಿಯ ತೇಜಸ್ವಿ ಯಾದವ್ ಮಹಿಳೆಯರಿಗೆ 30,000 ರೂ. ನಿರುದ್ಯೋಗ ಭತ್ಯೆಯನ್ನು ಘೋಷಿದ್ದರು. ಜತೆಗೆ ಸ್ವಸಹಾಯ ಗುಂಪುಗಳಿಗೆ ಶಾಶ್ವತ ಲಾಭಗಳು ಮತ್ತು ಬೋನಸ್ ನೀಡುವುದಾಗಿ ಭರವಸೆ ನೀಡಿದ್ದರು.

ಇನ್ನೊಂದೆಡೆ, ಎನ್‌ಡಿಎ ನೇತೃತ್ವದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರ ಇತ್ತೀಚಿಗೆ 'ಮಹಿಳಾ ರೋಜ್‌ಗಾರ್' ಯೋಜನೆಯಡಿ ಎರಡು ಕೋಟಿಗೂ ಹೆಚ್ಚು ಮಹಿಳೆಯರಿಗೆ ತಲಾ 10,000 ರೂ.ಗಳ ನಿರುದ್ಯೋಗ ಭತ್ಯೆ ಅಥವಾ ಸರ್ಕಾರದ ಸಹಾಯಧನ ಘೋಷಿಸಿದ್ದರು. ಜತೆಗೆ ಹಣವನ್ನು ನೇರವಾಗಿ ಮಹಿಳೆಯರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಈ ಎಲ್ಲ ಅಂಶಗಳು ಮಹಿಳೆಯರ ಮತದಾನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಕಾರಣವಾಗಿದ್ದು, ಬಿಹಾರದ ಫಲಿತಾಂಶ, ರಾಜಕಾರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎನ್ನಲಾಗಿದೆ.

ಇನ್ನು ಎನ್‌ಡಿಎ ತನ್ನ ಪ್ರತಿಸ್ಪರ್ಧಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬರದಂತೆ ತಡೆಯಲು ಜಂಗಲ್ ರಾಜ್ ವಿಷಯವನ್ನು ಮತ್ತೆ ಮತದಾರರಿಗೆ ನೆನಪಿಸುವ ಕೆಲಸ ಮಾಡಿದ್ದು, ಆ ಸಮಯದಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದರು. ಮಹಿಳಾ ಸ್ವಾತಂತ್ರ ಇರಲಿಲ್ಲ, ಮೇಲಾಗಿ ರಾಜ್ಯದಲ್ಲಿ ಕಾನೂನಿ ಸುವ್ಯವಸ್ಥೆ ಪಾಲನೆಯಾಗುತ್ತಿರಲಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿತ್ತು. ಹೀಗಾಗಿ ಆರ್ಥಿಕ ನೆರವು, ಸ್ಥಿರತೆ ಮತ್ತು ಹೆಣ್ಣು ಮಕ್ಕಳ ಭದ್ರತೆ - ಸುರಕ್ಷತೆ ಈ ಅಂಶಗಳು ಈ ಬಾರಿಯ ಚುನಾವಣೆಗಳ ಮೇಲೆ ಹೆಚ್ಚು ಪ್ರಭಾವ ಬೀರಿವೆ ಎಂದು ಕೆಲವು ಮತದಾರರು ಹೇಳುತ್ತಿದ್ದಾರೆ. ಒಟ್ಟಾರೆ ನವೆಂಬರ್ 14ರಂದು ಪ್ರಕಟವಾಗುವ ಚುನಾವಣಾ ಫಲಿತಾಂಶದಲ್ಲಿ ಎಲ್ಲವೂ ಗೊತ್ತಾಗಲಿದೆ.