Monday, 15th August 2022

ಪೂಜೆ, ರಾಮಾಯಣ ಪಠಣಕ್ಕೆ ಅವಕಾಶ ನೀಡಿ

– ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಸಂಜೀವ್

– ವಿದ್ಯಾದಾಸ್ ಬಾಬಾಗೆ ಅವಕಾಶ‌ನೀಡಲಿ

ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿನ ಪೌರಾಣಿಕ ಪ್ರಸಿದ್ಧ ಶ್ರೀ ಆಂಜನೇಯ ದೇವಾಲಯದಲ್ಲಿ ವಿದ್ಯಾದಾಸ್ ಬಾಬಾಗೆ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಜಿಲ್ಲಾಡಳಿತ ಅದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಕೂಡಲೇ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ ಅವರು, ಕಳೆದ 40 ವರ್ಷಗಳಿಂದ ವಿದ್ಯಾದಾಸ್  ಬಾಬಾ ಅವರು ಅಂಜನಾದ್ರಿ ಬೆಟ್ಟದಲ್ಲಿ ಪೂಜೆ, ರಾಮಾಯಣ ಪಠಣ, ಸಂಸ್ಕೃತ ಪಾಠಶಾಲೆ ಸೇರಿ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದಾರೆ. 3 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲಾಡಳಿತ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ವರದಿ ನೀಡಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಬೆಳಗ್ಗೆ 6ರಿಂದ ರಾತ್ರಿ 9 ಗಂಟೆವರೆಗೆ ಪೂಜೆ, ಹನುಮಾನ್ ಚಾಲೀಸ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಸಲು ಬಾಬ ಅವರಿಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ, ಗಂಗಾವತಿ ಕಂದಾಯ ನಿರೀಕ್ಷಕ ಮಂಜುನಾಥ ಹಾಗೂ ತಾಲೂಕಾಡಳಿತ ಅದಕ್ಕೆ ಅವಕಾಶ ನೀಡುತ್ತಿಲ್ಲ. ಕೂಡಲೇ ಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಜಿಲ್ಲಾಡಳಿತದ ಮುಂದೆ ಧರಣಿ ನಡೆಸುತ್ತೇವೆಂದು ಎಚ್ಚರಿಸಿದರು.

ಈ ವೇಳೆ ವಿದ್ಯಾದಾಸ್ ಬಾಬಾ ಮಾತನಾಡಿ, ಮೊದಲು ಅಂಜನಾದ್ರಿ ಬೆಟ್ಟದ ಬಗ್ಗೆ ಅಷ್ಟಾಗಿ ಜನರಿಗೆ ತಿಳಿದಿರಲಿಲ್ಲ. ನಾನು 40 ವರ್ಷಗಳಿಂದ ಪೂಜೆ ನಡೆಸುತ್ತಾ ಬಂದಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪ್ರಚಾರ ಹೆಚ್ಚಿ, ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಹಣವೂ ಹರಿದು ಬರುತ್ತಿದೆ. ಹೀಗಾಗಿ ಸ್ಥಳೀಯ ರಾಜಕೀಯ ನಾಯಕರು ನನ್ನನ್ನು ಹೊರಹಾಕಲು ಯತ್ನಿಸಿದರು. ಆದರೆ, ನ್ಯಾಯಾಲಯ ನನಗೆ ಪೂಜೆಗೆ ಅವಕಾಶ ನೀಡಿದೆ. ಜಿಲ್ಲಾಡಳಿತ ಸುಳ್ಳು ಹೇಳಿ ಜನಪ್ರತಿನಿಧಿಗಳು, ಜನರ ದಿಕ್ಕು ತಪ್ಪಿಸುತ್ತಿದೆ. ಇಲ್ಲಸಲ್ಲದ ಆರೋಪಗಳನ್ನು ನನ್ನ ಮೇಲೆ ಹೇರಲು ಯತ್ನಿಸುತ್ತಿದೆ. ನಿಯಮದಂತೆ ನನಗೆ ಅವಕಾಶ ಕಲ್ಪಿಸಬೇಕು ಎಂದರು.

ದೇವಸ್ಥಾನದ ಹಡಸರಿನಲ್ಲಿ ಸಧ್ಯ ಐದು ಟ್ರಸ್ಟ್ ಗಳಿವೆ. ನಮ್ಮದು ಮೂಲ ಟ್ರಸ್ಟ್ ಆಗಿದೆ. ಧಾರ್ಮಿಕ ಪದ್ಧತಿಯಂತೆ ಅಲ್ಲಿ ಯಾವುದೇ ಕಾರ್ಯಮಗಳು ನಡೆಯುತ್ತಿಲ್ಲ. ಕೋರ್ಟ್ ಆದೇಶವಿದ್ದರೂ ತಾಲೂಕಾಡಳಿತ, ಜಿಲ್ಲಾಡಳಿತ ನನಗೆ ಅವಕಾಶ ನೀಡಿಲ್ಲ. ಇದು ನ್ಯಾಯಾಂಗ ನಿಂದನೆ ಆಗುತ್ತದೆ. ಆ ಬಗ್ಗೆ ಜಿಲ್ಲಾಡಳಿತದ ಗಮನ ಕ್ಕಿದ್ದರೂ ಯಾವ ಕಾರಣಕ್ಕೆ ಹೀಗೆ ಹಠಮಾರಿತನ ತೋರುತ್ತಿದೆ ತಿಳಿಯುತ್ತಿಲ್ಲ. ಕೂಡಲೇ ನನಗೆ ಪೂಜೆ, ಪಠಣ, ಸಂಸ್ಕೃತ ಪಾಠಶಾಲೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಜೆ.ಪಿ. ನಾರಾಯಣಗೌಡ ಇದ್ದರು.