Monday, 3rd October 2022

ಬಡಜನರಿಗೆ ಸವಲತ್ತು ಒದಗಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ವಿಫಲ

ಮಧುಗಿರಿ : ಕೇಂದ್ರ ಸರಕಾರವು ಅಂಬಾನಿ, ಅದಾನಿರವರುಗಳಿಗೆ  ನೀಡುತ್ತಿರುವ  ಸವಲತ್ತುಗಳನ್ನು ದೇಶದ ಬಡಜನರಿಗೆ ಒದಗಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ  ಮಯೂರ ಜಯಕುಮಾರ್  ತಿಳಿಸಿದರು.

ಪಟ್ಟಣದ ಎಂ ಎನ್ ಕೆ ಸಮುದಾಯ ಭವನದಲ್ಲಿ  ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿ.ಎಸ್ ಆರ್ ರಾಜಗೋಪಾಲ್ ರವರ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯ ಪಕ್ಷವು ಜಾರಿ ಗೊಳಿಸುತ್ತಿರುವ  ಕಾನೂನುಗಳಿಂದ ಜನ ಸಾಮಾನ್ಯರಿಗೆ ಅನಾನುಕೂಲವಾಗುತ್ತಿದ್ದೂ ಇವರ ಕಾನೂನುಗಳಿಂದಾಗಿ ಶ್ರೀಮಂತರು ಮಾತ್ರ ಅಭಿವೃದ್ಧಿ ಕಾಣುತ್ತಿದ್ದಾರೆ.

ಇಡೀ ದೇಶದ ಜನತೆಯೇ ರಾಹುಲ್ ಗಾಂಧಿಯವರ ಪಾದಯಾತ್ರೆಗೆ ಬೆಂಬಲಿಸುತ್ತಿದ್ದರೆ,  ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿ ಯವರು ಮಾತ್ರ ಭಾರತ್ ಜೋಡೋ ಯಾತ್ರೆಯನ್ನು ಭಾರತ್ ತೋಡೊ ಯಾತ್ರೆಯೆಂದು ವಿರೋಧ ವ್ಯಕ್ತಪಡಿಸು ತ್ತಿರುವುದು ಸರಿಯೇ. ಈ ಪಾದಯಾತ್ರೆಗೆ ದೇಶದಾದ್ಯಂತ ಭರ್ಜರಿ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಕರ್ನಾಟಕದಲ್ಲಿಯೂ ಜನತೆ ನಿರೀಕ್ಷೆಗೂ ಮೀರಿ ಬೆಂಬಲಿಸುವ ವಿಶ್ವಾಸವಿದೆ. ಬೃಹತ್ ಪಾದಯಾತ್ರೆಯಿಂದ ಕರ್ನಾಟಕದ ಬಿಜೆಪಿ ನಾಯಕರಿಗೆ ನಡುಕ ಉಂಟಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಅ.೧೧ ರಂದು ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆಯು ಕಳ್ಳಂಬೆಳ್ಳ ತಲುಪಲಿದ್ದು ನಮ್ಮ ತಾಲೂಕಿನಿಂದ ಸುಮಾರು ೧ ಸಾವಿರ ದ್ವಿಚಕ್ರ ವಾಹನ ಸವಾರರು ಹಾಗೂ ಸುಮಾರು ೫ ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಆಚರಣೆಯ ಸಮಿತಿಗೆ ನನ್ನನ್ನು ಅಧ್ಯಕ್ಷರನ್ನಾಗಿಸಿದ್ದು ಹಾಗೂ ತಾಲೂಕಿನಿಂದ ಸಾವಿರಾರು ಜನರು ಸ್ವ ಇಚ್ಛೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರ ಮಾದರಿಯಲ್ಲಿಯೇ ರಾಹುಲ್ ಗಾಂಧಿಯವರ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯಲ್ಲೂ ಭಾಗವಹಿಸಿಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕು.

ಈ ಯಾತ್ರೆಯಲ್ಲಿ ಭಾಗವಹಿಸುವ ಅದೃಷ್ಟ ನಮಗೆ ಸಿಕ್ಕಿರುವುದು ನಮ್ಮ ಸುದೈವ. ನಮ್ಮ ಜೀವನದಲ್ಲಿ ಮತ್ತೆ ಇಂತಹ ಅವಕಾಶ ಗಳು ದೊರೆಯುವುದಿಲ್ಲ. ನಮ್ಮ ಕ್ಷೇತ್ರದಿಂದ ಅತೀ ಹೆಚ್ಚು ಜನ ಭಾಗವಹಿಸಿದ ಯಶಸ್ಸಿನ ಕೀರ್ತಿ ನಮಗೆ ದೊರೆಯುವಂತಾಗ ಬೇಕು ಎಂದರು.

ಮು0ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು,  ಜಿಲ್ಲೆಯಲ್ಲಿ ಕನಿಷ್ಠ ೮ ಕ್ಷೇತ್ರ ಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುವಂತೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದರು.

ಮು0ಬರುವ ಚುನಾವಣೆಯಲ್ಲಿ ಬಿಜೆಪಿ ಮುಕ್ತ ಭಾರತ ಮಾಡಲು ನಾವೆಲ್ಲ ಪಣ ತೊಡಬೇಕು. ದೇಶದಲ್ಲಿ ಮತೀಯ ಗಲಭೆ ಗಳನ್ನು ಕದಡುವ ಕೆಲಸವನ್ನು ಬಿಜೆಪಿ  ಮಾಡುತ್ತಿದೆ. ಭಾರತ್ ಜೋಡೋ ಕಾರ್ಯಕ್ರಮದ ನಮ್ಮ ರಾಜ್ಯದ ಉಸ್ತುವಾರಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರಿಗೆ ವಹಿಸಿದ್ದು ಅವರ ನೇತೃತ್ವದಲ್ಲಿ ಈ ಯಾತ್ರೆಯು ಯಶಸ್ವಿ ಯಾಗುತ್ತದೆ ಎಂಬ ಭಯ ಮತ್ತು ಆತಂಕದಿAದ ಕೇಂದ್ರ ಸರಕಾರವು ಇ.ಡಿ. ಇಲಾಖೆಯ ಅಸ್ರ ಬಳಸಿ ಡಿ.ಕೆ.ಶಿ ಅವರಿಗೆ ಮಾನಸಿಕ ಹಿಂಸೆ ನೀಡಿ ಅವರನ್ನು ಕಟ್ಟಿಹಾಕಲು ಯತ್ನಿಸುತ್ತಿರುವ ಕ್ರಮ ಸರಿಯಿಲ್ಲ ಎಂದರು.

ಕಾರ್ಯಕ್ರಮದಲ್ಲಿ  ಮಾಜಿ ಸಂಸದ ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ , ಜಿ.ಜೆ.ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷರಾದ  ಎಂ.ಕೆ. ನಂಜು0ಡಯ್ಯ , ಎನ್.ಗಂಗಣ್ಣ , ಕೆ.ಪ್ರಕಾಶ್,  ಜಿಲ್ಲಾ  ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ, ಪುರಸಭೆ ಸದಸ್ಯರಾದ  ಆಲಿಂ, ಎಂ.ಎಸ್. ಚಂದ್ರಶೇಖರ್, ಮಂಜುನಾಥ್ ಆಚಾರ್, ಲಾಲಾಪೇಟೆ ಮಂಜುನಾಥ್, ಮುಖಂಡರಾದ ಪಿ.ಸಿ. ಕೃಷ್ಣಾರೆಡ್ಡಿ,  ಆದಿನಾರಾಯಣ ರೆಡಿ , ಆನಂದ್, ಉಮೇಶ್ , ವೀರಣ್ಣ , ಲಕ್ಷ್ಮೀ ನಾರಾಯಣ್ , ಇಂದಿರಾ ದೇನಾನಾಯ್ಕ, ಚಂದ್ರಮ್ಮ, ಭಾರತಮ್ಮ ಮುಂತಾದವರು ಇದ್ದರು.