Tuesday, 7th December 2021

ಪ್ರಾಪ್ತಿ ಇದ್ದಾಗ ಮಾತ್ರ ದೊರಕೀತು

Rajput King

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ

ಹದಿನೈದನೆಯ ಶತಮಾನದಲ್ಲಿದ್ದ ರಜಪೂತ ರಾಜ ಪ್ರತಾಪ್ ಸಿಂಗ್ ರಾಜ ಪೀಪಾಜಿ (ರಾಜ ಪೀಪ)ನಿಗೆ ಅಧ್ಯಾತ್ಮ ಎಂದರೆ ಗೌರವ. ತನ್ನ ಸಂಪರ್ಕಕ್ಕೆ ಬಂದ ಎಲ್ಲಾ ಸನ್ಯಾಸಿ, ಯೋಗಿಗಳ ಬಳಿ ಹೋಗಿ ಮೋಕ್ಷ ಮಾರ್ಗವನ್ನು ಕರುಣಿಸುವಂತೆ ಕೇಳಿಕೊಳ್ಳುತ್ತಿದ್ದ.

covidಅವನ ರಾಜ್ಯದಲ್ಲಿ ರವಿ ದಾಸ್ ಎಂಬ ಸಂತನು ಕುಟೀರ ಕಟ್ಟಿಕೊಂಡು, ಚಮ್ಮಾರ ವೃತ್ತಿಯನ್ನು ಮಾಡುತ್ತಾ, ಅಧ್ಯಾತ್ಮ ಸಾಧನೆಯಲ್ಲಿ ನಿರತನಾಗಿದ್ದ. ಆತನ ಕುಟೀರಕ್ಕೆ ಭೇಟಿ ನೀಡಬೇಕೆಂಬ ಅಭಿಲಾಷೆ ರಾಜ ಪೀಪಾಜಿ ಯದ್ದು. ಆದರೆ, ತಾನು ರಾಜನಾಗಿದ್ದುದರಿಂದ, ಅಲ್ಲಿಗೆ ಭೇಟಿ ನೀಡಿದರೆ ಜನರು ಏನಂದುಕೊಳ್ಳುತ್ತಾರೋ ಎಂಬ ಅಳುಕು. ಒಂದು ದಿನ ರಾಜ್ಯದಲ್ಲಿ ದೊಡ್ಡ ಜಾತ್ರೆ. ಜನರೆಲ್ಲರೂ ಜಾತ್ರೆಯಲ್ಲಿ ಭಾಗವಹಿಸುವ ಸಮಯ ನೋಡಿ ಕೊಂಡು, ಯಾರಿಗೂ ಗೊತ್ತಾಗದಂತೆ, ರವಿ ದಾಸ್‌ನ ಕುಟೀರಕ್ಕೆ ರಾಜ ಭೇಟಿ ನೀಡಿದ.

ರವಿ ದಾಸ್‌ನು ತನ್ನ ಎಂದಿನ ಚಮ್ಮಾರಿಕೆ ಕರ್ತವ್ಯದಲ್ಲಿ ನಿರತನಾಗಿದ್ದ. ಒಂದು ದೊಡ್ಡ ನೀರಿನ ಪಾತ್ರೆಯಲ್ಲಿ ಚರ್ಮವನ್ನು ಹದ ಮಾಡುತ್ತಿದ್ದ ರವಿದಾಸನಿಗೆ ರಾಜ ಪೀಪಾಜಿಯು ನಮಸ್ಕರಿಸಿ, ‘ಗುರುಗಳೇ, ನನಗೆ ಅಧ್ಯಾತ್ಮ ಪಥವನ್ನು ಕರುಣಿಸಿ’ ಎಂದು ವಿನಂತಿಸಿದ. ರವಿ ದಾಸನು ಕೆಲವು ಕ್ಷಣ ರಾಜನನ್ನು ನೋಡಿ ‘ಈ ಪಾತ್ರೆಯಲ್ಲಿರುವ ನೀರನ್ನು ಈಗಲೇ ಕುಡಿ.’ ಎಂದು ಚರ್ಮ ಹದ ಮಾಡುತ್ತಿದ್ದ ಪಾತ್ರೆಯನ್ನು ತೋರಿಸಿದ.

ಅದನ್ನು ಕೇಳಿ ರಾಜ ಮರು ಮಾತನಾಡಲಿಲ್ಲ. ಸಂತ ರವಿದಾಸ ಹೇಳಿದ್ದನ್ನು ಮಾಡಲೇಬೇಕು, ಆದರೆ ಚರ್ಮ ಹದ ಮಾಡಿದ ನೀರನ್ನು ಕುಡಿಯುವು ದಾದರೂ ಹೇಗೆ? ರಾಜ ಚಾಣಾಕ್ಷತನದಿಂದ ಯೋಚಿಸಿದ. ಆ ದಿನ ಆತ ಧರಿಸಿದ್ದ ಅಂಗಿಯು ಉದ್ದವಿದ್ದು, ದಪ್ಪನೆಯ ಹತ್ತಿ ಮತ್ತು ರೇಷ್ಮೆಯಿಂದ ತಯಾರಿಸಿದ್ದಾಗಿತ್ತು. ಅಂಗಿಯ ಕೈ ಗಳನ್ನು ಮಣಿಕಟ್ಟಿನ ಬಳಿ ಬಿಗಿಯಲಾಗಿತ್ತು. ರಾಜನು ಪಾತ್ರೆಯನ್ನು ಎತ್ತಿಕೊಂಡು, ತುಸು ತುಸುವೇ ನೀರನ್ನು ಅಂಗಿಯ ಕೈಗಳ ಬಳಿ ಬಿಟ್ಟುಕೊಳ್ಳುತ್ತಾ ಹೋದ. ನಿಧಾನವಾಗಿ ಆ ದಪ್ಪ ನಿಲುವಂಗಿಯು ಪಾತ್ರೆಯಲ್ಲಿದ್ದ ನೀರನ್ನು ಪೂರ್ತಿಯಾಗಿ ಹೀರಿಕೊಂಡಿತು. ಒಳಗಿನಿಂದ ಹೊರಬಂದ ರವಿದಾಸ್‌ನು, ‘ರಾಜನೇ, ನೀರು ಕುಡಿದದ್ದು ಸಾಕು. ಇನ್ನು ನೀನು ಆಸ್ಥಾನಕ್ಕೆ ಹೋಗು. ಅಧ್ಯಾತ್ಮ ಪಥಕ್ಕೆ ಅಗತ್ಯ ಎನಿಸುವ ಉಳಿದ ಕೆಲಸವನ್ನು ನಾನು ಮಾಡುತ್ತೇನೆ’ ಎಂದ. ರಾಜನು ಅರಮನೆಗೆ ವಾಪಸಾದ.

ಚರ್ಮ ತೊಳೆದ ನೀರಿನಿಂದ ತುಂಬಿಹೋಗಿದ್ದ ಆತನ ನಿಲುವಂಗಿಯನ್ನು ಬೇಗನೆ ಬದಲಾಯಿಸ ಬೇಕಿತ್ತು. ನಿಲುವಂಗಿಯನ್ನು ತೆಗೆದು, ಸೇವಕರನ್ನು ಕರೆದು ಅದನ್ನು ಸ್ವಚ್ಛಗೊಳಿಸಲು ಮಡಿವಾಳನಿಗೆ ನೀಡುವಂತೆ ಹೇಳಿದ. ಮಡಿವಾಳನು ಆ ನಿಲುವಂಗಿಯನ್ನು ತನ್ನ ಮನೆಗೆ ಕೊಂಡೊಯ್ದು, ಅದರ ಮೇಲಿನ ಕಲೆಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ, ಅದನ್ನು ಜಗಿದು ಶುಭ್ರಗೊಳಿಸುವಂತೆ ತನ್ನ ಮಗಳಿಗೆ ಹೇಳಿದ. ಮಡಿವಾಳನ ಮಗಳು ಆ ನಿಲು ವಂಗಿಯನ್ನು ಜಗಿಯುತ್ತಾ, ಹೀರಿದ ನೀರನ್ನು ಉಗಿಯುವ ಬದಲು, ಕುಡಿದುಬಿಟ್ಟಳು.

ಆಗ ಒಂದು ಪವಾಡ ಜರುಗಿತು. ಆ ನೀರನ್ನು ಕುಡಿದ ಹುಡುಗಿಯಲ್ಲಿ ಅಸಾಧಾರಣ ದೈವಿಕ ಶಕ್ತಿ ತುಂಬಿಕೊಂಡಿತು. ಕೆಲವೇ ದಿನಗಳಲ್ಲಿ ಆಕೆಯು ಪವಾಡ ಶಕ್ತಿ ಹೊಂದಿದವಳಾಗಿ ಪ್ರಸಿದ್ಧಳಾದಳು. ಈ ವಿಚಾರವು ಪ್ರತಾಪ ಸಿಂಗ್ ರಾಜ ಪೀಪಾಜಿಗೆ ತಿಳಿಯಿತು. ತನ್ನ ಊರಿನಲ್ಲಿರುವ ಎಲ್ಲಾ ಪವಾಡ ಪುರುಷರನ್ನು ಭಕ್ತಿಯಿಂದ ಕಾಣುವ ರಾಜನು, ಒಂದು ದಿನ ಮಡಿವಾಳನ ಮನೆಗೆ ಬಂದು, ಆತನ ಮಗಳಿಗೆ ನಮಸ್ಕರಿಸಿದ. ‘ನಾನು ರಾಜನಾಗಿ ಇಲ್ಲಿಗೆ ಬಂದಿಲ್ಲ. ಭಿಕ್ಷುಕನಾಗಿ ಬಂದಿರುವೆ. ನನಗೆ ಮುಕ್ತಿ ಮಾರ್ಗವನ್ನು ತೋರಿಸು ತಾಯಿ’ ಎಂದು ಕೇಳಿಕೊಂಡ.

ಆ ಹುಡುಗಿಯು ನಸುನಕ್ಕು, ‘ರಾಜನೇ, ನನ್ನ ಈ ಶಕ್ತಿಯೆಲ್ಲವೂ ನಿನ್ನ ಕೃಪೆಯಿಂದ ಬಂದದ್ದು’ ಎಂದು ರಾಜನಿಗೆ ನಡೆದದ್ದನ್ನು ತಿಳಿಸಿದಳು. ‘ನಿನ್ನ ನಿಲುವಂಗಿಯಲ್ಲಿದ್ದ ನೀರನ್ನು ಕುಡಿದ ತಕ್ಷಣ ನನಗೆ ಈ ಶಕ್ತಿ ಕುದುರಿಬಂತು’ ಎಂದಳು. ತಕ್ಷಣ ರವಿದಾಸ್‌ನ ಕುಟೀರಕ್ಕೆ ಹೋಗಿ, ‘ಮಹಾಸ್ವಾಮಿಗಳೇ, ನನಗೆ ಇನ್ನೊಮ್ಮೆ ಆ ಚರ್ಮ ತೊಳೆದ ನೀರನ್ನು ನೀಡುವಿರಾ?’ ಎಂದು ವಿನಂತಿಸಿದ.

‘ಅವತ್ತು ನೀನು ಬಂದಾಗ, ರಾಜನಿಗೆ ಕೊಡುಗೆಯಾಗಿ ಇರಲಿ ಎಂದು, ಹಿಮಾಲಯದ ಪವಿತ್ರ ಕುಂಡದಿಂದ ತಂದ ಅಮೃತಸಮಾನ ಜಲವನ್ನು ನಿನಗೆ ನೀಡಿದ್ದೆ. ಆದರೆ ನೀನು ಆ ದಿನ ಅದನ್ನು ಕುಡಿಯಲೇ ಇಲ್ಲ! ಮಡಿವಾಳನ ಮಗಳು ಕುಡಿದಳು, ಆಕೆ ಸಂತಳಾಗಿ ರೂಪುಗೊಂಡಳು. ಆ ದಿನ ಆಕೆಗೆ ಪ್ರಾಪ್ತಿ ಇತ್ತು, ನಿನಗೆ ಇರಲಿಲ್ಲ’ ಎಂದ ಸಂತ ರವಿದಾಸ್. ರಾಜ ತಲೆಬಾಗಿ ನಮಸ್ಕರಿಸಿದ.

(ತನ್ನ ಸಾಧನೆಯನ್ನು ಮುಂದುವರಿಸಿದ ರಾಜನು, ಭಕ್ತಿ ಚಳವಳಿಯಲ್ಲಿ ತೊಡಗಿಕೊಂಡು, ಮುಂದೆ ರಾಜ ಪೀಪಾಜಿ ಎಂದು ಹೆಸರಾದ.)