Wednesday, 5th October 2022

ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ: ಡಿ.ಟಿ.ಶ್ರೀನಿವಾಸ್

ಮಧುಗಿರಿ: ಗ್ರಾಮೀಣ ಭಾಗದಲ್ಲಿರುವ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್‌ನ ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಯಾದವ ಸಮುದಾಯ ಭವನದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಮತದಾರರ ಆಶೀರ್ವಾದ ಇದ್ದರೆ ಮುಂದಿನ ದಿನಗಳಲ್ಲಿ ಪದವೀಧರರ, ವಿಧ್ಯಾವಂತ ನಿರುದ್ಯೋಗಿ ಯುವಕರ ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಧ್ವನಿಯಾಗುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ನನಗೆ ಅಪಾರ ಅನುಭವವಿದ್ದು, ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ನೀಡುವ ರೀತಿ ವೇತನ ಕೊಡಿಸಲು ಪ್ರಾಮಾ ಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ನಾನು ಚುನಾವಣೆಗೂ ಮೊದಲು ಕಣದಿಂದ ವಾಪಾಸು ಬರುವುದಾಗಿ ಕೆಲವರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಾನು ಅಂತಹ ಜಾಯಮಾನದವನಲ್ಲ. ನಾನು ಎ.ಕೃಷ್ಣಪ್ಪ ಅವರೊಂದಿಗೆ ರಾಜಕೀಯ ಕಲಿತು ಬಂದವನು, ನನಗೆ ಚುನಾವಣೆ ಹೇಗೆ ಎದುರಿಸಬೇಕೆಂದು ತಿಳಿದಿದೆ ಎಂದರು.

ಜಿ.ಪA.ಸದಸ್ಯ ಜಿ.ಜೆ.ರಾಜಣ್ಣ ಮಾತನಾಡಿ, ಹಿಂದುಳಿದ ವರ್ಗದ ಮುಖಂಡರಾದ ಡಿ.ಟಿ.ಶ್ರೀನಿವಾಸ್ ರವರು ಧೈರ್ಯದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಕೇವಲ ನಮ್ಮ ಸಮುದಾಯದವರೆ ಅಲ್ಲದೇ ಹಿಂದುಳಿದವರು, ದಲಿತರು ಹಾಗೂ ಎಲ್ಲಾ ಸಮುದಾಯದ ಪದವೀಧರರು ಮೊದಲ ಪ್ರಾಶಸ್ತ್ಯದ ಮತ ನೀಡುವುದರ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡ ಬೇಕೆಂದು ಮತಯಾಚಿಸಿದರು.

ಯಾದವ ಸಂಘದ ತಾಲೂಕು ಅಧ್ಯಕ್ಷ ಚಿನ್ನಪ್ಪ, ಖಜಾಂಚಿ ಚಿಕ್ಕಣ್ಣ, ಪ್ರಾಂಶುಪಾಲ ಸಿ.ಕೃಷ್ಣಪ್ಪ, ಸಮುದಾಯದ ಮುಖಂಡ ರಾದ ಎಂ.ವಿ.ಮೂಡ್ಲಿಗಿರೀಶ್, ಕರಿಯಣ್ಣ, ನಿರಂಜನ್ ದಾಸ್, ರಘು ಯಾದವ್, ಮುದ್ದೇಗೌಡ ಹಾಗೂ ಮುಂತಾದವರು ಇದ್ದರು.