Tuesday, 31st January 2023

ಹೀಗೊಂದು ಪ್ರಸವ ಇಕ್ಕಳದ ಕಥೆ – ವ್ಯಥೆ

ಹಿಂದಿರುಗಿ ನೋಡಿದಾಗ

ಜೀವಜಗತ್ತಿನಲ್ಲಿ ಪ್ರಸವವು ಸಹಜವಾಗಿ ನಡೆಯುತ್ತದೆ. ಈ ಅವಧಿಯಲ್ಲಿ ಪ್ರಸವಕ್ಕೆ ನೆರವಾಗುವ ಯಾವುದೇ ವೈದ್ಯರಾಗಲಿ, ಸೂಲಗಿತ್ತಿಯರಾಗಲಿ ಇರುವುದಿಲ್ಲ. ಈ ಸರ್ವನಿಯಮಕ್ಕೆ ಒಂದು ವಿನಾಯತಿ ಎಂದರೆ ಮನುಷ್ಯ. ಅನಾದಿ ಕಾಲದಿಂದಲೂ, ಪ್ರಸವಾವಧಿಯಲ್ಲಿ ಗರ್ಭವತಿಗೆ ನೆರವಾಗಲು ಹಲವು ಮಕ್ಕಳನ್ನು ಹೆತ್ತ ಅನುಭವಿ ಅಜ್ಜಿಯಾಗಲಿ ಅಥವಾ ಹೆರಿಗೆ ಮಾಡಿಸುವು ದನ್ನೇ ವೃತ್ತಿಯಾಗಿ ಸ್ವೀಕರಿಸಿರುವ ಸೂಲಗಿತ್ತಿಯರಾಗಲಿ ಇರುವುದು ಸಹಜವಾಗಿತ್ತು.

ಈಗ ಸುಸೂತ್ರವಾಗಿ ಹೆರಿಗೆ ನಡೆಸಲು ಸೀವೈದ್ಯರು-ದಾದಿಯರ ದಂಡೇ ಇರುತ್ತದೆ. ಸುಸಜ್ಜಿತ ಆಸ್ಪತ್ರೆಗಳಿರುತ್ತವೆ. ಒಂದು ಹೆರಿಗೆ ಯು ಸಹಜವಾಗಿ-ಸುಸೂತ್ರವಾಗಿ ನಡೆ ಯಲು ತಾಯಿ ಮತ್ತು ಮಗುವಿನ ಕೆಲವು ಅಂಶಗಳು ಸಹಜ ಸ್ವರೂಪದಲ್ಲಿರ ಬೇಕಾಗು ತ್ತದೆ. ಮೊದಲನೆಯದಾಗಿ, ತಾಯಿಯ ಶ್ರೋಣಿಯು ವಿಶಾಲವಾಗಿದ್ದು, ಶಿಶುವಿನ ಬೆಳವಣಿಗೆಗೆ ಹಾಗೂ ಪ್ರಸವಕ್ಕೆ ಅನುಕೂಲ ಮಾಡಿ ಕೊಡುವಂತಿರಬೇಕು. ಎರಡನೆಯ ದಾಗಿ ಶಿಶುಪ್ರಸವಕ್ಕೆ ಅನುಕೂಲವಾಗುವ ಹಾಗೆ ಜನನಮಾರ್ಗವು ವಿಶಾಲವಾಗಬೇಕು.

ಹೆರಿಗೆ ವೇಳೆಯಲ್ಲಿ ತಾಯಿಯ ಮನಸ್ಸು ಸ್ವಸ್ಥವಾಗಿದ್ದು ಪ್ರಶಾಂತವಾಗಿದ್ದು, ಸೂಲಗಿತ್ತಿಯರ ಮಾರ್ಗದರ್ಶನವನ್ನು ಪೂರ್ಣ ಮನಸ್ಸಿನಿಂದ ಪರಿ ಪಾಲಿಸುತ್ತಿದ್ದರೆ, ಜನನಮಾರ್ಗವು ಪ್ರಸವಕ್ಕೆ ಅನುಕೂಲವಾಗುವ ಹಾಗೆ ವಿಸ್ತಾರವಾಗುತ್ತ ಹೋಗುತ್ತದೆ. ತಾಯಿಯ ಮನಸ್ಸಿನಲ್ಲಿ ಯಾವುದೇ ನೇತ್ಯಾತ್ಮಕ ಭಾವನೆಗಳು ತೀವ್ರವಾಗಿದ್ದರೆ, ಅವು ಗರ್ಭಾಶಯ ಮತ್ತು ಜನನಮಾರ್ಗದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುವುದರಿಂದ ಜನನಮಾರ್ಗ ಮುಕ್ತವಾಗಿ ತೆರೆದುಕೊಳ್ಳುವುದಿಲ್ಲ.

ಆಗ ಸಹಜ ಪ್ರಸವ ಕಷ್ಟವಾಗುತ್ತದೆ. ಪ್ರಸವವಾಗಲಿರುವ ಮಗುವಿನ ಗಾತ್ರ ಸಹಜ ಸ್ವರೂಪದಲ್ಲಿದ್ದರೆ, ಪ್ರಸವ ಸರಾಗವಾಗಿ ಆಗುತ್ತದೆ. ಗಾತ್ರ ಹೆಚ್ಚಿದ್ದರೆ ಸಹಜ ಪ್ರಸವಕ್ಕೆ ತೊಂದರೆಯಾಗಬಹುದು. ಕೆಲವು ಸಲ ಹೆರಿಗೆಯಲ್ಲಿ ಅತೀವ ದಣಿದ ತಾಯಿ ತನ್ನ ಪ್ರಯತ್ನವನ್ನೇ ನಿಲ್ಲಿಸಬಹುದು. ತಾಯಿಗೆ ರಕ್ತದ ಏರೊತ್ತಡ, ಹೃತ್ಕವಾಟ ದೋಷಗಳು, ಗ್ಲಾಕೋಮ, ರಕ್ತನಾಳಬೂರು (ಅನ್ಯೂರಿಸಂ) ಇತ್ಯಾದಿ ಸಮಸ್ಯೆಗಳಿದ್ದರೆ, ಆಕೆ ಹೆಚ್ಚು ಹೆಚ್ಚು ಕಾಲ ಮುಕ್ಕುವುದರಿಂದ ಆಕೆಗೇ ಅಪಾಯವಾಗಬಹುದು.

ಇಂಥ ವೇಳೆ ವಿಶೇಷ ಇಕ್ಕಳ ಬಳಸಿ, ಮಗುವನ್ನು ಹೊರಗೆಳೆಯುವ ವಿಧಾನ ಲಭ್ಯವಿದೆ. ಇದನ್ನು ‘ಇಕ್ಕಳ ಹೆರಿಗೆ’ ಅಥವಾ
‘ಫಾರ್ಸೆಪ್ಸ್ ಡೆಲಿವರಿ’ ಎನ್ನುವರು. ಇದು ಮೊದಲಿಗೆ ಯುರೋಪಿನಲ್ಲಿ ಬಳಕೆಗೆ ಬಂದಿತು. ಇದರ ಹಿನ್ನೆಲೆ ಗಮನೀಯವಾಗಿದೆ.
ಮಧ್ಯಯುಗದ ಯುರೋಪ್ ದೇಶಗಳಲ್ಲಿ ಪ್ಲೇಗ್ ಹಾಗೂ ಮಾರ್ಬಮ್ ಆಂಗ್ಲೋರಂ ಅಥವಾ ಇಂಗ್ಲಿಷ್ ಕಾಯಿಲೆ ಎಂದು ಹೆಸರಾಗಿದ್ದ ರಿಕೆಟ್ಸ್, ವಿಟಮಿನ್-ಡಿ ಕೊರತೆಯ ಕಾಯಿಲೆಯು ತೀವ್ರ ಸ್ವರೂಪವನ್ನು ಪಡೆದಿತ್ತು.

ಅಂದಿನ ವೈದ್ಯಲೋಕಕ್ಕೆ ವಿಟಮಿನ್-ಡಿ ಪರಿಚಯ ಇರಲಿಲ್ಲ. ಅಂದಿನ ದಿನಗಳಲ್ಲಿ ತಾಯಂದಿರು ಮಕ್ಕಳಿಗೆ ೨ ವರ್ಷಗಳಾದರೂ ಸ್ತನ್ಯಪಾನ ನಿಲ್ಲಿಸುತ್ತಿರಲಿಲ್ಲ. ಸಕಾಲದಲ್ಲಿ ಗಟ್ಟಿ ಆಹಾರ ಪದಾರ್ಥಗಳನ್ನು ನೀಡುತ್ತಿರಲಿಲ್ಲ. ಜತೆಗೆ ಇಂಗ್ಲೆಂಡಿನಲ್ಲಿ ಬಿಸಿಲು ಕನಿಷ್ಠ ಪ್ರಮಾಣದಲ್ಲಿ ಬೀಳುತ್ತಿತ್ತು. ಹಾಗಾಗಿ ಮಕ್ಕಳಿಗೆ ಸಶಕ್ತ ಬೆಳವಣಿಗೆಗೆ ಅಗತ್ಯವಿದ್ದಷ್ಟು ಕ್ಯಾಲ್ಷಿಯಂ, ಮೆಗ್ನೀಷಿಯಂ, ವಿಟಮಿನ್-ಡಿ ಇತ್ಯಾದಿಗಳು ದೊರೆಯುತ್ತಿರಲಿಲ್ಲ.

ಅವರ ದೈನಂದಿನ ಆಹಾರ ಪದ್ಧತಿಯಲ್ಲೂ ವಿಟಮಿನ್ನುಗಳ ಕೊರತೆ ಸಾಕಷ್ಟಿತ್ತು. ಹಾಗಾಗಿ ಇಂಗ್ಲಿಷರನ್ನು ರಿಕೆಟ್ಸ್ ತೀವ್ರ ಸ್ವರೂಪದಲ್ಲಿ ಕಾಡುತ್ತಿತ್ತು. ಇಂಗ್ಲಿಷ್ ಹೆಣ್ಣು ಮಕ್ಕಳ ಶಾರೀರಿಕ ಬೆಳವಣಿಗೆ ಸಮರ್ಪಕವಾಗಿರಲಿಲ್ಲ. ಹಾಗಾಗಿ ಅವರ ಶ್ರೋಣಿ ಯು ವಿರೂಪಗೊಂಡಿತ್ತು. ಈ ಹೆಣ್ಣು ಮಕ್ಕಳು ಮದುವೆಯಾದಾಗ, ಅವರಲ್ಲಿ ಸಹಜ ಪ್ರಸವ ಅಪರೂಪವಾಗಿತ್ತು. ಸಾಮಾನ್ಯ ವಾಗಿ ಶಿಶುವು ತಾಯಿಯ ಜನನಮಾರ್ಗದಲ್ಲಿ ಅಡಚಿಕೊಂಡು ಉಸಿರುಗಟ್ಟಿ ಸಾಯುತ್ತಿತ್ತು. ತಾಯಂದಿರ ಮರಣವೂ ಅಪರೂಪವೇನಾಗಿರಲಿಲ್ಲ. ಈ ವಿಪರೀತ ಸ್ಥಿತಿಯ ಕಾರಣ ಪ್ರಸವ ಇಕ್ಕಳಗಳನ್ನು ಆವಿಷ್ಕರಿಸಬೇಕಾಯಿತು. ಜನನ ಮಾರ್ಗದಲ್ಲಿ ಸಿಲುಕಿರುವ ಮಗುವಿನ ತಲೆಯನ್ನು ಇಕ್ಕಳದ ನೆರವಿನಿಂದ ದೃಢವಾಗಿ ಹಿಡಿದುಕೊಂಡು ನಯವಾಗಿ ಜಗ್ಗುತ್ತಿದ್ದರು.

ಬಹಳಷ್ಟು ಪ್ರಕರಣಗಳಲ್ಲಿ ಪ್ರಸವ ಸರಾಗವಾಗಿ ನಡೆಯುತ್ತಿತ್ತು. ಫ್ರಾನ್ಸ್ ದೇಶ. ವಿಲಿಯಂ ಚೇಂಬರ್ಲೆನ್ ಮತ್ತು ಅವನ
ಮಡದಿ ಜೆನೆವೀವ್ ವಿಗ್ನನ್. ಇವರು ಪ್ರಾಟಿಸ್ಟಾಂಟ್ ಕ್ರೈಸ್ತರು. ಫ್ರಾನ್ಸಿನಲ್ಲಿ ಕ್ಯಾಥೋಲಿಕ್ ಕ್ರೈಸ್ತರಿಗೆ ಹೆಚ್ಚು ಮನ್ನಣೆ. ಹಾಗಾಗಿ ಅಲ್ಲಿ ಇವರ ಬದುಕು ಅಸಹನೀಯವಾಯಿತು. 1560ರ ಆಸುಪಾಸಿನಲ್ಲಿ ತಮ್ಮ ಮಕ್ಕಳಾದ ಪೀಟರ್, ಸೈಮನ್ ಮತ್ತು ಜೇನ್ ಜತೆ ಇಂಗ್ಲೆಂಡಿಗೆ ಬಂದರು. ಅಲ್ಲಿ ಅವರಿಗೆ ನಾಲ್ಕನೆಯ ಮಗು ಹುಟ್ಟಿತು. ಅದಕ್ಕೂ ಪೀಟರ್ ಎಂದೇ ನಾಮಕರಣ ಮಾಡಿದರು.
ಮುಂದೆ ಇವರು ಪೀಟರ್, ದಿ ಎಲ್ಡರ್ ಮತ್ತು ಪೀಟರ್ ದಿ ಯಂಗರ್ ಎಂದು ಪ್ರಸಿದ್ಧರಾದರು.

ವಿಲಿಯಂ ಚೇಂಬರ್ಲೆನ್ ವೃತ್ತಿಯಿಂದ ಕ್ಷೌರಿಕ ಶಸ್ತ್ರವೈದ್ಯನಾಗಿದ್ದ (ಬಾರ್ಬರ್ ಸರ್ಜನ್). ಆ ದಿನಗಳಲ್ಲಿ ಔಷಧ ನೀಡುವವ ರನ್ನು ಮಾತ್ರ ವೈದ್ಯರೆಂದು ಪರಿಗಣಿಸಿ ಗೌರವದಿಂದ ‘ಡಾಕ್ಟರ್’ ಎಂದು ಸಂಬೋಧಿಸುತ್ತಿದ್ದರು. ಇವರು ವೈದ್ಯಕೀಯ ವಿದ್ಯಾಲಯ ಗಳಲ್ಲಿ ದಾಖಲಾಗಿ ಶಾಸ್ತ್ರೀಯವಾಗಿ ವೈದ್ಯಕೀಯದ ಅಧ್ಯಯನ ಮಾಡಿರುತ್ತಿದ್ದರು. ಇವರು ಈ ವೃತ್ತಿಯಲ್ಲಿ ತೊಡಗಲು ಅಧಿಕೃತ ಪರವಾನಗಿಯನ್ನು ಸ್ವಯಂ ರಾಜನೇ ನೀಡುತ್ತಿದ್ದ. ಶಸ್ತ್ರವೈದ್ಯ ಮಾಡುವವರನ್ನು ಡಾಕ್ಟರ್ ಎಂದು ಕರೆಯುತ್ತಿರಲಿಲ್ಲ.

ಎಲ್ಲರನ್ನೂ ಕರೆಯುವಂತೆ ಅವರನ್ನೂ ‘ಮಿಸ್ಟರ್’ ಎನ್ನುತ್ತಿದ್ದರು. ಇವರು ಯಾವುದೇ ವೈದ್ಯಕೀಯ ವಿದ್ಯಾಲಯಗಳಲ್ಲಿ ದಾಖಲಾಗಿ ಕ್ರಮಬದ್ಧ ಶಿಕ್ಷಣ ಪಡೆಯುತ್ತಿರಲಿಲ್ಲ. ಒಬ್ಬ ಹಿರಿಯ ಶಸ್ತ್ರವೈದ್ಯನ ಜತೆ ಕೆಲಸ ಮಾಡುತ್ತ, ಕಣ್ಣಿನಿಂದ ನೋಡಿ ಕೈಯಿಂದ ಮಾಡಿ ಕಲಿಯಬೇಕಿತ್ತು. ಹಾಗಾಗಿ ಇವರಿಗೆ ವೈದ್ಯಕೀಯ ತತ್ತ್ವಗಳ ಬಗ್ಗೆ ಆಳ ತಿಳಿವು ಇರುತ್ತಿರಲಿಲ್ಲ. ವಿಲಿಯಂ, ತನ್ನ
ಮಕ್ಕಳಾದ ಹಿರಿಯ ಮತ್ತು ಕಿರಿಯ ಪೀಟರ್ ಇಬ್ಬರಿಗೂ ಕ್ಷೌರಿಕ ಶಸ್ತ್ರವೈದ್ಯವನ್ನೇ ಕಲಿಸಿದ. ಈ ಇಬ್ಬರು ಶಸ್ತ್ರವೈದ್ಯಕೀಯದ ಜತೆ ಪ್ರಸವ ಮಾಡಿಸುವ ಸೂಲಗಾರನ ತರಬೇತಿಯನ್ನೂ ಪಡೆದರು.

ಹಿರಿಯ ಪೀಟರ್ ಲಂಡನ್ನಿನಲ್ಲಿ ವೃತ್ತಿ ಆರಂಭಿಸಿ ಅತ್ಯಲ್ಪ ಕಾಲದಲ್ಲಿ ಪ್ರಸಿದ್ಧನಾದ. ಇಂಗ್ಲೆಂಡಿನ ಅರಸ ಮೊದಲನೆಯ
ಜೇಮ್ಸ್‌ನ ಮಡದಿ ಆನ್ ಮತ್ತು ಮೊದಲನೆಯ ಚಾರ್ಲ್ಸ್‌ನ ಮಡದಿ ಹೆನ್ರಿಟ ಮೇರಿಯ ಅವರ ಖಾಸಗಿ ಸೂಲಗಾರನಾದ. ಕಿರಿಯ ಪೀಟರ್ ಸಹ, ೧೬೦೦ರ ಆಸುಪಾಸಿನಲ್ಲಿ ಅಣ್ಣನ ಜತೆಗೂಡಿ ತಾನೂ ಸೂಲಗಾರನಾಗಿ ಹೆಸರು ಗಳಿಸಲಾರಂಬಿಸಿದ.

ಪ್ರಸವ ಇಕ್ಕಳವನ್ನು ಹಿರಿಯ ಪೀಟರ್ ರೂಪಿಸಿದ ಎಂದೇ ಇತಿಹಾಸಕಾರರ ನಂಬಿಕೆ. ಆದರೆ ಇದಕ್ಕೆ ಯಾವುದೇ ದಾಖಲೆಯಿಲ್ಲ. ಆದರೆ ಪ್ರಸವ ಇಕ್ಕಳವನ್ನು ಪರಿಣಾಮಕಾರಿಯಾಗಿ ಮೊದಲು ಬಳಸಿದ್ದು ಹಿರಿಯ ಪೀಟರ್ ಎಂಬುದರಲ್ಲಿ ಅನುಮಾನವಿಲ್ಲ.
ಅಂದು ರಿಕೆಟ್ಸ್ ಇಂಗ್ಲೆಂಡನ್ನು ತೀವ್ರವಾಗಿ ಕಾಡುತ್ತಿದ್ದ ಕಾರಣ, ಮಹಿಳೆಯರ ಶ್ರೋಣಿ ಸಾಮಾನ್ಯವಾಗಿ ವಿರೂಪ ಗೊಂಡಿರು ತ್ತಿತ್ತು. ಅವರಲ್ಲಿ ಸಹಜ ಪ್ರಸವ ಅಪರೂಪವಾಗಿದ್ದು ಅವರು ಸಾಯುವುದೇ ಸಾಮಾನ್ಯವಾಗಿತ್ತು. ಅಂಥ ವಿಪರೀತ ಸ್ಥಿತಿಯಲ್ಲಿ, ಪೀಟರ್ ದ್ವಯರು ತಮ್ಮ ಇಕ್ಕಳದ ನೆರವಿನಿಂದ ಸರಾಗವಾಗಿ ಪ್ರಸವ ಮಾಡಿಸುತ್ತಿದ್ದರು.

ಅದಕ್ಕಾಗಿ ದುಬಾರಿ ಶುಲ್ಕ ವಿಧಿಸುತ್ತಿದ್ದರು. ಆದರೆ ಇಕ್ಕಳದ ಗುಟ್ಟನ್ನು ಯಾರಿಗೂ ಬಿಟ್ಟುಕೊಡಲಿಲ್ಲ. ಗುಟ್ಟು ಕಾಪಾಡಿಕೊಳ್ಳಲು ಅವರು ತೆಗೆದುಕೊಳ್ಳುತ್ತಿದ್ದ ಕ್ರಮಗಳನ್ನು ಕೇಳಿದರೆ ನಗು ಬರುತ್ತದೆ. ಪೀಟರ್ ದ್ವಯರು ಇಕ್ಕಳವನ್ನು ನಾನಾ ಚಿತ್ತಾರಗಳಿರುವ
ಬೃಹತ್ ಪೆಟ್ಟಿಗೆಯಲ್ಲಿ ಇಡುತ್ತಿದ್ದರು. ಇಬ್ಬರು ಸೇವಕರು ‘ಬಹಳ’ ಕಷ್ಟಪಟ್ಟು ಅದನ್ನು ಕುದುರೆಗಾಡಿಯಲ್ಲಿ ಇಡುತ್ತಿದ್ದರು. ಆ ಕುದುರೆಗಾಡಿ, ನೋವು ತಿನ್ನುತ್ತ ಮಲಗಿದ್ದ ಗರ್ಭವತಿಯ ಮನೆಗೆ ಹೋಗುತ್ತಿತ್ತು. ಇಬ್ಬರು ಪೀಟರುಗಳು ‘ಬಹಳ’ ಕಷ್ಟಪಟ್ಟು ಗಾಡಿಯಿಂದ ಪೆಟ್ಟಿಗೆ ಇಳಿಸುತ್ತಿದ್ದರು.

ನೋಡುವವರಿಗೆ ಅದರಲ್ಲಿ ಯಾವುದೋ ದೊಡ್ಡ, ಸಂಕೀರ್ಣ ಹಾಗೂ ನಾಜೂಕಾದ ಉಪಕರಣವಿರಬೇಕು ಎನಿಸುತ್ತಿತ್ತು. ಹೆರಿಗೆಯ ಕೋಣೆಯಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ ಚಿಲಕ ಹಾಕುತ್ತಿದ್ದ ಅಣ್ಣ ತಮ್ಮಂದಿರು ಕಿಟಕಿಗಳನ್ನು ಸಂಪೂರ್ಣ ಮುಚ್ಚಿಬಿಡುತ್ತಿದ್ದರು. ಗರ್ಭವತಿಯ ಕಣ್ಣುಗಳಿಗೆ ಬಿಗಿಯಾಗಿ ಬಟ್ಟೆ ಕಟ್ಟುತಿದ್ದರು. ಆಕೆ ಇಕ್ಕಳ ನೋಡಿ ಆ ಕುರಿತು ಯಾರಿಗೂ ಹೇಳಬಾರದು ಎನ್ನುವುದು ಅವರ ಉದ್ದೇಶ. ಅಣ್ಣ ಪೆಟ್ಟಿಗೆಯಿಂದ ಇಕ್ಕಳ ತೆಗೆಯುತ್ತಿದ್ದ.

ಲೋಹದ ಇಕ್ಕಳ ಬಳಸುವಾಗ ಬರುವ ಶಬ್ದ ಹೊರಗೆ ಕೇಳಿಸಬಾರದು ಎಂದು ತಮ್ಮ ಜೋರಾಗಿ ‘ಗಂಟೆ-ಜಾಗಟೆ’  ಬಾರಿಸುತ್ತಿದ್ದ. ಪ್ರಸವವಾದ ಕೂಡಲೆ ಇಕ್ಕಳವನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕುತ್ತಿದ್ದರು. ಅತ್ಯಂತ ನಯ-ನಾಜೂಕು ಪ್ರದರ್ಶಿಸುತ್ತ ಇಕ್ಕಳ ಗಳನ್ನು ಸುರಕ್ಷಿತವಾಗಿ ಮನೆಗೆ ಯ್ಯುತ್ತಿದ್ದರು. ಈ ಚಾಣಾಕ್ಷರು ಜಾಹೀರಾತುಗಳ ಮೂಲಕ ತಮ್ಮ ಸಾಮರ್ಥ್ಯದ ಪ್ರಚಾರ ಮಾಡಿ, ಬೇಗ ಶ್ರೀಮಂತರಾದರು.

ಕಿರಿಯ ಪೀಟರ್‌ಗೆ ಒಬ್ಬ ಮಗ ಹುಟ್ಟಿದ. ಅವನಿಗೂ ಪೀಟರ್ ಎಂದೇ ಹೆಸರಿಟ್ಟರು. ಇವನು ವೈದ್ಯಕೀಯ ವಿದ್ಯಾಲಯಕ್ಕೆ ಸೇರಿ ಅಧಿಕೃತ ಪದವಿ ಪಡೆದ. ಇವನು ದುರಹಂಕಾರಿ, ಬಡವರಿಗೆ ನೆರವಾಗುತ್ತಿರಲಿಲ್ಲ. ತನ್ನ ಶುಲ್ಕ ನೀಡಬಲ್ಲವರನ್ನು ಮಾತ್ರ ಆರಿಸಿಕೊಳ್ಳುತ್ತಿದ್ದ. ಹಾಗಾಗಿ ಬೇಗ ಶ್ರೀಮಂತನಾದ. ಈ ಮೂರನೆಯ ಪೀಟರಿಗೆ ಹ್ಯೂ, ಪಾಲ್ ಮತ್ತು ಜಾನ್ ಎಂಬ ಮಕ್ಕಳು. ಇವರಲ್ಲಿ ಹ್ಯೂ ಸಹ ಸೂಲಗಾರನಾದ. ಇವನಿಗೆ ದಿಢೀರ್ ಶ್ರೀಮಂತನಾಗುವಾಸೆ. ಫ್ರಾನ್ಸಿನ ಅರಸ ಲೂಯಿ-14 ಅನ್ನು ಭೇಟಿ ಯಾದ.

ತನ್ನ ಉಪಕರಣಕ್ಕೆ 10000 ಕ್ರೌನ್‌ಗಳ ಬೆಲೆಯನ್ನಿಟ್ಟ. ಆಗ ‘-ನ್ಸ್ವ ಮಾರಿಷ’ ಎಂಬ ವೈದ್ಯ ಈ ಉಪಕರಣದ ಪ್ರಾಯೋಗಿಕ ಉಪಯುಕ್ತತೆಯನ್ನು ಮೊದಲು ನಿರೂಪಿಸಬೇಕು ಎಂದ. 8 ದಿನಗಳಿಂದ ಹೆರಿಗೆ ನೋವು ತಿನ್ನುತ್ತಿದ್ದ, ಕಟಿಕುಹರ ವಿರೂಪ ಗೊಂಡಿದ್ದ 38 ವರ್ಷದ ಗರ್ಭವತಿಗೆ ಹೆರಿಗೆ ಮಾಡಿಸಬೇಕೆಂದ. ಹ್ಯೂ 3 ಗಂಟೆ ಕಾಲ ಯತ್ನಿಸಿದರೂ ಹೆರಿಗೆಯಾಗಲಿಲ್ಲ. ಆದರೆ ಹೆರಿಗೆ ಮಾಡಿಸುವ ಯತ್ನದಲ್ಲಿ ಆಕೆಯ ಗರ್ಭಾಶಯ ಛಿದ್ರವಾದ ಕಾರಣ ಆಕೆ ಸತ್ತಳು.

ಹ್ಯೂ ಲಂಡನ್ನಿಗೆ ಹಿಂದಿರುಗಿದ. ಇವನಿಗೆ ಒಬ್ಬ ಮಗ ಹುಟ್ಟಿದ. ಕಿರಿಯ ಹ್ಯೂ. ಇವನು ಎಂ.ಡಿ. ಪದವಿ ಪಡೆದು ವೈದ್ಯನಾದ. ಇವನಿಗೆ ಹುಟ್ಟಿದ್ದೆಲ್ಲ ಹೆಣ್ಣುಮಕ್ಕಳೇ. ಗಂಡುಸಂತಾನವಿಲ್ಲದ ಕಾರಣ ಇವನು ತನ್ನ ಕುಟುಂಬದ ಗುಟ್ಟನ್ನು ಕಾಪಾಡಿಕೊಂಡು ಬರುವ ಬಗ್ಗೆ ನಿರ್ಲಕ್ಷ್ಯ ತೋರಿ 1728ರಲ್ಲಿ ಮರಣಿಸಿದ. 1733ರಲ್ಲಿ ಎಡ್‌ಮಂಡ್ ಚಾಪ್‌ಮನ್ ಎಂಬಾತ ಈ ಇಕ್ಕಳದ ಕುರಿತು ಸಚಿತ್ರ ಲೇಖನವೊಂದನ್ನು ಪ್ರಕಟಿಸಿದ.

ಇಕ್ಕಳದ ಪೂರ್ಣ ವಿವರ ಮೊದಲ ಬಾರಿಗೆ ಇಡೀ ವೈದ್ಯಜಗತ್ತಿಗೆ ಪರಿಚಯವಾಯಿತು. ಮುಂದಿನ ದಿನಗಳಲ್ಲಿ ಅನೇಕ ವೈದ್ಯರು ಈ ಇಕ್ಕಳಗಳನ್ನು ಸುಧಾರಿಸಿದರು. ಹಾಗಾಗಿ ಇಂದಿಗೂ ಈ ಚೇಂಬರ್ಲೆನ್ ಇಕ್ಕಳ ಸುಧಾರಿತ ರೂಪದಲ್ಲಿ ಬಳಕೆಯಲ್ಲಿದೆ. ಆದರೆ ಇಂದಿನ ದಿನಗಳಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಸರ್ವವ್ಯಾಪಿಯಾಗುತ್ತಿರುವ ಕಾರಣ, ವೈದ್ಯರು ಇಕ್ಕಳ ಬಳಸಿ ಪ್ರಸವ ಮಾಡಿಸುವ ಸಾಧ್ಯತೆ ಕಡಿಮೆ ಎನ್ನಬೇಕಾಗುತ್ತದೆ.

error: Content is protected !!