Monday, 3rd October 2022

ಪರಾವಲಂಬನೆಯಿಂದ ಹೊರಗೆ ಬರೋಣ !

ಸಾಧನಾಪಥ

ಡಾ.ಜಗದೀಶ್ ಮಾನೆ

‘ಎಲ್ಲವನ್ನೂ ನಾವೇ ತಯಾರಿಸಿಕೊಂಡು ಬಿಡುತ್ತೇವೆ, ನಮಗೆ ಜಗದ ಹಂಗಿಲ್ಲ’ ಎಂಬ ಭ್ರಮೆಯಂತೂ ಭಾರತಕ್ಕೆ ಇಲ್ಲ. ಆದರೆ ವಿದೇಶಿ ಕಂಪನಿಗಳು ಕೇವಲ ತಮ್ಮ ಉತ್ಪನ್ನಗಳನ್ನು ತಂದು ಸುರಿಯುವ ತಾಣವಾಗಿ ತನ್ನನ್ನು ನೋಡುವುದು ಭಾರತಕ್ಕೆ ಇಷ್ಟವಿಲ್ಲ.

ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಂತಿರುವುದು ಬಹುತೇಕ ರಾಷ್ಟ್ರಗಳಿಗೆ ಅಪಥ್ಯವಾಗಿದೆ. ಭಾರತದ ಆಪ್ತಮಿತ್ರ ಎಂದು ಹೇಳಿಕೊಳ್ಳುವ ರಷ್ಯಾ ಕೂಡ ತೀರಾ ಅವಶ್ಯಕವಾದಂಥ ಸಂದರ್ಭಗಳಲ್ಲಿ ಕೈಕೊಟ್ಟುಬಿಡುತ್ತದೆ. ಭಾರತದ ಬಹು ನಿರೀಕ್ಷಿತ ಸ್ವದೇಶಿ ಯುದ್ಧವಿಮಾನವಾಹಕದ ನಿರ್ಮಾಣಕ್ಕೆ ಬೇಕಿದ್ದ ಉಕ್ಕನ್ನು ಕೊಡಲು ರಷ್ಯಾ ಇತ್ತೀಚೆಗೆ ನಿರಾಕರಿಸಿದ್ದು ಇದಕ್ಕೊಂದು ಉದಾಹರಣೆ.

‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಒಡ್ಡಿಕೊಂಡ ಪರಿಣಾಮ ಭಾರತ ತನ್ನ ಆಯುಧ ಭಂಡಾರವನ್ನು ಖಾಲಿ ಮಾಡಿ ಕೊಳ್ಳುತ್ತಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಈ ಉಪಕ್ರಮವನ್ನು ಘೋಷಿಸುತ್ತಿದ್ದಂತೆ ಕೆಲವು ದೇಶಗಳು ಭಾರತದ ಮೇಲೆ ಉರಿದುಕೊಂಡಿದ್ದು ದಿಟ. ‘ಮೇಕ್ ಇನ್ ಇಂಡಿಯಾ’ ಅನ್ನೋದೇ ಭಾರತೀಯರ ವ್ಯರ್ಥಪ್ರಯತ್ನ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದೂ ಇದೆ. ಇಲ್ಲಿನ ಕೆಲ ಮಾಧ್ಯಮಗಳೂ ಇದೇ ರಾಗವನ್ನು ಹಾಡಲು ಶುರುಮಾಡಿವೆ.

ಈ ಯೋಜನೆಯಿಂದಾಗಿ ಚೀನಾವನ್ನು ಮಣಿಸಲು ಬೇಕಾದ ಆಯುಧಗಳ ಕೊರತೆ ಯನ್ನು ಭಾರತ ಎದುರಿಸುವಂತಾಗಿದೆ ಎಂಬುದು ಇವುಗಳ ವಾದ. ಆದರೆ ‘ಮೇಕ್ ಇನ್ ಇಂಡಿಯಾ’ ಒಂದು ಮಹತ್ವದ ಉಪಕ್ರಮ. ಆಟಿಕೆಗಳಿಂದ ಹಿಡಿದು ಯುದ್ಧ ಸಾಮಗ್ರಿಗಳವರೆಗಿನ ಬಹಳಷ್ಟು ವಸ್ತುಗಳನ್ನು ಭಾರತದಲ್ಲೇ ತಯಾರಿಸಬೇಕು; ವಿದೇಶಗಳಿಂದ ಅವನ್ನು ಆಮದು ಮಾಡಿ ಕೊಂಡರೆ ನಮ್ಮ ಕೈಗಾರಿಕೆಗಳ ಅಭಿವೃದ್ಧಿ ಆಗುವುದಿಲ್ಲ ಮತ್ತು ವಿದೇಶಿ ವಿನಿಮಯದ ಸಂಗ್ರಹದ ಮೇಲೆ ಅದು ಬಹಳಷ್ಟು ದುಷ್ಪರಿಣಾಮವನ್ನು ಉಂಟುಮಾಡುತ್ತದೆ ಎಂಬ ಕಾರಣಕ್ಕೆ ಈ ಉಪಕ್ರಮಕ್ಕೆ ಚಾಲನೆ ನೀಡಲಾಯಿತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಪರಿಣಾಮವಾಗಿ, ಸಾಕಷ್ಟು ಉತ್ಪನ್ನಗಳು-ಉಪಕರಣಗಳನ್ನು ನಮ್ಮಲ್ಲೇ ತಯಾರು ಮಾಡಿಕೊಳ್ಳುತ್ತಿದ್ದೇವೆ. ಉತ್ತರ ಪ್ರದೇಶದಂಥ
ದೊಡ್ಡ ರಾಜ್ಯದ ಆರ್ಥಿಕತೆಯನ್ನು ಒಂದು ಟ್ರಿಲಿಯನ್ ಡಾಲರ್ ಸಮೀಪಕ್ಕೆ ಕೊಂಡೊಯ್ಯುವಲ್ಲಿ ಈ ಯೋಜನೆ ಬಹಳಷ್ಟು ಸಹಾಯಕವಾಗಿದೆ. ಭಾರತದ್ದೇ ಆದ ಹಲವಾರು ಸ್ಟಾರ್ಟಪ್ ಕಂಪನಿಗಳು ಹುಟ್ಟಿಕೊಂಡಿವೆ. ದೇಶದ ಬಹಳಷ್ಟು ‘”Micro Small and Medium Enterprise’ (MSME) ಗಳಿಗೆ ಇದರಿಂದ ಲಾಭವಾಗಿ, ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿ ಯಾಗುವಂತಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.

‘ಎಲ್ಲವನ್ನೂ ನಾವೇ ತಯಾರಿಸಿಕೊಂಡು ಬಿಡುತ್ತೇವೆ, ನಮಗೆ ಜಗದ ಹಂಗಿಲ್ಲ’ ಎಂಬ ಭ್ರಮೆಯಂತೂ ಭಾರತಕ್ಕೆ ಇಲ್ಲ. ಆದರೆ ವಿದೇಶಿ ಕಂಪನಿಗಳು ಕೇವಲ ತಮ್ಮ ಉತ್ಪನ್ನಗಳನ್ನು ತಂದು ಸುರಿಯುವ ತಾಣವಾಗಿ ತನ್ನನ್ನು ನೋಡುವುದು ಭಾರತಕ್ಕೆ ಇಷ್ಟ ವಿಲ್ಲ. ಎಷ್ಟು ದಿನ ಅಂತ ಹೋಟೆಲ್ ಊಟವನ್ನು ತರಿಸಿಕೊಂಡು ಮೆಲ್ಲಲು ಸಾಧ್ಯ? ಬದಲಿಗೆ, ನಮ್ಮ ಮನೆಗಳಲ್ಲೂ ಅಡುಗೆ ಮಾಡುವುದನ್ನು ಕಲಿಯಬೇಕಲ್ಲವೇ? ಬೇಕಿದ್ದರೆ, ವಿದೇಶಿ ಕಂಪನಿಗಳು ಭಾರತಕ್ಕೆ ಬಂದು ತಮ್ಮ ಉತ್ಪನ್ನಗಳನ್ನು ತಯಾರು ಮಾಡಲಿ ಅನ್ನೋದು ಈ ಯೋಜನೆಯ ಆಶಯಗಳಲ್ಲೊಂದು.

ಪ್ರಸ್ತುತ ನಾವು ಬಳಸುತ್ತಿರುವಂಥ ಮೊಬೈಲ್ ಫೋನುಗಳನ್ನು ಬಹುತೇಕವಾಗಿ ಚೀನಾದ ಕಂಪನಿಗಳು ತಯಾರಿಸುತ್ತವೆ. ಐಫೋನ್‌ಗಳಿಗೂ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ, ಆದರೆ ಅವು ಕೂಡಾ ಚೀನಾದಲ್ಲಿ ತಯಾರಾಗಿ ಭಾರತಕ್ಕೆ ಬರುವಂಥ ಪರಿಸ್ಥಿತಿಯಿದೆ. ಭಾರತದಲ್ಲಿ ಮಾರಾಟವಾಗುವ ತಮ್ಮ ಉತ್ಪನ್ನಗಳಿಗೆ ವಿದೇಶಿ ಕಂಪನಿಗಳು ಮಾರಾಟ ತೆರಿಗೆಯನ್ನು ನೀಡುತ್ತವೆ, ನಿಜ. ಆದರೆ ಅವು ಚೀನಾ ಅಥವಾ ಮತ್ತಾವುದೋ ದೇಶದಲ್ಲಿ ಉತ್ಪಾದಿಸಲ್ಪಡುವುದರಿಂದ ಅಲ್ಲಿಯ ಸ್ಥಳೀಕರಿಗೆ ಉದ್ಯೋಗಾ ವಕಾಶ ಸಿಗುತ್ತದೆಯೇ ವಿನಾ ಭಾರತದ ನಿರುದ್ಯೋಗಿಗಳಿಗಲ್ಲ.

ಒಂದು ವೇಳೆ ಭಾರತ ದಲ್ಲಿ ಅವುಗಳ ತಯಾರಿಕೆಗೆ ಅವಕಾಶವಿಲ್ಲ, ಮೂಲಭೂತ ಸೌಕರ್ಯಗಳ ಕೊರತೆಯಿದೆ, ಕುಶಲಿ ಉದ್ಯೋಗಿಗಳು ಸಿಗುವುದಿಲ್ಲ ಎಂದರೆ ಅದು ಬೇರೆ ವಿಷಯ; ಆದರೆ ಜನಸಂಖ್ಯೆಯೇ ಸಂಪನ್ಮೂಲವಾಗಿರುವ ಭಾರತದಲ್ಲಿ ನೈಸರ್ಗಿಕ ಸಂಪತ್ತೂ ವಿಪುಲವಾಗಿದೆ. ಗಣನೀಯ ಸಂಖ್ಯೆಯಲ್ಲಿ ಕುಶಲ ಕಾರ್ಮಿಕರು/ನೌಕರರು ಇಲ್ಲಿ ಸಿಗುತ್ತಾರೆ. ಹೀಗಿರುವಾಗ
ಭಾರತದಲ್ಲಿ ಉತ್ಪಾದನಾ ನೆಲೆಗಳನ್ನು ಹುಟ್ಟುಹಾಕುವುದಕ್ಕೆ ವಿದೇಶಿ ಕಂಪನಿಗಳಿಗೆ ಇರುವ ತೊಡಕೇನು? ಭಾರತದ ಮಾರು ಕಟ್ಟೆಯನ್ನು ಮಾತ್ರ ಬಳಸಿಕೊಳ್ಳುತ್ತೇವೆ ಎಂದು ಆ ಕಂಪನಿಗಳು ಹೇಳಿದರೆ ಅದನ್ನು ಒಪ್ಪಲು ಸಾಧ್ಯವೇ? ಭಾರತದಲ್ಲಿ ಮಾರಾಟವಾಗುವ ವಸ್ತುಗಳು ದೇಶೀಯವಾಗಿಯೇ ತಯಾರಾದಲ್ಲಿ ನಮ್ಮ ನಿರುದ್ಯೋಗಿ ಯುವಕರಿಗೂ ಉದ್ಯೋಗಾವಕಾಶಗಳು ದಕ್ಕುತ್ತವೆ ಎಂಬ ಮುಂದಾಲೋಚನೆಯಿಂದಲೇ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಹುಟ್ಟುಹಾಕಲಾಗಿದೆಯಲ್ಲವೇ?
ಇಲ್ಲಿ ಮತ್ತೊಂದು ಸಂಗತಿಯನ್ನು ಗಮನಿಸಬೇಕು.

ಈ ಉಪಕ್ರಮದ ಘೋಷಣೆಗೂ ಮುನ್ನ ಪ್ರಧಾನಿ ಮೋದಿಯವರು, ನಮಗೆ ಬೇಕಾದ ವಸ್ತುಗಳನ್ನು ನಾವೇ  ತಯಾರು ಮಾಡಿ ಕೊಳ್ಳುವುದಕ್ಕೆ ಸೌಕರ್ಯಗಳನ್ನು ಕಲ್ಪಿಸುವುದರ ಜತೆಗೆ ಭಾರತಕ್ಕೆ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಕೆಲಸವನ್ನೂ
ಮಾಡಿದ್ದಾರೆ. ಹಿಂದಿನ ಕೆಲ ಪ್ರಧಾನಿಗಳು ಕೂಡ ಈ ನಿಟ್ಟಿನಲ್ಲಿ ಯತ್ನಿಸಿದ್ದು ಹೌದಾದರೂ, ಅದಕ್ಕೊಂದು ನಿರ್ದಿಷ್ಟ ಹೆಸರಿಟ್ಟು
ಒಂದು ಸುವ್ಯವಸ್ಥಿತ ಕಾರ್ಯಸೂಚಿ ಸಿದ್ಧಪಡಿಸಿ ತಯಾರಿಕಾ ಪ್ರಕ್ರಿಯೆಗೆ ವೇಗ ನೀಡಿದ್ದು ಮಾತ್ರ ಮೋದಿಯವರೇ.

ಪರಿಣಾಮವಾಗಿ ಈ ಯೋಜನೆ ಈಗ ಒಂದಿಷ್ಟು ಯಶಸ್ಸನ್ನು ಕಾಣುತ್ತಿದೆ. ವೈವಿಧ್ಯಮಯ ಮೊಬೈಲ್ ಕಂಪನಿಗಳೂ ಭಾರತದಲ್ಲಿ ತಮ್ಮ ತಯಾರಿಕಾ ಘಟಕಗಳನ್ನು ಸ್ಥಾಪಿಸುತ್ತಿವೆ. ಐಫೋನ್ ಕಂಪನಿಯೂ ನಮ್ಮಲ್ಲೇ ತನ್ನ ಉತ್ಪನ್ನಗಳ ತಯಾರಿಕೆಗೆ ಮುಂದಾ ಗಿದೆ. ಚೀನಾದಿಂದ ನುಗ್ಗಿಬರುತ್ತಿದ್ದ ಆಟಿಕೆಗಳಿಗೆ ನಮ್ಮ ನೆಲದ ಆಟಿಕೆಗಳು ಬಹಳಷ್ಟು ಪೈಪೋಟಿ ನೀಡುತ್ತಿವೆ. ರೆಡಾರ್, ಬುಲೆಟ್‌ಪ್ರೂಫ್ ಜಾಕೆಟ್, ಯುದ್ಧವಾಹನ, ಕ್ಷಿಪಣಿ, ನೌಕಾಪಡೆಗೆ ಬೇಕಾಗುವ ಗಸ್ತುನೌಕೆಗಳು ಹೀಗೆ ಭಾರತೀಯ ರಕ್ಷಣಾ ವ್ಯವಸ್ಥೆಗೆ ಬೇಕಾಗುವ ಸಾಕಷ್ಟು ಉತ್ಪನ್ನಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ.

‘ಐಎನ್‌ಎಸ್ ವಿಕ್ರಾಂತ್’ ಎಂಬ ಯುದ್ಧವಿಮಾನ ವಾಹಕವು ಸಂಪೂರ್ಣ ಸ್ವದೇಶಿ ನಿರ್ಮಾಣದ ಹೆಮ್ಮೆಯ ಉತ್ಪನ್ನ ಎಂಬು ದನ್ನಿಲ್ಲಿ ಉಲ್ಲೇಖಿಸಲೇಬೇಕು. ಇಷ್ಟೇ ಅಲ್ಲ, ಭಾರತದ ಯುದ್ಧವಿಮಾನ ತಯಾರಿಕಾ ಯೋಜನೆಯಲ್ಲಿ ಕೈಜೋಡಿಸಲು ಒಂದಷ್ಟು ವಿದೇಶಿ ಕಂಪನಿಗಳು ಮುಂದೆ ಬಂದಿವೆ, ನಮ್ಮಲ್ಲೇ ತಮ್ಮ ತಯಾರಿಕಾ ಘಟಕಗಳನ್ನು ತೆರೆಯಲು ಸನ್ನದ್ಧವಾಗಿವೆ.

ಇವೆಲ್ಲ ಸಾಧ್ಯವಾಗಿದ್ದು ‘ಮೇಕ್ ಇನ್ ಇಂಡಿಯಾ’ ಎಂಬ ಮಹತ್ವದ ಉಪಕ್ರಮದಿಂದ ಎಂಬುದನ್ನು ಮರೆಯಲಾಗದು.
ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ಸಾರಿದ ಬೆನ್ನಲ್ಲೇ ಒಂದಿಡೀ ಪಾಶ್ಚಾತ್ಯ ಜಗತ್ತು ರಷ್ಯಾವನ್ನು ಅಸ್ಪೃಶ್ಯ ದೇಶದಂತೆ ದೂರ ಇಟ್ಟಿದ್ದವು. ಆದರೆ ಭಾರತ ಮಾತ್ರ ರಷ್ಯಾ ಜತೆಗಿನ ತನ್ನ ಬಾಂಧವ್ಯವನ್ನು ಕಳೆದುಕೊಂಡಿರಲಿಲ್ಲ. ನಾವು ಮಾತ್ರ ರಷ್ಯಾವನ್ನು ದೂರಮಾಡುವುದಿಲ್ಲ ಎಂದೇ ಪ್ರಧಾನಿ ಮೋದಿ ಗಟ್ಟಿದನಿಯಲ್ಲಿ ಹೇಳಿದ್ದರು. ಆದರೆ ಇದಕ್ಕೆ ಕೃತಜ್ಞನಾಗಿರಬೇಕಿದ್ದ ರಷ್ಯಾ, ರಾಗ ಬದಲಿಸಿತು. ಭಾರತ ತನ್ನದೇ ಆದ ಯುದ್ಧವಿಮಾನ ವಾಹಕವನ್ನು ತಯಾರಿಸಿಕೊಳ್ಳುವುದಕ್ಕೆ ಅಗತ್ಯವಾಗಿದ್ದ ಉಕ್ಕನ್ನು ನೀಡಲು ರಷ್ಯಾ ನಿರಾಕರಿಸಿತು.

ಇದಕ್ಕೆ ಚೀನಾದ ಒತ್ತಡವೂ ಕಾರಣವಾಗಿದ್ದಿರಬಹುದು! ಅಷ್ಟೇ ಅಲ್ಲ, ಭಾರತ ತನಗೆ ಬೇಕಾದ ರಕ್ಷಣಾ ಉಪಕರಣಗಳನ್ನು ಹೀಗೆ ತಾನೇ ತಯಾರಿಸಿಕೊಳ್ಳಲು ಶುರುವಿಟ್ಟುಕೊಂಡರೆ, ಮುಂದೊಮ್ಮೆ ತನ್ನಿಂದ ಯಾವುದೇ ಕಾರಣಕ್ಕೂ ಶಸ್ತ್ರಾಸ್ತ್ರಗಳನ್ನು ಖರೀದಿ ಸುವುದಿಲ್ಲ ಎಂಬ ಸ್ವಾರ್ಥಭರಿತ ಯೋಚನೆಯೂ ರಷ್ಯಾ ತಲೆಯಲ್ಲಿ ಸುಳಿದಿರಬಹುದು. ಹೀಗೆ ರಷ್ಯಾ ‘ತಾರಮ್ಮಯ್ಯ’ ಮಾಡಿದಾಗ, ಐಎನ್‌ಎಸ್ ವಿಕ್ರಾಂತ್ ಯುದ್ಧವಿಮಾನ ವಾಹಕಕ್ಕೆ ಅಗತ್ಯವಿದ್ದ ವಿಶೇಷ ಉಕ್ಕನ್ನು ‘ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್’ ತಯಾರಿಸಿಕೊಟ್ಟಿತು ಎಂಬುದು ಹೆಮ್ಮೆಯ ಸಂಗತಿ.

ಉಕ್ಕು ನೀಡುವುದಕ್ಕೆ ರಷ್ಯಾ ನಿರಾಕರಿಸಿದ್ದರಿಂದನಮಗೇನೂ ನಷ್ಟವಾಗಲಿಲ್ಲ. ಯುದ್ಧವಿಮಾನ ವಾಹಕದ ನಿರ್ಮಾಣಕಾರ್ಯ ಸ್ವಲ್ಪ ವಿಳಂಬವಾಯಿತು ಎಂಬುದನ್ನು ಬಿಟ್ಟರೆ, ತಾನು ಆಮದು ಮಾಡಿಕೊಳ್ಳಬೇಕಾಗಿದ್ದ ವಸ್ತುಗಳನ್ನೂ ತಾನೇ ತಯಾರು ಮಾಡಿಕೊಳ್ಳುವುದಕ್ಕೆ ಭಾರತಕ್ಕೆ ಸಾಧ್ಯವಾದಂತಾಯಿತು. ಇದು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಸಾಮರ್ಥ್ಯ ಹಾಗೂ ಅದರಿಂದ ಭಾರತಕ್ಕೆ ಆಗುತ್ತಿರುವ ಹಲವು ನೆಲಗಟ್ಟಿನ ಲಾಭಕ್ಕೆ ದ್ಯೋತಕ.

ಎಷ್ಟೇ ಕಷ್ಟವಾದರೂ ಸರಿ, ಪರಾವಲಂಬಿತನದಿಂದ ದೂರವಾಗಿ ಸ್ವಾವಲಂಬಿಯಾಗಬೇಕಿರುವುದು ಭಾರತದ ಪಾಲಿಗೆ ಈ ಕ್ಷಣದ ಅನಿವಾರ್ಯತೆಯಾಗಿದೆ. ಯಾವುದನ್ನೂ ತ್ವರಿತವಾಗಿ ಮಾಡುವ ಇಚ್ಛಾಶಕ್ತಿ ಹಾಗೂ ಅದಕ್ಕೆ ಬೇಕಾಗುವ ಹಣಕಾಸಿನ ಅಗತ್ಯ ಗಳನ್ನು ಪೂರೈಸುವ ಬದ್ಧತೆ ಸರಕಾರಕ್ಕೆ ಬೇಕಾಗುತ್ತದೆ. ಅದು ಈಗಿನ ಸರಕಾರಕ್ಕೆ ಇರುವುದರಿಂದಲೇ ‘ಮೇಕ್ ಇನ್ ಇಂಡಿಯಾ’ ಉಪಕ್ರಮ ಏರುಗತಿ ಕಾಯ್ದುಕೊಳ್ಳುವಂತಾಗಿದೆ. ಇದು ಹೀಗೇ ಮುಂದುವರಿದಲ್ಲಿ ಭಾರತವು ಹಲವು ಆಯಾಮಗಳಲ್ಲಿ ಅಭಿವೃದ್ಧಿ ಹೊಂದುವುದರಲ್ಲಿ ಮತ್ತು ಕೆಲಕಾಲದಲ್ಲೇ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ.