Wednesday, 1st February 2023

ವೃತ್ತಿನಿಷ್ಠೆಯಿಂದ ಪತ್ರಿಕೆಯ ಹೆಸರಿನೊಂದಿಗೆ ನಾಮಾಂಕಿತರಾದ ಹಿಂದೂ ರಾಮಯ್ಯ!

ಇದೇ ಅಂತರಂಗ ಸುದ್ದಿ

vbhat@me.com

ಸಾಮಾನ್ಯವಾಗಿ ಯಾವುದೇ ಹೊಸ ಪುಸ್ತಕ ಬರುವ ವಿಷಯ, ಪ್ರಕಾಶಕರು ಮತ್ತು ಮಾರಾಟಗಾರ ಮಿತ್ರರೊಂದಿಗಿನ ಒಡನಾಟದಿಂದ ನನಗೆ ಮೊದಲೇ ಗೊತ್ತಾಗುತ್ತದೆ. ಆ ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ, ಒಂದು ಪ್ರತಿ ನನ್ನ ಟೇಬಲ್ ಮೇಲೆ ಬಂದಿರುತ್ತದೆ. ಅಂಥ ಒಂದು ಪುಳಕ ಮತ್ತು ರೋಮಾಂಚನವನ್ನು ನಿತ್ಯವೂ ಅನುಭವಿಸುತ್ತೇನೆ. ಯಾವ ಹೊಸ ಪುಸ್ತಕ ಬರದ ದಿನ ನನ್ನ ಪಾಲಿಗೆ ನೀರಸವೇ.

ಬಿಡುಗಡೆಗಿಂತ ಮೂರು ವಾರಗಳ ಮೊದಲೇ, ಹಿರಿಯ ಪತ್ರಕರ್ತ ಪಿ.ರಾಮಯ್ಯನವರು ತಮ್ಮ ಅರವತ್ತು ವರ್ಷಗಳ ಅನುಭವ ಕಥನವನ್ನು ‘ನಾನು ಹಿಂದೂ ರಾಮಯ್ಯ’ ಎಂಬ ಹೆಸರಿನ ಕೃತಿಯಲ್ಲಿ ದಾಖಲಿಸಿದ್ದಾ ರಂತೆ ಎಂದು ಗೊತ್ತಾಯಿತು. ಈಗ ತೊಂಬತ್ತರ ಹೊಸ್ತಿಲಲ್ಲಿ ಇರುವ, ರಾಮಯ್ಯನವರಂಥ ಹಿರಿಯ, ಅನುಭವಿ, ಸಹೃದಯಿ ಪತ್ರಕರ್ತರೊಬ್ಬರು ತಮ್ಮ ನೆನಪು ಗಳನ್ನು ಬಿಚ್ಚಿಡುತ್ತಾರೆ ಎಂಬ ಸಂಗತಿಯೇ ನನ್ನಲ್ಲಿ ಕುತೂಹಲ ಮೂಡಿಸಿದ್ದವು.

ನನ್ನ ದೃಷ್ಟಿಯಲ್ಲಿ ಯಾವ ಪತ್ರಕರ್ತನೂ ‘ಬೋರ್’ ಅಲ್ಲ. ಅವರಲ್ಲಿ ಹೇಳಲು ಒಂದಷ್ಟು ‘ಸ್ಟೋರಿ’ಗಳಿರುತ್ತವೆ. ಅದರಲ್ಲೂ ನಮ್ಮ ರಾಜ್ಯದ ಮುಖ್ಯಮಂತ್ರಿ ಗಳಾಗಿದ್ದ ದೇವರಾಜ ಅರಸ್ ಅವರಿಂದ ಈಗಿನ ಬಸವರಾಜ ಬೊಮ್ಮಾಯಿ ಅವರ ತನಕ ಎಲ್ಲರನ್ನೂ ಹತ್ತಿರದಿಂದ ಬಲ್ಲ, ಅವರೆಲ್ಲರೊಂದಿಗೆ ಪತ್ರಕರ್ತ ರಾಗಿ ಒಡನಾಡಿದ, ನಮ್ಮ ರಾಜಕಾರಣ ಮತ್ತು ಸಮಾಜ ಕಾರಣವನ್ನು ಅಂಗೈ ಮೇಲಿನ ಗೆರೆಗಳಷ್ಟು ನಿಖರವಾಗಿ ಗಮನಿಸಿದ ರಾಮಯ್ಯನವರಂಥವರು ತಮ್ಮ ಕಥೆ ಹೇಳುತ್ತಾರಂತೆ ಅಂದ್ರೆ ಯಾರಿಗೆ ತಾನೇ ಆಸಕ್ತಿ ಮೂಡುವುದಿಲ್ಲ? ರಾಮಯ್ಯನವರ ಬಗ್ಗೆ ಒಂದು ಮಾತನ್ನು ಹೇಳಲೇಬೇಕು.

ಮಂಡ್ಯ ಜಿಲ್ಲೆ ನಾಗ ಮಂಗಲದ ಸನಿಹದಲ್ಲಿರುವ ಬ್ಯಾಡರ ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ಓದಿ ‘ದಿ ಹಿಂದೂ’
ಪತ್ರಿಕೆಗೆ ಟೆಲಿಪ್ರಿಂಟರ್ ಆಪರೇಟರ್ ಆಗಿ ಸೇರಿ, ಆ ಪತ್ರಿಕೆಯ ಕರ್ನಾಟಕ ಆವೃತ್ತಿಯ ಮುಖ್ಯಸ್ಥರಾಗುವ ತನಕ ಬೆಳೆದಿದ್ದು ನಿಜಕ್ಕೂ ದೊಡ್ಡ ಸಾಧನೆ. ಅವರು ಮೊದಲು ಸೇರಿದ್ದು ‘ದಿ ಹಿಂದೂ’ ಮತ್ತು ಕೊನೆಯ ತನಕ ಎಳೆದಿದ್ದೂ ಆ ಪತ್ರಿಕೆಯ ನೊಗ ವನ್ನೇ.

ತಮ್ಮ ವೃತ್ತಿ ಬದುಕಿನಲ್ಲಿ ಅವರು ಮತ್ತೊಂದು ಪತ್ರಿಕೆ ಯನ್ನು ಕಣ್ಣೆತ್ತಿ ನೋಡಿದವರಲ್ಲ. ನಲವತ್ತೈದು ವರ್ಷಗಳ ಕಾಲ ಒಬ್ಬ ವ್ಯಕ್ತಿ, ಒಂದು ಸಂಸ್ಥೆ ಜತೆ ನಿರಂತರ ಕೆಲಸ ಮಾಡಿ, ಒಂದು ಅನ್ಯೋನ್ಯ ಸಂಬಂಧ ಇಟ್ಟುಕೊಳ್ಳುವುದು ಸಣ್ಣ ಸಾಧನೆಯಲ್ಲ.
ರಾಮಯ್ಯನವರು ತಮ್ಮ ಜೀವಿತ ಅವಧಿಯ ಅರ್ಧ ಶತಮಾನವನ್ನು ‘ದಿ ಹಿಂದೂ’ ಪತ್ರಿಕೆಯಲ್ಲಿಯೇ ಕಳೆದವರು. ಮನಸ್ಸು ಮಾಡಿದ್ದರೆ ಅವರು ಆ ಪತ್ರಿಕೆಯಲ್ಲಿಯೇ ಇನ್ನಷ್ಟು ವರ್ಷ ಮುಂದುವರಿಯಬಹುದಿತ್ತು.

ರಾಮಯ್ಯನವರಿಗೆ ಅರವತ್ತು ತುಂಬಿ, ನಿವೃತ್ತರಾಗಿದ್ದರೂ, ಆ ಪತ್ರಿಕೆಯ ಮಾಲೀಕರಿಗೆ ಅವರನ್ನು ಮನೆಗೆ ಕಳಿಸಲು ಇಷ್ಟವಿರಲಿಲ್ಲ. ಆದರೆ ರಾಮಯ್ಯನವರು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಗೊಂಡಿದ್ದರಿಂದ, ಬೇರೆ ದಾರಿಯಿಲ್ಲದೇ, ರಾಜೀನಾಮೆ ನೀಡಬೇಕಾಯಿತು. ಹೀಗಾಗಿ ಅವರನ್ನು ಯಾರೂ ರಾಮಯ್ಯ ಎಂದು ಕರೆಯುವುದಿಲ್ಲ. ಅವರು ಎಲ್ಲರ ಪಾಲಿಗೆ ‘ಹಿಂದೂ ರಾಮಯ್ಯ’!

ಹೀಗಾಗಿ ತಮ್ಮ ಆತ್ಮಕಥನಕ್ಕೂ ಸೂಕ್ತವಾಗಿ ‘ನಾನು ಹಿಂದೂ ರಾಮಯ್ಯ’ ಎಂದೇ ಹೆಸರಿಟ್ಟಿದ್ದಾರೆ. ಎರಡು ವರ್ಷ ಮುಗಿಯು ವುದರೊಳಗೆ, ಆಗಲೇ ನಾಲ್ಕು ಪತ್ರಿಕೆಯ ಸುದ್ದಿಮನೆ ಹೊಸ್ತಿಲು ತುಳಿದು ಬರುವ ಈ ದಿನಗಳಲ್ಲಿ ಈಗಿನ ಪತ್ರಕರ್ತರು, ರಾಮಯ್ಯನವರ ವೃತ್ತಿ ಬದುಕು ಮತ್ತು ವೃತ್ತಿನಿಷ್ಠೆಯಿಂದ ಕಲಿಯುವಂಥದ್ದು ಬಹಳವಿದೆ. ಎರಡು ಸಾವಿರ ರುಪಾಯಿ ಹೆಚ್ಚು ಕೊಟ್ಟರೆ, ಮತ್ತೊಂದು ಮಾಧ್ಯಮ ಸಂಸ್ಥೆಗೆ ಎಡತಾಕುವ ಪತ್ರಕರ್ತರಿಗೆ, ರಾಮಯ್ಯನವರ ಜೀವನವೇ ಒಂದು ಪಾಠ.

‘ದಿ ಹಿಂದೂ’ ಪತ್ರಿಕೆಯನ್ನು ಕಟ್ಟಿ ಬೆಳೆಸಿದ ಕಸ್ತೂರಿ, ಅವರ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಯಾರೂ ‘ಹಿಂದೂ’ ಎಂಬ ಹಿಂಪದ ಸಹಿತ ಕರೆಯುವುದಿಲ್ಲ. ಆದರೆ ರಾಮಯ್ಯನವರಿಗೆ ಮಾತ್ರ ಆ ವಿಶೇಷ ಅಭಿದಾನ ಮತ್ತು ಮುಕುಟ. ಒಂದು ಸಂಸ್ಥೆಯ, ಪತ್ರಿಕೆಯ ಹೆಸರನ್ನೇ ತಮ್ಮ ಹೆಸರನ್ನಾಗಿ, ವ್ಯಕ್ತಿತ್ವವಾದ ಭಾಗವಾಗಿ ಮಾಡಿಕೊಳ್ಳುವ ಮಜಕೂರು ಮತ್ತು ಹಿರಿಮೆಯೇ ಒಬ್ಬ ಪತ್ರಕರ್ತನ ಬಹುದೊಡ್ಡ ಸಾಧನೆ. ಹೀಗಾಗಿ ರಾಮಯ್ಯನವರ ಹೆಸರೇ (ಹಿಂದೂ ರಾಮಯ್ಯ) ಒಂದು ಸಂದೇಶ.

ನಾವೇನೋ ನಿವೃತ್ತಿಯ ನಂತರವೂ ಕೆಲಸ ಮಾಡಲು ಸಿದ್ಧರಿರಬಹುದು. ಹಾಗೆ ಕೆಲಸ ಮಾಡುವ ಅನಿವಾರ್ಯ ಮತ್ತು
ಅಗತ್ಯವೂ ನಮಗಿರಬಹುದು. ಆದರೆ ಮಾಲೀಕರಿಗೆ ನಮ್ಮನ್ನು ಇಟ್ಟುಕೊಳ್ಳುವ ದರ್ದು, ಅನಿವಾರ್ಯತೆ ಇರುವುದಿಲ್ಲವಲ್ಲ.
ಅನೇಕರನ್ನು ನಿವೃತ್ತಿಯವರೆಗೆ ಇಟ್ಟುಕೊಳ್ಳುವುದೇ ತಲೆಬೇನೆ. ಯಾವಾಗ ಅರವತ್ತಾಗುವುದೋ ಎಂದು ಕಾಯುತ್ತಿರುತ್ತಾರೆ. ಲೆಕ್ಕ ಚುಕ್ತಾ ಮಾಡಿ ಸಾಗ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ರಾಮಯ್ಯನವರ ನಲವತ್ತೈದು ವರ್ಷಗಳ ಸಾರ್ಥಕ ವೃತ್ತಿ
ಬದುಕನ್ನು ಗಮನಿಸಬೇಕು.

ಕೊನೆಯ ದಿನದ ತನಕವೂ ಸಂಸ್ಥೆಗೆ, ಸಹೋದ್ಯೋಗಿ ಗಳಿಗೆ, ಮಾಲೀಕರಿಗೆ ಅವರು ಬೇಕಾಗಿದ್ದರು. ನಿವೃತ್ತರಾದರೂ ವರ್ಷ ವರ್ಷವೂ ಅವರ ಸೇವೆ ವಿಸ್ತರಣೆಯಾಗುತ್ತಿತ್ತು. ರಾಮಯ್ಯನವರಿಗೆ ಬೇರೆ ಪತ್ರಿಕಾ ಸಂಸ್ಥೆಗಳಿಂದ ಉದ್ಯೋಗ ಆಹ್ವಾನ ಬಂದಿ
ದ್ದರೂ ಅವರು ಅದನ್ನು ಸ್ವೀಕರಿಸಲಿಲ್ಲ. ತಮ್ಮ ಸಂಸ್ಥೆ ಬಿಡುವ ಯೋಚನೆಯೇ ಅವರ ಮನಸ್ಸಿನಲ್ಲಿ ಸುಳಿಯಲಿಲ್ಲ. ಅರ್ಧ ಶತಮಾನ ಕಾಲ ಪತ್ರಿ ಕೋದ್ಯಮದಲ್ಲಿ ತಮ್ಮ ಹೊಳಪು, ಪ್ರಸ್ತುತತೆ ಕಾಪಾಡಿಕೊಳ್ಳುವುದರಲ್ಲಿ ರಾಮಯ್ಯನವರ ವೃತ್ತಿ ನೈಪುಣ್ಯ ಅಡಗಿದೆ. ಹೆಚ್ಚಾಗಿ ರಾಜಕೀಯ ವರದಿಗಾರಿಕೆ ಮಾಡಿದರೂ, ತಮ್ಮ ಸೌಮ್ಯ, ಸಹೃದಯಿ, ಸಮಚಿತ್ತ ನಡೆವಳಿಕೆ ಯಿಂದ ಅವರು ಎಲ್ಲರಿಗೂ ಬೇಕಾದವರಾಗಿದ್ದರು.

ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ, ಅಧಿಕಾರಿಗಳಿಗೆ ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳ ಗಣ್ಯರಿಗೆ ರಾಮಯ್ಯನವರಲ್ಲಿ ಒಂದು comfort zone ಸಿಗುತ್ತಿತ್ತು. ಹೀಗಾಗಿ ಅವರಿಗೆ ಯಾರಿಗೂ ಸಿಗದ ವಿಶೇಷ ಸ್ಟೋರಿಗಳು ಸಿಗುತ್ತಿದ್ದವು. ಅವರೊ ಬ್ಬರೇ ಆನೆಯಂತೆ ನಡೆದು ಹೋಗಲಿಲ್ಲ. ತಮ್ಮ ಸಹವರ್ತಿ ಪತ್ರಕರ್ತರನ್ನೂ ತಮ್ಮ ಜತೆಯ ಕರೆದುಕೊಂಡು ಹೋದರು. ಇದು ಪತ್ರಿಕೋ ದ್ಯಮದಲ್ಲೂ ಒಬ್ಬ ನಾಯಕನಿಗಿರಬೇಕಾದ ಲಕ್ಷಣ. ರಾಮಯ್ಯ ನವರು ಒಬ್ಬ ಸಂಪಾದಕೀಯ ವಿಭಾಗದ ಮುಖ್ಯಸ್ಥ ನಾಗಿ ಗೆದ್ದಿದ್ದರೆ ಅವರ ಈ ‘ಒಳಗೊಳ್ಳುವ’ ವ್ಯಕ್ತಿತ್ವವೂ ಕಾರಣ. ರಾಮಯ್ಯನವರು ತಾವೊಬ್ಬರೇ ಬೆಳೆಯಲಿಲ್ಲ. ತಮ್ಮ ಸಂಸ್ಥೆಯ ಬೆಳವಣಿಗೆಗೂ ಕಾರಣರಾದರು.

ಕೆಲವು ಪತ್ರಕರ್ತರು ವೃತ್ತಿಯಲ್ಲಿರುವಾಗಲೇ ಬರೆಯುವುದಿಲ್ಲ. ಇನ್ನು ನಿವೃತ್ತರಾದ ಬಳಿಕ ಬರೆಯುವುದುಂಟೇ? ಪತ್ರಕರ್ತರಲ್ಲಿ ಹೇಳಲು ಹಲವಾರು ಸಂಗತಿಗಳಿರುತ್ತವೆ. ಅವರು ತಮ್ಮ ವೃತ್ತಿಗೆ ಮಾಡಬಹುದಾದ ದೊಡ್ಡ ಉಪಕಾರವೆಂದರೆ ತಮ್ಮ ವೃತ್ತಿ ಅನುಭವಗಳನ್ನು ಕಟ್ಟಿಕೊಡುವುದು. ರಾಮಯ್ಯ ನವರು ತೊಂಬತ್ತರ ಈ ವಯಸ್ಸಿನಲ್ಲೂ ಈ ಕೃತಿಯನ್ನು ಖುದ್ದಾಗಿ ಬರೆಯಲು ಮುಂದಾಗಿದ್ದು, ಅದೂ ಕನ್ನಡದಲ್ಲಿ ಬರೆದಿರುವದು ಅವರ ಹೆಚ್ಚುಗಾರಿಕೆ. ಇದು ರಾಮಯ್ಯನವರ ಅನುಭವ ಕಥನವಾದರೂ, ಕಳೆದ ಅರವತ್ತು ವರ್ಷಗಳ ನಮ್ಮ ರಾಜ್ಯದ ರಾಜಕಾರಣ ಸೇರಿದಂತೆ ಹಲವು ವಿಷಯಗಳ ಸಾಕ್ಷಾತ್ ದರ್ಶನ.

ರಾಮಯ್ಯನವರದು ಸಭ್ಯತೆ, ಸೌಜನ್ಯ ಮೀರದ ಬರವಣಿಗೆ. ಆ ವೃತ್ತಿ ಬದ್ಧತೆಯನ್ನು ತಮ್ಮ ಆತ್ಮಕಥನದಲ್ಲೂ ಮುಂದು ವರಿಸಿದ್ದಾರೆ. ಪತ್ರಕರ್ತರೆಲ್ಲ ಓದಬೇಕಾದ ಕೃತಿಯಿದು. ಉಳಿದವರಿಗೂ ಈ ಕೃತಿಯಲ್ಲಿ ಸಾಕಷ್ಟು ಆಸಕ್ತಕರ ವಿಷಯಗಳಿವೆ. ಒಬ್ಬ ಅನುಭವಿ ಪತ್ರಕರ್ತನ ಬದುಕೆಂದರೆ ಅದೊಂದು ದೊಡ್ಡ ಪರದೆ ಅಥವಾ ಕ್ಯಾನ್ವಾಸ್. ಅಲ್ಲಿ ಕಾಣುವುದಷ್ಟೇ ಒಟ್ಟು ಮೊತ್ತವಲ್ಲ, ಕಾಣ್ಕೆಯಲ್ಲ. ಅವರ ಬದುಕಿಗೆ ಅವನ್ನು ಮೀರಿದ ಬಹುತ್ವ, ವೈಶಿಷ್ಟ್ಯ ಮತ್ತು ಆಯಾಮ ವಿರುತ್ತದೆ. ರಾಮಯ್ಯ ನವರು ಸಹ ಈ ಕ್ಯಾನ್ವಾಸ್ ಮೀರುವವರು.

ಆದರೆ ತಮ್ಮ ಬದುಕಿನ ಕಥೆಗೆ ಶಿಷ್ಟತೆಯ ಚೌಕಟ್ಟು ಹಾಕಿಕೊಂಡು ಉಖಾರ್ಹ ಸಂಗತಿಗಳನ್ನು ಹರವಿದ್ದಾರೆ. ನಿಜಕ್ಕೂ ಅವರು ಅಭಿನಂದನಾರ್ಹರು. ‘ದಿ ಆಲ್ಕೆಮಿ’ ಎಂಬ ವಿಸ್ಮಯ ಇಂದು ಜಗತ್ತಿನೆಡೆ ಮಾರಾಟವಾಗುವ ಕೆಲವೇ ಕೆಲವು ಲೇಖಕರಲ್ಲಿ ಪೌಲೋ ಕೊಎಲ್ಹೋ ಕೂಡ ಒಬ್ಬರು. ಅವರು ಯಾವ ಪುಸ್ತಕವನ್ನೇ ಬರೆಯಲಿ, ಲಕ್ಷಗಳಲ್ಲ, ಕೋಟಿ ಪ್ರತಿಗಳಲ್ಲಿ ಮಾರಾಟ ವಾಗುತ್ತವೆ. ಕನಿಷ್ಠ ಐವತ್ತು ಭಾಷೆಗಳಿಗಾದರೂ ಅನುವಾದವಾಗುತ್ತವೆ. ಪೌಲೋ ಕೊಎಲ್ಹೋ ಯಾವ ಪುಸ್ತಕ ಬರೆದರೂ, ಅದರಿಂದ ಸಿಗುವ ಸಂಭಾವನೆ ಹಣದಿಂದ ನ್ಯೂಯಾರ್ಕಿನ ಪ್ರತಿಷ್ಠಿತ ಬಡಾವಣೆಯಲ್ಲಿ ನಾಲ್ಕು ಬೆಡ್ ರೂಮ್ ಇರುವ ವಿ ಖರೀದಿಸಬಹುದು ಎಂಬ ಮಾತಿದೆ. ಅಂದರೆ ಅವರಿಗೆ ಆ ಪ್ರಮಾಣದಲ್ಲಿ ರಾಯಲ್ಟಿ ಹಣ ಸಿಗುತ್ತದೆ.

ಬ್ರೆಜಿಲ್ ಮೂಲದವರಾದ ಕೊಎಲ್ಹೋ , 1988ರಲ್ಲಿ ಬರೆದ ‘ದಿ ಆಲ್ಕೆಮಿ’ ಪುಸ್ತಕ ಅವೆಷ್ಟೋ ಆವೃತ್ತಿಗಳನ್ನು ಕಂಡಿವೆಯೋ,
ಅವೆಷ್ಟು ಕೋಟಿ ಪ್ರತಿಗಳು ಮಾರಾಟವಾಗಿಯೋ, ಯಾರಿಗೂ ಗೊತ್ತಿಲ್ಲ. ಪುಸ್ತಕ ಪ್ರಕಾಶನ ಚರಿತ್ರೆಯಲ್ಲಿ ಈ ಕೃತಿ ಸೃಷ್ಟಿಸಿದ ದಾಖಲೆ ಸಾರ್ವಕಾಲಿಕವಾದುದು. 2003 ರ ಹೊತ್ತಿಗೆ ಈ ಕೃತಿ ಎಂಬತ್ತು ಭಾಷೆಗಳಿಗೆ ಅನುವಾದವಾಗಿತ್ತು. ಅದರ ಹಿಂದಿನ ವರ್ಷ, ಜರ್ಮನಿಯ ಫ್ರಾಂಕಫರ್ಟ್ ಪುಸ್ತಕ ಮೇಳದಲ್ಲಿ ಒಂದೇ ಬೈಠಕ್ಕಿನಲ್ಲಿ ೫೩ ಭಾಷೆಗಳ ಅನುವಾದ ಒಪ್ಪಂದಕ್ಕೆ ಪೌಲೋ ಕೊಎಲ್ಹೋ ಸಹಿ ಹಾಕಿದ್ದು ಸಹ ಒಂದು ದಾಖಲೆಯೇ.

ಸಾಮಾನ್ಯವಾಗಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ‘ಬೆಸೆಲ್ಲರ್ಸ’ ಪುಸ್ತಕಗಳ ಪಟ್ಟಿಯಲ್ಲಿ ಜಾಗ ಪಡೆಯುವುದು ಪ್ರತಿಷ್ಠೆಯ ಸಂಗತಿಯೇ. ಆದರೆ ಪೌಲೋ ಕೊಎಲ್ಹೋ ಬರೆದ ‘ದಿ ಆಲ್ಕೆಮಿ’ ಸತತ ಮುನ್ನೂರು ವಾರಗಳ ವರೆಗೆ, ಅಂದರೆ ಸುಮಾರು ಆರು ವರ್ಷಗಳವರೆಗೆ ಆ ಪಟ್ಟಿಯಲ್ಲಿತ್ತು. ಅದೂ ಸಹ ಒಂದು ದಾಖಲೆಯೇ. ಈ ಕೃತಿ ಪ್ರಕಟವಾದ ಆರು ವರ್ಷಗಳ ನಂತರ, ಅಂದರೆ 1994 ರಲ್ಲಿ ಈ ಕೃತಿ ಫ್ರೆಂಚ್ ಭಾಷೆಗೆ ಅನುವಾದಗೊಂಡಿತು. ಹೀಗೆ ಅನುವಾದಗೊಂಡ ಕೃತಿ ಯೊಂದು ಅತಿ ಹೆಚ್ಚು ಮಾರಾಟವಾಗಿದ್ದು ಸಹ ದಾಖಲೆಯೇ.

ಈ ಮಾತು ಪೋರ್ಚುಗೀಸ್ ಭಾಷೆಗೂ ಅನ್ವಯ. ಕೊಎಲ್ಹೋ ‘ದಿ ಆಲ್ಕೆಮಿ’ ಬರೆದಾಗ, ಅದನ್ನು ಪ್ರಕಟಿಸಲು ಯಾವ ಪ್ರಕಾಶಕರೂ ಮುಂದೆ ಬರಲಿಲ್ಲ. ಸುಮಾರು ಎರಡು ವರ್ಷ ಅವರು ಕನಿಷ್ಠ ಹತ್ತು ಪ್ರಕಾಶಕರನ್ನು ಭೇಟಿ ಮಾಡಿದ್ದಿರಬಹುದು. ಯಾರೂ ಅದನ್ನು ಪ್ರಕಟಿಸಲು ಉತ್ಸಾಹವನ್ನೇ ತೋರಲಿಲ್ಲ. ಕೊಎಲ್ಹೋ ಅವರು ತಮ್ಮ ಕೃತಿ ಸಂಪೂರ್ಣ ಭಿನ್ನ ಮತ್ತು ವಿಶಿಷ್ಟ ವಸ್ತುವನ್ನು ಹೊಂದಿರುವ ಕೃತಿ ಎಂದು ಮನವರಿಕೆ ಮಾಡಿಕೊಟ್ಟರೂ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಕೊನೆಗೆ ಒಬ್ಬ ಪ್ರಕಾಶಕ ಮುಂದೆ ಬಂದ. ಆತ ಕೊಎಲ್ಹೋ ಒತ್ತಾಯಕ್ಕೆ ಕಟ್ಟು ಬಿದ್ದು ಆ ಪುಸ್ತಕವನ್ನು ಒಲ್ಲದ ಮನಸ್ಸಿನಿಂದಲೇ ಪ್ರಕಟಿಸಿದ. ಪುಸ್ತಕವೇನೋ ಬಿಡುಗಡೆ ಯಾಯಿತು. ಆದರೆ ಒಂದೇ ಒಂದು ಪ್ರತಿಯನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಸುಮಾರು ನಾಲ್ಕು ತಿಂಗಳುಗಳಾಗಿರಬಹುದು, ಒಂದೇ ಒಂದು ಪ್ರತಿ ಸಹ ಮಾರಾಟವಾಗಲಿಲ್ಲ.

ಆರು ತಿಂಗಳ ಬಳಿಕ, ಆ ಪುಸ್ತಕಗಳನ್ನು ಇಟ್ಟುಕೊಂಡಿದ್ದ ಗೋದಾಮಿನ ಮಾಲೀಕ, ‘ನೀವು ಬಾಡಿಗೆ ಕೊಡದಿದ್ದರೆ ನಾನು
ಪುಸ್ತಕಗಳನ್ನು ಬೀದಿಗೆ ಎಸೆಯುತ್ತೇನೆ’ ಎಂದು ಬೆದರಿಕೆ ಹಾಕಿದ. ಕಾರಣ ಅಲ್ಲಿಯವರೆಗೆ, ಕೇವಲ ಎಂಟು ಪ್ರತಿಗಳು ಮಾರಾಟ ವಾಗಿದ್ದವು. ಆಗ ಕೊಎಲ್ಹೋ, ಪ್ರಕಾಶಕನನ್ನು ಭೇಟಿ ಮಾಡಿ, ‘ನನ್ನನ್ನು ನಂಬಿ, ಈಗಲೇ ಯಾವ ನಿರ್ಧಾರಕ್ಕೂ ಬರಬೇಡಿ. ನನ್ನ ಕೃತಿಯ ಬಗ್ಗೆ ನನಗೆ ವಿಶ್ವಾಸವಿದೆ. ಅದನ್ನು ಓದುಗರು ಮೆಚ್ಚುತ್ತಾರೆ. ಸ್ವಲ್ಪ ದಿನ ಕಾಯೋಣ. ನನಗೆ ಉಪಕಾರ ಮಾಡಿ.

ಒಬ್ಬ ಓದುಗನೇ ಎಂಟು ಕೃತಿಗಳನ್ನು ಖರೀದಿ ಮಾಡಿರುವುದು ಒಳ್ಳೆಯ ಲಕ್ಷಣ. ಸ್ವಲ್ಪ ದಿನಗಳವರೆಗೆ ಕಾಯ್ದರೆ, ಪರಿಸ್ಥಿತಿ
ಬದಲಾಗುವುದರಲ್ಲಿ ಅನುಮಾನವಿಲ್ಲ. ಹತ್ತು ತಿಂಗಳ ನಂತರವೂ ಪರಿಸ್ಥಿತಿ ಸುಧಾರಿಸದಿದ್ದರೆ, ನೀವು ಹೇಳಿದಂತೆ ಗೋದಾಮಿ ನಿಂದ ಬಿಸಾಕಿ ಬಿಡೋಣ’ ಎಂದು ವಿನಮ್ರವಾಗಿ ಹೇಳಿದರು. ಅದಾಗಿ ಸುಮಾರು ಎರಡು ತಿಂಗಳಲ್ಲಿ, ಒಂದು ಸಾವಿರ ಪ್ರತಿಗಳು ಮಾರಾಟವಾದವು. ಮುಂದಿನ ಹದಿನೈದು ದಿನಗಳಲ್ಲಿ ಮೂರು ಸಾವಿರ ಪ್ರತಿಗಳು ಖರ್ಚಾದವು. ಅದಾಗಿ ಮೂರು ತಿಂಗಳಲ್ಲಿ ಗೋದಾಮಿನಲ್ಲಿದ್ದ ಎಲ್ಲಾ ಹತ್ತು ಸಾವಿರ ಪ್ರತಿಗಳೂ ಖಾಲಿಯಾದವು.

ಪ್ರಕಾಶಕರೇ ಲೇಖಕರನ್ನು ಹುಡುಕಿಕೊಂಡು ಬಂದು, ‘ನಿಮ್ಮ ಪುಸ್ತಕಕ್ಕೆ ಭಾರಿ ಬೇಡಿಕೆ ಬರುತ್ತಿದೆ. ಐವತ್ತು ಸಾವಿರ ಪುಸ್ತಕ ಗಳನ್ನು ಮುದ್ರಿಸೋಣ. ಅದಕ್ಕೆ ಅನುಮತಿ ನೀಡಿ’ ಎಂದ. ಈ ರೀತಿಯ ಬೇಡಿಕೆ ಬಂದೇ ಬರುತ್ತದೆ ಎಂಬುದು ಕೊಎಲ್ಹೋ ಅವರಿಗೆ ಗೊತ್ತಿತ್ತು. ಅದಕ್ಕೆ ಅನುಮತಿ ನೀಡಿದರು. ಆಶ್ಚರ್ಯವೆನಿಸಬಹುದು, ಮುಂದಿನ ಒಂದು ವರ್ಷದ ಅವಧಿಯಲ್ಲಿ, ‘ದಿ ಆಲ್ಕೆಮಿ’ ಪುಸ್ತಕದ ಹತ್ತು ಲಕ್ಷ ಪ್ರತಿಗಳು ಮಾರಾಟವಾದವು!

ಅದಾದ ಬಳಿಕ, ‘ದಿ ಆಲ್ಕೆಮಿ’ ಇಪ್ಪತ್ತು ಲಕ್ಷ, ಐವತ್ತು ಲಕ್ಷ, ಒಂದು ಕೋಟಿ, ಐದು ಕೋಟಿ, ಹದಿನೈದು ಕೋಟಿ, ಐವತ್ತು ಕೋಟಿ
ಪ್ರತಿಗಳು ಖರ್ಚಾದವು! ಒಂದೇ ವೇಳೆ, ಒಂದು ವರ್ಷದೊಳಗೆ ಆ ಕೃತಿಯನ್ನು ಗೋದಾಮಿನಿಂದ ಬಿಸಾಡಿದ್ದರೆ, ಕೊಎಲ್ಹೋ
ಎಂಬ ಮಾಂತ್ರಿಕ, ಅದ್ಭುತ ಲೇಖಕ ನಮಗೆ ಸಿಗುತ್ತಲೇ ಇರಲಿಲ್ಲ. ಪುಣ್ಯವಶಾತ್, ಆ ಪ್ರಕಾಶನಕನಿಗೆ ಹಾಗೂ ಗೋದಾಮು
ಮಾಲೀಕನಿಗೆ ಕೊಎಲ್ಹೋ ನಂಬುವ ಆ ಅಗೋಚರ ಶಕ್ತಿ ಒಳ್ಳೆಯ ಬುದ್ಧಿ ನೀಡಿತು. ಹೀಗಾಗಿ ಕಳೆದುಹೋಗಬಹುದಾದ ಒಬ್ಬ
ಲೇಖಕ ನಮಗೆ ಶಾಶ್ವತವಾಗಿ ಸಿಕ್ಕಂತಾಯಿತು.

೨೦೦೦ ರಲ್ಲಿ ಪೌಲೋ ಕೊಎಲ್ಹೋ ತಮ್ಮ ಪುಸ್ತಕವನ್ನು ಆನ್ ಲೈನ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳ ಬಹುದು ಎಂದು ಘೋಷಿಸಿಬಿಟ್ಟರು. ಅದಾದ ನಂತರವೂ, ‘ದಿ ಆಲ್ಕೆಮಿ’ ಕೋಟಿಗಟ್ಟಲೆ ಪ್ರತಿಗಳು ಮಾರಾಟವಾದವು. ಒಂದು ಪುಸ್ತಕ ಮಾರಾಟದ ಎಲ್ಲಾ ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದು ಈ ಕೃತಿ. ಅಮೆರಿಕದ ಅಧ್ಯಕ್ಷರಾಗಿದ್ದಾಗ ಬಿಲ್ ಕ್ಲಿಂಟನ್ ‘ದಿ
ಆಲ್ಕೆಮಿ’ ಪುಸ್ತಕವನ್ನು ಹಿಡಿದುಕೊಂಡಿದ್ದ ಫೋಟೋ ಆ ದಿನಗಳಲ್ಲಿ ಪ್ರಕಟವಾಗಿತ್ತು. ‘ನನ್ನ ಅಪ್ಪನಿಗೆ ಈ ಕೃತಿಯನ್ನು ನೀಡಿದೆ. ಅವರು ಅದನ್ನು ಪೂರ್ತಿ ಓದಿ ಬಹಳ ಖುಷಿಪಟ್ಟರು.

ನಿಮ್ಮ ಭಾಷಣದಲ್ಲಿ ಆ ಪುಸ್ತಕವನ್ನು ಉದ್ಧರಿಸಬೇಕು ಎಂದು ಹೇಳಿದಾಗ, ಖಂಡಿತವಾಗಿಯೂ ಆ ಕೆಲಸ ಮಾಡುತ್ತೇನೆ ಎಂದು
ಕ್ಲಿಂಟನ್ ಹೇಳಿದರು’ ಅವರ ಮಗಳು ಚೆಲ್ಸೀ ಹೇಳಿದ್ದು ವರದಿಯಾಗಿತ್ತು. ‘ದಿ ಆಲ್ಕೆಮಿ’ ಬಗ್ಗೆ ನಾನು ಯಾಕೆ ಈಗ ಪ್ರಸ್ತಾಪಿಸಿದೆ
ಅಂದ್ರೆ, ಅದು ಬಿಡುಗಡೆಯಾಗಿ ಮೂವತ್ತೈದು ವರ್ಷಗಳ ನಂತರವೂ, ಈ ಕೃತಿ ಇಂದಿಗೂ ಜಗತ್ತಿನಾದ್ಯಂತ ಪ್ರತಿ ತಿಂಗಳು
ಐವತ್ತು ಸಾವಿರಕ್ಕಿಂತ ಹೆಚ್ಚು ಮಾರಾಟವಾಗುತ್ತಿದೆಯಂತೆ. ಒಬ್ಬ ಲೇಖಕನಿಗೆ ಇದಕ್ಕಿಂತ ದೊಡ್ಡ ಸಂತೋಷ ಯಾವುದಿದೆ?
ಭೋಜನಕೂಟದದ ಅಪಸವ್ಯ ನಾನು ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ಅಧಿಕಾರದಲ್ಲಿರುವ ಎಲ್ಲಾ ಪ್ರಧಾನಿ, ರಾಷ್ಟ್ರಪತಿ ಮತ್ತು ಕೆಲವು ವಿದೇಶಾಂಗ ಸಚಿವರೊಂದಿಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ದೇಶಗಳಿಗೆ ಹೋಗಿದ್ದೇನೆ.

ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಜತೆ ಹದಿನಾರು ದಿನಗಳ ಕಾಲ ನಾಲ್ಕು ದೇಶಗಳಿಗೆ ಹೋಗಿದ್ದೆ. ಹಾಗೆ ವಾಜಪೇಯಿ ಸೇರಿದಂತೆ ಮೂವರು ಪ್ರಧಾನಿಗಳ ಜತೆ ವಿದೇಶ ಪ್ರವಾಸಕ್ಕೆ ಹೋಗಿದ್ದೆ. ರಷ್ಯಾದ ರಾಜಧಾನಿ ಮಾಸ್ಕೋದ ಕ್ರಿಮ್ಲಿನ್‌ ನಲ್ಲಿರುವ ಬಂಗಾರದ ಅರಮನೆಯಲ್ಲಿ ಅಧ್ಯಕ್ಷ ಪುಟಿನ್, ಡಾ.ಕಲಾಂ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು. ಪುಟಿನ್ ಮತ್ತು ಡಾ.ಕಲಾಂ ಅವರ ಟೇಬಲ್ ನಿಂದ ನಾಲ್ಕು ಮೀಟರ್ ಅಂತರದಲ್ಲಿ ನಮ್ಮ ಟೇಬಲ್ ಇತ್ತು. ಅವರಿಬ್ಬರೂ ಮಾತಾಡುವುದು ನಮಗೆ ಸ್ಪಷ್ಟವಾಗಿ ಕೇಳುವಷ್ಟು ಹತ್ತಿರದಲ್ಲಿದ್ದೆವು.

ಡಾ.ಕಲಾಂ ಮಿತಾಹಾರಿ. ಅವರು ಔತಣಕೂಟದಲ್ಲಿ ‘ಟೋಸ್ಟಿಂಗ್’ ಗೆಂದು ಗ್ಲಾಸನ್ನು ಎತ್ತುವವರಲ್ಲ. ಚಿಯರ್ಸ್ ಎಂದು ಹೇಳಿದವರಲ್ಲ. ಆ ದಿನ ಡಾ.ಕಲಾಂ ಅವರಿಗೆಂದು, ಪುಟಿನ್ ಸರಳವಾದ ಅಡುಗೆ ಸಿದ್ಧಪಡಿಸಿದ್ದರು. ಆದರೆ ಅದನ್ನು ಸಿದ್ಧಪಡಿಸಿದವರು ರಷ್ಯನ್ ಅಡುಗೆಭಟ್ಟರು. ಆಗ ತಾನೇ ಒಗ್ಗರಣೆ ಹಾಕಿದ ಖಾದ್ಯವನ್ನು ಟೇಬಲ್ ಮೇಲೆ ತಂದಿಟ್ಟರು. ಅದರ ಘಾಟು ಎಷ್ಟಿತ್ತೆಂದರೆ, ಡಾ.ಕಲಾಂ ತಕ್ಷಣ ಆಕ್ಷೀ..ಆಕ್ಷೀ…ಆಕ್ಷೀ …. ಎಂದರು. ಅವರ ಕಣ್ಣುಗಳಲ್ಲಿ ನೀರಿಳಿಯಲಾರಂಭಿಸಿತ್ತು. ಇಡೀ ಔತಣಕೂಟದಲ್ಲಿದ್ದವರೆಲ್ಲ ರಾಷ್ಟ್ರಪತಿಗಳ ಕಡೆಗೆ ನೋಡಲಾರಂಭಿಸಿದರು.

ತಕ್ಷಣ ರಾಷ್ಟ್ರಪತಿಗಳು ಹತ್ತಿರದಲ್ಲಿರುವ ರೆ ರೂಮಿಗೆ ಹೋಗಿ, ಸಾವರಿಸಿಕೊಂಡು ಬಂದರು. ರಾಷ್ಟ್ರಪತಿಗಳು ಅತ್ತ ಹೋದಾಗ, ಇತ್ತ ಪುಟಿನ್ ಕೂಡ, ಆಕ್ಷೀ … ಆಕ್ಷೀ ಎನ್ನಲಾರಂಭಿಸಿದರು. ಸಾಮಾನ್ಯವಾಗಿ ಗಣ್ಯವ್ಯಕ್ತಿಗಳು ಭಾಗವಹಿಸಿದ ಔತಣಕೂಟದಲ್ಲಿ, ಇಂಥ ಖಾದ್ಯಗಳನ್ನು ಇಡುವುದಿಲ್ಲ. ರಾಷ್ಟ್ರಪತಿಗಳ ಜತೆಯಲ್ಲಿರುವ ಅಡುಗೆ ಭಟ್ಟರು ಕೂಡ ಈ ಎಲ್ಲಾ ಸಂಗತಿಗಳ ಬಗ್ಗೆ ನಿಗಾವಹಿಸಿರುತ್ತಾರೆ. ಸಾಕಷ್ಟು ಎಚ್ಚರಿಕೆ ವಹಿಸಿರುತ್ತಾರೆ. ಆದರೆ ಅಂದು ಅಚಾತುರ್ಯವಾಗಿತ್ತು.

error: Content is protected !!