Sunday, 27th November 2022

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ: ಗಣಪತಿ ಬಿ. ಭಟ್ ಬಂಧನ

ಶಿರಸಿ : ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ತನಿಖೆ ಇದೀಗ ಉತ್ತರ ಕನ್ನಡ ಜಿಲ್ಲೆಯ ವರೆಗೆ ಬಂದಿದ್ದು, ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇರೂರು ನಿವಾಸಿ ಗಣಪತಿ ಬಿ. ಭಟ್ ರನ್ನು ಬಂಧಿಸಲಾಗಿದೆ.

ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಟ್ರಾನ್ಸ್‌ಫರ್ ಹಾಗೂ ಇತರ ಡೀಲಿಂಗ್‌ ಗಳಲ್ಲಿ ಸಕ್ರಿಯವಾಗಿದ್ದ ಆರೋಪಿಯನ್ನು ಸೋಮವಾರ ರಾತ್ರಿ ಸಿಒಡಿ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಅಲ್ಲದೇ ಆರೋಪಿ ಗಣಪತಿ ಭಟ್ ಶಾಸಕರೊಬ್ಬರಿಗೆ ಬಹಳಷ್ಟು ಆತ್ಮೀಯನಾಗಿದ್ದ. ಅಕ್ರಮ ಚಟುವಟಿಕೆಯಿಂದಲೇ ಬಹಳಷ್ಟು ಆಸ್ತಿ ಸಂಪಾದಿಸಿದ್ದ ಎನ್ನಲಾಗಿದೆ. ನಿನ್ನೆ ಬೆಂಗಳೂರಿನಿಂದ ಸಿದ್ಧಾಪುರದ ಹೇರೂರಿಗೆ ಬಂದ ಸಿಐಡಿ ಅಧಿಕಾರಿಗಳು ಆರೋಪಿ ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳೀಯ ಠಾಣಾ ಪೊಲೀಸರಿಗೂ ಮಾಹಿತಿಯಿಲ್ಲದಂತೆ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ‌.

ಸ್ಥಳೀಯ ಠಾಣೆಗಳಿಗೆ ಪೊಲೀಸ್ ಸಿಬ್ಬಂದಿ ವರ್ಗಾವಣೆಯನ್ನೂ ಹಣಕ್ಕಾಗಿ ಆರೋಪಿ ಭಟ್ ಮಾಡುತ್ತಿದ್ದ ಎನ್ನಲಾಗಿದ್ದು, ನೇಮಕಾತಿಗಳಲ್ಲಿ ಈತ ಕೋಟಿ ಕೋಟಿ ಲೂಟಿ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.