Wednesday, 1st February 2023

ಮಾಟಗಾತಿಯರಿಂದ ಮನೋವೈದ್ಯದವರೆಗೆ

ಹಿಂತಿರುಗಿ ನೋಡಿದಾಗ

ದೇವರು ಮತ್ತು ದೆವ್ವದ ಪರಿಕಲ್ಪನೆ ಎಲ್ಲ ಕಾಲದ ಎಲ್ಲ ದೇಶಗಳ ಎಲ್ಲ ಸಂಸ್ಕೃತಿಯ ಜನರಲ್ಲೂ ಇದ್ದ ಹಾಗೂ ಇರುವ ನಂಬಿಕೆ.
ಮೆಸೊಪೊಟೋಮಿಯನ್ ಹಾಗೂ ಈಜಿಪ್ಷಿಯನ್ ಸಂಸ್ಕೃತಿಯಲ್ಲೂ ಮಾಟ, ಮಂತ್ರ, ಮಾಟಗಾತಿಯರ ಬಗ್ಗೆ ನಂಬಿಕೆಯಿತ್ತು. ಕ್ರಿ.ಪೂ.೧೮೦೦ರಲ್ಲಿ ರಚನೆಯಾದ ಹಮ್ಮುರಬಿಯ ಶಾಸನವು (ಕೋಡ್ ಆಫ್ ಹಮುರಬಿ) ಮಾಟದಲ್ಲಿ ತೊಡಗುವವರಿಗೆ ಉಗ್ರ ಶಿಕ್ಷೆ ಕೊಡುವುದರ ಬಗ್ಗೆ ವಿವರಣೆ ನೀಡುತ್ತದೆ.

ಪ್ರಾಚೀನ ಗ್ರೀಸ್ ದೇಶದಲ್ಲಿ ಲೆಮ್ನಾಸ್ ದ್ವೀಪವಾಸಿ ಥಿಯೋರಿಸ್ (ಮರಣ; ಕ್ರಿ.ಪೂ.೩೨೩) ಎನ್ನುವ ಮಹಿಳೆ. ಮಾಟ ಹಾಗೂ ಮಾರಕ ಔಷಧಗಳನ್ನು ಪ್ರಯೋಗಿಸುವುದರಲ್ಲಿ ಸಿದ್ಧಹಸ್ತಳು ಎಂಬ ಆರೋಪದ ಮೇಲೆ, ಆಕೆಯನ್ನು ಬಹಿರಂಗವಾಗಿ ವಿಚಾರಣೆಗೆ ಒಳಪಡಿಸಲಾಯಿತು. ಆಕೆಗೂ ಹಾಗೂ ಆಕೆಯ ಮಕ್ಕಳಿಗೂ ಮರಣ ದಂಡನೆ ವಿಧಿಸಿದರು.

ಬಹುಶಃ ಮಾಟಗಾತಿಯರಿಗೆ ಮರಣ ದಂಡನೆ ವಿಽಸಿದ ಜಗತ್ತಿನ ಮೊತ್ತ ಮೊದಲ ಲಭ್ಯ ದಾಖಲೆ ಇದು ಎಂದು ಅನಿಸುತ್ತದೆ. ಕ್ರಿ.ಪೂ.೩೩೧ರಲ್ಲಿ ೧೭೦ ಮಹಿಳೆಯರನ್ನು ಮಾಟಗಾತಿಯರೆಂದು ಮರಣದಂಡನೆಗೆ ಒಳ ಪಡಿಸಿದ್ದು, ಜಗತ್ತಿನ ಮೊದಲ ಮಾಟಗಾತಿಯರ ಸಾಮೂಹಿಕ ಮಾರಣ ಹೋಮವೆನಿಸಿದೆ. ಸೀಸರ್ ಅಗಸ್ಟಸ್ ಚಕ್ರವರ್ತಿ (ಕ್ರಿ.ಪೂ.೬೩-ಕ್ರಿ.ಶ.೧೪) ಮಾಟಕ್ಕೆ ಸಂಬಂಧಿಸಿದ ೨೦೦೦ ಪುಸ್ತಕಗಳನ್ನು ಬಹಿರಂಗವಾಗಿ ಸುಟ್ಟ (ಕ್ರಿ.ಪೂ.೩೧). ಟೈಬೀರಿಯಸ್ ಕ್ಲಾಡಿಯಸ್ (ಕ್ರಿ.ಪೂ.೧೦-ಕ್ರಿ.ಶ.೫೪), ೪೫ ಪುರುಷರು ಹಾಗೂ ೮೫ ಮಹಿಳೆಯರಿಗೆ ಮಾಟದಲ್ಲಿ ತೊಡಗಿದ್ದರೆಂಬ ಕಾರಣಕ್ಕೆ ಬಹಿರಂಗ ವಾಗಿ ಸಾವಿನ ಶಿಕ್ಷೆಯನ್ನು ನೀಡಿದ.

ಹಿಬ್ರೂ ಬೈಬಲ್, ಡ್ಯುಟೆರೋನಮಿಯ (ಐದನೆಯ ಗ್ರಂಥ) ೨೨:೧೮ ‘ನಿಮ್ಮ ಮಗ ಅಥವ ಮಗಳನ್ನು ಅಗ್ನಿ ಪರೀಕ್ಷೆಗೆ ಒಡ್ಡುತ್ತಾರೋ, ಭವಿಷ್ಯ ಹೇಳುವುದರಲ್ಲಿ ತೊಡಗುತ್ತಾರೋ, ಮಾಟ ಮಂತ್ರಗಳಲ್ಲಿ ತೊಡಗುತ್ತಾರೋ, ದೆವ್ವಗಳನ್ನು ಇಲ್ಲವೇ ಆತ್ಮದ ನೆರವನ್ನು ಪಡೆಯುತ್ತಾರೋ, ಅಂತಹವರನ್ನು ಕರ್ತನು ತಿರಸ್ಕರಿಸುತ್ತಾನೆ’ ಎನ್ನುತ್ತದೆ. ಎಕ್ಸೋಡಸ್ ೨೨:೧೮ ‘ಮಾಟಗಾತಿಯರನ್ನು ಬದುಕಲು ಬಿಡಬೇಡ’ ಎನ್ನುತ್ತದೆ. ಯಹೂದಿಗಳ ಎರಡನೆಯ ದೆವಸ್ಥಾನದಲ್ಲಿ ಅರ್ಚಕನಾಗಿದ್ದ ರಬ್ಬಿ ಸಿಮಿಯನ್ ಬೆನ್ ಶೆಟಚ್ (ಕ್ರಿ.ಪೂ.೧೪೦-೧೬೦) ೮೦ ಮಹಿಳೆಯರಿಗೆ ಮಾಟದಲ್ಲಿ ತೊಡಗಿದ್ದ ಆಪಾದನೆಯ ಮೇಲೆ ಒಂದೇ ದಿನ ಮರಣದಂಡನೆ ವಿಧಿಸಿದ್ದ.

ರೋಮ್ ಪತನದ ನಂತರ ಯೂರೋಪಿನ ಬೌದ್ಧಿಕ ಬೆಳವಣಿಗೆಯು ಅಂಧಕಾರದಲ್ಲಿ ಮುಳುಗಿತು. ಇದನ್ನು ‘ಕಗ್ಗತ್ತಲ
ಯುಗ’ ಎಂದು ಕರೆಯುವುದುಂಟು. ಮಧ್ಯಯುಗದ ಯೂರೋಪ್ ಹಲವು ಹತ್ತು ಸಮಸ್ಯೆಗಳ ಗೂಡಾಗಿತ್ತು. ಇಡೀ ಯೂರೋಪ್ ಚರ್ಚ್ ಮತ್ತು ಭೂಮಾಲೀಕರ ವಶದಲ್ಲಿತ್ತು. ಹೆಸರಿಗೆ ರಾಜನಿದ್ದರೂ, ಅವನು ಚರ್ಚಿನ ವಶವರ್ತಿಯಾಗಿದ್ದ. ಬಡವರು ಮತ್ತಷ್ಟು ಕಡು ಬಡವರಾಗುತ್ತಿದ್ದರು. ಸಾಮಾಜಿಕವಾಗಿ ಹೆಣ್ಣು ದ್ವಿತೀಯ ದರ್ಜೆಯ ಪ್ರಜೆಯಾಗಿದ್ದಳು. ಆಡಮ್ಮನ ಪಕ್ಕೆಲುಬಿನಿಂದ ರೂಪುಗೊಂಡ ಈವ್, ಅಂದರೆ ಹೆಣ್ಣು ಜಾತಿ ಎಂದಿಗೂ ತಮ್ಮ ಸರಿ ಸಮವಲ್ಲ ಎಂಬ ಧೋರಣೆಯು ಅವ್ಯಾಹತವಾಗಿತ್ತು. ಹಾಗಾಗಿ ಮಹಿಳೆಯ ಶೋಷಣೆ ಅವ್ಯಾಹತವಾಗಿ ನಡೆಯುತ್ತಿತ್ತು.

ಯೂರೋಪಿನ ದೇಶಗಳು ಕಾಲು ಕೆರೆದುಕೊಂಡು ಪರಸ್ಪರ ಯುದ್ಧದಲ್ಲಿ ತೊಡಗುವುದು ಸಾಮಾನ್ಯವಾಗಿತ್ತು. ಇದರ
ನೇರ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಿದರು. ೧೩೪೮-೧೩೫೦ರವರೆಗೆ ಯೂರೋಪನ್ನು ಕಾಡಿದ ಪ್ಲೇಗ್,
ಪ್ರಧಾನವಾಗಿ ಜನಸಾಮಾನ್ಯರನ್ನೇ ನಾಶಮಾಡಿತು. ೧೪೯೨-೧೪೯೩ರವರೆಗೆ ಸಿಫಿಲಿಸ್ ಎನ್ನುವ ಲೈಂಗಿಕ ರೋಗವು
ಯೂರೋಪಿಯನ್ನರ ಮಾನಸಿಕ ನೆಮ್ಮದಿ ನಾಶಮಾಡುವುದರ ಜತೆಗೆ ಕುಟುಂಬಗಳನ್ನು ಛಿದ್ರಗೊಳಿಸಿತು.

ಉತ್ತಮ ಆಹಾರ, ಶಿಕ್ಷಣ, ಸಾರ್ವಜನಿಕ ನೈರ್ಮಲ್ಯಗಳಂತಹ ಮೂಲ ಭೂತ ಅಗತ್ಯಗಳು ಯೂರೋಪಿನ ಬಡವರಿಗೆ ದೊರೆಯುತ್ತಿರಲಿಲ್ಲ. ಇದರ ಜತೆಗೆ ಶತಶತಮಾನಗಳಿಂದ ಆಳವಾಗಿ ಬೇರುಬಿಟ್ಟಿದ್ದ ಮೌಢ್ಯಗಳು ಜನರನ್ನು  ವಿಹ್ವಲಗೊಳಿಸು ತ್ತಿದ್ದವು. ಈ ಮೌಢ್ಯಾಚಾರಣೆಗಳಲ್ಲಿ ಮಾಟಗಾತಿಯರು ಪ್ರಧಾನವಾಗಿದ್ದರು. ೧೪೮೪ರಲ್ಲಿ ಮ್ಯಾಲಿಯಸ್ ಮೇಲಿಕರಮ್ (ಹ್ಯಾಮರ್ ಆಫ್ ವಿಚಸ್ = ಮಾಟಗಾತಿಯರ ಸುತ್ತಿಗೆ) ಎಂಬ ಪುಸ್ತಕವನ್ನು ಹೆನ್ರೀಚ್ ಕ್ರೇಮರ್ (೧೪೩೦-೧೫೦೫) ಮತ್ತು
ಜೇಕಬ್ ಸ್ಪ್ರೆಂಗರ್ (೧೪೩೬-೧೪೯೫) ಎನ್ನುವವರು ಬರೆದರು.

ಇದನ್ನು ಪೋಪ್ ಇನ್ನೋಸೆಂಟ್-೮ (೧೪೩೨- ೧೪೯೨) ಒಪ್ಪಿದರು. ಇದು ಮಾಟದ ಬಗ್ಗೆ ಅಧಿಕಾರಯುತವಾದ ಗ್ರಂಥವೆಂದು ಪ್ರಖ್ಯಾತವಾಯಿತು. ಬಹುಶಃ ಇಡೀ ಜಗತ್ತಿನಲ್ಲಿ ಮಾಟದ ಬಗ್ಗೆ ಇಷ್ಟು ವಿಸ್ತೃತವಾಗಿ ಹಾಗೂ ಆಳವಾಗಿ ರಚನೆಯಾದ ಮೊದಲ ಪುಸ್ತಕವಿದು. ಈ ಪುಸ್ತಕದ ಅನ್ವಯ, ದುಷ್ಟಶಕ್ತಿಗಳು ಹೆಣ್ಣುಮಕ್ಕಳನ್ನು ತಮ್ಮ ವಶಕ್ಕೆ ತೆಗೆದು ಕೊಳ್ಳುತ್ತವೆ. ಕ್ರಿಸ್ತನ ವಿರುದ್ಧ ತಾವು ನಡೆಸುವ ಮಹಾಯುದ್ಧದಲ್ಲಿ ಪಾಲುಗೊಳ್ಳಬೇಕೆಂದು ಅವರಿಂದ ಪ್ರಮಾಣ ಮಾಡಿಸಿಕೊಳ್ಳುತ್ತವೆ. ಈ ಹೆಣ್ಣುಮಕ್ಕಳು ದುಷ್ಟಶಕ್ತಿಗಳೊಡನೆ ಲೈಂಗಿಕ ಸಂಪರ್ಕವನ್ನು ಮಾಡಿ ಶೈತಾನರ ಮಕ್ಕಳನ್ನು ಹೆರಬೇಕು. ಮಕ್ಕಳನ್ನು ಅಪಹರಿಸಿ, ಶೈತಾನನ ಸೇನೆಯನ್ನು ಬಲಪಡಿಸಬೇಕು.

ನಿಯಮಿತವಾಗಿ ಮಾಟಗಾತಿಯರ ಸಮಾವೇಶ (ಸಬ್ಬತ್) ನಡೆಯುತ್ತದೆ. ದೂರದ ಸ್ಥಳದಲ್ಲಿ ನಡೆಯುವ ಸಮಾವೇಶಗಳಲ್ಲಿ
ಭಾಗವಹಿಸಲು, ಮಾಟಗಾತಿಯರ ಲೇಪನವನ್ನು ಬಳಿದುಕೊಂಡು ಕೋಲುಪೊರಕೆಯ ಮೇಲೆ ಕುಳಿತು ಹಾರಿಹೋಗ
ಬೇಕಾಗುತ್ತದೆ. ದುಷ್ಟಶಕ್ತಿಗಳು ಮಾಟಗಾತಿಯರಿಗೆ ವಿಶೇಷ ಶಕ್ತಿಯನ್ನು ನೀಡುತ್ತಿದ್ದವು. ಅವರು ಮತ್ತೊಬ್ಬರಿಗೆ ಶಾಪ
ಕೊಡಬಹುದಾಗಿತ್ತು. ಅನಾರೋಗ್ಯವನ್ನು ಉಂಟು ಮಾಡುವ ಶಕ್ತಿಯಿರುತ್ತಿತ್ತು. ಸುಖೀ ಕುಟುಂಬವನ್ನು ಒಡೆದು ಛಿದ್ರಗೊಳಿಸಬಹು ದಾಗಿತ್ತು. ಒಬ್ಬ ವ್ಯಕ್ತಿಗೆ ಶ್ರೇಯಸ್ಸು ದೊರೆಯದಂತೆ ಮಾಡ ಬಹುದಾಗಿತ್ತು.

ಹಾಗೆಯೇ ಹೊಲಗದ್ದೆಗಳಲ್ಲಿ ಬೆಳೆಯೇ ಬೆಳೆಯದಂತೆ ಮಾಡಬಲ್ಲವರಾಗಿದ್ದರು. ಇಂತಹ ಮಾಟಗಾತಿಯರನ್ನು ಹೇಗೆ ಗುರುತಿಸುವುದು, ಹೇಗೆ ವಶಕ್ಕೆ ತೆಗೆದುಕೊಳ್ಳುವುದು, ಹೇಗೆ ಬಹಿರಂಗ ವಿಚಾರಣೆಗೆ ಒಳಪಡಿಸುವುದು ಹಾಗೂ ಅವರನ್ನು ಹೇಗೆ ಬಹಿರಂಗವಾಗಿ ಚಿತ್ರಹಿಂಸೆಗೆ ಒಳಪಡಿಸಿ ಕೊಲ್ಲುವುದು ಇತ್ಯಾದಿ ಮಾಹಿತಿಯನ್ನೆಲ್ಲ ಈ ಗ್ರಂಥವು ಒದಗಿಸುತ್ತಿತ್ತು. ಯೂರೋಪಿನಲ್ಲಿ ಸುಮಾರು ೮೦ಸಾವಿರ ಬಹಿರಂಗ ವಿಚಾರಣೆಗಳು ನಡೆದು, ೩೫ಸಾವಿರ ಮಾಟಗಾತಿಯರನ್ನು ಕೊಂದ ಅಂಕಿ-ಅಂಶಗಳು ಲಭ್ಯವಿವೆ.

ಇವರಲ್ಲಿ ಸುಮಾರು ೩೦ಸಾವಿರ ಜನರ ಮರಣವು ಚರ್ಚ್ ಆಧಿಪತ್ಯದಲ್ಲಿದ್ದ ಜರ್ಮನಿ, ನೆದರ್ಲ್ಯಾಂಡ್ಸ್, ಸ್ವಿಜ಼ರ್ಲ್ಯಾಂಡ್, ಲೊರೈನ್, ಆಸ್ಟ್ರಿಯ, ಜ಼ೆಕ್ ದೇಶಗಳಲ್ಲಿ ನಡೆಯಿತೆಂಬುದು ಗಮನಾರ್ಹ ವಿಚಾರ. ಯೂರೋಪಿನ ಮಧ್ಯಯುಗದ ಈ ಪ್ರಕ್ಷುಬ್ಧ ಸ್ಥಿತಿಯಲ್ಲಿ ಮೌಢ್ಯವನ್ನು ಅನಾವರಣ ಮಾಡಿ, ಮಾಟಗಾತಿಯರ ಮಾರಣಹೋಮಕ್ಕೆ ಅಂತ್ಯವನ್ನು ಹಾಡಿ, ಮನೋವೈದ್ಯಕ್ಕೆ
ಭದ್ರ ಬುನಾದಿ ಹಾಕಿದವನು ಜೊಹಾನ್ ವೇಯರ್ (೧೫೧೫-೧೫೮೮) ಎಂಬ ಡಚ್ ವೈದ್ಯ.

ಈತನು ಮಾಟಗಾತಿಯರ ಬಹಿರಂಗ ವಿಚಾರಣೆ ಹಾಗೂ ಮರಣದಂಡನೆಯನ್ನು ಪ್ರತಿಭಟಿಸಿ, ಮಾಟ ಹೇಗೆ ಅವೈಜ್ಞಾನಿಕ ಎನ್ನುವುದನ್ನು  ನಿರೂಪಿಸಿ, ಮಾಟಗಾತಿಯರ ವಿಚಾರಣೆ ಹಾಗೂ ಮರಣದಂಡನೆ ನೀಡುವುದನ್ನು ನಿಷೇಧಿಸಬೇಕಾದ ಅಗತ್ಯವನ್ನು ಕುರಿತು ‘ಆನ್ ದಿ ಇಲ್ಯೂಶನ್ಸ್ ಆಫ್ ಡೆಮನ್ಸ್ ಅಂಡ್ ಆನ್ ಸ್ಪೆಲ್ಸ್ ಅಂಡ್ ಪಾಯ್ಸನ್ಸ್ (ದುಷ್ಟಶಕ್ತಿಗಳ, ಮಾಟ ಮಂತ್ರಗಳ ಹಾಗೂ ವಿಷಪ್ರಯೋಗಗಳ ಭ್ರಮೆ)’ ಎಂಬ ಪುಸ್ತಕವನ್ನು ೧೫೬೩ರಲ್ಲಿ ಹಾಗೂ ‘ಆನ್ ವಿಚಸ್ (ಮಾಟಗಾತಿಯರ
ಬಗ್ಗೆ)’ ಎನ್ನುವ ಪುಸ್ತಕವನ್ನು ೧೫೭೭ರಲ್ಲಿ ಪ್ರಕಟಿಸಿದ.

ಮಾಟಗಾತಿಯರ ರಕ್ಷಣೆಗೆ ನಿಂತ. ಈತನ ನಿರಂತರ ಹೋರಾಟವು ಬಹುಪಾಲು ಫಲ ಕೊಟ್ಟಿತು. ಯೂರೋಪಿನಲ್ಲಿ
ಮಾಟಗಾತಿಯರ ಬಹಿರಂಗ ವಿಚಾರಣೆ ಹಾಗೂ ಮರಣದಂಡನೆಯು ಕ್ರಮೇಣ ಕಡಿಮೆಯಾಯಿತು. ಜೊಹಾನ್ ವೇಯರ್, ಮಾಟಗಾತಿಯರ ಸಮಸ್ಯೆಯನ್ನು ಮನೋವೈದ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸಿದ ಮೊದಲಿಗ. ಆತ ‘ಮ್ಯಾಲಿಯಸ್ ಮೇಲಿಕರಮ್’ ಪುಸ್ತಕವನ್ನು ಆಳವಾಗಿ ಅಧ್ಯಯನ ಮಾಡಿದ. ಆ ಪುಸ್ತಕದಲ್ಲಿದ್ದ ಅವೈಜ್ಞಾನಿಕ ಅಂಶಗಳನ್ನು ಒಂದೊಂದಾಗಿ ಪ್ರಸ್ತಾಪಿಸಿ, ಅವುಗಳಲ್ಲಿ ಯಾವುದೇ ಹುರುಳಿಲ್ಲ ಎನ್ನುವುದನ್ನು ವಿವರಿಸಿದ.

ಶೈತಾನನು ಮುದುಕಿಯರನ್ನು ಮರಳುಗೊಳಿಸಿ, ಅವರನ್ನು ದುಷ್ಟಶಕ್ತಿಗಳ ನೆರವಿನಿಂದ ಗರ್ಭವತಿಯರನ್ನಾಗಿಸಿ, ಶೈತಾನನ
ಸೇನೆ ಕಟ್ಟುವ ಕಲ್ಪನೆಯನ್ನು ವಿಡಂಬಿಸಿದ. ಇದು ಅಸಾಧ್ಯವೆಂದ. ಮಾಟಗಾತಿಯರು ಲೇಪನವನ್ನು ಹಚ್ಚಿಕೊಂಡು
ಕೋಲುಪೊರಕೆಗಳ ಮೇಲೆ ಕುಳಿತು ಹಾರುತ್ತ ‘ಸಬ್ಬತ್’ನಲ್ಲಿ ಭಾಗವಹಿಸುತ್ತಾರೆಂಬುದು ಕಟ್ಟುಕಥೆಯೆಂದ. ಮಾಟಗಾತಿ
ಯರು ಎಂಬ ಆರೋಪಕ್ಕೆ ಒಳಗಾಗಿ ತಾವು ಮಾಡದೇ ಇರುವ ತಪ್ಪಿಗಾಗಿ ಶಿಕ್ಷೆ ಅನುಭವಿಸುವುದು ಕಾನೂನುಬಾಹೀರ
ಎಂದು ವಾದಿಸಿದ. ಚರ್ಚ್ ನಡೆಸುವ ವಿಚಾರಣೆ ಎಂಬ ಕ್ರೌರ್ಯವನ್ನು ಕಟುವಾಗಿ ಟೀಕಿಸಿದ.

ಕೆಲವರು ಜೊಹಾನ್ ವೇಯರ್‌ನನ್ನು ‘ಆಧುನಿಕ ಮನೋವೈದ್ಯದ ಪಿತಾಮಹ’ ಎಂದು ಕರೆದಿರುವುದುಂಟು. ಏಕೆಂದರೆ
ಮನೋವೈದ್ಯದ ಇತಿಹಾಸದಲ್ಲಿ ಜೊಹಾನ್ ವೇಯರ್, ಮೊದಲ ಬಾರಿಗೆ ಮಾನಸಿಕ ಬೇನೆ / ಮನೋರೋಗ ಎಂಬ
ಅರ್ಥದ ‘ಮೆಂಟಲಿ ಇಲ್’ ಅಥವಾ ‘ಮೆಲಾಂಕಲಿ’ ಎಂಬ ಪದವನ್ನು ಪ್ರಯೋಗಿಸಿದ. ಶರೀರಕ್ಕೆ ಹೇಗೆ ನಾನಾ ರೋಗಗಳು ಬರುತ್ತವೆಯೋ, ಹಾಗೆಯೇ ಮನಸ್ಸಿಗೂ ರೋಗಗಳು ಬರುತ್ತವೆ ಎನ್ನುವ ಪರಿಕಲ್ಪನೆಯೇ ಅಂದಿಗೆ ಹೊಸತಾಗಿತ್ತು. ಮನೋವಿಕಲ್ಪಕ್ಕೆ ತುತ್ತಾದ ಮಹಿಳೆಯರು, ತಾವು ಶೈತಾನನ ಪ್ರಭಾವಕ್ಕೆ ತುತ್ತಾಗಿದ್ದೇವೆ, ಶೈತಾನನು ತಮ್ಮಿಂದ ಮಾಡಬಾರದ ಕೆಲಸಗಳನ್ನು ಮಾಡಿಸುತ್ತಿದ್ದಾನೆ,

ಅವನು ಹೇಳಿದಂತೆ ನಾವು ಕೇಳುತ್ತಿದ್ದೇವೆ ಎಂದು ಭ್ರಮಾಧೀನರಾಗುವ ಸಾಧ್ಯತೆಯನ್ನು ತೋರಿದ. ಮಾನಸಿಕ
ಅಸ್ವಸ್ಥೆಗೆ ಒಳಗಾದವರು ಹೇಳುವ ಮಾತಿಗೆ ಹಾಗೂ ಮಾಡುವ ಕೃತ್ಯಕ್ಕೆ ಅವರು ಹೊಣೆಯಲ್ಲವೆಂದ. ಭ್ರಮಾಸ್ಥಿತಿ ಯಲ್ಲಿ ‘ಹೌದು, ನಾನು ಮಾಟಗಾತಿ’ ಎಂದು ಒಪ್ಪಿಕೊಂಡರೂ, ಅವರನ್ನು ಶಿಕ್ಷಿಸುವಂತಿಲ್ಲ ಎಂದ. ವೇಯರ್, ಕ್ರೈಸ್ತ ಮಠಗಳಲ್ಲಿ ನಡೆಯುತ್ತಿದ್ದ ಸಾಮೂಹಿಕ ಉನ್ಮಾದದ (ಮಾಸ್ ಹಿಸ್ಟೀರಿಯ) ಬಗ್ಗೆ ಪ್ರಸ್ತಾಪಿಸಿದ. ಗುಂಪಿನಲ್ಲಿ ಒಬ್ಬರ ವರ್ತನೆಯನ್ನು ಇತರರು ಅನುಸರಿಸುವ ಸಾಧ್ಯತೆಯಿದೆ ಎಂದ. ವಾಸ್ತವದಲ್ಲಿ ಅವರಿಗೆ ಬೇಕಾದದ್ದು ವೈದ್ಯ ಚಿಕಿತ್ಸೆಯೇ ಹೊರತು ದಂಡನೆಯಲ್ಲವೆಂದ.

ಮಾಟಗಾತಿಯರು ಎಂದು ಆರೋಪಕ್ಕೆ ಒಳಗಾದವರನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿ, ಲಭ್ಯ ಮಾಹಿತಿ ಬರೆಯುವ ನಿಖರ ವಿಧಾನವನ್ನು ಜಾರಿಗೆ ತಂದ. ಮೊದಲು ಪ್ರಕರಣದ ಸಾರಾಂಶವನ್ನು ಸಂಕ್ಷಿಪ್ತವಾಗಿ ಬರೆದ. ಆಕೆ ಯನ್ನು ದೈಹಿಕವಾಗಿ ಪರೀಕ್ಷಿಸಿದ. ತನ್ನ ಅನಿಸಿಕೆಗಳನ್ನು ದಾಖಲಿಸಿದ. ಅವರಿಗೆ ಸೂಕ್ತ ಔಷಧಗಳ ಸೇವನೆಯನ್ನು ಸೂಚಿಸಿದ. ಕೆಲವು ಭೌತ ಚಿಕಿತ್ಸೆಯನ್ನು ಸಲಹೆ ಮಾಡಿದ. ಮನಸ್ಸಿಗೆ ಧೈರ್ಯವನ್ನು ಹೇಳಿ, ಕೆಲವು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದ. ಕ್ರೈಸ್ತಮಠಗಳಲ್ಲಿ ನಡೆಯುತ್ತಿದ್ದ ಸಾಮೂಹಿಕ ಉನ್ಮಾದದ ಪ್ರಕರಣದಲ್ಲಿ, ಈ ಸಮಸ್ಯೆಗೆ ತುತ್ತಾಗಿರುವವನ್ನು ಗುರುತಿಸಿ, ಕೂಡಲೇ ಅವರನ್ನು ಪ್ರತ್ಯೇಕಿಸಿ, ಅವರಿಗೆ ಪ್ರತ್ಯೇಕ ವಸತಿಯನ್ನು ಏರ್ಪಡಿಸುವಂತೆ ಸೂಚಿಸಿದ.

ಜೊಹಾನ್ ವೇಯರ್ ಆರಂಭಿಸಿದ ಮಾಟಗಾತಿಯರ ರಕ್ಷಣಾ ಆಂದೋಳನವು ಬಹುಪಾಲು ಯಶಸ್ಸನ್ನು ಗಳಿಸಿತು.
ಆದರೆ ಮಾಟಗಾತಿಯರಿದ್ದಾರೆ, ಅವರು ಮಾಟವನ್ನು ಪ್ರಯೋಗಿಸುತ್ತಾರೆ, ಮಾಟದ ಕಾರಣ ನಾವು ಅನಾರೋಗ್ಯ
ಪೀಡಿತರಾಗುತ್ತೇವೆ, ಸಾಯುತ್ತೇವೆ, ಮಾಟಗಾತಿಯರು ಸಮಾಜಕ್ಕೆ ಅಪಾಯಕಾರೀ ದುಷ್ಟಶಕ್ತಿಗಳು, ಅವರನ್ನು
ಕೊಲ್ಲಬೇಕು ಎನ್ನುವ ಭಾವ ಪೂರ್ಣ ಹೋಗಲಿಲ್ಲ. ಅದು ಇಂದಿಗೂ ಜೀವಂತವಾಗಿರುವುದು ಒಂದು ದೊಡ್ಡ ವಿಪರ್ಯಾಸ.

error: Content is protected !!