Tuesday, 10th December 2024

ಕರ್ಣನ ಸಾಮರ್ಥ್ಯವನ್ನು ಹೊಗಳಿದ ಕೃಷ್ಣ

ಮಹಾಭಾರತದ ಕಥೆಯ ಪ್ರಕಾರ, ಶ್ರೀ ಕೃಷ್ಣನು ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾದನು. ಅದೇ ಸಮಯದಲ್ಲಿ, ಅರ್ಜುನನ ರಥದ ಮೇಲೆ ಜೋಡಿಸಲಾದ ಧ್ವಜದ ಮೇಲೆ ಹನುಮಂತನು ತನ್ನ ಸೂಕ್ಷ್ಮ ರೂಪದಲ್ಲಿ ಕುಳಿತಿದ್ದನು. ತನ್ನ ಪ್ರಭು ರಾಮನ ಜತೆಯಲ್ಲಿ ಸದಾ ಇರುತ್ತಿದ್ದ
ಹನುಮಂತನು ದ್ವಾಪರ ಯುಗದಲ್ಲೂ ಶ್ರೀರಾಮನ ಅವತಾರವಾದ ಶ್ರೀಕೃಷ್ಣನೊಂದಿಗೆ ಯುದ್ಧ ಭೂಮಿಯಲ್ಲಿ ಇದ್ದನು.

ಕರ್ಣ ಮತ್ತು ಅರ್ಜುನ ಇಬ್ಬರೂ ಸಹೋದರರು, ಇಬ್ಬರೂ ಒಂದೇ ತಾಯಿಯ ಮಕ್ಕಳು. ಆದರೆ ಇಬ್ಬರೂ ಬೇರೆ ಬೇರೆ ಕಡೆಯಿಂದ ಗುಂಪುಗಳಿಗಾಗಿ ಹೊಡೆದಾಡುತ್ತಿದ್ದರು. ಮಹಾಭಾರತದ ಯುದ್ಧವು ತನ್ನ ನಿರ್ಣಾಯಕ ತಿರುವಿನತ್ತ ಸಾಗುತ್ತಿತ್ತು. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅನೇಕ ಯೋಧರು
ಹುತಾತ್ಮರಾಗಿದ್ದರು. ಕರ್ಣನನ್ನು ಅರ್ಜುನನಂತೆ ಮಹಾನ್ ಯೋಧ ಎಂದು ಪರಿಗಣಿಸಲಾಗಿತ್ತು. ಇಬ್ಬರೂ ತಮ್ಮ ಶಕ್ತಿಶಾಲಿ ಆಯುಧಗಳಿಂದ ಪರಸ್ಪರ
ಒಬ್ಬರ ಮೇಲೆ ಒಬ್ಬರು ದಾಳಿ ಮಾಡುತ್ತಿದ್ದರು.

ಅರ್ಜುನನ ಬಳಿ ಗಾಂಢೀವ ಎಂಬ ಬಿಲ್ಲಿದ್ದರೆ, ಕರ್ಣನ ಬಳಿ ವಿಜಯ ಎಂಬ ಬಿಲ್ಲಿತ್ತು. ಅರ್ಜುನ ಮತ್ತು ಕರ್ಣ ಪರಸ್ಪರ ಬಾಣಗಳ ಸುರಿಮಳೆಗೈದರು. ಅರ್ಜುನನು ಕರ್ಣನ ಕಡೆಗೆ ಬಾಣಗಳನ್ನು ಹೊಡೆಯುತ್ತಿದ್ದಾಗ ಅವನ ರಥವು ೨೫-೩೦ ಹೆಜ್ಜೆ ಹಿಂದಕ್ಕೆ ಸರಿಯುತ್ತಿತ್ತು. ಅದೇ ಸಮಯದಲ್ಲಿ ಕರ್ಣನ ಬಾಣಗಳ ದಾಳಿಯಿಂದ ಅರ್ಜುನನ ರಥವು ಕೇವಲ ೨-೩ ಹೆಜ್ಜೆ ಹಿಂದಕ್ಕೆ ಚಲಿಸುತ್ತಿತ್ತು. ಅರ್ಜುನನ ರಥವು ಹಿಂದೆ ಸರಿದಾಗಲೆ ಶ್ರೀಕೃಷ್ಣನ ಮುಖದಲ್ಲಿ ನಗು ಮೂಡುತ್ತಿತ್ತು ಮತ್ತು ದರ್ಪದಿಂದ ಕರ್ಣನನ್ನು ಹೊಗಳುತ್ತಿದ್ದನು. ಇದನ್ನು ನೋಡಿದ ಅರ್ಜುನನಿಗೆ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಲಾಗಲಿಲ್ಲ ಮತ್ತು ಕರ್ಣನನ್ನು ಹೊಗಳಲು ಕಾರಣವನ್ನು ಕೇಳಿದನು.

ಅರ್ಜುನ ಶ್ರೀಕೃಷ್ಣನನ್ನು ಪ್ರಶ್ನಿಸಿದಾಗ, ಶ್ರೀಕೃಷ್ಣನು ಮುಗುಳ್ನಕ್ಕು ಹೇಳಿದನು – ‘ಓ ಪಾರ್ಥ! ನಾನೇ ನಿನ್ನ ಸಾರಥಿ. ಈ ರಥದ ಧ್ವಜದ ಮೇಲೆ ಹನುಮಂತನು ಕುಳಿತಿದ್ದಾನೆ. ಚಕ್ರಗಳ ಮೇಲೆ ಶೇಷನಾಗ ಅಂದರೆ ನಮ್ಮ ಅಣ್ಣ ಬಲರಾಮನೂ ಇದ್ದಾನೆ. ನೀನು ಎಷ್ಟು ದೊಡ್ಡ ಬಿಲ್ಲುಗಾರ, ನಿನ್ನ ಶೌರ್ಯದೊಂದಿಗೆ ಈ ಎಲ್ಲ ಶಕ್ತಿಗಳ ಒಗ್ಗೂಡುವಿಕೆಯಿದ್ದರೂ, ಕರ್ಣನು ತನ್ನ ಆಕ್ರಮಣದಿಂದ ನಿನ್ನ ರಥವನ್ನು ೨-೩ ಹೆಜ್ಜೆ ಹಿಂದಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಇದರಿಂದ ನಾವು ಕರ್ಣ ಎಷ್ಟು ಬಲಶಾಲಿಯಾಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’. ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿದ ಅರ್ಜುನನಿಗೆ ಕರ್ಣನಂತಹ ಯೋಧನ ಶಕ್ತಿಯ ಬಗ್ಗೆ ಅರಿವು ಮೂಡಿತು. ಕರ್ಣನು ಅತ್ಯಂತ ಶಕ್ತಿಶಾಲಿಯಾಗಿದ್ದನು ಆದರೆ ಯುದ್ಧ ನೀತಿಗಳನ್ನು ಮುರಿಯುವ ಹಕ್ಕು ಅವನಿಗೆ ಇರಲಿಲ್ಲ. ಕರ್ಣನು ಅರ್ಜುನನ ಮೇಲೆ ನಿರಂತರವಾಗಿ ಆಕ್ರಮಣ ಮಾಡಿದರೂ ಅರ್ಜುನನಿಗೆ ಯಾವುದೇ ಹಾನಿ ಮಾಡಲು ಸಾಧ್ಯವಾಗಲಿಲ್ಲ ಎಂದು ಕಡು ಕೋಪದಿಂದ ಒಂದೇ ಬಾರಿ ಅನೇಕ ಬಾಣಗಳನ್ನು ಪ್ರಯೋಗಿಸಿದನು. ಬಾಣಗಳ ಸಂಖ್ಯೆ ಎಷ್ಟು ಹೆಚ್ಚಾಗಿತ್ತೆಂದರೆ ಅವುಗಳಲ್ಲಿ ಕೆಲವು ಶ್ರೀಕೃಷ್ಣನನ್ನೂ ಹೊಡೆಯಲಾರಂಭಿಸಿತು. ಕರ್ಣನ ಒಂದು ಬಾಣವು ಶ್ರೀಕೃಷ್ಣನ ಎದೆಗೆ ಮತ್ತು ಅವನ ರಕ್ಷಣಾ ಕವಚಕ್ಕೆ ಬಡಿದಿರುವುದನ್ನು ಕಂಡು ಹನುಮಂತನು ಕರ್ಣನ ಮೇಲೆ ಕೋಪಗೊಳ್ಳುತ್ತಾನೆ.

ತಕ್ಷಣವೇ ಹನುಮಂತನು ರಥದ ಮೇಲಿನ ಧ್ವಜದಿಂದ ಕೆಳಗೆ ಜಿಗಿದು ತನ್ನ ರೂಪವನ್ನು ಪ್ರಸ್ತುತಪಡಿಸಿದನು. ಕೋಪಗೊಂಡ ಹನುಮಂತನನ್ನು ನೋಡಿದ ಕರ್ಣನು ಧನುಸ್ಸನ್ನು ರಥದ ಮೇಲೆ ಇಟ್ಟು ಕೈಮುಗಿದು ಕ್ಷಮೆಯಾಚಿಸಿದನು. ಶ್ರೀಕೃಷ್ಣನು ಹನುಮಂತನು ಕೋಪದಲ್ಲಿದ್ದುದ್ದನ್ನು ಕಂಡು
ತನ್ನತ್ತ ತಿರುಗಿ ನೋಡುವಂತೆ ಹೇಳುತ್ತಾನೆ. ನಂತರ ಹನುಮಂತನು ಕೋಪದಿಂದಲೇ ಶ್ರೀಕೃಷ್ಣನನ್ನು ನೋಡುತ್ತಾನೆ. ತನ್ನ ಪ್ರಭುವನ್ನು  ನೋಡು ತ್ತಿದ್ದಂತೆ ಹನುಮಂತನ ಕೋಪ ಕರಗಿ ಮತ್ತೆ ಹಿಂದಿರುಗಿ ಬಂದು ರಥವನ್ನೇರಿ ಕುಳಿತುಕೊಳ್ಳುತ್ತಾನೆ.

ಹೀಗೆ ಕರ್ಣನು ಮಹಾಬಲಶಾಲಿಯಾಗಿದ್ದರೂ ಕೂಡ ಅವನು ಕೌರವರ ಪರ ಇದ್ದುದರಿಂದ ಅವನ ಶೌರ್ಯ ಯಾವ ಪ್ರಯೋಜನಕ್ಕೂ ಬರಲಿಲ್ಲ.
ನಮಗಿರುವ ಸಾಮರ್ಥ್ಯಗಳು ನಾವು ಯಾವುದಕ್ಕೆ ಅದನ್ನು ಉಪಯೋಗಿಸುತ್ತೇವೆ ಎನ್ನುವುದರ ಮೇಲೆ ನಿರ್ಧಾರಿತವಾಗುತ್ತದೆ.