Thursday, 3rd October 2024

Roopa Gururaj Column: ಅಂಬಿಗ ಹೇಳಿದ ಬದುಕಿನ ಯಶಸ್ಸಿನ ಸೂತ್ರಗಳು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ನಾಲ್ಕಾರು ಯುವಕರು ತಮ್ಮ ಜೀವನದಲ್ಲಿ ಯಶಸ್ಸು- ಶಾಂತಿ- ಸಮಾಧಾನ ಪಡೆಯುವ ಮಾರ್ಗ ಹುಡುಕುತ್ತಾ ಒಂದಿಬ್ಬರನ್ನು ಕೇಳಿದಾಗ ಅವರು ಊರಿನ ನದಿಯಾಚೆ ಮಹಾಜ್ಞಾನಿಯಾದ ಒಬ್ಬ ಸಾಧು ಇದ್ದಾರೆ ಅವರನ್ನು ಕೇಳಿದರೆ ಏನಾದರೂ ತಿಳಿಯಬಹುದು ಎಂದರು. ಹಾಗೆ ಆ ನಾಲ್ಕು ಯುವಕರು ನದಿ ದಡಕ್ಕೆ ಬಂದರು. ಅಬ್ಬ
ವೃದ್ಧ ಅಂಬಿಗ ಮರದ ಕೆಳಗೆ ಕುಳಿತು ಆನಂದದಿಂದ ಹಾಡು ಗುನುಗುನಿಸುತ್ತಿದ್ದನು. ಯುವಕರು ಬಂದು
ನಮ್ಮನ್ನು ಆಚೆ ದಡಕ್ಕೆ ಬಿಡುತ್ತೀರಾ ಎಂದು ಕೇಳಿದರು.

ವೃದ್ಧ ಆ ಯುವಕರನ್ನು ದೋಣಿಯಲ್ಲಿ ಕೂರಿಸಿಕೊಂಡು ಆಚೆ ದಡದಲ್ಲಿ ಬಿಟ್ಟು, ಅವರಿಗೆ ಹೇಳಿದ ನೀವು ಹೋಗಿ ಬನ್ನಿ ಅಲ್ಲಿಯ ತನಕ ಇಲ್ಲಿಯೇ ಇರುತ್ತೇನೆ ಎಂದು ಒಂದು ಮರದ ಕೆಳಗೆ ಕುಳಿತು ಮತ್ತೆ ಆನಂದದಿಂದ ತನ್ನಷ್ಟಕ್ಕೆ ತಾನು ಹಾಡು ಹೇಳಿಕೊಳ್ಳತೊಡಗಿದ.

ಈ ನಾಲ್ಕು ಯುವಕರು ಒಂದಷ್ಟು ದೂರ ನಡೆದ ಮೇಲೆ ಜ್ಞಾನಿಯಾದ ಸಾಧುಗಳ ಭೇಟಿಯಾಯಿತು. ಅವರಿಗೆ ನಮಸ್ಕರಿಸಿ ಸ್ವಾಮಿ ‘ನಮ್ಮ ಜೀವನದಲ್ಲಿ ಯಶಸ್ಸು ಶಾಂತಿ, ಸಮಾಧಾನ ಇವೆಲ್ಲ ಗಳಿಸಬೇಕು ಅದಕ್ಕಾಗಿ ಏನು
ಮಾಡಬೇಕು ದಯವಿಟ್ಟು ತಿಳಿಸಿ ಎಂದು ಕೇಳಿದರು. ಸಾಧುಗಳು ಹೇಳಿದರು, ಮಕ್ಕಳೇ ಇದನ್ನು ತಿಳಿಯಲು ಇಷ್ಟು ದೂರ ಬರಬೇಕಾಗಿಲ್ಲ. ನೀವು ದೋಣಿಯಲ್ಲಿ ಬಂದಿರಲ್ಲ, ದೋಣಿ ನಡೆಸುವ ವೃದ್ಧ ಅಂಬಿಗನನ್ನೇ ಕೇಳಿ ಹೇಳು ತ್ತಾನೆ’ ಎಂದು ಕಳಿಸಿದರು.

ಸಾಧುಗಳು ಹೇಳಿದ್ದು ಕೇಳಿ ಯುವಕರಿಗೆ ಆಶ್ಚರ್ಯವಾಯಿತು, ಇದೇನು ಅಕ್ಷರ ಜ್ಞಾನವಿಲ್ಲದ ಮುದುಕನಿಂದ ನಮಗೆ ಯಾವ ಉಪದೇಶ ಸಿಗಬಹುದು ಎಂದು ಯೋಚಿಸುತ್ತಲೇ ದಡದ ಹತ್ತಿರ ಬಂದರು. ಮುದುಕ ಅವನ
ಪಾಡಿಗೆ ಹಾಡುತ್ತಾ ಕುಳಿತಿದ್ದ. ಯುವಕರು ಸಾಧುಗಳು ಹೇಳಿದಂತೆ ಆ ಮುದಕನಲ್ಲಿ ಕೇಳಿದರು. ವೃದ್ಧ ಹೇಳಿದ,
‘ಅಯ್ಯೋ ಅಷ್ಟು ದೊಡ್ಡ ವಿಚಾರಗಳು ನನಗೆ ತಿಳಿಯದು. ದೋಣಿ ನಡೆಸುವುದು ಮಾತ್ರ ನನಗೆ ಗೊತ್ತು. ಈ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ. ಅದರಲ್ಲಿ ಎಷ್ಟು ಸಂಪಾದನೆ ಸಿಗುತ್ತದೊ ಅಷ್ಟಕ್ಕೆ ತೃಪ್ತಿ ಹೊಂದಿದ್ದೇನೆ. ನನ್ನ ದೋಣಿ ಈ ದಡದಲ್ಲಿದ್ದಾಗ ಆ ದಡದ ಯೋಚನೆ, ಆ ದಡದಲ್ಲಿದ್ದಾಗ ಈ ದಡದ ಯೋಚನೆ ಮಾಡುವುದಿಲ್ಲ. ಕೆಲಸ ಇದ್ದಾಗ ಮಾಡುತ್ತೇನೆ ಇಲ್ಲದಿದ್ದಾಗ ಬೇರೆ ಏನಾದರೂ ಚಿಂತನೆ ಮಾಡುತ್ತೇನೆ. ಹಾಗೆ ನನ್ನ
ಪಾಡಿಗೆ ಹಾಡಿಕೊಳ್ಳುವುದು ಇಷ್ಟೇ ನನಗೆ ಗೊತ್ತಿರುವುದು’ ಎಂದು ಹೇಳಿದನು.

ವಿದ್ಯಾವಂತ- ಬುದ್ಧಿವಂತ ಯುವಕರಿಗೆ ಮುದುಕ ಹೇಳಿದ ಮಾತು ಅರ್ಥವಾಯಿತು. ಅವನಿಗೆ ಹಣ ಕೊಟ್ಟು ಕೃತಜ್ಞತೆ ಸಲ್ಲಿಸಿ ಹೊರಡು ಹೋದರು. ಜೀವನದಲ್ಲಿ ಯಶಸ್ಸು ಎನ್ನುವುದು ಪ್ರತಿಯೊಬ್ಬರಿಗೂ ಭಿನ್ನವಾದರೂ, ಕೊನೆಗಲ್ಲಿ ಬೇಕಾಗಿರುವುದು ನೆಮ್ಮದಿ, ಸಂತೋಷ, ತೃಪ್ತಿಕೊಡುವ ಭಾವಗಳೇ. ಆದ್ದರಿಂದ ಇದನ್ನು ದಿನನಿತ್ಯ ನಾವು ಮಾಡುವ ಕೆಲಸಗಳಲ್ಲಿ ಹುಡುಕುತ್ತಾ ಸಂತೃಪ್ತಿ ಸಮಾಧಾನವನ್ನು ಅಲ್ಲಲ್ಲಿ ಕಂಡುಕೊಳ್ಳಲು ಪ್ರಾರಂಭಿಸಿದರೆ ಬದುಕುನುದ್ದಕ್ಕೂ ಅದು ನಮ್ಮ ಜೊತೆಯಾಗೇ ಇರುತ್ತದೆ.

ಯಶಸ್ಸು ಎನ್ನುವುದು ಯಾವುದು ಬೆಟ್ಟದ ತುದಿಯಲ್ಲಿ ನೋಡಲು ಸಿಗುವ ಸೂರ್ಯೋದಯದಂತಲ್ಲ, ದಿನವೂ ಕಲ್ಲು ಮುಳ್ಳಿನ ಹಾಗೆ ಮಳೆ, ಚಳಿಗಾಳಿ ಏನೇ ಇರಲಿ ಬಿಡದೆ ಬೆಟ್ಟದ ತುದಿಗೆ ತಲುಪುವ ಛಲದಿಂದ. ಇಲ್ಲಿ ತಲುಪುವ ಗಮ್ಯ ಎಷ್ಟು ಮುಖ್ಯವಾಗುತ್ತದೋ, ಆ ದಾರಿಯಲ್ಲಿ ನಾವು ನಡೆದುಕೊಳ್ಳುವ ಬಗೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಉದ್ವೇಗಗೊಲ್ಲದೆ, ಅತಿಯಾಗಿ ಸಂಭ್ರಮಿಸದೆ, ಚಿನ್ನತೆಗೆ ಜಾರದೆ ಬದುಕಿನ ಪ್ರತಿಘಟ್ಟವನ್ನೂ ಸಮಚಿತ್ತದಿಂದ
ಸ್ವೀಕರಿಸುತ್ತಾ ಪ್ರಾಮಾಣಿಕವಾಗಿ ಪ್ರಯತ್ನ ಪಡುವುದರಲ್ಲಿ ಜೀವನದ ಸಾರ್ಥಕತೆ ಇದೆ. ಇಂತಹ ಸಾರ್ಥಕ ಬದುಕು ನಿಮ್ಮದಾಗಲಿ.

ಇದನ್ನೂ ಓದಿ: Roopa Gururaj Column: ಜೀವನಯಾತ್ರೆ ಮುಗಿಸಿದವರನ್ನು ಹೋಗಲು ಬಿಡಿ