Thursday, 12th December 2024

Roopa Gururaj Column: ಕಷ್ಟಪಡುವ ಮಕ್ಕಳ ಬಗ್ಗೆ ಹೆಚ್ಚು ಪ್ರೀತಿ ತೋರುವ ಹೆತ್ತವರು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಮ್ಮೆ ಧೃತರಾಷ್ಟನ ಹತ್ತಿರ ವೇದವ್ಯಾಸರು ಬಂದು, ‘ನೋಡು ದೃತರಾಷ್ಟ್ರ ನಿನ್ನ ಮಕ್ಕಳಾದ ದುರ್ಯೋಧನ ದುಶ್ಯಾಸನ, ಹಾಗೂ ನಿನ್ನ ಭಾವ ಮೈದುನ ಶಕುನಿ, ಇವರು ಪಾಂಡು ಮಕ್ಕಳಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ನೀನು ಅವರಿಗೆ ಸ್ವಲ್ಪ ಬುದ್ಧಿ ಹೇಳಬಾರದೆ?’ ಎಂದು ಕೇಳಿದರು. ಇದರಿಂದ ದೃತರಾಷ್ಟ್ರನಿಗೆ ಬೇಜಾರಾಯಿತು. ‘ನೀವು ಯಾವಾಗಲೂ ನನ್ನ ಮಕ್ಕಳಿಗೆ ಬುದ್ಧಿ ಹೇಳುವಂತೆ ಹೇಳುತ್ತೀರಿ. ನೀವು ಪಾಂಡು ಮಕ್ಕಳ ಮೇಲೆ ಹೆಚ್ಚು ವಾತ್ಸಲ್ಯ ಪ್ರೀತಿ ತೋರಿಸುತ್ತೀರಿ. ಯಾಕೆ ನನ್ನ ಮಕ್ಕಳು ನಿಮಗೆ ಮೊಮ್ಮಕ್ಕಳಲ್ಲವೇ? ಪಾಂಡು ಮಕ್ಕಳು ಮಾತ್ರ ಮೊಮ್ಮಕ್ಕಳಾ?’ ಎಂದು ಕೇಳಿದ.

ಇದನ್ನು ಕೇಳಿದ ವ್ಯಾಸರು ಒಂದು ಕಥೆ ಹೇಳುತ್ತಾರೆ. ಒಮ್ಮೆ ದೇವಲೋಕದಲ್ಲಿ ಕಾಮಧೇನು ಅಳುತ್ತಿದ್ದಳು. ಅಲ್ಲಿಗೆ ಬಂದ ಇಂದ್ರದೇವ ‘ಯಾಕೆ ಅಳುತ್ತಾ ಇದ್ದಿ? ನಮ್ಮಿಂದ ಏನಾದರೂ ತಪ್ಪಾಯ್ತೆ ಅಥವಾ ಯಾರಾದರೂ ನಿನ್ನ ಮನಸ್ಸಿಗೆ ನೋವಾಗುವಂತೆ ಮಾತನಾಡಿದರಾ?’ ಎಂದ. ಕಾಮಧೇನು ‘ಅಲ್ಲಿ ನೋಡಿ’ ಎಂದು ಭೂಮಿ ಕಡೆ ತೋರಿಸಿದಳು. ಅದೊಂದು ಹಳ್ಳಿ. ಅಲ್ಲಿ ಒಬ್ಬ ಬಡ ರೈತನ ಗದ್ದೆ ಇತ್ತು. ರೈತನು ಅವನ ಹತ್ತಿರವಿದ್ದ ಎರಡು ಎತ್ತುಗಳನ್ನು ನೊಗಕ್ಕೆ ಕಟ್ಟಿ ಗದ್ದೆಯಲ್ಲಿ ಕೆಲಸ ಮಾಡಿಸುತ್ತಿದ್ದ.

ಅವು ಮುಂದೆ ಹೋಗದಿದ್ದರೆ ಬಾರುಕೋಲಿನಿಂದ ಅವುಗಳಿಗೆ ಹೊಡೆಯುತ್ತಿದ್ದ. ಆ ಎತ್ತುಗಳು ಸರಿಯಾಗಿ ಹೊಟ್ಟೆಗೆ ಇಲ್ಲದೆ ಚರ್ಮ ಮೂಳೆ ಮಾತ್ರ ಕಾಣುತ್ತಿತ್ತು. ಅವುಗಳಿಗೆ ನೊಗ ಎಳೆಯಲು ಆಗುತ್ತಿರಲಿಲ್ಲ. ಹೀಗಾಗಿ ಅವುಗಳ ಕಣ್ಣಲ್ಲಿ ನೀರು ಬರುತ್ತಿತ್ತು. ಎತ್ತುಗಳನ್ನು ತೋರಿಸಿದ ಕಾಮಧೇನು ‘ದೇವರಾಜ ನನ್ನ ಮಕ್ಕಳು ಹೇಗೆ ಅಳುತ್ತಿವೆ. ಅವುಗಳ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ.

ಏನಾದರೂ ಮಾಡಿ ಅವುಗಳ ಕಷ್ಟವನ್ನು ಪರಿಹರಿಸು’ ಎಂದು ಕೇಳಿಕೊಂಡಳು. ಅದಕ್ಕೆ ಇಂದ್ರನು ‘ಏನಮ್ಮ ಕಾಮಧೇನು, ನಿನಗೆ ಇವೇ ಎರಡು
ಮಕ್ಕಳಾ? ಎತ್ತು, ಹಸುಗಳು ಸೇರಿ ಕೋಟಿ ಕೋಟಿ ಮಕ್ಕಳಿದ್ದಾರೆ. ಅವುಗಳನ್ನೆಲ್ಲಾ ಬಿಟ್ಟು ಈ ಎರಡು ಮಕ್ಕಳ ಮೇಲೆ ಮಾತ್ರ ಅಷ್ಟೊಂದು ಪ್ರೀತಿ ಯಾಕೆ?’ ಎಂದು ಕೇಳಿದ. ಆಗ ಕಾಮಧೇನು ಹೇಳಿದಳು. ‘ಇಂದ್ರ ನೀನು ಹೇಳಿದಂತೆ ನನಗೆ ಎತ್ತು, ಹಸುಗಳು ಸೇರಿ ಕೋಟಿ ಕೋಟಿ ಮಕ್ಕಳು
ಇದ್ದಾರೆ ನಿಜ. ಅವುಗಳೆಲ್ಲ ಸುಖವಾಗಿ ಇದ್ದಾವೆ. ಆದರೆ ಈ ಎರಡು ಮಕ್ಕಳು ಮಾತ್ರ ಹೊಟ್ಟೆಗಿಲ್ಲದೆ, ಅವನ ಗದ್ದೆಯನ್ನು ಉತ್ತಬೇಕು. ಅಲ್ಲದೆ ಮಳೆ
ಬರದೆ ಭೂಮಿಯೆಲ್ಲ ಒಣಗಿ ಬಿರುಕು ಬಿಟ್ಟಿದೆ.

ಕಲ್ಲಿನಂತೆ ಗಟ್ಟಿಯಾಗಿರುವ ಭೂಮಿಯನ್ನು ನೇಗಿಲಿನಿಂದ ಎಳೆಯಲು ಹೊಟ್ಟೆಗೂ ಹಾಕದೆ ನಿತ್ರಾಣವಾಗಿರುವ ಅವುಗಳಿಂದ ಕೆಲಸ ಮಾಡಿಸು ತ್ತಾನೆ, ಕೆಲಸ ಮಾಡಲು ಆಗದೆ ರೈತನ ಕೈಯಲ್ಲಿ ಹೊಡೆಸಿಕೊಳ್ಳುತ್ತಾ ನಿತ್ಯವೂ ಕಣ್ಣೀರು ಹಾಕುತ್ತವೆ. ಇದನ್ನು ನನ್ನಿಂದ ನೋಡಲಾಗುವುದಿಲ್ಲ. ಹಾಗಾಗಿ ಹೇಳಿದೆ’ ಎಂದಳು. ಕನಿಕರಗೊಂಡ ಇಂದ್ರನು ‘ಕಾಮಧೇನು, ನಿನ್ನ ಮಕ್ಕಳ ಮೇಲಿರುವ ಕರುಳಿನ ಪ್ರೀತಿ ನನಗೆ ಅರ್ಥವಾಯಿತು’ ಎನ್ನುತ್ತಾ, ಬಡ ರೈತನ ಗದ್ದೆ ಸೇರಿದಂತೆ ಸುತ್ತಮುತ್ತ ಮಳೆ ಸುರಿಸಿದನು. ಇದರಿಂದ ಭೂಮಿಯೆಲ್ಲಾ ಒದ್ದೆಯಾಗಿ ಮಣ್ಣು ಮೃದುವಾಯಿತು.

ಎತ್ತುಗಳು ಸರಾಗವಾಗಿ ನೇಗಿಲನ್ನು ಎಳೆದವು. ಇದು ಕಾಮಧೇನುವಿಗಿರುವ ಪುತ್ರ ವಾತ್ಸಲ್ಯ ಎಂದು ತಿಳಿಸಿದರು. ಹೀಗೆ ಕತೆ ಹೇಳಿ ಮುಗಿಸಿದ ವ್ಯಾಸರು, ‘ನೋಡು ದೃತರಾಷ್ಟ್ರ, ನಿಮ್ಮೆಲ್ಲರ ಬಗ್ಗೆ ನನಗೆ ಸಮಾನ ಪ್ರೀತಿ ಇದೆ. ಆದರೆ ಯಾವ ಮಕ್ಕಳು ಹೆಚ್ಚು ಕಷ್ಟಪಡುತ್ತಿರುತ್ತಾರೋ,
ಅವರ ಬಗ್ಗೆ ಹೆತ್ತ ತಂದೆ ತಾಯಿಗೆ ಕನಿಕರ ಪ್ರೀತಿ ಜಾಸ್ತಿ ಇರುತ್ತದೆ. ಅದು ಸಹಜವೂ ಕೂಡ. ಆದುದರಿಂದ ನಿನ್ನ ಮಕ್ಕಳು ಪಾಂಡು ಮಕ್ಕಳಿಗೆ ತೊಂದರೆ ಕೊಡದಂತೆ ತಿದ್ದಿ ಬುದ್ಧಿ ಹೇಳು. ತಂದೆ ಇಲ್ಲದ ಅವರನ್ನು ನಿನ್ನ ಮಕ್ಕಳಂತೆಯೇ ಪಾಲಿಸಬೇಕು.

ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂದು ತಾರತಮ್ಯ ತೋರಬೇಡ. ಭಗವಂತ ಮೆಚ್ಚುವುದಿಲ್ಲ’ ಎಂದು ಬುದ್ಧಿವಾದ ಹೇಳಿದರು.
ನಮ್ಮ ಮನೆಗಳಲ್ಲೂ ಕೂಡ ತಂದೆ ತಾಯಿಗಳು ಹೆಚ್ಚು ಕಷ್ಟ ಪಡುವ ಮಕ್ಕಳಿಗೆ ಹೆಚ್ಚು ಪ್ರೀತಿ ತೋರಿಸುತ್ತಾರೆ ಆದರೆ ಅವರಿಗೆ ಎಲ್ಲರ ಬಗ್ಗೆ
ಸಮಾನ ಪ್ರೀತಿ ಇರುತ್ತದೆ. ಇದನ್ನು ತಿಳಿದಾಗ ನಮಗೆ ಕುಟುಂಬದಲ್ಲಿ ಒಡಹುಟ್ಟಿದವರ ಬಗ್ಗೆ ಅಸಮಾಧಾನ ಇರುವುದಿಲ್ಲ.

ಇದನ್ನೂ ಓದಿ: #RoopaGururaj