Thursday, 3rd October 2024

Roopa Gururaj Column: ಅಪೇಕ್ಷೆ ಇಲ್ಲದೆ ಮಾಡಿದ ಕೆಲಸದ ಸಾರ್ಥಕತೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಬಹಳ ಹಿಂದೆ ಇಂದ್ರದ್ಯುಮ್ನನೆಂಬ ರಾಜ ಮಾಡಿದ ಅನೇಕ ಒಳ್ಳೆಯ ಕಾರ್ಯದಿಂದಾಗಿ ಸತ್ತು ಬಹಳ ವರ್ಷಗಳ ಕಾಲ ಸ್ವರ್ಗದಲ್ಲಿ ಸುಖವಾಗಿದ್ದ. ಒಂದು ದಿನ ದೇವದೂತ ಬಂದು, ‘ರಾಜ ನೀನು ಮಾಡಿದ ಪುಣ್ಯದ ಕೆಲಸಗಳ
ಅವಧಿ ಮುಗಿಯಿತು, ಮತ್ತೆ ನೀನಿನ್ನು ಭೂಮಿಗೆ ಹೊರಡಬೇಕು’ ಎಂದ. ರಾಜನಿಗೆ ಗಾಬರಿಯಾಯಿತು, ಆತ, ‘ನಾನು ಎಷ್ಟೊಂದು ದಾನ ಧರ್ಮಗಳನ್ನು ಅಷ್ಟು ವರ್ಷಗಳ ಕಾಲ ಮಾಡಿದ್ದಾನಲ್ಲ, ಅವೆಲ್ಲ ಮುಗಿದು ಹೋಯಿತೇ?’
ಎಂದು ಕೇಳಿದ.

ಆಗ ದೇವದೂತ, ‘ಸ್ವಾಮಿ, ಸ್ವರ್ಗದಂದು ಪದ್ಧತಿ ಇದೆ, ಭೂಮಿಯ ಮೇಲಿನ ಜನ ನೀವು ಮಾಡಿದ ಒಳ್ಳೆಯ ಕೆಲಸ ಗಳನ್ನು ಎಲ್ಲಿಯವರೆಗೆ ನೆನಪಿಸಿಕೊಳ್ಳುತ್ತಾರೋ ಅಲ್ಲಿಯವರೆಗೆ ಮಾತ್ರ ನೀವು ಇಲ್ಲಿರಬಹುದು, ಯಾವಾಗ ನಿಮ್ಮನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲವೋ ಅಂದಿಗೆ ನಿಮ್ಮ ಸ್ವರ್ಗದ ಅವಧಿ ಮುಗಿಯಿತು, ಹಾಗಾಗಿ ಸಣ್ಣ ಪುಟ್ಟ ಉಪಕಾರ ಒಳ್ಳೆಯ ಕಾರ್ಯ ಮಾಡಿದವರು ಕೇವಲ ಸ್ವಲ್ಪಕಾಲ ಇಲ್ಲಿರುತ್ತಾರೆ.

ಶಾಶ್ವತವಾದಂತ ಕಾರ್ಯವನ್ನು ಮಾಡಿದವರು ಮಾತ್ರ ಯಾವಾಗಲೂ ಇಲ್ಲಿಯೇ ಉಳಿಯುತ್ತಾರೆ. ಈಗ ನಿಮ್ಮ ಕಾರ್ಯಗಳನ್ನು ಕೃತಜ್ಞತೆಯಿಂದ ಸ್ಮರಿಸುವವರು ಯಾರೂ ಇಲ್ಲ. ಬೇಕಾದರೆ ನೀವು ಭೂಮಿಗೆ ಹೋಗಿ ನಿಮ್ಮ ಕಾರ್ಯಗಳನ್ನು ಈಗಲೂ ಯಾರಾದರೂ ನೆನೆಪಿಸಿ ಕೊಳ್ಳುವವರಿದ್ದರೆ ತಿಳಿಸಿ. ಆಗ ನಿಮ್ಮ ಸ್ವರ್ಗದ ಅವಧಿ
ಮುಂದುವರಿಯಬಹುದು’ ಎಂದು ಹೇಳಿದ.

ಏನೂ ಮಾತನಾಡದೆ ರಾಜ ಭೂಮಿಗೆ ಬಂದ. ಅವನಿದ್ದ ರಾಜ್ಯದಲ್ಲಿ ಈಗ ಯಾರಿಗೂ, ಈ ರಾಜನ ಹೆಸರು ಕೂಡಾ ಗೊತ್ತಿರಲಿಲ್ಲ. ಹುಡುಕಿ ಹುಡುಕಿ ಕೊನೆಗೊಬ್ಬ ಹಣ್ಣು, ಹಣ್ಣು ಮುದುಕನ ಮನೆಗೆ ಬಂದ. ಅವನಿಗೂ ಕೂಡ ಇವನ ಹೆಸರು ಗೊತ್ತಿರಲಿಲ್ಲ.

ಆದರೆ ಆತನೊಂದು ವಿಷಯ ತಿಳಿಸಿದ. ನನಗಿಂತ ಬಹಳ ವಯಸ್ಸಾದ ಒಂದು ಗೂಬೆ ಊರ ಹೊರಗೆ ವಾಸವಾಗಿದೆ, ಅದಕ್ಕೆ ನಿನ್ನ ಹೆಸರು ಗೊತ್ತಿದ್ದರೂ ಗೊತ್ತಿರಬಹುದು ಎಂದ. ಆ ಗೂಬೆ ಕೂಡಾ, ಈ ರಾಜನ ಹೆಸರನ್ನು ಕೇಳಿರಲಿಲ್ಲ, ಆದರೆ ನನಗಿಂತ ವಯಸ್ಸಾದ ಆಮೆಯೊಂದು ಊರ ಹೊರಗಿನ ಕೆರೆಯಲ್ಲಿದೆ ಬಹುಶಃ ಅದಕ್ಕೆ ನಿನ್ನ ವಿಷಯ ಗೊತ್ತಿರಬಹುದು ಎಂದಿತು.

ರಾಜ ಅಂತೂ ಇಂತೂ ವಯಸ್ಸಾದ ಆಮೆಯನ್ನು ಒಂದು ಕೆರೆಯಲ್ಲಿ ಕಂಡ. ತುಂಬಾ ಕೃಶವಾಗಿದ್ದ ಆಮೆ ಕಷ್ಟ ಪಟ್ಟು ಮೇಲೆ ಬಂದು ಇವನ ಕಥೆ ಕೇಳಿ, ‘ನನಗೆ ಇಂದ್ರದ್ಯುಮ್ನ ರಾಜನ ಹೆಸರು ಗೊತ್ತು, ಅವನೇ ಈ ಕೆರೆಯನ್ನು ಕಟ್ಟಿಸಿದ್ದು, ನಾನು ಚಿಕ್ಕವನಿದ್ದಾಗ ನನ್ನಜ್ಜ ನನಗೆ ಇದನ್ನು ಹೇಳಿದ’ ಎಂದು ಹೇಳಿತು.

ರಾಜ ಹೇಳಿದ, ‘ನಾನೇ ಇಂದ್ರದ್ಯುಮ್ನ, ಆದರೆ ನಾನು ಈ ಕೆರೆಯನ್ನು ಕಟ್ಟಿಸಿದ್ದಲ್ಲ’ ಎಂದ. ‘ನನ್ನಜ್ಜ ಸುಳ್ಳು ಹೇಳುವವನಲ್ಲ, ಈ ರಾಜ ಸ್ವರ್ಗದಾಸೆಗಾಗಿ ಸಾವಿರಾರು ಹಸುಗಳನ್ನು ದಾನ ಮಾಡುತ್ತಿದ್ದನಂತೆ, ಅವು ಊರ ಹೊರಗೆ ಬಂದಾಗ ಮುಂದೆಕ್ಕೆ ಹೋಗದೆ ಅ ನಿಂತು ಬಿಡುತ್ತಿದ್ದವಂತೆ. ದಾನ ಪಡೆದವರು ಅವುಗಳನ್ನು ಬಲವಂತ ವಾಗಿ ಎಳೆದು ಕರೆದುಕೊಂಡು ಹೋಗುತ್ತಿದ್ದರಂತೆ. ಆ ಎಳೆದಾಟದಲ್ಲಿ, ಅವುಗಳ ಪಾದದಿಂದ ನೆಲ ಕೆದರಿ, ಕೆದರಿ ದೊಡ್ಡ ಗುಂಡಿಯಾಯಿತಂತೆ. ಮಳೆ ಬಂದಾಗ ಆ ಗುಂಡಿಗಳಲ್ಲಿ ನೀರು ನಿಂತು ಈ ಕೆರೆಯಾಯಿತಂತೆ. ಈ ಕೆರೆ ಎಷ್ಟೋ ಪ್ರಾಣಿ, ಪಕ್ಷಿಗಳಿಗೆ ರಾಜನಿಗೆ ಗೊತ್ತಿಲ್ಲದೇ ಆಸರೆಯಾಯಿತು.

ಅವನ ಕೃಪೆಯಿಂದಾದ ಕೆರೆ ಇದು. ಹಾಗಾಗಿ ನಾವೆಲ್ಲ ಅದನ್ನು ಈಗಲೂ ನೆನೆಸಿಕೊಳ್ಳುತ್ತೇವೆ’ ಎಂದು ಹೇಳಿತು ಮುದಿ ಆಮೆ. ಆಗ ತಕ್ಷಣ ಪ್ರತ್ಯಕ್ಷನಾದ ದೇವದೂತ ‘ಬನ್ನಿ ಸ್ವಾಮಿ ನಿಮ್ಮ ಸ್ವರ್ಗದ ಅವಧಿ ಇನ್ನೂ ಇದೆ’ ಎಂದು ಕರೆದುಕೊಂಡು ಹೋದ. ತಮಾಷೆ ಎಂದರೆ ಸ್ವರ್ಗದ ಆಸೆಯಿಂದಾಗಿ ಮಾಡಿದ ಕೆಲಸ, ಸ್ವರ್ಗದಲ್ಲಿ ಅವನನ್ನು ಹೆಚ್ಚು ಸಮಯ ಉಳಿಸಲಿಲ್ಲ. ಆದರೆ ರಾಜನಿಗೆ ಗೊತ್ತಿಲ್ಲದಂತೆ, ಅನಿರೀಕ್ಷಿತವಾಗಿ ಆದ ಒಳ್ಳೆಯ ಕೆಲಸದಿಂದ ಅವನಿಗೆ ಮತ್ತೆ ಸ್ವರ್ಗ ಲಭಿಸಿತು. ಲಾಭದ ಆಸೆಗಾಗಿ, ಜನರ ಹೊಗಳಿಗಾಗಿ ಮಾಡಿದ ಕೆಲಸ ಎಂದೂ ಶಾಶ್ವತ ವಾಗಿರು ವುದಿಲ್ಲ. ಯಾವುದೇ ಅಪೇಕ್ಷೆ ಇಲ್ಲದೆ ಮಾಡಿದ ಸಹಾಯ, ಒಳ್ಳೆಯ ಕೆಲಸಗಳ ಒಳ್ಳೆಯ ಫಲ ನಮಗೆ ಖಂಡಿತ ದೊರೆಯುತ್ತದೆ.

ಇದನ್ನೂ ಓದಿ: Roopa Gururaj Column: ನಿಮ್ಮ ಬದುಕು ನಿಮ್ಮದೇ ಕೈಯಲ್ಲಿದೆ…