Friday, 13th December 2024

‌Roopa Gururaj Column: ಹೊಟ್ಟೆ ಹಸಿದಾಗ ಅನ್ನದ ಬದಲು ಚಿನ್ನ ತಿನ್ನಲಾಗಲ್ಲ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಹಳ್ಳಿಯ ಪುಟ್ಟ ಗುಡಿಸಲಿನ ಮುಂದೆ ಐದಾರು ಕೋಳಿಗಳು ಯಾವಾಗಲೂ ಒಟ್ಟಾಗಿ ಇರುತ್ತಿದ್ದವು. ಆಹಾರ ಕ್ಕಾಗಿ ಹುಳ ಹುಪ್ಪಟೆಯನ್ನು ಹುಡುಕುತ್ತಾ, ನೆಲವನ್ನು ಕೆದುಕುತ್ತಿದ್ದವು. ಒಂದು ದಿನ ಆ ಕೋಳಿಯ ಹಿಂಡಿನಲ್ಲಿದ್ದ ಒಂದು ಹುಂಜಕ್ಕೆ, ಹುಳ ಹುಪ್ಪಟೆಗಾಗಿ ನೆಲ ಕೆದುಕುತ್ತಿದ್ದಾಗ, ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಹರಳೊಂದು ಸಿಕ್ಕಿತು. ಅದು ಒಂದು ವಜ್ರದ ಹರಳು.

ಹುಂಜ ತನ್ನ ಬಳಗವನ್ನೆಲ್ಲ ಕರೆದು, ತನಗೆ ಸಿಕ್ಕಿದ ಹೊಳೆಯುತ್ತಿದ್ದ ಕಲ್ಲನ್ನು ಎಲ್ಲರಿಗೂ ತೋರಿಸಿತು. ಅದರ ಹೊಳಪನ್ನು ಕಂಡು ಹಿಂಡಿನಲ್ಲಿದ್ದ ಕೋಳಿಗಳೆಲ್ಲ ಬೆರಗಾದವು. ಒಂದು ಕೋಳಿ, ‘ಇದು ನಮ್ಮ ಮನೆಯ ಯಜಮಾ ನಿಯ ಕತ್ತಿನಲ್ಲಿ ಶೋಭಿಸಬೇಕು, ಇದನ್ನು ನಾವು ಅವಳಿಗೆ ಕೊಡೋಣ’ ಎಂದಿತು. ಮತ್ತೊಂದು ಕೋಳಿ, ‘ಇದನ್ನು ಅವಳಿಗೇಕೆ ಕೊಡಬೇಕು? ನಾನೇ ಈ ಕೋಳಿ ಗುಂಪಿನ ಯಜಮಾನಿ, ಇದು ನನಗೇ ಸೇರಬೇಕು’ ಎಂದಿತು.

ಹೀಗೆ ನನಗೆ ತನಗೆ ಎಂದು ಎಲ್ಲ ಕೋಳಿಗಳೂ ಕಿತ್ತಾಡತೊಡಗಿದವು. ತುಂಡು ವಜ್ರದ ಹರಳಿಗಾಗಿ ಆಹಾರ ಹುಡುಕು ವುದನ್ನೇ ಮರೆತು ಬಿಟ್ಟವು. ಆ ಕೋಳಿಗಳ ಗುಂಪಿನ ಯಜಮಾನ, ಹುಂಜ, ‘ಅಯ್ಯೋ ಪೆದ್ದುಗಳಿರಾ! ವಜ್ರದ ಕಲ್ಲನ್ನು ಹೊಗಳುತ್ತಾ ಅದು ನನಗೆ ತನಗೆ ಎಂದು ಜಗಳವಾಡುತ್ತಾ, ಕಾಲಹರಣ ಮಾಡುತ್ತಿರುವಿರಲ್ಲ, ನಾವು ಆಹಾರಕ್ಕಾಗಿ ಯಲ್ಲವೇ, ನೆಲವನ್ನು ಕೆದುಕುತ್ತಿದ್ದುದು. ಹುಳ ಹುಪ್ಪಟೆ ಬಿಟ್ಟು ಈ ವಜ್ರದ ಹರಳಿನಿಂದ ನಮಗೇನು ಉಪಯೋಗ? ಇದರಿಂದ ನಮ್ಮ ಹೊಟ್ಟೆ ತುಂಬುತ್ತದೆಯೇ? ಆ ವಜ್ರದ ಹರಳನ್ನು ಅ ಬಿಟ್ಟು, ಎಲ್ಲರೂ ಆಹಾರವನ್ನು ಹುಡುಕಲು ಹೊರಡಿ’ ಎಂದು ಗದರಿತು.

ಈ ಹುಂಜದ ಗದರಿಕೆಯ ಮಾತಿನಿಂದ, ಎಲ್ಲ ಕೋಳಿಗಳೂ ಎಚ್ಚೆತ್ತುಕೊಂಡವು. ಹೌದಲ್ಲವೇ? ಉಪಯೋಗಕ್ಕೆ ಬಾರದ ವಸ್ತುವಿಗಾಗಿ, ನಾವೇಕೆ ಹೀಗೆ ಜಗಳ ಕಾಯುತ್ತಿದ್ದೇವೆ ಎಂದುಕೊಂಡು, ಅವುಗಳಿಗೆ ನಾಚಿಕೆಯಾಯಿತು. ತಕ್ಷಣ ವಜ್ರದ ಹರಳಿನ ಆಸೆಯನ್ನು ಬಿಟ್ಟು ಹೊಟ್ಟೆ ತುಂಬಿಸಿಕೊಳ್ಳಲು ಹುಳ ಹುಪ್ಪಟೆಗಾಗಿ ನೆಲಕೆದಕ ತೊಡಗಿ ದವು. ಒಮ್ಮೆ ಯೋಚಿಸಿ ನೋಡಿಹೊಟ್ಟೆ ಹಸಿದಾಗ ಅನ್ನದ ಬದಲು ಚಿನ್ನ ತಿನ್ನಲು ಸಾಧ್ಯವೇ? ಮನುಷ್ಯನನ್ನು ಬಿಟ್ಟು ಬೇರೆ ಯಾವ ಪ್ರಾಣಿ ಪಕ್ಷಿಗಳೂ ಊಟದ ಯೋಚನೆ ಬಿಟ್ಟು, ಆಸ್ತಿ ಚಿನ್ನ ಹೊನ್ನು ಎದ್ದು ಅದರ ಹಿಂದೆ ಬೀಳುವುದಿಲ್ಲ.

ಆದರೆ ಮನುಷ್ಯ ಮಾತ್ರ ಬುದ್ಧಿ ಬಂದಾಗಿನಿಂದ ಹಿಡಿದು ಅಂತಸ್ತು, ಆಸ್ತಿ ಅಧಿಕಾರ ಎನ್ನುತ್ತಾ ಪ್ರಾಣ ತೆಗೆಯುವು ದಕ್ಕೂ ಕೂಡ ಹಿಂದೆ ಮುಂದೆ ನೋಡುವುದಿಲ್ಲ. ಎಷ್ಟೇ ದುಡಿದರು ಏನೆಲ್ಲ ಆಸ್ತಿ ಮಾಡಿದರೂ, ನಾವು ಮೂರು ಹೊತ್ತು ಊಟ ಮಾಡಲಾಗುತ್ತದೆಯೇ ಹೊರತು, ಆರು ಹೊತ್ತು ಊಟ ಮಾಡಲಾಗದು. ಎಲ್ಲರೂ ಕೊನೆಗೊಂದು ದಿನ ಮಾಡಿದ ಆಸ್ತಿಯನ್ನೆಲ್ಲ ಬಿಟ್ಟು ಕೊನೆಗೆ ತಮ್ಮ ಇಷ್ಟದ ಒಡವೆ ವಸ್ತ್ರ ಎಲ್ಲವನ್ನೂ ತೊರೆದು, ಭೂಮಿಯ ಮಡಲಿಗೆ ಸೇರಬೇಕು.

ಇಷ್ಟು ಸತ್ಯ ಗೊತ್ತಿದ್ದರೂ ಕೂಡ ನಾವು ಜೀವನವಿಡಿ ಹಣವನ್ನು ಕೂಡಿಡುತ್ತಾ ಹೋಗುತ್ತೇವೆ. ಆಪತ್ ಕಾಲಕ್ಕೆ ಹಣ ಕೂಡಿಡುವುದು ತಪ್ಪಲ್ಲ. ಆದರೆ ನಾಲ್ಕು ತಲೆಮಾರಿಗಾಗುವಷ್ಟು ಹಣ ಕೂಡಿಟ್ಟು ಅವರನ್ನು ಕೂಡ ಆಲಸಿಗಳ ನ್ನಾಗಿಸಿ, ಅವರ ಬದುಕನ್ನು ಹಾಳು ಮಾಡುವ ಮನುಷ್ಯನ ಈ ಗುಣ ಅವನನ್ನೇ ಸುಡುತ್ತದೆ ಅಲ್ಲವೇ? ಇದರೂ ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆ ಬುದ್ಧಿ ಕಲಿಸಿ, ಒಳ್ಳೆಯ ಸಂಸ್ಕಾರವನ್ನು ಧಾರೆಯರೆದು, ಸಂಗೀತ ಸಾಹಿತ್ಯ ಕಲೆ, ಇವುಗಳನ್ನೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳುವ ಸತ್ ಸಂಪ್ರದಾಯವನ್ನ ಹಾಕಿ ಕೊಡೋಣ.

ಇದು ಎಂದಿಗೂ ಕೂಡ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಿಯಬೇಕಾದಂತ ಆಸ್ತಿ. ಇಂತಹ ಆಸ್ತಿ ನಮ್ಮ ಮಕ್ಕಳಿಗೆ ಕೊಟ್ಟಾಗ ಮನುಷ್ಯ ಜನ್ಮವೇ ಸಾರ್ಥಕವಾಗುತ್ತದೆ. ಬದುಕಿನಲ್ಲಿ ಉತ್ತಮ ಮೌಲ್ಯಗಳು ಮುಖ್ಯವೇ ಹೊರತು ಹಣ ಆಸ್ತಿ ಅಂತಸ್ತಲ್ಲ.

ಇದನ್ನೂ ಓದಿ: Roopa Gururaj Column: ಬದುಕಿನಲ್ಲಿ ನಿರರ್ಥಕವಾದದ್ದು ಯಾವುದೂ ಇಲ್ಲ