Tuesday, 12th November 2024

Roopa Gururaj Column: ಸಮುದ್ರರಾಜನನ್ನು ತಡೆದು ನಿಲ್ಲಿಸಿದ ಆಂಜನೇಯ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿ ಮಂದಿರವು ಭಗವಾನ್ ವಿಷ್ಣುವಿನ ರೂಪವಾದ ‘ಜಗನ್ನಾಥ’ನಿಗೆ ಸಮರ್ಪಿತವಾದ ದೇವಾಲಯ. ಸಪ್ತ ಕ್ಷೇತ್ರಗಳ ‘ಪುರಿ ಕ್ಷೇತ್ರ’ ಮೊದಲನೆಯದಾಗಿದೆ. ಜನರಕಲ್ಯಾಣಕ್ಕಾಗಿ ಜಗತ್ತಿನ
ಒಡೆಯನಾದ ‘ವಿಶ್ವನಾಥ’ ನು ಕಾಶಿಯನ್ನು ತನ್ನ ವಾಸಸ್ಥಾನವಾಗಿ ಮಾಡಿಕೊಂಡಂತೆ, ದ್ವಾಪರ ಯುಗದಲ್ಲಿ,
ದ್ವಾರಕೆ ಮುಳುಗಿದ ನಂತರ, ಶ್ರೀಕೃಷ್ಣನು ಪುರಿಯನ್ನೇ ತನ್ನ ಧಾಮವನ್ನಾಗಿ ಮಾಡಿಕೊಂಡನು.

ಜಗತ್ತಿನ ಅಧಿಪತಿಯಾದ ಜಗನ್ನಾಥನ ಮಂದಿರ ಜಗನ್ನಾಥ ಪುರಿ ಎಂದು ಜಗತ್ಪ್ರಸಿದ್ಧಿಯಾಗಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಇರುವ ಬೇಡಿ ಆಂಜನೇಯ ಕೂಡ ಬಹಳ ಪ್ರಸಿದ್ಧ ದೇವಾಲಯ. ಅದಕ್ಕೊಂದು ಸುಂದರ ಕಥೆ ಇದೆ.
ಹಿಂದೆ ರಾಜ ‘ಇಂದ್ರದ್ಯುಮ್ಯ’ನು ‘ನೀಲ ಮಾಧವ’ನಿಗೆ ವಿಶ್ವದ ಅತಿ ಎತ್ತರದ ದೇವಾಲಯವನ್ನು ನಿರ್ಮಿಸಿದನು. ಸೃಷ್ಟಿಕರ್ತ ಬ್ರಹ್ಮನಿಂದಲೇ ದೇವಾಲಯ ಮತ್ತು ಮೂರ್ತಿಗಳನ್ನು ಪವಿತ್ರಗೊಳಿಸಿ ಪ್ರತಿಷ್ಠಾಪಿಸಲು ಪ್ರಾರ್ಥಿಸಿದನು.

ರಾಜನ ಪ್ರಾರ್ಥನೆ ಕೇಳಿ ಬ್ರಹ್ಮನು ಸ್ವರ್ಗದಿಂದ ಬಂದನು. ಜಗನ್ನಾಥನ ಪ್ರತಿಷ್ಠಾಪನೆಯನ್ನು ನೋಡಲು, ಸ್ವರ್ಗದಿಂದ ದೇವತೆಗಳು, ಕೈಲಾಸದಿಂದ ಶಿವ -ಪಾರ್ವತಿಯರು, ದಕ್ಷಿಣದಿಂದ ಕಾರ್ತಿಕೇಯನು, ಉತ್ತರದಿಂದ
ಗಣಪತಿ ತನ್ನ ಲೋಕಪಾಲಕರೊಂದಿಗೆ ಬಂದನು. ಹೀಗೆ ಎಲ್ಲ ದೇವಾನುದೇವತೆಗಳು ಗಗನದಿಂದ ಇಳಿದು ಬಂದರೆ, ಇನ್ನು ಆಂಜನೇಯ ಸುಮ್ಮನಿರಲು ಸಾಧ್ಯವೇ ತನ್ನ ಪ್ರಭು ಜಗನ್ನಾಥನನ್ನು ನೋಡಲು ಅವನೂ ಹೊರಟೇ ಬಿಟ್ಟ. ಆಂಜನೇಯ ಒಂದೇ ನೆಗತಕ್ಕೆ ಹಾರುತ್ತಾ ಬರುವುದನ್ನು ನೋಡಿದ ಸಮುದ್ರ ರಾಜನಿಗೆ ತಾನೂ ಜಗನ್ನಾಥನ ದರ್ಶನಕ್ಕೆ ಹೋಗಬೇಕು ಎಂದು ಆಸೆಯಾಗಿ ರಭಸದಿಂದ ಉಕ್ಕಿಬಂದನು.

ಸಮುದ್ರರಾಜ ಬಂದಿದ್ದೇ ತಡ ಜಗನ್ನಾಥ ಮಂದಿರ ನೀರಿನಿಂದ ತುಂಬಿತು. ನೆರೆದಿದ್ದ ಭಕ್ತರಿಗೆ ನಿಲ್ಲಲು ತೊಂದರೆ ಆಯಿತು. ಆಗ ಜಗನ್ನಾಥ ಆಂಜನೇಯನಿಗೆ ಹೇಳಿದ, ಸಮುದ್ರರಾಜನನ್ನು ಮುಂದೆ ಬರದಂತೆ ತಡೆಹಿಡಿದು ನಿಲ್ಲಿಸು ಎಂದು. ಆಂಜನೇಯ ಸಮುದ್ರರಾಜನನ್ನು ತಡೆಹಿಡಿದು ನಿಲ್ಲಿಸಿದ. ಆದರೆ ಆಂಜನೇಯ ಬಂದಿದ್ದು ತನ್ನ ಪ್ರಭು
ಜಗನ್ನಾಥನ ದರ್ಶನಕ್ಕೆ. ಈಗ ಒಂದು ಹೆಜ್ಜೆ ಮುಂದಿಟ್ಟರೆ ಸಮುದ್ರರಾಜ ಹಿಂದೆಯೇ ನುಗ್ಗುತ್ತಾನೆ. ಆಂಜನೇಯ ಎರಡು ಮೂರು ಸಲ ಹೆಜ್ಜೆ ಮುಂದಿಟ್ಟು, ಜಗನ್ನಾಥನ ದರ್ಶನ ಮಾಡಲು ಪ್ರಯತ್ನಿಸಿದ. ಆದರೆ ಸಮುದ್ರರಾಜ ಬಿಡಲಿಲ್ಲ ಹಿಂದೆಯೇ ಬರುತ್ತಿದ್ದ, ಆಂಜನೇಯ ಭಗವಂತನಲ್ಲಿ ಪ್ರಾರ್ಥಿಸಿದ.

‘ಪ್ರಭು ನನ್ನನ್ನು ಈ ಸಮುದ್ರ ದಡದ ಬಂಧಿಸಿ ಬಿಡಿ ಆಗ ಸಮುದ್ರವನ್ನು ತಡೆಯಲು ಸಾಧ್ಯವಾಗುತ್ತದೆ’ ಎಂದು. ಆಗ ಜಗನ್ನಾಥ, ಚಿನ್ನದ ಸರಪಳಿಗಳಿಂದ ಆಂಜನೇಯನನ್ನು ಬಂಧಿಸಿ, ಹೇಳಿದ ‘ನೀನು ಯಾವಾಗಲೂ ನನ್ನ ಹೃದಯದಲ್ಲಿ ನೆಲೆಸಿರುವೆ, ಜಗನ್ನಾಥ ಮಂದಿರದ ಮೂಲೆ ಮೂಲೆಯಲ್ಲೂ ನೀನಿರುವೆ. ಮುಂದಿನ ದಿನಗಳಲ್ಲಿ ನೀನು ಬೇಡಿ ಆಂಜನೇಯನೆಂದು ಪ್ರಸಿದ್ಧನಾಗುವೆ. ನಿನ್ನ ದರ್ಶನ ಮಾಡಿದರೆ ಮಾತ್ರ, ನನ್ನ ದರ್ಶನದ ಪೂರ್ಣ
ಫಲ ದೊರೆಯುತ್ತದೆ.

ಭಕ್ತರು ನಿನ್ನನ್ನು ಪೂಜಿಸಿ ಭಕ್ತಿಯಿಂದ ಬೇಡಿಕೊಂಡರೆ ಅವರ ಎಲ್ಲ ಸಂಕಷ್ಟಗಳು ಪರಿಹಾರವಾಗುತ್ತದೆ’ ಎಂದು ಹರಸಿ ದ್ದನ್ನು ಕೇಳಿದ ಆಂಜನೇಯ ಭಕ್ತಿಯಿಂದ ಪ್ರಭುವಿಗೆ ವಂದಿಸಿದನು. ಮತ್ತೆ ಆಂಜನೇಯ ಹೇಳಿದ ಪ್ರಭು, ಸಮುದ್ರ ರಾಜರು ನಿಮ್ಮನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ, ಅವರಿಗೂ ಆಶೀರ್ವದಿಸಿ ಎಂದನು.

ಜಗನ್ನಾಥ ಸಮುದ್ರ ರಾಜನಿಗೆ ಆಶೀರ್ವದಿಸಲು ಮುಂದೆ ಬಂದು ನಿಂತನು. ಪ್ರಭುವನ್ನು ನೋಡಿದ ಸಮುದ್ರ ರಾಜ ಉಕ್ಕಿ ಬಂದು ಜಗನ್ನಾಥನ ಪಾದ ಕಮಲಗಳನ್ನು ತೊಳೆದು ಭಕ್ತಿಯಿಂದ ನಮಸ್ಕರಿಸಿದನು. ಭಗವಂತನು ಸಮುದ್ರ ರಾಜನನ್ನು ಆಶೀರ್ವದಿಸಿದನು. ಅಂದಿನಿಂದ ಇಂದಿನಗೂ, ಆಂಜನೇಯ ಸಮುದ್ರರಾಜ ಮುಂದೆ ಬರದಂತೆ ತಡೆ ಹಿಡಿದು, ಜಗನ್ನಾಥನಿಂದ ಬಂಧಿತನಾಗಿ ಸಮುದ್ರ ತಟದಲ್ಲಿ ಬೇಡಿ ಆಂಜನೇಯನಾಗಿ ನೆಲೆಸಿzನೆ. ಬೇಡಿ ಬಂದ
ಭಕ್ತರನ್ನು ಹರಸುತ್ತಾ ಅವರ ಕಷ್ಟಗಳನ್ನು ಪರಿಹರಿಸುತ್ತಿದ್ದಾನೆ.

ನಮ್ಮ ಭಾರತದ ಅನೇಕ ದೇವಸ್ಥಾನಗಳಿಗೆ ಇಂತಹ ಸುಂದರ ಐತಿಹ್ಯಗಳಿವೆ. ಇವುಗಳನ್ನು ನಮ್ಮ ಮಕ್ಕಳಿಗೆ
ತಿಳಿಸಿ ನಾವು ತಿಳಿದುಕೊಂಡು ಈ ದೇವಸ್ಥಾನಗಳಿಗೆ ಭೇಟಿ ಕೊಟ್ಟಾಗ ಆ ಸ್ಥಳ ಪುರಾಣದ ಬಗ್ಗೆ ನಾವು ಹೆಚ್ಚು
ತಿಳಿದುಕೊಂಡಂತೆ ಆಗುತ್ತದೆ.

ಇದನ್ನೂ ಓದಿ: ‌Roopa Gururaj Column: ಹೊಟ್ಟೆ ಹಸಿದಾಗ ಅನ್ನದ ಬದಲು ಚಿನ್ನ ತಿನ್ನಲಾಗಲ್ಲ