Thursday, 12th December 2024

Roopa Gururaj Column: ಬಲಿಪಾಡ್ಯಮಿಯಂದು ಸ್ಥಾಪನೆಗೊಳ್ಳುವ ಗಣೇಶ !

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಸಹಸ್ರಾರು ವರ್ಷಗಳ ಹಿಂದೆ ಸಪ್ತರ್ಷಿಗಳಲ್ಲಿ ಒಬ್ಬರಾದ ಭೃಗು ಮಹರ್ಷಿಗಳು ಕಾಶಿಯಾತ್ರೆಯನ್ನು ಕೈಗೊಂಡರಂತೆ. ಹೀಗೆ ಸಾಗಿ ಬರುವಾಗ,
ಗಣೇಶ ಚತುರ್ಥಿಯ ದಿನದಂದು ಈಗ ತುಮಕೂರಿನ ಬಳಿ ಗೂಳೂರು ಎಂದು ಕರೆಯಲ್ಪಡುವ ಆಗಿನ ಗೂಳಿಪಟವನ್ನು ತಲುಪಿದರಂತೆ. ಈ ಪ್ರದೇಶದಲ್ಲಿ ಗಣೇಶನ ವ್ರತವನ್ನು ಮಾಡಲು ಸುತ್ತಲೂ ಎಲ್ಲಿ ಹುಡುಕಿದರೂ ವಿಘ್ನನಿವಾರಕ ವಿನಾಯಕನ ಗುಡಿಯಾಗಲಿ, ಪ್ರತಿಮೆಯಾಗಲಿ ಭೃಗು ಮಹರ್ಷಿಗಳಿಗೆ ಕಾಣಿಸಲಿಲ್ಲವಂತೆ. ಆಗ ಸ್ವತ: ಮಹರ್ಷಿಗಳು ಅಲ್ಲೇ ಊರ ಬಳಿಯಿದ್ದ ಕೆರೆಯಿಂದ ಜೇಡಿ ಮಣ್ಣನ್ನು ತಂದು ತಾವೇ ಖುದ್ದಾಗಿ ಬೃಹದಾಕಾರದ ಗಣೇಶನ ಪ್ರತಿಮೆಯನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿದರಂತೆ.

ಇದನ್ನೆಲ್ಲ ವೀಕ್ಷಿಸುತ್ತಿದ್ದ ಅಲ್ಲಿನ ಗ್ರಾಮಸ್ಥರು ಅಚ್ಚರಿಗೊಳಗಾಗಿ ಮಹರ್ಷಿಗಳ ಬಳಿ ಗಣಪತಿಯ ವಿಗ್ರಹವನ್ನು ಮಾಡುವ ಬಗೆ ಹಾಗೂ
ಪೂಜಾವಿಧಿ ವಿಧಾನಗಳನ್ನು ಕಲಿಸುವಂತೆ ಕೋರಿಕೆ ಇಟ್ಟರಂತೆ. ಕೂಡಲೇ ಮಹರ್ಷಿಗಳು ಗಣೇಶನ ಪ್ರತಿಮೆ ಮಾಡುವ ಬಗೆ ಹಾಗೂ ಪೂಜಾ ಕ್ರಮಗಳನ್ನು ತಿಳಿಸಿಕೊಟ್ಟರಂತೆ. ಅಂದಿನಿಂದ ಈ ಪದ್ಧತಿ ಅಸ್ತಿತ್ವಕ್ಕೆ ಬಂದಿದೆ ಎಂಬುದು ಇಲ್ಲಿನ ಗ್ರಾಮಸ್ಥರ ಅಭಿಪ್ರಾಯ. ಭೃಗು ಮಹರ್ಷಿಗಳು ತಮ್ಮ ಕೈಯ್ಯಾರೆ ಮಾಡಿದ ಗಣೇಶನ ಮೂರ್ತಿಯು ಬೃಹದಾಕಾರದ ಮೂರ್ತಿಯೆಂದು, ಅದೇ ರೀತಿಯಲ್ಲಿ ಅಲ್ಲಿನ ಸ್ಥಳೀಯ ಕಲಾವಿದರ ಮನೆತನವೊಂದು ಅನಾದಿ ಕಾಲದಿಂದಲೂ ಅಷ್ಟೇ ಬೃಹತ್ ಗಾತ್ರದ ಗಣಪತಿಯ ಮೂರ್ತಿಯನ್ನು ನಿರ್ಮಾಣ ಮಾಡುತ್ತಾ ಬರುತ್ತಿದ್ದಾರೆ ಎಂಬುದಾಗಿ ಹೇಳಲಾಗುತ್ತದೆ.

ಸಾಮಾನ್ಯವಾಗಿ ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ದಿವಸ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ವೈಭವವಾಗಿ ಆಚರಿಸುತ್ತೇವೆ. ಆದರೆ ಗೂಳೂರಿನಲ್ಲಿ ಗಣೇಶ ಚತುರ್ಥಿಯಂದು ಗಣಪನ ಪ್ರತಿಮೆಯ ನಿರ್ಮಾಣದ ಕಾರ‍್ಯ ಆರಂಭಗೊಳ್ಳುತ್ತದೆ. ಗಣೇಶನ ಹಬ್ಬದಂದು ಅಂದರೆ ಗಣೇಶ ಚತುರ್ಥಿಯಂದು ಗೂಳೂರು ಕೆರೆಯ ಜೇಡಿ ಮಣ್ಣಿನಿಂದ ಚಿಕ್ಕದಾದ ಗಣೇಶನ ಮೂರ್ತಿಯನ್ನು ಮಾಡಿ ಅಲ್ಲಿನ ಗಣಪತಿಯ ದೇವಾಲಯದಲ್ಲಿ ಇಟ್ಟು ಪೂಜಿಸಲಾಗುತ್ತದೆ. ಬೃಹದಾಕಾರದ ಗಣೇಶನ ಪ್ರತಿಮೆಯನ್ನು ನಿರ್ಮಿಸುವಾಗ ಗಣಪತಿಯ ಉದರದೊಳಗೆ ವಿಜಯದಶಮಿಯಂದು ಆ ಪುಟ್ಟ ಗಣೇಶನನ್ನು ಇಟ್ಟು ಕಡುಬು, ಮುಂತಾದ ನೈವೇದ್ಯಗಳನ್ನು ಇಡಲಾಗುತ್ತದೆ ಎಂಬುದು ಇಲ್ಲಿನ ವಿಶೇಷ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು, ಮೊದಲಿಗೆ ಗೂಳೂರು ಕೆರೆಗೆ ಗಂಗೆ ಪೂಜೆಯನ್ನು ಸಲ್ಲಿಸಿ ಗಣಪತಿಯ ಪ್ರತಿಮೆಯ ನಿರ್ಮಾಣಕ್ಕೆ ಅಗತ್ಯವಾದಂತಹ ಮಣ್ಣಿನ ಉಂಡೆಗಳನ್ನು ತಂದು ದೇವಾಲಯದಲ್ಲಿ ಇಟ್ಟು ಪೂಜೆ ಸಲ್ಲಿಸಿ, ಅಲ್ಲಿಯೇ ವಿಗ್ರಹ ಮಾಡುವ ಕಾರ‍್ಯವನ್ನು ಭಕ್ತಿಪರ್ವಕವಾಗಿ ಆರಂಭಿಸುತ್ತಾರೆ. ಸುಮಾರು ಎರಡು ತಿಂಗಳುಗಳ ಕಾಲ ಗಣಪನ ನಿರ್ಮಾಣದ ಕಾರ್ಯ ಸುದೀರ್ಘವಾಗಿ ಸಾಗುತ್ತದೆ.

ಕಾರ್ತಿಕ ಮಾಸದ ದೀಪಾವಳಿಯ ವೇಳೆಗೆ ಪ್ರತಿಮೆ ನಿರ್ಮಿಸುವ ಕಾರ್ಯವನ್ನು ಪೂರ್ಣಗೊಳಿಸಿ, ಬಲಿಪಾಡ್ಯಮಿಯ ದಿನದಂದು ಬೃಹದಾಕಾರದ
(ಸುಮಾರು ೯ ರಿಂದ ೧೦ ಅಡಿ ಉದ್ದದ) ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಈ ಬೃಹತ್ ಗಣಪನಿಗೆ ಬೆಲೆ ಬಾಳುವ ಆಭರಣಗಳನ್ನು ತೊಡಿಸಿ, ಕಾರ್ತೀಕ ಮಾಸದ ಒಂದು ತಿಂಗಳ ಕಾಲ ನಿತ್ಯವೂ ವಿಶೇಷವಾದ ಪೂಜಾಕೈಂಕರ‍್ಯಗಳನ್ನು ನೆರವೇರಿಸಲಾಗುವುದು. ಕಾರ್ತೀಕ ಮಾಸದ ಅಮಾವಾಸ್ಯೆಯ ಬಳಿಕ ಊರಿನ ಕೆಲವು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಡಗರದಿಂದ ಗೂಳೂರು ಕೆರೆಗೆ ಬೃಹತ್ ಮಹಾ ಗಣಪತಿಯನ್ನು ವಿಸರ್ಜಿಸಲಾಗುತ್ತದೆ. ಕಾರ್ತೀಕ ಮಾಸದ ಚಳಿಗಾಲದಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಏಕೈಕ ಗೂಳೂರು ಗಣೇಶೋತ್ಸವಕ್ಕೆ ಇಲ್ಲಿನ ಭಕ್ತಾದಿಗಳು ಮಾತ್ರವಲ್ಲ, ತುಮಕೂರು ಜಿಲ್ಲೆಯ ಸುತ್ತಮುತ್ತ ಮತ್ತು ನಾಡಿನಾದ್ಯಂತ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆ ಸಮರ್ಪಣೆ ಮಾಡಿ, ಈ ವಿಶೇಷ ಮಹಾಗಣಪತಿಯ ಕೃಪೆಗೆ ಪಾತ್ರರಾಗುತ್ತಾರೆ.

ಇಂತಹ ಪೌರಾಣಿಕ ಮಹತ್ವವಿರುವ ಅನೇಕ ಸ್ಥಳಗಳು ನಮ್ಮ ಸುತ್ತಮುತ್ತಲು ವಿಶೇಷ ಯಾತ್ರಾ ಸ್ಥಳಗಳಾಗಿ ಪ್ರಸಿದ್ಧಿಯಾಗಿವೆ. ನಮ್ಮ ಮಕ್ಕಳಿಗೂ ಕೂಡ ಇವುಗಳ ಬಗ್ಗೆ ತಿಳಿಯ ಹೇಳುತ್ತಾ ನಾವು ಕೂಡ ಸ್ಥಳ ಪುರಾಣವನ್ನು ತಿಳಿದುಕೊಂಡು ಇಂತಹ ಸ್ಥಳಗಳಿಗೆ ಹೋಗಿ ಭಗವಂತನ
ಕೃಪೆಗೆ ಪಾತ್ರರಾಗೋಣ.

ಇದನ್ನೂ ಓದಿ: #RoopaGururaj