Thursday, 12th September 2024

Roopa Gururaj Column: ತನ್ನ ವರವೇ ಶಾಪವಾಗಿ ಸಾವನ್ನಪ್ಪಿದ ವೃಕಾಸುರ

ವೃಕಾಸುರ ಎಂಬ ರಾಕ್ಷಸನು ಶಿವನನ್ನು ಕುರಿತು ತಪಸ್ಸಾನಚರಿಸತೊಡಗಿದನು. ಅವನು ಶಿವನನ್ನು ಪ್ರಸನ್ನಗೊಳಿಸಲು ತನ್ನ ದೇಹದಿಂದ ಮಾಂಸವನ್ನು ಕತ್ತರಿಸಿ ಯeಗ್ನಿಗೆ ಅರ್ಪಿಸಲು ಪ್ರಾರಂಭಿಸಿದನು. ಇದನ್ನು ತಾಮಸ ರೀತಿಯ ಯಜ್ಞವೆನ್ನುತ್ತಾರೆ. ರಾಕ್ಷಸರು ಈ ರೀತಿಯ ಯಜ್ಞಗಳನ್ನು ಮಾಡುತ್ತಾರೆ. ವೃಕಾಸುರನ ಆಸೆಯನ್ನು ತಿಳಿದಿದ್ದ ಶಿವನು ಅವನ ಮುಂದೆ ಪ್ರತ್ಯಕ್ಷನಾಗಲಿಲ್ಲ. ಆಗ ವೃಕಾಸುರನು ತನ್ನ ತಲೆಯನ್ನು ಕತ್ತರಿಸಿ
ಯಜ್ಞಕ್ಕೆ ಸಮರ್ಪಿಸಲು ಉದ್ಯುಕ್ತನಾದನು. ಆಗ ಶಿವನು ಅವನ ಮುಂದೆ ಬಂದು ಅವನಿಗೆ ಬೇಕಾದ ವರವನ್ನು ಕೇಳುವಂತೆ ಹೇಳಿದನು. ವೃಕಾಸುರನು ತಾನು ಯಾರ ತಲೆಯನ್ನಾದರೂ ಮುಟ್ಟಿದರೆ ಅದು ಕೂಡಲೇ ಒಡೆದು ಅವನು ಸಾಯಬೇಕು ಎಂಬ ಭಯಂಕರವಾದ ಮತ್ತು ಅಸಹ್ಯವಾದ ವರವನ್ನು ಕೇಳಿದನು. ಶಿವನು ಬಹಳ ವಿಷಾದದಿಂದ ಆ ವರವನ್ನು ನೀಡಿದನು.

ವೃಕಾಸುರನು ಬಹುಪಾಪಿಯಾದದ್ದರಿಂದ ತನ್ನ ವರವನ್ನು ಬಳಸಿ ಶಿವನನ್ನು ಕೊಂದು ಪಾರ್ವತಿಯನ್ನು ವಶಪಡಿಸಿಕೊಳ್ಳಬೇಕೆಂದು ತೀರ್ಮಾನಿಸಿ, ಶಿವನ ತಲೆಯ ಮೇಲೆ ತನ್ನ ಕೈಯನ್ನು  ಇಡಲು ಹೋದನು. ಇದನ್ನು ನೋಡಿದ ಶಿವನು ಭಯದಿಂದ ನಡುಗಿದನು ಮತ್ತು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಶಿವನು ಎಲ್ಲಾ ಸ್ಥಳಗಳಿಗೂ ಓಡ ತೊಡಗಿದನು. ಹೀಗೆ ಓಡುತ್ತಿದ್ದ ಶಿವನನ್ನು ನೋಡಿದ ಬ್ರಹ್ಮ, ಇಂದ್ರಾದಿ ದೇವತೆಗಳು ಅವನಿಗೆ ಯಾವ ಸಹಾಯವನ್ನು ಮಾಡಲು ಸಾಧ್ಯವಾಗಲಿಲ್ಲ. ನಂತರ ಶಿವನು ಶ್ವೇತ ದ್ವೀಪದಲ್ಲಿರುವ ವಿಷ್ಣುವಿನ ಬಳಿಗೆ ಹೋದನು. ವಿಷ್ಣು, ತನ್ನ ಯೋಗ ಮಾಯೆಯಿಂದ ಒಬ್ಬ ವಟುವಿನ ವೇಷಧರಿಸಿ, ವೃಕಾಸುರ ನಿಗೆ ಎದುರಾದ. ವಟುವಿನ ವೇಷದಲ್ಲಿದ್ದ ನಾರಾಯಣನು ರಾಕ್ಷಸರಾಜ ವೃಕಾಸುರನನ್ನು ನೋಡಿ ‘ಓಡಿ ಓಡಿ, ಬಹಳವಾಗಿ ದಣಿದಂತೆ ಕಾಣುತ್ತೀರಲ್ಲ, ದೇಹಕ್ಕೆ ಇಷ್ಟೊಂದು ಆಯಾಸ ಕೊಡಬಾರದು, ನಮ್ಮ ದೇಹವೇ ಎಲ್ಲ ಸುಖಕ್ಕೂ ಮೂಲವಲ್ಲವೇ? ನೀವು ಇಷ್ಟು ಆಯಾಸಗೊಳ್ಳಲು ಕಾರಣವೇನು?’ ಎಂದು ಕೇಳಿದ.

ವಟು ವೇಷದಲ್ಲಿದ್ದ, ನಾರಾಯಣನ ಬೆಣ್ಣೆಯಂತ ಮಾತನ್ನು ಕೇಳಿ ವೃಕಾಸುರ ಮುರುಳಾಗಿ ಹೋದ, ತನ್ನ ಕಥೆಯನ್ನೆಲ್ಲ ಹೇಳಿದ. ಆಗ ಆ ವಟು, ಗಹಗಹಿಸಿ ನಗುತ್ತಾ ‘ಅಯ್ಯೋ ಹುಚ್ಚಪ್ಪಾ! ಆ ಮರಳು ರುದ್ರನ ಮಾತನ್ನು ಕೇಳಿ ನೀನು ಕೆಟ್ಟೆ. ಅವನೊಬ್ಬ ಪಿಶಾಚಿಗಳ ರಾಜ, ಪಿಶಾಚಿಗಳ ಮಾತನ್ನು ಯಾರಾದರೂ ನಂಬುತ್ತಾರೆಯೇ? ಬೇಕಾದರೆ ನೀನೇ ಈಗ ಪರೀಕ್ಷೆ ಮಾಡಿ ನೋಡು. ನಿನ್ನ ತಲೆಯ ಮೇಲೆಯೇ ನಿನ್ನ ಕೈಯಿಟ್ಟು ನೋಡು ಶಿವನ ಮಾತು ಎಷ್ಟು ಸುಳ್ಳೆಂದು ಆಗ ನಿನಗೇ ಗೊತ್ತಾಗುತ್ತದೆ. ಆಮೇಲೆ ಆ ರುದ್ರನನ್ನು ಹಿಡಿದು ಇಂತಹ ಸುಳ್ಳನ್ನು ಮತ್ತೆಂದೂ ಅವನು ಹೇಳದಂತೆ ಅವನನ್ನು ಶಿಕ್ಷಿಸಬಹುದು’ ಎಂದ ವಟು ವೇಷದಲ್ಲಿದ್ದ ನಾರಾಯಣ. ಮಂದ ಬುದ್ಧಿಯ ವೃಕಾಸುರ ಈ ವಟುವಿನ ಮಾತನ್ನು ನಂಬಿ, ತನ್ನ ಕೈಯನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡ. ತಕ್ಷಣವೇ ಅವನ ತಲೆಯು ಸೀಳಿ ಹೋಳುಗಳಾಗಿ ಸತ್ತು ನೆಲಕುರುಳಿದ.

ನಂತರ, ನಾರಾಯಣ ಶಿವನನ್ನು ಕರೆದು ಹೇ ದೇವ ಈ ಪಾಪಿ ತನ್ನ ಪಾಪದಿಂದಲೇ ಸತ್ತ. ದೇವಾದಿ ದೇವನಾದ ನಿನಗೇ ಹೀಗೆ ಮೋಸ ಮಾಡಲು ಹೊರಟ ಇಂಥವನಿಗೆ ಹೀಗೇ ಆಗಬೇಕಾಗಿತ್ತು, ನೀವಿನ್ನು ನೆಮ್ಮದಿಯಿಂದ ಕೈಲಾಸಕ್ಕೆ ಹೊರಡಬಹುದು ಎಂದು ಹೇಳಿ ಅವನಿಗೆ ಕೈ ಮುಗಿದು ಬೀಳ್ಕೊಟ್ಟ ಜೀವನದಲ್ಲಿ ನಾವು ಬೆಳೆಯಲು ಅನೇಕರು ನಮಗೆ ನೆರವಾಗಿರುತ್ತಾರೆ. ಅವರ ಉಪಕಾರವನ್ನು ಒಳ್ಳೆಯ ರೀತಿಯಲ್ಲಿ ಸ್ಮರಿಸಿ ಸಾಧ್ಯವಾದರೆ ಪ್ರತ್ಯುಪಕಾರ ಮಾಡಬೇಕು. ಆದರೆ ಎಷ್ಟೋ ಬಾರಿ ನಾವು ಅವರ ಬೆಳವಣಿಗೆಯನ್ನು ಕಂಡು ಹೊಟ್ಟೆಕಿಚ್ಚು ಪಟ್ಟು ಅವರ ಉಪಕಾರವನ್ನು ಮರೆತು ವ್ಯವಹರಿಸಿದಾಗ ನಮ್ಮ ಅಧೋಗತಿಯನ್ನ ನಾವೇ ಬರ ಮಾಡಿ ಕೊಳ್ಳುತ್ತೇವೆ. ಉಪಕಾರ ಸ್ಮರಣೆ ಮತ್ತು ಕೃತಜ್ಞತಾ ಭಾವ ನಾವು ಬದುಕಿನಲ್ಲಿ ಎಂದೆಂದಿಗೂ ಇರಿಸಿಕೊಳ್ಳಬೇಕಾದ ಗುಣಗಳು. ಇವುಗಳನ್ನು ಮರೆತಾಗ ಖಂಡಿತ ಉಳಿಗಾಲವಿಲ್ಲ .

Leave a Reply

Your email address will not be published. Required fields are marked *