Wednesday, 11th December 2024

Roopa_Gururaj_column: ಭಗವಂತನ ನಾಮಸ್ಮರಣೀಯ ಫಲ

ಬೃಂದಾವನದ ಒಬ್ಬ ಗೋಪಿಕೆಯು ನಿತ್ಯ ಹಾಲು ಮೊಸರು ಮಾರಲು ಮಧುರೆಗೆ ಹೋಗುತ್ತಿದ್ದಳು. ಒಮ್ಮೆ ಮಧುರೆಯಲ್ಲಿ ಸಂತರೋಬ್ಬರು ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ತಮ್ಮ ಹರಿಕತೆಯನ್ನು ಮಾಡಿ ಕೊನೆಗೆ ಭಗವಂತನ ನಾಮ ಸ್ಮರಣೆಯಲ್ಲಿ ಎಂತಹ ಸಂಕಷ್ಟವನ್ನೂ ನಿವಾರಿಸುವ ಶಕ್ತಿ ಇದೆ. ಅವನ ನಾಮ ಸ್ಮರಣೆ ಒಂದಿದ್ದರೆ ಸಾಕು ಎಂತಹ ಭವಸಾಗರ ವನ್ನೂ ದಾಟಬಹುದು ಎಂದರು. ಈ ಮಾತು ಅದನ್ನು ಕೇಳುತ್ತಿದ್ದ ಗೋಪಿಕೆಯ ಮೇಲೆ ಬಹಳ ಪರಿಣಾಮ ಬೀರಿತು. ಆಕೆ ಅದನ್ನೇ ಮನಸ್ಸಿನಲ್ಲಿ ಮನನ ಮಾಡಿಕೊಳ್ಳುತ್ತಾ ತನ್ನ ಊರಾದ ಬೃಂದಾವನಕ್ಕೆ ತಲುಪಿದಳು.

ಮಾರನೆಯ ದಿನ ಬೃಂದಾವನದಿಂದ ಮಧುರೆಗೆ ಹೋಗಲು ದಾರಿಯಲ್ಲಿ ಯಮುನಾದ ನದಿಯನ್ನು ದಾಟಬೇಕಿತ್ತು. ಆಗ ಆಕೆಗೆ ಸುಂದರ ಮಾತು ನೆನಪಾಗಿ, ಭಗವಂತನ ನಾಮಸ್ಮರಣೆಯಿಂದ ಭಾವಸಾಗರವನ್ನೇ
ದಾಟಬಹುದಾದರೆ, ಯಮುನಾ ನದಿಯನ್ನೂ ದಾಟ ಬಹುದಲ್ಲವೇ ಎಂದುಕೊಂಡಳು. ಅಂತೆಯೇ ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡುತ್ತಾ ಯಮುನಿಯ ಮೇಲೆ ನಡೆಯತೊಡಗಿದಳು. ಆಶ್ಚರ್ಯ
ವೆನ್ನುವಂತೆ ನೆಲದ ಮೇಲೆ ನಡೆದಂತೆ ಅವಳು ಸಲೀಸಾಗಿ ಯಮುನೆಯನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ದಾಟಿಬಿಟ್ಟಳು.

ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಇನ್ನು ನಾನು ದಿನವೂ ದೋಣಿಗಾಗಿ ನಾವಿಕನನ್ನು ಕಾಯುವ ಭಗವಂತನ ನಾಮ ಸ್ಮರಣೆಯೇ ನನ್ನನ್ನು ಯಮುನೆ ದಾಟಿಸುತ್ತದೆ ಎನ್ನುವ ನಂಬಿಕೆ ಅವಳಲ್ಲಿ ಬಲವಾಗಿ ಬೇರೂರಿತು. ಅಂದಿನ ದಿನ ಅವಳು ಆ ಸಂತರನ್ನು ಕಂಡು ಕೃತಾರ್ಥಳಾಗಿ, ನಿಮ್ಮಿಂದ ನನಗೆ ಬಹಳ ಉಪಕಾರವಾಗಿದೆ ತಾವು ನನ್ನ ಮನೆಗೆ ಭೋಜನಕ್ಕೆ ಬರಬೇಕು ಎಂದು ಕೇಳಿ ಕೊಂಡಳು. ಸಂತರೂ ಅವಳ ಆಹ್ವಾನ ವನ್ನು ಪ್ರೀತಿಯಿಂದ ಒಪ್ಪಿಕೊಂಡರು. ಅವರನ್ನು ಬೃಂದಾವನಕ್ಕೆ ಕರೆತರುತ್ತಿರು ವಾಗ ಪುನಃ ಹಾದಿಯಲ್ಲಿ ಯಮುನಾ ನದಿಯ ಎದುರಾಯಿತ್ತು. ಸಂತರು ನಾವಿಕನನ್ನು ಕರೆಯತೊಡಗಿದರು. ಆಗ ಗೋಪಿಕೆ ಹೇಳಿದಳು – ‘ನಾವಿಕನನ್ನು ಏಕೆ ಕರೆಯುತ್ತಿರು ವಿರಿ..? ನಾವು ಹಾಗೆಯೇ ನಡೆದುಕೊಂಡು ಯಮುನೆ ದಾಟಬಹುದಲ್ಲ…! ನಮಗೀಗ ನಾವೆಯ ಅವಶ್ಯಕತೆ ಇಲ್ಲ’.

ಅವಳ ಈ ಮಾತಿಗೆ ಸಂತರು ‘ಎಂಥ ಮಾತಾಡುತ್ತೀಯಮ್ಮ..! ಯಾವ ಆಸರೆ ಇಲ್ಲದೆ ಈ ಯಮುನೆಯನ್ನು ಹೇಗೆ ದಾಟಬವು..?’ ಎಂದಾಗ. ಗೋಪಿಕೆ ‘ಪೂಜ್ಯರೇ.. ಅಂದು ಪ್ರವಚನದಲ್ಲಿ ನೀವೇ ಆ ದಾರಿಯನ್ನು ತಿಳಿಸಿದ್ದೀರಿ. ಅದರಂತೆ ನಾನು ಭಗವಂತನ ನಾಮಸ್ಮರಣೆಯೊಂದಿಗೆ ಈ ಯಮುನೆಯನ್ನು ದಿನವೂ ದಾಟುತ್ತಿರುವೆ’ ಎಂದಳು. ಸಂತರಿಗೆ ಅವಳ ಮಾತಿನಲ್ಲಿ ವಿಶ್ವಾಸ ಬರಲಿಲ್ಲ. ಹೀಗಾಗಿ ‘ಮೊದಲು ನೀನು ಮುಂದೆ ನಡೆ. ನಾನು ನಿನ್ನ ಹಿಂದಿನಿಂದ ಬರುತ್ತೇನೆ’ ಎಂದರು. ಗೋಪಿಕೆ ಭಗವಂತನ ನಾಮಸ್ಮರಣೆಯೊಂದಿಗೆ ನಿತ್ಯದಂತೆ ನೀರಿನ ಮೇಲೆ ನಡೆಯತೊಡಗಿದಳು. ಸಂತರು ಕೂಡ ನೀರಿನ ಮೇಲೆ ಒಂದು ಹೆಜ್ಜೆ ಇಡುತ್ತಲೇ ನೀರಿನಲ್ಲಿ ಕಾಲು ಸಿಲುಕಿ ಕೊಂಡಿತು. ಅವರಿಗೆ ಬಹಳ ಆಶ್ಚರ್ಯವಾಯಿತು.

ಗೋಪಿಕೆ ಹಿಂತಿರುಗಿ ನೋಡಿದಾಗ ಸಂತರು ನೀರಿನಲ್ಲಿ ಸಿಕ್ಕಿಕೊಂಡಿದ್ದನ್ನು ನೋಡಿ ಆಕೆ ಹಿಂದಕ್ಕೆ ತಿರುಗಿ ಬಂದಳು. ಹಾಗೂ ಅವರ ಕೈಯನ್ನು ಹಿಡಿದು ಮೇಲಕ್ಕೆ ಎತ್ತಿ ತನ್ನೊಂದಿಗೆ ನಡೆಯುವಂತೆ ಹೇಳಿದಳು. ಆಗ ಅವರು ಕೂಡ ಗೋಪಿಕೆಯೊಂದಿಗೆ ಹೆಜ್ಜೆ ಹಾಕಿ ದಡ ಸೇರಿದರು. ನಂತರ ಗೋಪಿಕೆಯ ಚರಣಕ್ಕೆ ನಮಿಸಿ ಭಕ್ತಿಯಿಂದ ಗೋಪಿ ನೀನು ಧನ್ಯೆ! ಭಗವಂತನ ನಾಮ ಸ್ಮರಣೆಯ ಮಹತ್ವವನ್ನು ನಾನು ಎಲ್ಲರಿಗೂ ತಿಳಿಸುತ್ತಿz. ಆದರೆ ಅದರಲ್ಲಿ ಸಂಪೂರ್ಣ ನಂಬಿಕೆ ಇರಿಸಿ ನೀನು ಭಗವಂತನ ಕೃಪೆಯನ್ನು ನಿನ್ನದಾಗಿಸಿಕೊಂಡೆ ಎನ್ನುತ್ತಾ ಶ್ರೀಕೃಷ್ಣನನ್ನು ಕೊಂಡಾಡಿದರು.

ನಿಜವೇ ಅಲ್ಲವೇ? ನಾವೆಲ್ಲರೂ ಭಗವಂತನ ಬಗ್ಗೆ ಬಹಳಷ್ಟು ಮಾತನಾಡುತ್ತೇವೆ. ಆದರೆ ಸಂಪೂರ್ಣವಾಗಿ ಅವನಲ್ಲಿ ನಂಬಿಕೆ ಇರಿಸಿ ಸಂಕಷ್ಟದಲ್ಲಿದ್ದಾಗ ನಮ್ಮನ್ನು ಅವನಿಗೆ ಒಪ್ಪಿಸಿಕೊಂಡು ಬಿಟ್ಟರೆ, ಸಂಸಾರದ ಭವಸಾಗರದಲ್ಲಿ ನಮ್ಮನ್ನು ಹೂವಿನಂತೆ ದಡ ಸೇರಿಸುವಲ್ಲಿ ಭಗವಂತ ಎಂದಿಗೂ ನಮ್ಮ ಕೈಬಿಡುವುದಿಲ್ಲ. ಆ ದೃಢವಾದ ನಂಬಿಕೆ ನಮಗಿರಬೇಕಷ್ಟೆ