Friday, 13th December 2024

‌Roopa Gururaj Column: ಹುಟ್ಟಿದ ಏಳು ದಿನಕ್ಕೇ ರಾಕ್ಷಸ ಸಂಹಾರ ಮಾಡಿದ ಕಾರ್ತಿಕೇಯ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ವಜ್ರಾಂಗ ಹಾಗೂ ವರಾಂಗಿ ಇವರ ಮಗನೇ ತಾರಕಾಸುರ. ಇವನು ಹುಟ್ಟುವಾಗಲೇ ಕೆಲವು ಅಪಶಕುನಗಳುಂಟಾಗಿ ಇವನು ಲೋಕಕಂಟಕನಾಗುತ್ತಾನೆ ಎಂದು ತಿಳಿದವರು ಹೇಳಿದ್ದರು. ಶೂರಪದ್ಮ ನೆಂಬುವನು ಕೂಡಾ ಇವನ ಹಾಗೆ ಲೋಕಕಂಟಕನಾಗಿದ್ದ. ತಾರಕಾಸುರ ಶೋಣಿತಪುರದಲ್ಲಿ ಹಾಗೂ ಶೂರಪದ್ಮ ವೀರ ಮಹೇಂದ್ರ ಎಂಬಲ್ಲಿ ರಾಜರಾದರು.

ತಾರಕಾಸುರ ಬ್ರಹ್ಮನನ್ನು ಕುರಿತು ಘೋರ ತಪಸ್ಸು ಮಾಡಿ, ತನಗೆ ಸಾವು ಬರುವುದಾದರೆ ಶಿವನ ಏಳು ದಿನದ ಮಗನಿಂದ ಎಂದು ವರವನ್ನು ಪಡೆದ. ಶಿವನಿಗೆ ಮದುವೆಯೆಲ್ಲಿ? ಇನ್ನು ಅವನಿಗೆ ಮಗನೆಲ್ಲಿ ಹುಟ್ಟಿಯಾನು? ತನಗೆ ಸಾವಿಲ್ಲ, ಎಂಬ ಗರ್ವದಿಂದ ತಾರಕಾಸುರ ಮೂರು ಲೋಕಗಳನ್ನು ಗೆದ್ದು, ಸ್ವರ್ಗ ಮತ್ತು ಪಾತಾಳಗಳನ್ನೂ ತನ್ನ ಅಧೀನ ಮಾಡಿಕೊಂಡ.

ಸ್ವರ್ಗದಲ್ಲಿ ದೈತ್ಯರನ್ನು ಇರಿಸಿ, ದೇವತೆಗಳಿಗೆ ಕಾಟ ಕೊಡುತ್ತಿದ್ದ. ದೈತ್ಯರ ಕಾಟವನ್ನು ತಾಳಲಾರದೆ ದೇವತೆಗಳು ಬ್ರಹ್ಮನಲ್ಲಿ ಮೊರೆ ಇಟ್ಟರು. ಆಗ ಬ್ರಹ್ಮನೇ ದೇವತೆಗಳಿಗೆ ಒಂದು ಉಪಾಯ ಸೂಚಿಸಿದ. ಹೇಗಾದರೂ ಮಾಡಿ
ತಪೋನಿರತನಾದ ಶಿವ ಪಾರ್ವತಿಯನ್ನು ನೋಡುವಂತೆ ಮಾಡಿ ಎಂದು.

ದಾಕ್ಷಾಯಿಣಿ ಮುಂದಿನ ಜನ್ಮದಲ್ಲಿ ಪರ್ವತರಾಜ ಹಿಮವಂತನ ಮಗಳು, ಪಾರ್ವತಿಯಾಗಿ ಜನಿಸಿ, ಶಿವನನ್ನು ಒಲಿಸಲೆಂದು ತಪೋನಿರತಳಾಗಿ ಕುಳಿತಿದ್ದಳು. ದೇವತೆಗಳ ಆದೇಶದಂತೆ ಶಿವನ ತಪೋಭಂಗ ಮಾಡಲು ಮನ್ಮಥ ತನ್ನ ಪುಷ್ಪ ಬಾಣಗಳನ್ನು ಬಿಟ್ಟು, ಅವನ ತಪೋಭಂಗ ಮಾಡಿದ. ಕೆರಳಿದ ಶಿವ, ರೌದ್ರ ರೂಪ ತಾಳಿ, ತನ್ನ
ಮೂರನೇಯ ಕಣ್ಣನ್ನು ತೆರೆದು ಮನ್ಮಥನನ್ನು ಭಸ್ಮಮಾಡಿದ. ಆಗ ಶಿವನ ತಪಸ್ಸು ಭಂಗವಾಯಿತು.

ಪಾರ್ವತಿ ತಪಸ್ಸಿಗೆ ಕುಳಿತಿರುವುದು, ಋಷಿ ಮುನಿಗಳಿಂದ ಶಿವನಿಗೆ ತಿಳಿಯಿತು. ಆತ ವಟು ವೇಷ ಧರಿಸಿ ಪಾರ್ವತಿಯ ಬಳಿಗೆ ಬಂದು, ಬೇಕೆಂದೇ ಶಿವನನ್ನು ಕುರಿತು ಹೀಯಾಳಿಸಿ ಮಾತನಾಡಿದ. ಶಿವನಿಂದನೆ ತಾಳಲಾರದೆ ಪಾರ್ವತಿ
ವಟುವಿಗೆ ಗದರಿಸಿ ಅ ಜಾಗ ಬಿಟ್ಟು ಬೇರೆಡೆಗೆ, ಹೊರಟು ನಿಂತಳು. ಆಗ ವಟು ವೇಷದಲ್ಲಿದ್ದ ಶಿವ, ತನ್ನ ನಿಜ ಸ್ವರೂಪ ತಾಳಿ, ಪಾರ್ವತಿಯನ್ನು ಮೆಚ್ಚಿಕೊಂಡು ಮದುವೆಗೆ ಒಪ್ಪಿದ. ಶಿವ ಪಾರ್ವತಿಯರ ಕಲ್ಯಾಣ ಋಷಿಮುನಿಗಳ ಸಮ್ಮುಖದಲ್ಲಿ, ವಿಜೃಂಭಣೆಯಿಂದ ನೆರವೇರಿತು.

ಸ್ವಲ್ಪ ಕಾಲದಲ್ಲಿ ಪಾರ್ವತಿಯು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಗಂಡು ಮಗು ಕಾರ್ತಿಕೇಯನಿಗೆ ಜನ್ಮ ನೀಡಿದಳು. ಮಗು ಸೂರ್ಯ ಚಂದ್ರರ ಕಾಂತಿಯನ್ನು ಹೊತ್ತು ತೇಜಸ್ವಿಯಾಗಿತ್ತು. ಅವನು ಶಿವನ ಮಗನಲ್ಲವೇ? ಹುಟ್ಟುವಾಗಲೇ ಶಕ್ತ್ಯಾಯುಧ, ಶೂಲ, ಮಹಾಸ ದಿವ್ಯಾಸಗಳನ್ನು ಧರಿಸಿದ್ದ. ಕೃತ್ತಿಕೆಯರು ಬಂದು
ಮಗುವನ್ನು ಮುದ್ದಿಸಿ ಹಾಲೆರೆದರು. ಶಿವನು ಕುಮಾರನನ್ನು ದೇವತೆಗಳ ಸೈನ್ಯಕ್ಕೆ ಸೇನಾಪತಿಯನ್ನಾಗಿ ನೇಮಿಸಿದ. ತಾರಕಾಸುರನ ವಧೆಗೆ ಕಾರ್ತಿಕೇಯನನ್ನು ದೇವತೆಗಳ ಸೈನ್ಯದೊಂದಿಗೆ ಕಳುಹಿಸಿಕೊಡಲಾ ಯಿತು. ರಣವಾ
ದ್ಯಗಳು ಮೊಳಗಿದವು. ಯುದ್ಧಕ್ಕೆ ಸಿದ್ಧನಾಗಲು ತಾರಕಾಸುರನಿಗೆ ಹೇಳಿ ಕಳುಹಿಸಿದರು.

ತಾರಕಾಸುರ ತನ್ನ ಅರಮನೆಯ ಉಪ್ಪರಿಗೆಯ ಮೇಲಿನಿಂದ ಕಾರ್ತಿಕೇಯನ ಸೈನ್ಯವನ್ನು ನೋಡಿ ದಿಗ್ಭ್ರಮೆಗೊಂಡ. ಯುದ್ಧದಲ್ಲಿ ಇಂದ್ರನೂ ಭಾಗವಹಿಸಿದ್ದ, ಆದರೆ ತಾರಕಾಸುರ ಇಂದ್ರನನ್ನು ಸೋಲಿಸಿಬಿಟ್ಟ. ತಾರಕಾಸುರನ ಶಕ್ತ್ಯಾಯುಧ ಮಹಾವಿಷ್ಣು ಕೂಡ ತತ್ತರಿಸಿದ. ಬ್ರಹ್ಮನ ವರದಂತೆ ಕಾರ್ತಿಕೇಯನೇ ತಾರಕನನ್ನು ಕೊಲ್ಲಬೇಕೆಂದಿತ್ತು.
ಆದರೂ ಏಳು ದಿನದ ಈ ಶಿಶು ತನ್ನನ್ನೇನು ಮಾಡಬಲ್ಲದು ಎಂದುಕೊಂಡಿದ್ದ ಅವನು. ಕಾರ್ತಿಕೇಯ ಬಾಲ ಸೂರ್ಯನಂತೆ ಪ್ರಕಾಶಿಸುತ್ತಿದ್ದ. ಅವನನ್ನು ನೋಡಿ ತಾರಕಾಸುರ, ‘ನೀನಿನ್ನು ಪುಟ್ಟ ಮಗು, ಏನೂ ಅರಿಯದವ,
ಯುದ್ಧವೆಂದರೆ ಆಟವಲ್ಲ, ಹೋಗು ಯುದ್ಧಕ್ಕೆ ನಿನ್ನ ಅಪ್ಪನನ್ನು ಬರ ಹೇಳು’ ಎಂದು ಹೇಳಿದ.

ಕಾರ್ತಿಕೇಯನೇನು ಸಾಮಾನ್ಯನೇ, ಅವನು ಷಣ್ಮುಖ ಶಿವಪುತ್ರ, ‘ತಾರಕಾಸುರನನ್ನು ನೋಡಿ ಯುದ್ಧ ಮಾಡುವು ದನ್ನು ಬಿಟ್ಟು, ಬರೀ ತಲೆ ಹರಟೆ ಮಾತನಾಡುತ್ತಾ ಇರುವೆಯಲ್ಲ. ಇದೊ, ತೆಗೆದುಕೋ’ ಎಂದು ತನ್ನ ತಂದೆ ತಾಯಿಗಳನ್ನು ನೆನೆದು, ಶಕ್ತ್ಯಾಯುಧ ಅವನೆಡೆಗೆ ಬೀಸಿದ. ಅದು ತಾರಕಾಸುರನ ಎದೆಗೆ ಬಲವಾಗಿ ತಿವಿಯಿತು. ತಾರಕಾಸುರ ದೊಡ್ಡ ಮರವೊಂದು ಉರುಳಿ ಬಿದ್ದಂತೆ ಭೂಮಿಗೆ ಉರುಳಿ ಸತ್ತುಬಿದ್ದ. ಮುಂದೆ ಕಾರ್ತಿಕೇಯ ತಾರಕಾಸುರನ ಹಾಗೆ ಬಲಾಢ್ಯನಾಗಿದ್ದ, ಶೂರ ಪದ್ಮನನ್ನು ಕೂಡಾ ಸಂಹರಿಸಿದ. ಶೂರಪದ್ಮನ ಸೆರೆಯಲಿದ್ದ ಅನೇಕ ದೇವತೆಗಳನ್ನು ಬಿಡಿಸಿದ. ರಾಕ್ಷಸತ್ವಕ್ಕೆ ಎಂದಿಗೂ ಸಹ ಗೆಲುವಿಲ್ಲ ಭಗವಂತನನ್ನು ನಂಬಿದವರಿಗೆ ಸೋಲಿಲ್ಲ.

ಇದನ್ನೂ ಓದಿ: #RoopaGururaj