Wednesday, 11th December 2024

ಮತ್ತೊಬ್ಬರಲ್ಲಿ ದೇವರನ್ನು ಕಾಣುವುದು

ShirdiSaibaba

ಶಿರಡಿ ಸಾಯಿಬಾಬಾರವರು ಇರುತ್ತಿದ್ದ ಮಸೀದಿಯಿಂದ ಮೂರು ಮೈಲಿ ದೂರದಲ್ಲಿ ಒಬ್ಬ ಸನ್ಯಾಸಿ ಇದ್ದ. ಪ್ರತಿದಿನ ಅವನು ಬಾಬಾರವರ ದರ್ಶನಕ್ಕಾಗಿ ಮೂರು ಮೈಲಿ ದೂರದಿಂದ ನಡೆದು ಬರುತ್ತಿದ್ದ. ಅವರ ದರ್ಶನ ಮಾಡದ ಹೊರತು ಅವನು ಊಟ ಮಾಡುತ್ತಿರಲಿಲ್ಲ. ಬಹಳಷ್ಟು ಭಕ್ತರ ಕಾರಣ ಅವನಿಗೆ ಒಮ್ಮೊಮ್ಮೆ ದರ್ಶನವೇ ಪ್ರಾಪ್ತ ವಾಗುತ್ತಿರಲಿಲ್ಲ, ಊಟವೂ ಕೊನೆಗೆ ರಾತ್ರಿ ಯಾಗುತ್ತಿತ್ತು.

ಒಂದು ಸಲ ಬಾಬಾ ಅವನಿಗೆ ‘ನೀನು ಇಲ್ಲಿಗೆ ಯಾಕೆ ಬಂದು ಒzಡುತ್ತಿರುವೆ? ನಾನೇ ನೀನಿದ್ದಲ್ಲಿಗೆ ಬರುತ್ತೇನೆ. ಆದರೆ ನೀನು ನನ್ನ ಗುರುತು ಹಿಡಿಯಬೇಕಷ್ಟೇ, ನಿನ್ನ ಊಟ ಸಿದ್ಧವಾಗುವುದರೊಳಗೆ ನಾನೇ ಅಲ್ಲಿಗೆ ಬಂದುಬಿಡುತ್ತೇನೆ’ ಎಂದರು ಆ ಮಾತನ್ನು ಕೇಳಿದ ಸನ್ಯಾಸಿಗೆ ಹಿಡಿಸ ಲಾರದಷ್ಟು ಸಂತೋಷವಾಯಿತು. ‘ತಾವು ಹೀಗೆ ಮಾಡಿದರೆ, ನನ್ನ ಸೌಭಾಗ್ಯ ಮಹಾಸ್ವಾಮಿ, ನಾನು ನಾಳೆಯಿಂದ ನಿಮಗಾಗಿ ಕಾಯುತ್ತಿರುವೆ’ ಎಂದು ಹೇಳಿದ.

ಬೆಳಗಾಯಿತು ಸನ್ಯಾಸಿ ತನ್ನ ಊಟವನ್ನು ಬೇಗ ಬೇಗನೆ ತಯಾರಿಸಿ ಬಾಬಾ ಅವರ ಬರುವಿ ಗಾಗಿ ಕಾಯ ತೊಡಗಿದ. ಎಷ್ಟು ಸಮಯ ವಾದರೂ, ಅವರು ಬರಲಿಲ್ಲ. ಸ್ವಲ್ಪ ಸಮಯದ ನಂತರ ಒಂದು ನಾಯಿ ಬಂತು, ಅದಕ್ಕೆ ಇವನು ಮಾಡಿದ ಅಡುಗೆಯ ವಾಸನೆ ಬಂದಿರಬೇಕು ಎಂದುಕೊಂಡು ಅದನ್ನು ಒಂದು ಕೋಲಿನಿಂದ ಹೊಡೆದು ದೂರ ಅಟ್ಟಿದ. ಆಮೇಲೆ ಮತ್ಯಾರೂ ಬರಲೇ ಇಲ್ಲ, ಮಧ್ಯಾಹ್ನವಾಯಿತು, ಬಾಬಾರನ್ನು ನೋಡಲು ಮಸೀದಿಯ ಕಡೆಗೆ ಹೋಗಿ ಆ ಭಕ್ತರ ನುಗ್ಗಾಟ ದಲ್ಲಿ ಕಾದು ಕೊನೆಗೆ ಬಾ ಬಾರನ್ನು ಕಂಡು ಬಾಬಾ ನೀವು ಬರಲೇ ಇಲ್ಲವಲ್ಲ ಎಂದು ದೀನನಾಗಿ ಕೇಳಿದ. ಆಗ ಬಾಬಾ. ‘ನಾನು ಬಂದಿದ್ದೇ ನಿನ್ನಿಂದ
ಎರಡು ಏಟನ್ನೂ ತಿಂದೆ ನೀನು ನನ್ನನ್ನು ಗಮನಿಸಲಿಲ್ಲ ಅಷ್ಟೇ’ ಎಂದರು. ಅದಕ್ಕೆ ಸನ್ಯಾಸಿ ಗಾಬರಿಯಾಗಿ ‘ಏನು, ನಾನು ಏಟು ಕೊಟ್ಟೆನೇ ನನಗೆ ನೀವು ಕಾಣಲೇ ಇಲ್ಲವಲ್ಲ!

ಒಂದು ನಾಯಿ ಬಿಟ್ಟು ಇನ್ಯಾರು ಬರಲೇ ಇಲ್ಲವಲ್ಲ’ ಎಂದ. ಆಗ ಬಾಬ ನಗುತ್ತಾ ‘ಆ ನಾಯಿಯೇ ನಾನು. ನಾನು ಮೊದಲೇ ನಿನಗೆ ಹೇಳಿರಲಿಲ್ಲವೇ? ಖಂಡಿತವಾಗಿ ನಾನು ಬಂದೇ ಬರುತ್ತೇನೆ ನೀನು ನನ್ನ ಗುರುತು
ಹಿಡಿಯ ಬೇಕಷ್ಟೇ ಎಂದು. ನನಗೆ ಬರಲು ಯಾವ ರೂಪ ಆ ಸಮಯಕ್ಕೆ ಸರಳ ಸುಲಭ ಎನಿಸುವುದೋ ಅದೇ ರೂಪದಲ್ಲಿ ನಾನು ಬರುವುದು. ಏನು ಮಾಡಲಿ? ಆ ಕಾಲಕ್ಕೆ ನನಗೆ ಆ ರೂಪ ಸರಿ ಎನಿಸಿತ್ತು. ಅದೇ ರೂಪದಲ್ಲಿ ಬಂದು, ನಿನ್ನಿಂದ ಏಟನ್ನು ತಿಂದೆ’ ಎಂದರು ಬಾಬಾ.

ಸನ್ಯಾಸಿ ಬಿಕ್ಕಿ ಬಿಕ್ಕಿ ಅಳತೊಡಗಿದ, ‘ಅಯ್ಯೋ ನಾನು ಬಹಳ ತಪ್ಪು ಮಾಡಿಬಿಟ್ಟೆ, ಅದು ನೀವೆಂದು ನನಗೆ ತಿಳಿಯಲೇ ಇಲ್ಲ, ಹೋಗಲಿ ಇನ್ನೊಂದು ಅವಕಾಶವನ್ನು ದಯಪಾಲಿಸಿ, ನಾಳೆ ಏನಾದರಾಗಲಿ ಖಂಡಿತವಾಗಿ ನಿಮ್ಮನ್ನು ಗುರುತಿಸುತ್ತೇನೆ’ ಎಂದು ಹೇಳಿದ ಸನ್ಯಾಸಿ. ಮರುದಿನ ಬಾಬಾರವರು, ಒಬ್ಬ ಕುಷ್ಟರೋಗಿ ಭಿಕ್ಷುಕನ ವೇಷದಲ್ಲಿ ಬಂದರು. ಅವನ ಹತ್ತಿರ ನಿಲ್ಲಲು ಕೂಡಾ ಸಾಧ್ಯವಿಲ್ಲದಂತಾ ದುರ್ಗಂಧದ ವಾಸನೆ ಬರುತ್ತಿತ್ತು. ಸನ್ಯಾಸಿ ಅಯ್ಯಾ ದಯವಿಟ್ಟು ಹತ್ತಿರ ಬರಬೇಡ, ಮುಂದೆ ಹೋಗು ಎಂದು ಅವನನ್ನು ಗದರಿಸಿ ಮುಂದಕ್ಕೆ ಕಳಿಸಿದ. ಆದರೆ ಅವನಿಗೆ ಆಗ ಸಂಶಯವೂ ಉಂಟಾಯಿತು, ಆದರೂ ಛೇ ಬಾಬಾ ಎಲ್ಲಿ, ಇವನೆಲ್ಲಿ ಯಾವುದಕ್ಕೂ ಹೋಲಿಕೆಯೇ ಇಲ್ಲ, ಎಂದುಕೊಂಡ.

ಕಾದು ಕಾದು ನಂತರ ಬಾಬಾ ಬಳಿ ಹೋಗಿ ವಿಚಾರಿಸಿದಾಗ ‘ನಾನು ಬಂದಿದ್ದೇ, ನಿನಗೆ ದುರ್ಗಂಧವನ್ನು ತಾಳಲಾಗಲಿಲ್ಲವಲ್ಲ! ದೂರದಿಂದಲೇ ನನ್ನನ್ನು ಗದರಿಸಿ ಅಟ್ಟಿದೆ’ ಎಂದರು ಬಾಬಾ. ಸನ್ಯಾಸಿ ಜೋರಾಗಿ ಅಳತೊಡಗಿದ, ‘ಇನ್ನೊಂದು ಸಲ ದಯಮಾಡಿ ಬನ್ನಿ, ಖಂಡಿತ ವಾಗಿ ನಾನು ನಿಮ್ಮನ್ನು ಗುರುತಿಸುತ್ತೇನೆ’ ಎಂದ. ಅದಕ್ಕೆ ಬಾಬಾ ಹೇಳಿದರು ‘ಒಂದಲ್ಲ, ಸಾವಿರ ಸಲ ಬಂದರೂ, ನೀನು ನನ್ನನ್ನು ಗುರುತಿಸಲಾರೆ’.
ದೇವರು ಯಾವ ರೂಪದಲ್ಲಿ ಬೇಕಾದರೂ ನಮ್ಮ ಸುತ್ತಲೂ ಇರುತ್ತಾನೆ. ಮಾನವೀಯ ಸಂವೇದನೆಯಿಂದ ಬದುಕಿದಾಗ ಮಾತ್ರ ಅವನನ್ನು ಎಲ್ಲರಲ್ಲೂ ಕಾಣುತ್ತೇವೆ.