Saturday, 14th December 2024

ಹದಿನಾರು ಮುಖಗಳ ಚಾವಡಿ

ಕೆಂಗೇರಿ ಚಕ್ರಪಾಣಿ

ನಂಜನಗೂಡಿನಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಹೆಡತಲೆ ಎಂಬ ಗ್ರಾಮದ ಲಕ್ಷ್ಮೀಕಾಂತ ದೇವಾಲಯದ ಶಿಲಾ
ದೇಗುಲ ಬಹು ವಿಶಿಷ್ಟ. ಇಲ್ಲಿರುವ ಹದಿನಾರು ಕಂಬಗಳ ಚಾವಡಿಯು, ತನ್ನ ಕಂಬಗಳ ವಿಶೇಷತೆಯಿಂದ ಸಾಕಷ್ಟು ಹೆಸರುವಾಸಿ. ಭೀಮಣ್ಣ ದಂಡ ನಾಯಕನು ನಿರ್ಮಿಸಿದ ಹದಿನಾರು ಕಂಬಗಳ ಈ ಚಾವಡಿಯು ಇಂದು ತನ್ನ ನಿರ್ಮಾಣ ಕೌಶಲ್ಯದಿಂದ ಭಕ್ತರ ಮತ್ತು ಪ್ರವಾಸಿಗರ ಗಮನ ಸೆಳೆಯುತ್ತದೆ.

ಹದಿನಾರು ಮುಖಗಳ ಚಾವಡಿ
ಲಕ್ಷ್ಮೀಕಾಂತ ದೇವಾಲಯದ ಮುಖಮಂಟಪವನ್ನು ವಿಶೇಷವಾಗಿ ರೂಪಿಸಲಾಗಿದೆ. ಪ್ರಸ್ತುತ ಮಂಟಪಕ್ಕೆ 24 ಕಂಬಗಳಿದ್ದು ನಾಲ್ಕು ದಿಕ್ಕಿನಲ್ಲಿಯೂ ಪ್ರವೇಶ ದ್ವಾರವಿದೆ. ದೇವಾಲಯದ ಜೀರ್ಣೋದ್ಧಾರ ಸಂದರ್ಭದಲ್ಲಿ ಉತ್ತರ ದಿಕ್ಕಿನಲ್ಲಿರುವ ಮುಚ್ಚಿದ ದ್ವಾರವನ್ನು ತೆರೆಯಲಾಗಿದೆ. 24ಕಂಬಗಳ ಮುಖಮಂಟಪದಲ್ಲಿ ಕುಳಿತುಕೊಳ್ಳಲು 16 ಜಗುಲಿಗಳನ್ನು ನಿರ್ಮಿಸಲಾಗಿದೆ.
ಭೀಮಣ್ಣ ದಂಡನಾಯಕ ತನ್ನ ಮಗಳೂ, ಅಳಿಯಂದಿರನ್ನು ನೋಡಬೇಕೆನಿಸಿದಾಗ ಎಲ್ಲರನ್ನೂ ಒಟ್ಟಿಗೆ ಕರೆಸುತ್ತಿದ್ದನು. ಆತ ಮತ್ತು ಆತನ ಪತ್ನಿಯು ಮಂಟಪದ ಉತ್ತರ ಭಾಗದಲ್ಲಿರುವ ಪೀಠದ ಮೇಲೆ ಕೂರುತ್ತಿದ್ದರು.

ಮಗಳು ಅಳಿಯಂದಿರು ತಲಾ ಒಂದೊಂದು ಜೋಡಿ 16 ಜಗಲಿಗಳ ಮೇಲೆ ಆಸೀನರಾಗುತ್ತಿದ್ದರು. ಇಲ್ಲಿ ವಿಶೇಷವೇನೆಂದರೆ, ರಾಜನಿಗೆ ಹದಿನಾರು ಜನ ದಂಪತಿಗಳು ಕಾಣುತ್ತಿದ್ದರು. ಆದರೆ ರಾಣಿಗೆ ಕೇವಲ ಹೆಣ್ಣುಮಕ್ಕಳು ಮಾತ್ರ ಕಾಣುತ್ತಿದ್ದು ಯಾವ ಅಳಿಯನ ಮುಖವೂ ಕಾಣುತ್ತಿರಲಿಲ್ಲ. ಪ್ರತಿಯೊಬ್ಬ ಅಳಿಯನ ಮುಂದೆ ಯಾವುದಾದರೊಂದು ಕಂಬವು ಅಡ್ಡಬಂದು ಆಕೆಗೆ ಅಳಿಯಂದಿರು ಕಾಣದಂತೆ ಚಮತ್ಕಾರದಿಂದ ರೂಪಿಸಲಾಗಿದೆ. ಇಂತಹ ಮುಖಮಂಟಪವನ್ನು ನಿರ್ಮಿಸಿದ ಅಂದಿನ ವಾಸ್ತು ಶಿಲ್ಪಿಗೆ ತಲೆಬಾಗಲೇಬೇಕು.

ಸುಂದರ ಲಕ್ಷ್ಮೀಕಾಂತ ದೇವಾಲಯ

ಹೆಡತಲೆಯ ಲಕ್ಷ್ಮೀಕಾಂತ ದೇವಾಲಯವು ಹೊಯ್ಸಳರ ಕಾಲದ ಸುಮಾರು ಹದಿಮೂರನೆಯ ಶತಮಾನದ ತ್ರಿಕೂಟಾಚಲ ದೇವಾಲಯ. ಕಣಶಿಲೆಯಲ್ಲಿ ನಿರ್ಮಿಸಿರುವ ದೇವಾಲಯದ ಪ್ರಧಾನ ದೇವತೆ ಲಕ್ಷ್ಮೀಕಾಂತನಾಗಿದ್ದರೆ, ಉತ್ತರ ಗರ್ಭಗೃಹದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಹಾಗೂ ದಕ್ಷಿಣ ಗುಡಿಯಲ್ಲಿ ಸುಂದರ ಕೊಳಲು ಗೋಪಾಲಕೃಷ್ಣರ ಅಂದದ ಮೂರ್ತಿಗಳಿವೆ. ನವರಂಗ ದಲ್ಲಿ ಲಕ್ಷ್ಮೀಕಾಂಸ್ವಾಮಿಗೆ ಬಲಭಾಗದಲ್ಲಿ ರಂಗಪ್ರಿಯ ಸ್ವಾಮಿಗಳಿಂದ ಸ್ಥಾಪಿತವಾಗಿರುವ ಆಂಡಾಳ್ ತಾಯಿಯ ಸುಂದರ ಮೂರ್ತಿಯಿದೆ. ಈ ದೇವಾಲಯಕ್ಕೆ ಅಂದವಾದ ಶಿಖರವಿದ್ದು ಸುತ್ತಲೂ ಪ್ರಾಕಾರ ಮಂಟಪವಿದೆ.

ಕಾಲನ ಹೊಡೆತಕ್ಕೆ ಸಿಕ್ಕು ಹೆಡತಲೆಯ ಲಕ್ಷ್ಮೀಕಾಂತ ದೇವಾಲಯವು ಶಿಥಿಲವಾಗಿ ನೆಲಕಚ್ಚುವ ಹಂತವನ್ನು ತಲುಪಿತ್ತು. ಈ ದೇವಾಲಯವನ್ನು ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್  ವತಿಯಿಂದ ಹಾಗೂ ಟಿ.ವಿ.ಎಸ್. ಸಂಸ್ಥೆ ಮತ್ತು ಸ್ಥಳೀಯ ದಾನಿಗಳ ಸಹಯೋಗದಿಂದ ಮೂಲಸ್ವರೂಪಕ್ಕೆ ಧಕ್ಕೆ ಬರದ ರೀತಿ, ಜೀರ್ಣೋದ್ಧಾರ ಮಾಡಲಾಗಿದೆ.

ಮಂಟಪದ ಚಮತ್ಕಾರ

ಹೆಡತಲೆಯ ಲಕ್ಷ್ಮೀಕಾಂತ ದೇವಾಲಯವನ್ನು ಪ್ರವೇಶಿಸುವ ಪ್ರವಾಸಿಗರಿಗೆ ಒಮ್ಮೆಲೆ ಚಾವಡಿಯು ನಿರ್ಮಿಸಿದ ಉದ್ದೇಶವಾಗಲಿ ಹಾಗೂ ಅದರ ವಿಶೇಷತೆಯಾಗಲಿ ತಿಳಿಯುವುದಿಲ್ಲ. ಲಕ್ಷ್ಮೀಕಾಂತ ದೇವಾಲಯದ ಅರ್ಚಕರಾದ ನಾರಾಯಣ್‌ರವರು ಮುಖ ಮಂಟಪದ ಚಮತ್ಕಾರಿಕ ನಿರ್ಮಾಣವನ್ನು ಸೊಗಸಾಗಿ ವಿವರಿಸುವಲ್ಲಿ ಸಿದ್ಧಹಸ್ತರು.

ಇಲ್ಲಿ ಯಾವ ರೀತಿ ಹದಿನಾರು ಕಂಬಗಳು ಮತ್ತು ಜಗುಲಿಗಳು ರೂಪಗೊಂಡಿವೆ ಎಂದು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಇಲ್ಲಿ
ಪ್ರವಾಸಿಗಳೇ ಪಾತ್ರಧಾರಿಗಳಾಗುತ್ತಾರೆ. ಆಗಮಿಸಿದ ಪ್ರವಾಸಿಗರನ್ನು ಪಾಳೆಯಗಾರ ದಂಪತಿಗಳು ಕೂಡುತ್ತಿದ್ದ ಸ್ಥಳದಲ್ಲಿ ನಿಲ್ಲಿಸು ತ್ತಾರೆ. ಉಳಿದ ಪ್ರವಾಸಿಗರನ್ನು ದಂಪತಿಗಳಂತೆ ಜಗುಲಿಗಳ ಮೇಲೆ ಕೂಡಿಸುತ್ತಾರೆ. ನಂತರ ತಾಳ್ಮೆಯಿಂದ ಪ್ರವಾಸಿಗರಿಗೆ ಮನವರಿಕೆಯಾಗುವಂತೆ ವಿವರಿಸುತ್ತಾರೆ.

ಅರ್ಚಕರೇ ಮಾರ್ಗದರ್ಶಕರು
ಹೆಡತಲೆ ಲಕ್ಷ್ಮೀಕಾಂತ ದೇಗುಲದ ಅರ್ಚಕರಾದ ನಾರಾಯಣ್‌ರವರು ಇಲ್ಲಿನ ಹದಿನಾರು ಕಂಬಗಳ ವಿಶೇಷವನ್ನು ವಿವರವಾಗಿ
ವರ್ಣಿಸುವುದರ ಜತೆಯಲ್ಲೇ, ಗರ್ಭಗುಡಿಯ ದೇವತಾಮೂರ್ತಿಗಳ ಬಗ್ಗೆಯೂ, ಅವುಗಳ ಆಯುಧಗಳ ವಿನ್ಯಾಸ, ಆಂಡಾಳ ದೇವಿಯ ನೇತ್ರಗಳು ದೀಪದ ಬೆಳಕಿನಲ್ಲಿ ಚಲಿಸಿದಂತೆ ಗೋಚರಿಸುವುದು, ನರಸಿಂಹ ವಿಗ್ರಹದ ಮುಖಾರವಿಂದದಲ್ಲಿ ಹೊರ ಹೊಮ್ಮುವ ದಿವ್ಯ ತೇಜಸ್ಸು ಮುಂತಾದವುಗಳನ್ನು ಕಲಾತ್ಮಕವಾಗಿ ಭಕ್ತಿಭಾವದಿಂದ ತನ್ಮಯರಾಗಿ ವಿವರಿಸುವರು. ಪ್ರವಾಸಿಗರಿಗೆ ದೇವಾಲಯದ ವಿಶೇಷತೆಯನ್ನು ವಿವರಿಸುವಲ್ಲಿ ಇವರಿಗೆ ಅಪಾರ ತಾಳ್ಮೆ.