Saturday, 14th December 2024

2020 ಚಿತ್ರರಂಗಕ್ಕೆ ತಂದೊಡ್ಡಿತು ಆಪತ್ತು !

ಪ್ರಶಾಂತ್‌ ಟಿ.ಆರ್‌

ಚಿತ್ರರಂಗ ಪಾಲಿಗೆ ನಷ್ಟ, ಕಷ್ಟ, ನೋವು, ಸಂಕಟ, ಹತಾಶೆ, ಅವಮಾನ ತಂದ ಈ ವರ್ಷ.

ಪ್ರತಿವರ್ಷದಲ್ಲೂ ಕನ್ನಡ ಚಿತ್ರರಂಗ ಹೊಸತನ್ನು ಹೊತ್ತು ಬರುತ್ತಿತ್ತು. ವರ್ಷಾರಂಭದಲ್ಲಿ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿದ್ದವು.

ಅಷ್ಟು ಮಾತ್ರವಲ್ಲ ಹಬ್ಬ, ವಿಶೇಷ ದಿನಗಳಲ್ಲೂ ಹೈ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿದ್ದವು. ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದವು. 2019 ಕಳೆಯುತ್ತಿದ್ದಂತೆ 2020ರಲ್ಲಿ ಮತ್ತಷ್ಟು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದ್ದವು. ಹೊಸ ವರ್ಷದಲ್ಲಿ ಹೊಸ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದರು. ಅಂತೆಯೇ ವರ್ಷದ ಮೊದಲ ಎರಡು ತಿಂಗಳು ಕೆಲ ವಷ್ಟು ಹೊಸ ಚಿತ್ರ ಗಳು ಬಿಡುಗಡೆಯಾದವು. ಆ ಬಳಿಕ ಕಾಡಿದ ಕರೋನಾ ವೈರಸ್‌ನಿಂದಾಗಿ ಇಡೀ ಚಿತ್ರರಂಗ ಸ್ತಬ್ಧವಾ ಯಿತು.

ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬರೋಬ್ಬರಿ ಆರು ತಿಂಗಳ ಕಾಲ ಸ್ಥಗಿತವಾಗಿದ್ದವು. ಆರಂಭದಲ್ಲಿ ‘ದಿಯಾ’, ‘ಲವ್ ಮಾಕ್‌ಟೇಲ್’, ‘ಶಿವಾರ್ಜುನ’, ‘ದ್ರೋಣಾ’, ‘ಶಿವಾಜಿ ಸುರತ್ಕಲ್’, ‘ಜಂಟಲ್‌ಮನ್’… ಹೀಗೆ ಒಂದಷ್ಟು ಚಿತ್ರಗಳು ರಿಲೀಸ್ ಆದವು. ‘ಶಿವಾಜಿ ಸುರತ್ಕಲ್’, ‘ಲವ್ ಮಾಕ್‌ಟೇಲ್’ ಸಿನಿಮಾಗಳನ್ನು ಬಿಟ್ಟರೆ ಮತ್ತಾವ ಚಿತ್ರಗಳು ಮೆಚ್ಚುಗೆಯಾಗಲೇ ಇಲ್ಲ.

ಚಿತ್ರಮಂದಿರದಲ್ಲಿ ಉಳಿಯಲೇ ಇಲ್ಲ. ಚಿರಂಜೀವಿ ಸರ್ಜಾ ಅಭಿನಯಿಸಿದ್ದ ‘ಶಿವಾರ್ಜುನ’ ತೆರೆಗೆ ಬಂದ ಕೆಲವೇ ದಿನಗಳಲ್ಲಿ
ದೇಶಾದ್ಯಂತ ಲಾಕ್‌ಡೌನ್ ಜಾರಿಯಾಯಿತು. ಹಾಗಾಗಿ ಚಿತ್ರಮಂದಿರಗಳೆಲ್ಲಾ ಮುಚ್ಚಿದವು. ಹಂತ ಹಂತವಾಗಿ ಅಲ್‌ಲಾಕ್ ಪ್ರಕ್ರಿಯೆ ಆರಂಭವಾದಾಗ ಬೆರಳೆಣಿಕೆಯ ಚಿತ್ರಮಂದಿರಗಳು ಮಾತ್ರ ತೆರೆದವು. ಆ ಸಂದರ್ಭ ‘ರೀ ರಿಲೀಸ್ ಪರ್ವ’ ಆರಂಭ ವಾಯಿತು.

ಹಿಂದೆ ತೆರೆಕಂಡ ಚಿತ್ರಗಳೇ ಮತ್ತೆ ಬೆಳ್ಳಿ ಪರದೆಯಲ್ಲಿ ಪ್ರದರ್ಶನ ಆರಂಭಿಸಿದವು. ಜತೆಗೆ ಥಿಯೇಟರ್ ‌ನಲ್ಲಿ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದ್ದರಿಂದ ಹೆಚ್ಚಿನ ಪ್ರೇಕ್ಷಕರು ಚಿತ್ರಮಂದಿರದತ್ತ ಸುಳಿಯಲೇ ಇಲ್ಲ. ಇದರಿಂದ ಚಿತ್ರಗಳು ಬಿಡುಗಡೆಯಾದರೂ, ಮೊದಲಿನ ಸಂಭ್ರಮ ಇರಲಿಲ್ಲ. ಈ ನಡುವೆಯೇ ‘ಆಕ್ಟ್‌ 1978’ ಚಿತ್ರ ಎಲ್ಲಾ ಅಡೆತಡೆಗಳನ್ನು ಮೀರಿ ಬಿಡುಗಡೆ ಯಾಯಿತು.

ಯಶಸ್ವಿ ಪ್ರದರ್ಶನ ಕಂಡಿತು. ಇದನ್ನು ಗಮನಿಸಿದ ಉಳಿದ ನಿರ್ಮಾಪಕರು, ತಮ್ಮ ಚಿತ್ರಳನ್ನು ಬಿಡುಗಡೆ ಮಾಡಲು ಮುಂದಾ ದರು. ಅಂತು ಕರೋನಾ ನಡುವೆಯೇ ಹತ್ತಾರು ಚಿತ್ರಗಳು ಬಿಡುಗಡೆ ಯಾದವು. ಇನ್ನು ಚಿತ್ರೀಕರಣ ಮುಗಿಸಿ ತೆರೆಗೆ ಬರಬೇಕಿದ್ದ ಸ್ಟಾರ್ ನಟರ ಚಿತ್ರಗಳು ಬಿಡುಗಡೆ ದಿನಾಂಕ ವನ್ನು ಮುಂದೂಡುತ್ತಲೇ ಬಂದಿವೆ. ಇಂದಿಗೂ ರಿಲೀಸ್ ದಿನಾಂಕ ನಿಗಧಿಯಾಗಿಲ್ಲ. ಹಾಗಾಗಿ ತಮ್ಮ ನೆಚ್ಚಿನ ನಟರ ಚಿತ್ರಗಳನ್ನು ಯಾವಾಗ ಕಣ್ತುಂಬಿಕೊಳ್ಳುವುದು ಎಂದು ಪ್ರೇಕ್ಷಕರು ಕಾದು ಕುಳಿತ್ತಿದ್ದಾರೆ.

ಶಿವರಾಜ್‌ಕುಮಾರ್ ಅಭಿನಯಿಸಿರುವ ‘ಭಜರಂಗಿ 2’,‘ ದರ್ಶನ್’ ಅಭಿನಯದ ‘ರಾಬರ್ಟ್’, ಕಿಚ್ಚ ಸುದೀಪ್ ನಟಿಸಿರುವ ಕೋಟಿ ಗೊಬ್ಬ 3, ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’, ದುನಿಯಾ ವಿಜಿ ನಟಿಸಿ, ನಿರ್ದೇಶಿಸಿರುವ ‘ಸಲಗ’, ಖದರ್ ತೋರಲು ಬರುತ್ತಿರುವ ‘ಪೊಗರು’, ಯಶ್ ನಟಿಸಿರುವ ‘ಕೆಜಿಎಫ್ 2’ ಶ್ರೀಮುರಳಿಯ ‘ಮದಗಜ’… ಹೀಗೆ ಹಲವು ಚಿತ್ರಗಳು ಈ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ ಇದಕ್ಕೆ ಕರೋನಾ ಅಡ್ಡಿಪಡಿಸಿದೆ.

ಈ ಹಿಂದೆ ಪ್ರತಿವರ್ಷ ಸುಮಾರು ಇನ್ನೂರ ಮೂವತ್ತಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರುತ್ತಿದ್ದವು. ಆದರೆ ಈ ಬಾರಿ ಮೂವತ್ತಕ್ಕೂ ಕಡಿಮೆ ಚಿತ್ರಗಳು ರಿಲೀಸ್ ಆಗಿವೆ. ಒಂದು ಅಂದಾಜಿನ ಪ್ರಕಾರ ಈ ಬಾರಿ ಕನ್ನಡ ಚಿತ್ರರಂಗಕ್ಕೆ ಬರೋಬ್ಬರಿ ಸಾವಿರ ಕೋಟಿ ಗಳಷ್ಟು ನಷ್ಟವಾಗಿದೆ.

ಹಾಡು ನಿಲ್ಲಿಸಿದ ಗಾನ ಗಾರುಡಿಗ
ನಾಲ್ಕು ದಶಕಗಳಿಂದ ತಮ್ಮ ಇಂಪಾದ ಕಂಠಸಿರಿಯಿಂದ ಗಾನಸುಧೆ ಹರಿಸಿ, ಸಂಗೀತ ಪ್ರೇಮಿಗಳನ್ನು ರಂಜಿಸಿದ್ದ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಮಣ್ಯಂ ಅವರು ನಿಧನರಾಗಿದ್ದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ತಂದಿದೆ. ಎಸ್.ಪಿ.ಬಿ. ಗಾಯಕರಾಗಿ, ಉತ್ತಮ ನಟರಾಗಿಯೂ ನಮ್ಮ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಕಾಣದಂತೆ ಬಂದೆರಗಿದ ಕರೋನಾ ಎಂಬ ಹೆಮ್ಮಾರಿ ಅವರ ಜೀವವನ್ನೇ ಕಸಿಯಿತು. ಕೋವಿಡ್‌ನಿಂದ ಆಸ್ಪತ್ರೆ ಸೇರಿದ್ದ ಎಸ್.ಪಿ.ಬಿ, ಸುರಕ್ಷಿತವಾಗಿ ಮರಳಿ ಬರುವೆ, ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿ ಅಭಿಮಾನಿಗಳಲ್ಲಿ ಧೈರ್ಯ ತುಂಬು ತ್ತಿದ್ದರು. ಅವರ ಆರೋಗ್ಯ ಚೇತರಿಕೆಗೆ ಎಲ್ಲೆಡೆಯೂ ಪ್ರಾರ್ಥನೆಗಳು ನಡೆದವು.

ಇನ್ನೇನು ಎಸ್‌ಪಿಬಿ ಅವರು ಆರೋಗ್ಯವಾಗಿ ಮನೆಗೆ ಮರುಳುತ್ತಾರೆ. ಮತ್ತೆ ತಮ್ಮ ಇಂಪಾದ ಗಾಯನ ದಿಂದ ನಮ್ಮನ್ನು ರಂಜಿಸು ತ್ತಾರೆ ಎಂದುಕೊಳ್ಳುತ್ತಿರುವಾಗಲೇ, ಎಸ್.ಪಿ.ಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಕಹಿ ಸುದ್ಧಿ ಚೆನ್ನೈನ ಎಂಜಿಎಂ ಆಸ್ಪತ್ರೆಯಿಂದ ಹೊರ ಬಿದ್ದಿತು. ಇದನ್ನು ಕೇಳಿದ ಅಭಿಮಾನಿಗಳ ಜಂಘಾಬಲವೇ ಉಡುಗಿಹೋಯಿತು. ಸೆಪ್ಟೆಂಬರ್ 25ರಂದು ಎಸ್‌ಪಿಬಿ ಅವರು ಎಲ್ಲರನ್ನೂ ಅಗಲಿದರು. ಸ್ವರ ಮಾಂತ್ರಿಕ ಇನ್ನಿಲ್ಲ ಎಂಬುದನ್ನು ಕೇಳಿ ಇಡೀ ಭಾರತೀಯ ಚಿತ್ರರಂಗ ಮರುಗಿತು. ಇಷ್ಟು ದಿನ ಹಾಡಿನ ಮೂಲಕ ನಮ್ಮನ್ನು ರಂಜಿಸಿದ, ಎಚ್ಚರಿಸಿದ ಎಸ್.ಪಿ.ಬಿ ಎಂಬ ಗಾನ ಕೋಗಿಲೆ ಮಾತಿಲ್ಲದೆ ಭೂತಾಯಿಯ ಮಡಿಲು ಸೇರಿತು.

ಎಸ್.ಪಿ.ಬಿ ಅವರು ಅಗಲಿದ ಕೆಲವು ದಿನಗಳ ಅಂತರದಲ್ಲೇ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದ ರಾಜನ್ ಕೂಡ ನಿಧನರಾದರು. ನಾಲ್ಕು ದಶಕಗಳ ಕಾಲ ಕನ್ನಡ ಮಾತ್ರವಲ್ಲದೆ ಹಲವು ಭಾಷೆಯ ಸಿನಿಮಾಗಳಿಗೆ ಆಧಾರವಾಗಿದ್ದವರು ರಾಜನ್-ನಾಗೇಂದ್ರ ಎಂಬ ಸಂಗೀತದ ಲೆಜೆಂಡ್ ಜೋಡಿ. ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್‌ನಾಗ್ ಸೇರಿದಂತೆ ದಿಗ್ಗಜ ನಟರ ಚಿತ್ರಗಳಿಗೆ ಇವರೇ ಜೀವಾಳವಾಗಿದ್ದರು. ರಾಜನ್ ಅವರನ್ನು ಕಳೆದುಕೊಂಡು ಚಿತ್ರರಂಗದ ಸಂಗೀತಲೋಕ ಅನಾಥವಾಗಿದೆ.

ಇತ್ತ ಸ್ಯಾಂಡಲ್‌ವುಡ್‌ನಲ್ಲಿ ನಟ ನಟಿಯರು ಕಣ್ಮರೆಯಾದರೆ ಬಾಲಿವುಡ್‌ನಲ್ಲೂ ಸೂತಕದ ಛಾಯೆ ಮನೆಮಾಡಿತ್ತು. ವರ್ಷ ಆರಂಭದಲ್ಲೇ ಬಾಲಿವುಡ್ ಖ್ಯಾತ ನಟ, ಇರ್ಫಾನ್ ಖಾನ್ ಅನಾರೋಗ್ಯದಿಂದ ನಿಧನರಾದರು. ತಮ್ಮ ಮನೋಜ್ಞ ಅಭಿನಯ ದಿಂದ ಗಮನಸೆಳೆದಿದ್ದ ಇರ್ಫಾನ್ ಖಾನ್, ಹಿಂದಿ ಮತ್ತು ಇಂಗ್ಲಿಷ್ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಶ್ರಮಪಟ್ಟು ಚಿತ್ರರಂಗ ದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಇರ್ಫಾನ್ ಖಾನ್, ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದರು.

ಬಾಲಿವುಡ್ ಬಾಬಿ ಎಂದೇ ಖ್ಯಾತರಾಗಿದ್ದ ಹಿರಿಯ ನಟ ರಿಷಿಕಪೂರ್ ಕೂಡ ಕ್ಯಾನ್ಸರ್‌ನಿಂದ ಬಳಲು ತ್ತಿದ್ದರು. ಚಿಕಿತ್ಸೆ ಫಲಕಾರಿ ಯಾಗದೆ ಮುಂಬೈನಲ್ಲಿ ನಿಧನರಾದರು. ಬಾಲಿವುಡ್‌ನಲ್ಲಿ ಬಾಬಿ ಮೂಡಿಸಿದ್ದ ಹೆಜ್ಜೆ ಗುರುತು ಮುಂದಿನ ಪೀಳಿಗೆಗೂ ಮಾರ್ಗ ದರ್ಶನವಾಗಿತ್ತು. ಬಾಬಿ ಮತ್ತಷ್ಟು ಚಿತ್ರಗಳಲ್ಲಿ ನಟಿಸುತ್ತಾರೆ. ಕಿರಿಯರಿಗೂ ಮಾರ್ಗದರ್ಶನ ನೀಡುತ್ತಾರೆ ಎನ್ನುವಾಗಲೇ ರಿಷಿ ಕಪೂರ್ ಬಾರದ ಲೋಕಕ್ಕೆ ಪಯಣಿಸಿದರು.

ನಟನೆಯಲ್ಲಿ ಮನ ಸೆಳೆದು, ಚಿತ್ರರಂಗದಲ್ಲಿ ಭವಿಷ್ಯ ಹುಡುಕುತ್ತಿದ್ದ ಯುವ ನಟ ಸುಶಾಂತ್ ಸಿಂಗ್ ‌ರಜಪೂತ್ ನಿಗೂಢವಾಗಿ ಸಾವನ್ನಪ್ಪಿದರು. ಲಾಕ್‌ಡೌನ್ ಅವಧಿಯಲ್ಲಿ ತಮ್ಮ ಫ್ಲಾಟ್‌ನಲ್ಲಿ ಉಳಿದಿದ್ದ ಸುಶಾಂತ್ ಸಿಂಗ್ ನೇಣಿಗೆ ಕೊರೊಳೊಡ್ಡಿದರು. ಆದರೆ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಅವರ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿರು. ಹಾಗಾಗಿ ಸುಶಾಂತ್ ಸಾವಿನ ಸುತ್ತ ಅನುಮಾನ ಕೂಡ ಹುಟ್ಟಿಕೊಂಡಿತ್ತು. ಸುಶಾಂತ್ ಸಿಂಗ್ ಸಾವು ಇಡೀ ಚಿತ್ರರಂಗದಲ್ಲಿ ತಲ್ಲಣ ಉಂಟು ಮಾಡಿತು.
ಇನ್ನು ನೃತ್ಯ ನಿರ್ದೇಶನದ ಮೂಲಕವೇ ಮನೆಮಾತಾಗಿದ್ದ, ಇಂದಿನ ಪ್ರಸಿದ್ಧ ನಟಿಯರಿಗೆ ನೃತ್ಯ ನಿರ್ದೇಶನ ಮಾಡಿದ್ದ ಸರೋಜ್ ಖಾನ್ ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.

ಮರೆಯಾದ ತಾರೆಯರು 

2020 ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನೇ ತಂದೊಡ್ಡಿದೆ. ಹಲವು ನಟ ನಟಿಯರನ್ನು, ಪ್ರಸಿದ್ಧ ಗಾಯಕರನ್ನು ಈ ವರ್ಷ
ಕಳೆದುಕೊಂಡಿದ್ದೇವೆ. ಕರೋನಾ ಕಂಗೆಡಿಸಿದ್ದ ಸಮಯದಲ್ಲಿಯೇ, ಕಾಮಿಡಿ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿದ್ದ, ಚಿತ್ರಪ್ರೇಮಿಗಳ ಮನದಲ್ಲಿ ನೆಲೆಸಿದ್ದ, ನಟ ಬುಲೆಟ್ ಪ್ರಕಾಶ್ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು. ಕೋವಿಡ್ ಕಾಡುತ್ತಿದ್ದ ಸಮಯದಲ್ಲೂ ನಟನ ಅಂತಿಮ ದರ್ಶನಕ್ಕೆ ಹಲವು ನಟ, ನಟಿಯರು ಗಣ್ಯರು ಧಾವಿಸಿದರು. ನಟನ ಅಗಲಿಕೆಗೆ ಕಂಬನಿ ಮಿಡಿದರು. ಈ ದುಃಖ ಮಾಸುವ ಮುನ್ನವೇ ಕನ್ನಡ ಚಿತ್ರ ರಂಗದ ಮತ್ತೊಬ್ಬ ಹಾಸ್ಯ ನಟ ಮೈಕಲ್ ಮಧು ಕೂಡ ಇಹಲೋಕ ತ್ಯಜಿಸಿದರು.

ಇದೇ ಸಮಯದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಮಿಮಿಕ್ರಿ ಗೋಪಾಲ್ ಕೂಡ ಕೊನೆಯುಸಿರೆಳೆದರು. ಈ ಕಹಿಯನ್ನು ಅರಗಿಸಿಕೊಳ್ಳುವ ಮೊದಲೇ ಸ್ಯಾಂಡಲ್‌ವುಡ್‌ನ ಖ್ಯಾತ ನಟ, ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಆಗಷ್ಟೇ, ‘ಸಿಂಗಂ’ ಹಾಗೂ ‘ಶಿವಾರ್ಜುನ’ ಚಿತ್ರದ ಮೂಲಕ ನಮ್ಮನ್ನು ರಂಜಿಸಿದ್ದ ಚಿರು, ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ನಂಬಲು ಆಗಲಿಲ್ಲ. ಆದರೂ  ನಂಬಲೇ ಬೇಕಾ ಯಿತು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿತ್ತು. ಶೂನ್ಯ ಆವರಿಸಿತ್ತು. ಈ ವರ್ಷ ಇದೇನಾಯಿತು, ‘ಚಿತ್ರರಂಗಕ್ಕೆ ಇದೆಂತ ಶಾಪ’ ಎಂಬ ಮಾತುಗಳು ಕೇಳಿಬಂದವು.

ಇನ್ನೂ ಬಾಳಿ ಬದುಕಬೇಕಿದ್ದ, ಮತ್ತಷ್ಟು ಸದಭಿರುಚಿಯ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸ ಬೇಕಿದ್ದ ಚಿರು, ಬಾರದ ಲೋಕಕ್ಕೆ ಪಯಣಿಸಿದ್ದರು. ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ಅಭಿ ನಯಿಸಿ ಮನೆಮಾತಾಗಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಕೂಡ ನಿಧನರಾದರು. ಹಿಂದಿ ಚಿತ್ರದಲ್ಲೂ ನಟಿಸಿ ಕನ್ನಡದ ಹೆಮ್ಮೆಯ ಪೋಷಕ ನಟಿ ಯಾಗಿದ್ದ ಕಿಶೋರಿ ಬಲ್ಲಾಳ್ ನಿಧನರಾಗಿದ್ದು, ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದಂತಾಗಿತ್ತು.

ಮತ್ತೊಬ್ಬ ಹಿರಿಯ ನಟಿ ಶಾಂತಮ್ಮ ಕೂಡ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದರು. ಬಹಳಷ್ಟು ಸಿನಿಮಾಗಳಲ್ಲಿ ಪೋಷಕ ನಟರಾಗಿ, ಖಳ ನಟರಾಗಿ ಬಣ್ಣಹಚ್ಚಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ, ಹಿರಿಯ ನಟ ಸೋಮಶೇಖರ್ ರಾವ್ ಈ ವರ್ಷ ನಿಧನರಾದರು.

ಕಳಂಕ ತಂದ ನಶೆ ರಾಣಿಯರು
ಸುಶಾಂತ್ ಸಾವಿನ ಸುತ್ತ ಡ್ರಗ್ಸ್‌ ಜಾಲ ತಳಕು ಹಾಕಿಕೊಂಡಿತು. ಅನೇಕ ಸ್ಟಾರ್ ನಟ, ನಟಿಯರ ಹೆಸರು ಗಳು ಈ ಡ್ರಗ್ಸ್ ‌ಜಾಲದಲ್ಲಿ ತಳುಕು ಹಾಕಿಕೊಂಡಿತು. ಅದು ಸ್ಯಾಂಡಲ್‌ವುಡನ್ನು ಬಿಡಲಿಲ್ಲ. ಕನ್ನಡ ಚಿತ್ರರಂಗದಲ್ಲೂ ಡ್ರಗ್ಸ್ ನಂಟಿದೆ. ಇಲ್ಲಿಯೂ ಡ್ರಗ್ಸ್ ವ್ಯಸನಿಗಳಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದರು. ಅಲ್ಲಿಂದ ನಶೆ ಲೋಕದ ನಂಟಿನ ಕರಾಳಕಥೆ ಒಂದೊಂದಾಗಿ ಅನಾ ವರಣಗೊಳ್ಳ ತೊಡಗಿತು.

ಕನ್ನಡ ಚಿತ್ರರಂಗಕ್ಕೂ ಡ್ರಗ್ಸ್‌ ನಂಟಿದೆಯೇ ಎಂದಾಗ ನಾನಲ್ಲ… ನಾನಲ್ಲ… ಎಂದು ಹೆಗಲುಮುಟ್ಟಿ ನೋಡಿಕೊಂಡ ಕೆಲವು ಸೆಲೆಬ್ರೆಟಿಗಳ ಮುಖವಾಡ ಕಳಚಿತು. ಪಾತ್ರಗಳ ಮೂಲಕವೇ ಮತ್ತೇರಿಸುತ್ತಿದ್ದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಪೊಲೀಸ್ ಅತಿಥಿಯಾದರು. ಆ ಬಳಿಕ ನಾನು ಮುಗ್ಧೆ ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದ ಸಂಜನಾ ಗಲ್ರಾನಿ ಕೂಡ ಜೈಲು ಸೇರಿದರು. ನಟ ದಿಗಂತ್, ಐಂದ್ರಿತಾ ರೇ, ಲೂಸ್‌ಮಾದ ಯೋಗಿ, ನಟಿ ಹಾಗೂ ನಿರೂಪಕಿ ಅನುಶ್ರೀ, ಅಕುಲ್ ಬಾಲಾಜಿ, ಸಂತೋಷ್… ಹೀಗೆ ಚಿತ್ರ ರಂಗದಲ್ಲಿ ಗುರುತಿಸಿ ಕೊಂಡಿದ್ದ ಹಲವರು ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿ ದಂತೆ ವಿಚಾರಣೆ ಎದುರಿಸಿದರು.

2020 ಕನ್ನಡ ಚಿತ್ರರಂಗ ಮಟ್ಟಿಗೆ ನಷ್ಟ, ಕಷ್ಟ, ನೋವು, ಸಂಕಟ, ಹತಾಶೆ, ಅವಮಾನಗಳನ್ನು ತಂದ ವರ್ಷವಾಗಿದೆ. ಅಂತೂ ಈ ವರ್ಷ ಕಳೆದಿದೆ. ಬರುವ ಹೊಸ ವರ್ಷದಲ್ಲಿ ಚಿತ್ರರಂಗ ಮತ್ತೆ ಮೊದಲಿನ ಲಯಕ್ಕೆ ಮರಳಲಿದೆ. ಸ್ಟಾರ್ ನಟರ ಸಾಲು ಸಾಲು ಚಿತ್ರಗಳು ಅದ್ಧೂರಿಯಾಗಿ ಬಿಡುಗಡೆಯಾಗಲಿವೆ. ಮತ್ತೆ ಮೊದಲಿನ ಸಂಭ್ರಮ ಒಡಮೂಡಲಿದೆ ಎಂಬ ಆಶಾ ಭಾವನೆಯೊಂದಿಗೆ ಎಲ್ಲರು ಹೊಸವರ್ಷ ವನ್ನು ಸ್ವಾಗತಿಸಲು ಮರೆಯಾದ ತಾರೆಯರು ಸಿದ್ಧವಾಗಿದ್ದಾರೆ.